ನ್ಯಾಯಾಲಯ ಬಚ್ಚಿಡುತ್ತಿರುವುದು ಏನನ್ನು?

7

ನ್ಯಾಯಾಲಯ ಬಚ್ಚಿಡುತ್ತಿರುವುದು ಏನನ್ನು?

Published:
Updated:

ಪ್ರಜಾಪ್ರಭುತ್ವ ಫಲಕಾರಿಯಾಗಬೇಕಾದರೆ ಸಾರ್ವಜನಿಕರ ಭಾಗವಹಿಸುವಿಕೆ ಅತ್ಯಂತ ಅವಶ್ಯಕ. ಪ್ರಜೆಗಳು ಆಡಳಿತದಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರವೇ ಪ್ರಜಾಪ್ರಭುತ್ವಕ್ಕೆ ಅರ್ಥ.ಮಾಹಿತಿ ಹಕ್ಕು ಕಾಯ್ದೆಯು ಅಧಿಕಾರಶಾಹಿಯ ಭ್ರಷ್ಟತೆಯನ್ನು ಮುಚ್ಚಿಹಾಕಲು ಬಿಡುವುದಿಲ್ಲ. ಇದಕ್ಕೆ ನ್ಯಾಯಾಂಗವೂ ಹೊರತಾಗಿಲ್ಲ. ವಿಚಿತ್ರವೆಂದರೆ `ಹೇಳೋದಕ್ಕೆ ಮಾತ್ರ ವೇದವಾಕ್ಯ. ಅನುಭವಿಸೋದಕ್ಕಲ್ಲ~ ಎಂಬಂತೆ ನ್ಯಾಯಾಂಗವು ಈ ನಿಟ್ಟಿನಲ್ಲಿ ಹಲವು ಬಾರಿ ನಡೆದುಕೊಂಡದ್ದಿದೆ. `ಸೂರ್ಯನ ಬೆಳಕು ಸೋಂಕು ನಿವಾರಕ ಎಂಬುದು ಎಷ್ಟು ನಿಜವೊ ಅತಿಯಾದರೆ ಅದು ನಮ್ಮನ್ನೇ ಸುಟ್ಟು ಹಾಕಬಲ್ಲುದು ಎಂಬುದು ಕೂಡಾ ಅಷ್ಟೇ ದಿಟ~ ಎಂಬ ಮಾತನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ ಅವರು ಆಡಿದ್ದ ದಿನಗಳನ್ನು ನೆನೆಸಿಕೊಂಡರೆ ಮಾಹಿತಿ ಹಕ್ಕು ಕಾಯ್ದೆಯ ಪ್ರಖರತೆ ಏನೆಂಬುದು ಎಂಥವರಿಗೂ ಅರಿವಾಗುತ್ತದೆ. ನ್ಯಾಯಾಂಗಕ್ಕೂ ಇದರ ಬಿಸಿ ಎಷ್ಟರಮಟ್ಟಿಗೆ ತಟ್ಟಿದೆ ಎಂಬ ಸತ್ಯವೂ ಇದರಲ್ಲಡಗಿದೆ.ಭಾರತದ ನ್ಯಾಯಾಂಗವು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ತನ್ನನ್ನು ಸಂಪೂರ್ಣವಾಗಿ ತೆರೆದುಕೊಳ್ಳುವುದಕ್ಕೆ ಇನ್ನಿಲ್ಲದ ಕೊಸರಾಟ ನಡೆಸಿದೆ. ಒಂದೊಮ್ಮೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಎಲ್ಲವನ್ನೂ ಬೆತ್ತಲಾಗಿಸಿಕೊಳ್ಳುತ್ತಾ ಹೊರಟರೆ ಸಂವಿಧಾನದಲ್ಲಿ ತನಗೆ ನೀಡಲಾಗಿರುವ ಸ್ವಾಯತ್ತತೆ ಹಾಗೂ ಮಹತ್ವ ಕುಂಠಿತಗೊಳ್ಳುತ್ತದೆ ಎಂದು ಅದು ಸಾಕಷ್ಟು ಸಲ ವಾದಿಸಿದೆ.

 

ಹಿಂದೊಮ್ಮೆ ರಾಷ್ಟ್ರಪತಿಗಳೇ ತಮ್ಮ ಆಸ್ತಿ ಘೋಷಣೆ ಮಾಡಿಕೊಳ್ಳಲು ಸಿದ್ಧ ಎಂದು ಹೇಳ್ದ್ದಿದಾಗಲೂ ನಮ್ಮ ಬಹುತೇಕ ನ್ಯಾಯಮೂರ್ತಿಗಳು ಮಾತ್ರ ತಾವು ಇದಕ್ಕೆ ಅತೀತರು ಎಂಬಂತೆಯೇ ನಡೆದುಕೊಂಡು ಬಂದಿರುವ ಉದಾಹರಣೆಗಳಿವೆ.ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕೆ.ಜಿ.ಬಾಲಕೃಷ್ಣನ್ ತಮ್ಮ ಆಸ್ತಿ ವಿವರ ಘೋಷಿಸಿಕೊಳ್ಳಲು ಎಷ್ಟೊಂದು ಮೊಂಡು ಹಟ ಹಿಡಿದಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವಂತಹದ್ದೇ. ಕಡೆಗೂ ಅವರು 2009ರ ನವೆಂಬರ್‌ನಲ್ಲಿ ತಮ್ಮ ಆಸ್ತಿ ವಿವರಗಳನ್ನು ಅಂತರ್ಜಾಲದಲ್ಲಿ ಬಹಿರಂಗಪಡಿಸಿದರು.ಉನ್ನತ ನ್ಯಾಯಾಲಯಗಳಲ್ಲಿರುವ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರ ಘೋಷಿಸಿಕೊಳ್ಳಬೇಕೊ ಬೇಡವೊ ಎಂಬ ಜಿಜ್ಞಾಸೆಯಲ್ಲಿದ್ದಾಗ ಅವರ ಮೇಲೆ ಒತ್ತಡ ಹೇರಿದ್ದು ದೆಹಲಿ ಹೈಕೋರ್ಟಿನಲ್ಲಿ ಈ ಸಂಬಂಧ ಜಾರಿಯಲ್ಲಿದ್ದಂತಹ ಮೊಕದ್ದಮೆಯಲ್ಲಿನ ತೀರ್ಪು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ವರ್ಷ ಜನವರಿ ತಿಂಗಳಿನಲ್ಲಿ ತನ್ನ ತೀರ್ಪು ಪ್ರಕಟಿಸಿದ್ದ ದೆಹಲಿ ಹೈಕೋರ್ಟ್  `ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಕೂಡಾ ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸುವುದು ಅವಶ್ಯ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯು ಕೂಡಾ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಯಲ್ಲೇ ಬರುತ್ತದೆ~ ಎಂದು ಸ್ಪಷ್ಟಪಡಿಸಿತ್ತು.ಸುಪ್ರೀಂ ಕೋರ್ಟ್ ಉನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳೊಂದಿಗೆ ನಡೆಸುವ ಪತ್ರ ವ್ಯವಹಾರ ಹಾಗೂ ಇತರೆ ಮಾಹಿತಿಗಳನ್ನು ಬಹಿರಂಗಪಡಿಸುವುದು ಸಲ್ಲ ಎಂಬ ಸುಪ್ರೀಂ ಕೋರ್ಟಿನ ಅಭಿಪ್ರಾಯವನ್ನು ಅದು ಒಪ್ಪಲೇ ಇಲ್ಲ.`ನ್ಯಾಯಾಂಗದ ಸ್ವಾತಂತ್ರ್ಯ ಎಂಬುದು ವಿಶೇಷ ಸೌಲಭ್ಯವಲ್ಲ, ಬದಲಿಗೆ ಅದೊಂದು ಜವಾಬ್ದಾರಿ ಮಾತ್ರ~ ಎಂದು ಸ್ಪಷ್ಟಪಡಿಸಿತ್ತು.ಈ ಬೆಳವಣಿಗೆಯ ನಂತರ 2009ರ ಜನವರಿಯಲ್ಲಿ ಕೇಂದ್ರ ಮಾಹಿತಿ ಆಯುಕ್ತರು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ಅವರಿಗೆ ನಿರ್ದೇಶನವೊಂದನ್ನು ನೀಡುವ ಮೂಲಕ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರ ಘೋಷಿಸಿಕೊಳ್ಳಬೇಕು ಎಂದು ಸೂಚಿಸಿದರು.

 

ಆದರೂ ನ್ಯಾಯಾಂಗದ ಜವಾಬ್ದಾರಿ ಹೊತ್ತವರು ಈ ನಿಟ್ಟಿನಲ್ಲಿ ತಕ್ಷಣವೇ ಅಂತಹ ಪ್ರಾಮಾಣಿಕ ಉತ್ಸಾಹವನ್ನೇನೂ ಪ್ರದರ್ಶಿಸಲಿಲ್ಲ.ಕಳೆದ ಮೂರು ವರ್ಷಗಳಲ್ಲಿ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳು ತಮ್ಮ ವೈದ್ಯಕೀಯ ಸೇವೆಗಾಗಿ ಬಳಕೆ ಮಾಡಿಕೊಂಡಿರುವ ಖರ್ಚು ವೆಚ್ಚಗಳ ವೈಯಕ್ತಿಕ ವಿವರದ ಮಾಹಿತಿಯನ್ನು ಬಹಿರಂಗಪಡಿಸುವಂತೆ ಮಾಹಿತಿ ಹಕ್ಕು ಕಾಯ್ದೆ ಕಾರ್ಯಕರ್ತ ಸುಭಾಷ್ ಸಿ ಅಗರವಾಲ್ ಸುಪ್ರೀಂ ಕೋರ್ಟಿಗೆ ಒಂದು ಅರ್ಜಿ ಹಾಕಿಕೊಂಡಿದ್ದರು. ಆದರೆ ಅವರಿಗೆ ಈ ಕುರಿತಂತೆ ಸುಪ್ರೀಂ ಕೋರ್ಟಿನಿಂದ ದಕ್ಕಿದ್ದು ಕೇವಲ ಕ್ರೋಡೀಕೃತ ಖರ್ಚಿನ ಪಟ್ಟಿಯ ವಿವರಗಳು ಮಾತ್ರ!1997ರಿಂದ ಈಚೆಗೆ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳು ನಡೆಸಿರುವ ಸಭೆಗಳ ವಿವರವನ್ನು ನೀಡುವಂತೆಯೂ ಅಗರ್‌ವಾಲ್ ಮಾಹಿತಿ ಹಕ್ಕು ಕಾಯ್ದೆ ಅಡಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೂ ಕೂಡಾ ಸುಪ್ರೀಂ ಕೋರ್ಟ್ ಸ್ಪಂದಿಸಿದ್ದು ಅಷ್ಟಕ್ಕಷ್ಟೇ.ಇವರ ಅರ್ಜಿಗೆ ನೀಡಿದ ಉತ್ತರದಲ್ಲಿ ಕೇವಲ ಸಭೆಗಳು ನಡೆದ ದಿನಾಂಕವನ್ನು ಮಾತ್ರವೇ ತಿಳಿಸಲಾಯಿತಲ್ಲದೆ, ಸಭೆಯ ವಿಷಯ ಮತ್ತು ಆ ಕುರಿತಂತೆ ಕೈಗೊಂಡ ನಿರ್ಣಯಗಳ ಪ್ರತಿಯನ್ನು ನೀಡಲೇ ಇಲ್ಲ.ಸುಪ್ರೀಂ ಕೋರ್ಟಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವಾಗ ಸೇವಾ ಹಿರಿತನ ಕಡೆಗಣಿಸಲಾಗುತ್ತದೆ ಎಂಬ ಆಪಾದನೆಗಳ ಕುರಿತಂತೆ ಮತ್ತು ಈ ಸಂಬಂಧ ಉನ್ನತ ನ್ಯಾಯಮೂರ್ತಿಗಳ ನಡುವೆ ವಿನಿಮಯವಾಗುವ ಪತ್ರ ವ್ಯವಹಾರಗಳನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಬಹಿರಂಗಪಡಿಸಬೇಕೊ ಬೇಡವೊ ಎಂಬ ಬಗ್ಗೆ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠವು ಇನ್ನೂ ಯಾವುದೇ ತಾರ್ಕಿಕ ನಿರ್ಣಯಕ್ಕೆ ಬಂದಿಲ್ಲ.ಇದೂ ಕೂಡಾ ನ್ಯಾಯಾಂಗ ಮತ್ತು ಶಾಸಕಾಂಗಗಳ ಗರ್ಭಗುಡಿಯೊಳಗಿನ ಅತ್ಯಂತ ಸೂಕ್ಷ್ಮ ಜಟಾಪಟಿಯ ವಿಚಾರ. ಇಂತಹ ವಿಚಾರಗಳನ್ನು ಸಂಪೂರ್ಣ ಬಹಿರಂಗಪಡಿಸಬೇಕು ಎಂದು ಕೇಂದ್ರ ಮಾಹಿತಿ ಆಯುಕ್ತರು ನೀಡಿರುವ ಆದೇಶವನ್ನು ಈಗ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ.

 

ಇದಕ್ಕೆ ಜ್ವಲಂತ ಉದಾಹರಣೆ ಎಂದರೆ ಕರ್ನಾಟಕದವರೇ ಆದ ನ್ಯಾಯಮೂರ್ತಿಗಳಾದ ಎಚ್.ಎಲ್.ದತ್ತು ಹಾಗೂ ನ್ಯಾಯಮೂರ್ತಿ ಎ.ಕೆ.ಗಂಗೂಲಿ ಹಾಗೂ ಆರ್. ಎಂ.ಲೋಧಾ ಅವರುಗಳನ್ನು ಸುಪ್ರೀಂ ಕೋರ್ಟಿಗೆ ಪದೋನ್ನತಿ ಮಾಡಿದ ಪ್ರಕರಣ.ಹೈಕೋರ್ಟಿನ ನ್ಯಾಯಮೂರ್ತಿಗಳಾದ ಎ.ಪಿ.ಷಾ, ಎ.ಕೆ.ಪಟ್ನಾಯಕ್ ಮತ್ತು ವಿ.ಕೆ.ಗುಪ್ತಾ ಅವರ ಸೇವಾ ಹಿರಿತನವನ್ನು ಕಡೆಗಣಿಸಲಾಗಿದೆ ಎಂಬ ಅಪಸ್ವರ ಈ ಸಮಯದಲ್ಲಿ ಕೇಳಿ ಬಂದಿದ್ದವು.

 

ಸ್ವತಃ ಪ್ರಧಾನಿಗಳ ಕಚೇರಿಯಿಂದಲೇ ಈ ನೇಮಕಗಳಿಗೆ ಅಸಮ್ಮತಿ ವ್ಯಕ್ತಪಡಿಸಲಾಗಿತ್ತು ಎಂಬ ದೂರುಗಳಿದ್ದವು. ಆದರೆ ಇವ್ಯಾವುಗಳನ್ನೂ ಲೆಕ್ಕಿಸದೆ ಅಂದಿನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಇವರನ್ನೆಲ್ಲಾ ಸುಪ್ರೀಂ ಕೋರ್ಟಿಗೆ ನ್ಯಾಯಮೂರ್ತಿಗಳನ್ನಾಗಿ ನೇಮಿಸುವ ನಿರ್ಧಾರಕ್ಕೆ ತಮ್ಮ ಪುನರ್ ಸಮರ್ಥನೆ ನೀಡಿದರು.

ಕಡೆತನಕ ಅವರ ಈ ಜಿಗುಟು ಸಾಮಾನ್ಯರಿಗೆ ಅರ್ಥವಾಗಲೇ ಇಲ್ಲ. ಇಂತಹ ವಿಷಯಗಳ ಬಗೆಗೆ ನ್ಯಾಯಾಂಗ ಮತ್ತು ಸರ್ಕಾರದ ನಡುವಿನ ಪತ್ರ ವ್ಯವಹಾರಗಳು ನಾಗರಿಕರಿಗೆ ತಿಳಿಯುವಂತಾದರೆ ನ್ಯಾಯಾಂಗ ಯಾಕೆ ಮಾಹಿತಿ ಹಕ್ಕು ಕಾಯ್ದೆ ಎಂದಾಕ್ಷಣ ಮುಖ ತಿರುಗಿಸುತ್ತದೆ ಎಂಬುದು ಸ್ವಲ್ಪವಾದರೂ ಅರಿವಿಗೆ ಬರಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry