ನ್ಯಾಯಾಲಯದ ದಿಕ್ಕು ತಪ್ಪಿಸದಿರಿ

7

ನ್ಯಾಯಾಲಯದ ದಿಕ್ಕು ತಪ್ಪಿಸದಿರಿ

Published:
Updated:

ಬೆಂಗಳೂರು: `ವಕೀಲರು ನ್ಯಾಯಾಲಯಗಳನ್ನು ಗೌರವದಿಂದ ಕಾಣಬೇಕೇ ಹೊರತು ಎಂದಿಗೂ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಶುಕ್ರವಾರ ಇಲ್ಲಿ ಕರೆ ನೀಡಿದರು.ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜು ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಅಖಿಲ ಭಾರತ ಅಣಕು ನ್ಯಾಯಾಲಯ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ವಕೀಲ ವೃತ್ತಿ ಅತ್ಯಂತ ಶ್ರೇಷ್ಠವಾದುದು. ಇಂತಹ ಪವಿತ್ರವಾದ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲಿರುವ ಯುವ ವಕೀಲರು ಹಣ ಮಾಡುವುದಕ್ಕಿಂತ ಮುಖ್ಯವಾಗಿ ಜನರ ಸೇವೆ ಮಾಡಲು ಮುಂದಾಗಬೇಕು~ ಎಂದು ಸಲಹೆ ಮಾಡಿದರು.`ವಕೀಲ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಯುವಕರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸವನ್ನು ವಕೀಲರ ಸಂಘ ಮಾಡಬೇಕು. ವಕೀಲರ ಸಂಘಗಳಲ್ಲಿ ಯಾವುದೇ ರಾಜಕೀಯ ಬೆರೆಸದೆ ಯುವ ವಕೀಲರಿಗೆ ಹೆಚ್ಚಿನ ಅವಕಾಶ, ಉತ್ತೇಜನ ನೀಡಲು ಪ್ರಯತ್ನಿಸಬೇಕು~ ಎಂದು ಹೇಳಿದರು.ನ್ಯಾಯಾಧೀಶರ ಬಗ್ಗೆ ಕೇಳಿ ಬರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ಪ್ರಸ್ತಾಪಿಸಿದ ರಾಜ್ಯಪಾಲರು, `ಭ್ರಷ್ಟಾಚಾರ ಯಾವುದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಭ್ರಷ್ಟಾಚಾರ ಇಂದು ವೈರಸ್‌ನಂತೆ ಸಮಾಜದ ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಿದೆ. ನ್ಯಾಯಾಧೀಶರನ್ನು ಗುರಿ ಮಾಡಿ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸುವ ಅಗತ್ಯವಿಲ್ಲ~ ಎಂದರು.ಮಾಜಿ ಅಡ್ವೊಕೇಟ್ ಜನರಲ್ ಡಾ.ಬಿ.ವಿ. ಆಚಾರ್ಯ, `ಇತ್ತೀಚಿನ ವರ್ಷಗಳಲ್ಲಿ ಭಾರತದ ನ್ಯಾಯಾಂಗ, ಕಾನೂನು ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಆದರೆ, ಬೇಡಿಕೆಗೆ ಅನುಗುಣವಾಗಿ ಗುಣಮಟ್ಟದ ಕಾನೂನು ಸೇವೆ ಒದಗಿಸಲು ಇನ್ನಷ್ಟು ಉತ್ತಮ ವಕೀಲರನ್ನು ತಯಾರು ಮಾಡುವ ಅಗತ್ಯವಿದೆ~ ಎಂದರು.`ಯುವ ವಕೀಲರು ಹಣದ ಆಸೆಗಾಗಿ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಸೇವೆ ಸಲ್ಲಿಸುವುದಕ್ಕಿಂತ ವಕೀಲ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ವೃತ್ತಿಪರತೆ ಮೆರೆಯಬೇಕು. ಹಣ ಸಂಪಾದನೆ ಮುಖ್ಯವಲ್ಲ. ಬದಲಿಗೆ ವೃತ್ತಿಯಲ್ಲಿನ ಸೇವಾ ತೃಪ್ತಿ ಮುಖ್ಯ~ ಎಂದರು.ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್. ಪ್ರಭುದೇವ್ ಮಾತನಾಡಿದರು. ರಿಜಿಸ್ಟ್ರಾರ್ ಪ್ರೊ.ಬಿ.ಸಿ. ಮೈಲಾರಪ್ಪ, ಕುಲಸಚಿವ (ಮೌಲ್ಯಮಾಪನ) ಡಾ.ಟಿ.ಆರ್. ಸುಬ್ರಮಣ್ಯ, ವಿತ್ತಾಧಿಕಾರಿ ಡಾ. ರಂಗಸ್ವಾಮಿ, ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜಿನ ಪ್ರಿನ್ಸಿಪಾಲ್ ಡಾ.ಕೆ.ಎಂ. ಹನುಮಂತರಾಯಪ್ಪ ಉಪಸ್ಥಿತರಿದ್ದರು. ಮೂರು ದಿನಗಳ ಕಾಲ ನಡೆಯಲಿರುವ ಈ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ 28 ಕಾನೂನು ಕಾಲೇಜುಗಳ 130 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry