ಗುರುವಾರ , ಮೇ 19, 2022
21 °C

ನ್ಯಾಯಾಧೀಶ ಸೇರಿ ಏಳು ಜನರ ವಿರುದ್ಧ ಮೊಕದ್ದಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯಾಯಾಧೀಶ ಸೇರಿ ಏಳು ಜನರ ವಿರುದ್ಧ ಮೊಕದ್ದಮೆ

ಹೈದರಾಬಾದ್: ಲಂಚ ಪಡೆದು ಗಾಲಿ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಂಧ್ರ ಪ್ರದೇಶ ಭ್ರಷ್ಟಾಚಾರ ವಿರೋಧಿ ದಳವು (ಎಸಿಬಿ) ಸಿಬಿಐ ವಿಶೇಷ ಪ್ರಕರಣಗಳ ಹೆಚ್ಚುವರಿ ನ್ಯಾಯಾಧೀಶ ಟಿ.ಪಟ್ಟಾಭಿರಾಮ ರಾವ್, ಕರ್ನಾಟಕದ ಇಬ್ಬರು ಶಾಸಕರು ಹಾಗೂ ಇತರ ಐವರ ವಿರುದ್ಧ ಪ್ರಕರಣ ದಾಖಲಿಸಿದೆ. ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಸಹೋದರ ಸೋಮಶೇಖರ ರೆಡ್ಡಿ ಮತ್ತು ಸುರೇಶ್ ಬಾಬು ಆರೋಪಿ ಶಾಸಕರು. ಉಳಿದಂತೆ, ಪಟ್ಟಾಭಿರಾಮ ಅವರ ಪುತ್ರ ರವಿಚಂದ್ರ, ನಿವೃತ್ತ ನ್ಯಾಯಾಧೀಶ ಚಲಪತಿ ರಾವ್, ಚಲಪತಿ ಅವರ ಪುತ್ರ ಬಾಲಾಜಿ, ರೆಡ್ಡಿ ಹಾಗೂ ನ್ಯಾಯಾಧೀಶರ ನಡುವೆ ಮಧ್ಯವರ್ತಿಗಳಾಗಿದ್ದರು ಎನ್ನಲಾಗಿರುವ ಹೈದರಾಬಾದ್ ಜೈಲಿನ ಕೈದಿ ಯಾದಗಿರಿ (ರೌಡಿ ಶೀಟರ್) ಮತ್ತು ಕಿರಿಯ ವಕೀಲ ದಶರಥರಾಮಿ ರೆಡ್ಡಿ ಇತರ ಆರೋಪಿಗಳು.ಆಂಧ್ರ ಪ್ರದೇಶ ಹೈಕೋರ್ಟ್ ನಿರ್ದೇಶನದ ಮೇರೆಗೆ ಎಸಿಬಿ ಶನಿವಾರ ಪ್ರಕರಣ ದಾಖಲಿಸಿದೆ. ಕರ್ನಾಟಕದ ಶಾಸಕರು ನ್ಯಾಯಾಧೀಶರಿಗೆ ಲಂಚ ನೀಡಿರುವುದು ಲಭ್ಯ ಸಾಕ್ಷ್ಯಗಳಿಂದ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಎಸಿಬಿ ಹೇಳಿದೆ.ಭಾರತೀಯ ದಂಡ ಸಂಹಿತೆಯ ಕಲಂ 120-ಬಿ ಅಡಿ ಕ್ರಿಮಿನಲ್ ಸಂಚು, ಕಲಂ 219ರ ಅಡಿ ಸಾರ್ವಜನಿಕ ಸೇವಕನಿಂದ ಭ್ರಷ್ಟಾಚಾರ, 420, 417ನೇ ಕಲಂಗಳು ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ 13(1), 13 (2) ಕಲಂಗಳ ಅಡಿಯಲ್ಲಿ  ಪ್ರಕರಣಗಳನ್ನು ದಾಖಲಿಸಲಾಗಿದೆ.ಕರ್ನಾಟಕದ ಶಾಸಕರ ಮುಂದಿನ ತನಿಖೆ ಹಾಗೂ ಬಂಧನವನ್ನು ಕೇಂದ್ರ ತನಿಖಾ ತಂಡ ಮಾಡಲಿದೆ. ಕರ್ನಾಟಕ ವಿಧಾನಸಭೆಯ ಅನುಮತಿ ಪಡೆದ ನಂತರ ಯಾವುದೇ ಕ್ಷಣದಲ್ಲಿ ಆರೋಪಿ ಶಾಸಕರನ್ನು ಬಂಧಿಸುವ ಸಾಧ್ಯತೆ ಇದೆ. `ತೆಲಗಿ ಹಗರಣದಲ್ಲಿ ಮಹಾರಾಷ್ಟ್ರದ ಎಸ್‌ಐಟಿ, ಆಂಧ್ರದಲ್ಲಿ ಶಾಸಕರಾಗಿದ್ದ ಕೃಷ್ಣ ಯಾದವ್ ಅವರನ್ನು ಬಂಧಿಸಿದ ಪ್ರಕರಣವನ್ನು ಇದು ಹೋಲುತ್ತದೆ~ ಎಂದು ಎಸಿಬಿ ಮೂಲಗಳು ಹೇಳಿವೆ.ಪಟ್ಟಾಭಿರಾಮ ಅವರು ಒಎಂಸಿ ಗಣಿ ಹಗರಣದ ಆರೋಪಿ ಜನಾರ್ದನ ರೆಡ್ಡಿ ಅವರಿಗೆ ಮೇ 11ರಂದು ಜಾಮೀನು ನೀಡಿದ್ದರು. ಆದರೆ ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಐಎಎಸ್ ಅಧಿಕಾರಿ ವೈ.ಶ್ರೀಲಕ್ಷ್ಮಿ ಅವರ ಜಾಮೀನು ಕೋರಿಕೆಯನ್ನು ತಿರಸ್ಕರಿಸಿದ್ದರು. ರೆಡ್ಡಿ ಅವರಿಗೆ ಜಾಮೀನು ಆದೇಶ ಪ್ರಕಟವಾದ ನಂತರ ಪಟ್ಟಾಭಿರಾಮ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿತ್ತು.ಅಲ್ಲದೇ ಇಲ್ಲಿನ ಅಶೋಕ್ ನಗರದ ಬ್ಯಾಂಕೊಂದರಲ್ಲಿ ಅವರ ಪುತ್ರ ಹೊಂದಿರುವ ಲಾಕರ್‌ನಿಂದ 1.80 ಕೋಟಿ ರೂಪಾಯಿ ವಶಪಡಿಸಿಕೊಂಡಿರುವುದಾಗಿಯೂ ಅದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮದನ್ ಬಿ. ಲೋಕೂರ್  ಮೇ 31ರಂದು ಪಟ್ಟಾಭಿರಾಮ ಅವರನ್ನು ಅಮಾನತುಗೊಳಿಸಿದ್ದರು.ಎಸಿಬಿಯಿಂದ ತನಿಖೆ: ಸಿಬಿಐ ಮನವಿ ಮೇರೆಗೆ ಆಂಧ್ರ ಹೈಕೋರ್ಟ್ ಶುಕ್ರವಾರ ಈ ಪ್ರಕರಣದ ಮುಂದಿನ ತನಿಖೆಯನ್ನು ಎಸಿಬಿಗೆ ವಹಿಸಿದೆ. ಸೋಮಶೇಖರ ರೆಡ್ಡಿ ಮತ್ತು ಸುರೇಶ್ ಬಾಬು ಅವರು ರೌಡಿ ಶೀಟರ್ ಯಾದಗಿರಿ ಮೂಲಕ ನ್ಯಾಯಾಧೀಶರನ್ನು ಸಂಪರ್ಕಿಸಿದ್ದರು. ನಂತರ ಯಾದಗಿರಿಯು ನ್ಯಾಯಾಧೀಶರ ಪುತ್ರನನ್ನು ಬಲೆಗೆ ಹಾಕಿಕೊಂಡಿದ್ದನಲ್ಲದೆ ಆತನ ಖಾತೆಗೆ ಹಣ ವರ್ಗಾವಣೆಯಾಗಿತ್ತು. ಈ ಹಣ ಬಳ್ಳಾರಿಯಿಂದ ಬಂದಿದೆ.ಸಿಬಿಐ ನ್ಯಾಯಾಧೀಶರನ್ನು ಸಂಪರ್ಕಿಸುವಲ್ಲಿ ನಿವೃತ್ತ ಸೆಷನ್ಸ್ ನ್ಯಾಯಾಧೀಶ ಚಲಪತಿ ರಾವ್ ಮತ್ತು ವಕೀಲ ದಶರಾಥರಾಮಿ ರೆಡ್ಡಿ ಅವರ ಪಾತ್ರವೂ ಇದೆ ಎಂದು ಮೊದಲ ಹಂತದ ತನಿಖೆ ನಡೆಸಿರುವ ಸಿಬಿಐ ವಿವರಿಸಿದೆ.ನ್ಯಾಯಾಧೀಶರು ಜಾಮೀನು ನೀಡುವುದಕ್ಕೂ ಮೊದಲೇ ಜನಾರ್ದನ ರೆಡ್ಡಿ ಆಪ್ತರು ಜಾಮೀನು ನೀಡಿಕೆ ವೇಳೆ ಪ್ರಕಟಿಸಿದ ನಿರ್ದಿಷ್ಟ ಮೊತ್ತದ ಹಣ ಹಾಗೂ ಸಾಕ್ಷಿಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದರು. ಈ ಅನುಮಾನದ ಜಾಡು ಹಿಡಿದು ಸಿಬಿಐ ತನಿಖೆಗೆ ಮುಂದಾಗಿತ್ತು.ರೆಡ್ಡಿ ಆಪ್ತರು ನ್ಯಾಯಾಧೀಶರಿಗೆ ಮೊದಲ ಹಂತದಲ್ಲಿ 2.87 ಕೋಟಿ ರೂಪಾಯಿ ಸಂದಾಯ ಮಾಡಿದ್ದರು. 5 ಕೋಟಿ ರೂಪಾಯಿ ನೀಡಿ ನಾಲ್ವರಿಗೆ ಜಾಮೀನು ಪಡೆಯಲು ಆಪ್ತರು ಯತ್ನಿಸಿದ್ದರು. ಆದರೆ ಅಂತಿಮವಾಗಿ 10 ಕೋಟಿ ರೂಪಾಯಿಗೆ ಒಪ್ಪಂದವಾಗಿತ್ತು.

 

ಒಪ್ಪಂದದ ಪ್ರಕಾರ ನ್ಯಾಯಾಧೀಶರು ರೆಡ್ಡಿ, ಅವರ ಭಾವ ಬಿ.ವಿ.ಶ್ರೀನಿವಾಸ ರೆಡ್ಡಿ, ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ವೈ.ಶ್ರೀಲಕ್ಷಿ ಹಾಗೂ ಗಣಿ ಇಲಾಖೆ ಮಾಜಿ ನಿರ್ದೇಶಕ ವಿ.ಡಿ.ರಾಜಗೋಪಾಲ ರೆಡ್ಡಿ ಅವರಿಗೆ ಹಂತಹಂತವಾಗಿ ಜಾಮೀನು ನೀಡುವುದಾಗಿ ಮಾತು ಕೊಟ್ಟಿದ್ದರು ಎಂದು ಸಿಬಿಐ ಆಪಾದಿಸಿತ್ತು.ರೆಡ್ಡಿ ಆಪ್ತರು ಹೈದರಾಬಾದ್‌ನ ತಾರಾ ಹೋಟೆಲೊಂದರಲ್ಲಿ ನ್ಯಾಯಾಧೀಶರ ಮಧ್ಯವರ್ತಿಗಳ ಜತೆ ರಹಸ್ಯವಾಗಿ ನಡೆಸಿದ ಮಾತುಕತೆಯ ವಿಡಿಯೊ ದೃಶ್ಯಗಳನ್ನು ಕೂಡ ಸಿಬಿಐ ಹಾಜರುಪಡಿಸಿತ್ತು.ಈ ಹಿನ್ನೆಲೆಯಲ್ಲಿ ಪಟ್ಟಾಭಿರಾಮ ಅವರನ್ನು ಅಮಾನುತುಗೊಳಿಸಿದ ನಂತರ ಸಿಬಿಐ, ಹೈದರಾಬಾದ್‌ನಲ್ಲಿರುವ ಯಾದಗಿರಿ ಮನೆಯ ಮೇಲೆ ದಾಳಿ ನಡೆಸಿತ್ತು.ಮುಂದಿನ ಹಂತವಾಗಿ, ಜೂನ್ 2ರಂದು ಗುಂಟೂರು ಜಿಲ್ಲೆ ಚಿಲಕಲುರಿಪೇಟ್‌ನ ಚಲಪತಿ ರಾವ್ ನಿವಾಸ ಹಾಗೂ ಗುಡಿವಾಡದ ಒಂದು ಮುದ್ರಣಾಲಯದ ಮೇಲೆ ದಾಳಿ ನಡೆಸಿತ್ತು. ಚಲಪತಿ ರಾವ್ ಮತ್ತು ಪಟ್ಟಾಭಿಅವರು ಸಹಪಾಠಿಗಳು ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.