ಬುಧವಾರ, ಅಕ್ಟೋಬರ್ 16, 2019
21 °C

ನ್ಯಾಯಾಧೀಶರ ಮರು ನೇಮಕಕ್ಕೆ ಆದೇಶ

Published:
Updated:

ಬೆಂಗಳೂರು: ಭ್ರಷ್ಟಾಚಾರ ಹಾಗೂ ಪಕ್ಷಪಾತ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಸೇವೆಯಿಂದ ಕಾಯಂ ನಿವೃತ್ತಿಗೊಳಿಸಲಾಗಿದ್ದ ಅಧೀನ ಕೋರ್ಟ್‌ಗಳ 10 ಮಂದಿ ನ್ಯಾಯಾಧೀಶರನ್ನು  ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.ಈ ಎಲ್ಲ ನ್ಯಾಯಾಧೀಶರಿಗೆ ಅವರು ನಿವೃತ್ತಿಯಾದ ದಿನದಿಂದ ಅನ್ವಯ ಆಗುವಂತೆ ಎಲ್ಲ ಸೌಲಭ್ಯಗಳನ್ನು ನೀಡುವಂತೆ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಆದೇಶಿಸಿದ್ದಾರೆ.ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ.ಡಿ.ದಿನಕರ್ ಅವರ ಅವಧಿಯಲ್ಲಿ ಈ ನ್ಯಾಯಾಧೀಶರನ್ನು ಸೇವೆಯಿಂದ ನಿವೃತ್ತಿಗೊಳಿಸಿ 2009ರ ಮೇ 16ರಂದು ಆದೇಶ ಹೊರಡಿಸಲಾಗಿತ್ತು. `ಸಾರ್ವಜನಿಕ ಹಿತದೃಷ್ಟಿ~ಯಿಂದ ಈ ಆದೇಶ ಹೊರಡಿಸಲಾಗುತ್ತಿದೆ ಎಂದು ತಿಳಿಸಲಾಗಿತ್ತು. ಹೈಕೋರ್ಟ್ ವಿಚಾರಣಾ ಸಮಿತಿ ನೀಡಿದ್ದ ವರದಿಯ ಆಧಾರದ ಮೇಲೆ ರಾಜ್ಯಪಾಲರು ಈ ಆದೇಶ ಹೊರಡಿಸಿದ್ದರು. ಈ ಆದೇಶ ಹಾಗೂ ನಂತರ ಹೊರಟ ಅಧಿಸೂಚನೆಗಳನ್ನು ನ್ಯಾಯಮೂರ್ತಿಗಳು ಈಗ ವಜಾಗೊಳಿಸಿದ್ದಾರೆ.ಟಿ.ನಾಗಪ್ಪ (ಮೈಸೂರು), ರುದ್ರಮುನಿ ಬೈರನಪದಮಠ (ನಾಗಮಂಗಲ - ಮಂಡ್ಯ ಜಿಲ್ಲೆ), ಮಾರ್ತಾಂಡ (ಚಿಕ್ಕೋಡಿ- ಬೆಳಗಾವಿ), ಶಿವಾನಂದ ಧಾಗೆ (ಕಾರ್ಕಳ- ಉಡುಪಿ), ಅಲ್ತಾಸ್ (ಬೆಳಗಾವಿ), ಬಾಪೂಜಿ ಟಿ. ಚನಾಳ ಹಾಗೂ ಅನ್ವರ ಅನ್ಸಾರಿ (ಧಾರವಾಡ), ಲಕ್ಷ್ಮಿಕಾಂತ, ಸಿ.ಆರ್. ಜಾವೇದ್ ಪಾಷಾ ಹಾಗೂ ಮಹಾಂತಗೌಡ ಬಿರಾದಾರ (ಎಲ್ಲರೂ ಬೆಂಗಳೂರು) ಇವರು ಪುನಃ ನ್ಯಾಯಾಧೀಶರಾಗಿ ಮುಂದುವರಿಯಲಿದ್ದಾರೆ.

`ಶಾರ್ಟ್‌ಕಟ್~ ಪದ್ಧತಿ: `ಅಧೀನ ಕೋರ್ಟ್‌ಗಳ ನ್ಯಾಯಾಧೀಶರ ಬಗ್ಗೆ ವಿಚಾರಣೆ ನಡೆಸಲು 2005ರ ನ.28ರಂದು ಹೈಕೋರ್ಟ್‌ನಿಂದ ಸಮಿತಿ ರಚನೆಗೊಂಡಿತ್ತು. ಈ ಸಮಿತಿಯು ವರದಿ ನೀಡಿದೆ. ಆದರೆ ಈ ವರದಿಯ ಆಧಾರದ ಮೇಲೆ ಪ್ರಾಥಮಿಕ ತನಿಖೆ ನಡೆದರೂ, ತನಿಖಾ ವರದಿಯನ್ನು ಗೌಪ್ಯವಾಗಿ ನೀಡಲಾಗಿದ್ದರೂ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆದಿಲ್ಲ.`ಇಲಾಖಾ ತನಿಖೆ ಅಥವಾ ವಿಚಾರಣೆಯನ್ನು ತಪ್ಪಿಸುವುದಕ್ಕೋಸ್ಕರ ಕಾಯಂ ನಿವೃತ್ತಿಯನ್ನು `ಶಾರ್ಟ್‌ಕಟ್~ ಪದ್ಧತಿಯಾಗಿ ಬಳಸಲಾಗಿದೆ. ಆದುದರಿಂದ ಈ ಅಧಿಸೂಚನೆ ರದ್ದುಗೊಳಿಸಲೇಬೇಕಾಗುತ್ತದೆ~ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.ನ್ಯಾಯಾಂಗ ಅಧಿಕಾರಿ ವಿಭಿನ್ನ: `ರಾಜ್ಯ ಸರ್ಕಾರಿ ಸೇವಾ ನಿಯಮದ 285 (4)ರ ಕಲಮಿನ ಅಡಿ `ಸಾರ್ವಜನಿಕ ಹಿತದೃಷ್ಟಿ~ಯ ಕಾರಣ ನೀಡಿ ಕಾಯಂ ನಿವೃತ್ತಿ ಆದೇಶ ಹೊರಡಿಸಲಾಗಿದೆ. ಆದರೆ ನ್ಯಾಯಾಂಗ ಅಧಿಕಾರಿಗಳನ್ನು ಸಾಮಾನ್ಯ ಸರ್ಕಾರಿ ನೌಕರರಂತೆ ಪರಿಗಣಿಸುವುದು ಸರಿಯಲ್ಲ. ನ್ಯಾಯಾಧೀಶರ ಮೇಲಿರುವ ಆರೋಪಗಳು ಸಾಬೀತು ಆಗುವವರೆಗೆ ಅವರನ್ನು ಈ ಕಲಮಿನ ಅಡಿ ನಿವೃತ್ತಿಗೊಳಿಸುವುದು ಉಚಿತವಲ್ಲ. ಈ ಕುರಿತು ಸುಪ್ರೀಂಕೋರ್ಟ್ ಕೂಡ `ಪ್ರಸಾದ್‌ಸಿಂಗ್ ವರ್ಸಸ್ ಸ್ಟೇಟ್ ಆಫ್ ಬಿಹಾರ್~ ಪ್ರಕರಣದಲ್ಲಿ ಸ್ಪಷ್ಟಪಡಿಸಿದೆ~ ಎಂದು ತೀರ್ಪಿನಲ್ಲಿ ಅವರು ಉಲ್ಲೇಖಿಸಿದ್ದಾರೆ.ಆದುದರಿಂದ ಅಧಿಸೂಚನೆಯು ಅಸಾಂವಿಧಾನಿಕವೂ, ಕಾನೂನು ಬಾಹಿರವೂ ಆಗಿದೆ~ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.ಈ 10 ನ್ಯಾಯಾಧೀಶರು ಸೇರಿದಂತೆ ಒಟ್ಟು 14 ನ್ಯಾಯಾಧೀಶರನ್ನು ಕಾಯಂ ನಿವೃತ್ತಿಗೊಳಿಸಲಾಗಿತ್ತು. ಆದರೆ ಇವರು ಮಾತ್ರ ಹೈಕೋರ್ಟ್ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಇವರಿಗೆ ಆದೇಶ ಅನ್ವಯ ಆಗಲಿದೆ.

Post Comments (+)