ನ್ಯಾಯ ವ್ಯವಸ್ಥೆ ಸುಧಾರಣೆಯಾಗಬೇಕು

7

ನ್ಯಾಯ ವ್ಯವಸ್ಥೆ ಸುಧಾರಣೆಯಾಗಬೇಕು

Published:
Updated:

ಬೆಂಗಳೂರು: `ದೇಶದಲ್ಲಿ ವಿಳಂಬ ನ್ಯಾಯ ವ್ಯವಸ್ಥೆಯಿಂದಾಗಿ ಜನರು ನ್ಯಾಯಾಂಗ ವ್ಯವಸ್ಥೆ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ ಕೋರ್ಟ್‌ಗಳ ಮೇಲೆ ಒತ್ತಡವೂ ಹೆಚ್ಚುತ್ತಿದೆ. ನ್ಯಾಯ ವ್ಯವಸ್ಥೆಯಲ್ಲಿರುವ ಇಂತಹ ಲೋಷಗಳನ್ನು ನಿವಾರಿಸಲು ನ್ಯಾಯಾಂಗ ವ್ಯವಸ್ಥೆ ಸುಧಾರಣೆಗೆ ಗಮನ ಹರಿಸಬೇಕಿದೆ~ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು.ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಗರದ ಅಂತರರಾಷ್ಟ್ರೀಯ ಸಮಾವೇಶ ಸಭಾಂಗಣದಲ್ಲಿ ಶುಕ್ರವಾರ ನಡೆದ `ಕಾನೂನು, ಆಡಳಿತ ಮತ್ತು ಅಭಿವೃದ್ಧಿ~ ಕುರಿತ ಅಂತರರಾಷ್ಟ್ರೀಯ ಮಟ್ಟದ ಸಮಾವೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಸುಧಾರಣೆಯ ಚರ್ಚಿಸಲಾಯಿತು.ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸುಧೀರ್ ಕೃಷ್ಣಮೂರ್ತಿ ವಿಷಯ ಮಂಡಿಸಿ, `ನಿಧಾನಗತಿಯ ನ್ಯಾಯದಾನದ ಬಗ್ಗೆ ಕೆಲವು ವರ್ಷಗಳಿಂದ ವ್ಯಾಪಕ ಚರ್ಚೆ ಆಗುತ್ತಿದೆ. ಈ ವ್ಯವಸ್ಥೆಯ ಸುಧಾರಣೆಗೆ ಹಲವು ವರದಿಗಳು ಸಲ್ಲಿಕೆಯಾಗಿದ್ದರೂ ಈ ವರೆಗೆ ಪರಿಸ್ಥಿತಿಯಲ್ಲಿ ಬದಲಾವಣೆ ಆಗಿಲ್ಲ. ನ್ಯಾಯ ವ್ಯವಸ್ಥೆಯಲ್ಲಿರುವ ದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕಿದೆ~ ಎಂದರು.ಈ ಎಲ್ಲ ಸಮಸ್ಯೆಗಳಿಗೂ ನ್ಯಾಯಾಲಯದ ಮೆಟ್ಟಿಲು ಹತ್ತಬೇಕಿಲ್ಲ. ಅನೌಪಚಾರಿಕ ವ್ಯವಸ್ಥೆ ಮೂಲಕ, ಮಧ್ಯಸ್ಥಿಕೆ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಆಗ ವರ್ಷಾನುಗಟ್ಟಲೆ ನ್ಯಾಯಕ್ಕಾಗಿ ಅಲೆದಾಡುವುದನ್ನು ತಪ್ಪಿಸಬಹುದು. ತ್ವರಿತ ನ್ಯಾಯದಾನಕ್ಕೆ ವಿಶೇಷ ನ್ಯಾಯಾಲಯಗಳ ಸ್ಥಾಪನೆಯಾಗಿವೆ. ದಶಕಗಳ ಬಳಿಕ ಈ ಕೋರ್ಟ್‌ಗಳ ಸ್ಥಿತಿಯೂ ಇತರ ಕೋರ್ಟ್‌ಗಳಂತೆ ಆಗುತ್ತಿದೆ. ಒಂದು ಕೋರ್ಟ್‌ನ ತೀರ್ಪು ಪ್ರಶ್ನಿಸಿ ಮತ್ತೊಂದು ಕೋರ್ಟ್‌ಗೆ ಹೋಗುವ ಪ್ರವೃತ್ತಿಯೂ ಹೆಚ್ಚುತ್ತಿದೆ~ ಎಂದು  ಬೇಸರ ವ್ಯಕ್ತಪಡಿಸಿದರು.ನವದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನ ಅಧ್ಯಕ್ಷ ಪ್ರತಾಪ್ ಬಾನು ಮೆಹ್ತಾ ಮಾತನಾಡಿ, `ಪ್ರಜಾಪ್ರಭುತ್ವ ಚೌಕಟ್ಟಿನೊಳಗೆ ಅನೌಪಚಾರಿಕ ವ್ಯವಸ್ಥೆ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಮಧ್ಯಸ್ಥಿಕೆಯೂ ಉತ್ತಮ ವಿಧಾನ. ಎಲ್ಲ ವಕೀಲರು, ನ್ಯಾಯಾಧೀಶರು ಕೆಟ್ಟವರು ಎಂಬ ತಪ್ಪು ಕಲ್ಪನೆ ಸರಿಯಲ್ಲ.ರಾಜಕೀಯ ಒತ್ತಡದ ಹಾಗೂ ವಿಭಜನೆಗೊಂಡ ಸಮಾಜದಲ್ಲಿ ವ್ಯವಸ್ಥೆಯ ಸುಧಾರಣೆ ಸುಲಭದ ಕೆಲಸವಲ್ಲ. ಸುಧಾರಣೆಯನ್ನು ಇಷ್ಟಪಡದಿರುವ ದೊಡ್ಡ ಗುಂಪೇ ಇದೆ. ಯಾರೂ ಸಹ ತಮ್ಮ ಹಕ್ಕಿಗೆ ಧಕ್ಕೆ ಆಗುವುದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಈ ಎಲ್ಲ ಸವಾಲುಗಳನ್ನು ಎದುರಿಸಿ ನ್ಯಾಯಾಂಗ ವ್ಯವಸ್ಥೆಯ ಸುಧಾರಣೆಗೆ ಕಾರ್ಯಪ್ರವೃತ್ತರಾಗಬೇಕಿದೆ~ ಎಂದರು.ಗೋಷ್ಠಿಯ ಸಮನ್ವಯಕಾರ, ಸಂಶೋಧಕ ಸೀತಾರಾಮ್ ಕಾಕರಾಲ ಮಾತನಾಡಿ, `50 ವರ್ಷಗಳಿಂದಲೂ ನ್ಯಾಯಾಂಗ ವ್ಯವಸ್ಥೆಯ ಸುಧಾರಣೆಯಾಗಬೇಕು ಎಂಬ ಕೂಗು ಇದೆ. ಎರಡು ದಶಕಗಳಿಂದ ಈ ಕುರಿತ ಒತ್ತಾಯಕ್ಕೆ ಹೆಚ್ಚು ಬಲ ಬಂದಿದೆ. ನ್ಯಾಯಾಂಗ ವ್ಯವಸ್ಥೆ ಸುಧಾರಣೆ ತುರ್ತು ಅಗತ್ಯ~ ಎಂದರು.ಹಾಂಕಾಂಗಿನ ಕಾನೂನು ತಜ್ಞ ಸೈಮನ್ ಚಾಪ್‌ಮನ್, ಚೀನಾದ ಜಿಯಾಂಗ್ ವಾಂಗ್ ಪರವಾಗಿ ಮಾಧವ್ ಕೋಸ್ಲಾ ವಿಷಯ ಮಂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry