ಶುಕ್ರವಾರ, ನವೆಂಬರ್ 22, 2019
20 °C

ನ್ಯಾಯಾಲಯಕ್ಕೆ ಮುಷರಫ್ ಹಾಜರು

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್): ದೇಶದಲ್ಲಿ ತುರ್ತು ಸ್ಥಿತಿ ಜಾರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಿಸಲು ಪಾಕಿಸ್ತಾನದ ಮಾಜಿ ಸೇನಾಧಿಕಾರಿ ಪರ್ವೇಜ್ ಮುಷರಫ್ ಅವರು ಶುಕ್ರವಾರ ಇಲ್ಲಿಯ ನ್ಯಾಯಾಲಯದಲ್ಲಿ ಹಾಜರಾದರು.2007ರಲ್ಲಿ ಸಂವಿಧಾನವನ್ನು ಅಮಾನತ್ತಿನಲ್ಲಿ ಇಟ್ಟು ತುರ್ತು ಸ್ಥಿತಿ ಜಾರಿ ಮಾಡಿ 60 ನ್ಯಾಯಾಧೀಶರನ್ನು ಗೃಹ ಬಂಧನದಲ್ಲಿ ಇಟ್ಟಿದ್ದಕ್ಕೆ ಸಂಬಂಧಿಸಿದಂತೆ ಮುಷರಫ್ ವಿರುದ್ಧ ಪ್ರಕರಣ ದಾಖಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳ ಹಂತದ ನ್ಯಾಯಾಲಯವು ಪರ್ವೇಜ್ ಮುಷರಫ್ ಬಂಧನಕ್ಕೆ ವಾರಂಟ್ ಹೊರಡಿಸಿತ್ತು. ಇದೇ ವೇಳೆ ನ್ಯಾಯಾಲಯ ಅವರನ್ನು ಅಪರಾಧಿ ಎಂದೂ ಘೋಷಿಸಿತ್ತು.

ನಂತರ ಮುಷರಫ್ ಅವರು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ತಾತ್ಕಾಲಿಕ ಜಾಮೀನು ಪಡೆದಿದ್ದರು. ಈಗ ಹೈಕೋರ್ಟ್ ತಾತ್ಕಾಲಿಕ ಜಾಮೀನು ಅವಧಿಯನ್ನು ಈ ತಿಂಗಳ 18ರವರೆಗೆ ವಿಸ್ತರಿಸಿದೆ.ಮುಷರಫ್ ಅವರನ್ನು ಬಿಗಿ ಭದ್ರತೆಯಲ್ಲಿ ಗುಂಡು ನಿರೋಧಕ ಜೀಪ್‌ನಲ್ಲಿ ನ್ಯಾಯಾಲಯಕ್ಕೆ ತರಲಾಯಿತು. ಕೆಲವು ವಕೀಲರು ಮುಷರಫ್ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮುಷರಫ್ ಬೆಂಬಲಿಗರೂ ಘೋಷಣೆ ಕೂಗಿದರು. ನ್ಯಾಯಾಲಯದ ಒಳಗೆ ಮತ್ತು ಹೊರಗೆ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಪ್ರತಿಕ್ರಿಯಿಸಿ (+)