ನ್ಯಾಯ ಸಂಸ್ಕೃತಿ ಬೆಳೆಸಲು ವಕೀಲರಿಗೆ ಕರೆ

7

ನ್ಯಾಯ ಸಂಸ್ಕೃತಿ ಬೆಳೆಸಲು ವಕೀಲರಿಗೆ ಕರೆ

Published:
Updated:

ಹುಬ್ಬಳ್ಳಿ: `ವಾಣಿಜ್ಯ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಬಹುತೇಕ ವ್ಯಾಪಾರಿಗಳು ಭೂಗತ ದೊರೆಗಳು, ಪೊಲೀಸರು ಮತ್ತು ಸಚಿವರ ಮನೆ ಬಾಗಿಲು ತಟ್ಟಿದ ನಂತರ ಕೋರ್ಟಿನ ಮೆಟ್ಟಿಲೇರುತ್ತಾರೆ. ಇಂತಹ ವರ್ತನೆಗೆ ಮಂಗಳ ಹಾಡಿ ನ್ಯಾಯ ಸಂಸ್ಕೃತಿಯನ್ನು ಬೆಳೆಸಲು ವಕೀಲರು ವ್ಯಾಜ್ಯಗಳ ಪರ್ಯಾಯ ಪರಿಹಾರ ವ್ಯವಸ್ಥೆಯನ್ನು ಬಲಗೊಳಿಸಬೇಕು~ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿಗಳೂ ಆದ ವಾಣಿಜ್ಯ ವ್ಯಾಜ್ಯಗಳ ಪರ್ಯಾಯ ಪರಿಹಾರ ಕೇಂದ್ರದ ಕಾರ್ಯ ನಿರ್ವಾಹಕ ಅಧ್ಯಕ್ಷ ಎನ್.ಕುಮಾರ್ ಸಲಹೆ ನೀಡಿದರು.ವಾಣಿಜ್ಯೋದ್ಯಮ ಸಂಸ್ಥೆ, ಸುಕೊ ಬ್ಯಾಂಕ್ ಹಾಗೂ ವ್ಯಾಜ್ಯಗಳ ಪರ್ಯಾಯ ಪರಿಹಾರ ಕೇಂದ್ರ ಜಂಟಿಯಾಗಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.`ಕೋರ್ಟ್‌ನಿಂದ ಹೊರಗೆ ನ್ಯಾಯ ಪಂಚಾಯಿತಿ, ರಾಜಿ ಸಂಧಾನ ಹಾಗೂ ಮಧ್ಯಸ್ಥಿಕೆದಾರರ ಮೂಲಕ ವ್ಯಾಜ್ಯ ಬಗೆಹರಿಸಿಕೊಂಡರೆ ಅನಗತ್ಯ ವಿಳಂಬ ಹಾಗೂ ಅಧಿಕ ಖರ್ಚಿನ ಹೊರೆ ಇಲ್ಲದೆ ನ್ಯಾಯ ಪಡೆಯಬಹುದು. ಇಂತಹ ಹಾದಿಗಳನ್ನು ಬಿಟ್ಟು ಗೆಲ್ಲುವ ಏಕೈಕ ಛಲದಿಂದ ಕೋರ್ಟ್ ಮೆಟ್ಟಿಲೇರಿದರೆ ಆತ್ಮಸಾಕ್ಷಿಯನ್ನು ಕೊಲೆ ಮಾಡಿಕೊಂಡು, ಸುಳ್ಳು ಹೇಳಬೇಕಾಗುತ್ತದೆ. ಉದ್ವೇಗದಿಂದ ಓಡಾಡಿ ಆರೋಗ್ಯವನ್ನೂ ಕೆಡಿಸಿಕೊಳ್ಳಬೇಕಾಗುತ್ತದೆ~ ಎಂದು ಅವರು ಹೇಳಿದರು.`ಸಮಾಜದಲ್ಲಿ ನೂರಕ್ಕೆ ನೂರರಷ್ಟು ಸತ್ಯ ಹೇಳಿ ಬದುಕುವ ಜನ ಇದ್ದಾರೆಯೇ~ ಎಂದು ಪ್ರಶ್ನೆಮಾಡಿದ ಅವರು, `ಸುಳ್ಳು ಹೇಳುವುದರಲ್ಲಿ ಜನ ಪ್ರವೀಣರಾಗಿದ್ದು, ಕೋರ್ಟ್‌ನಿಂದ ಸತ್ಯವನ್ನು ಮರೆಮಾಚಲಾಗುತ್ತದೆ~ ಎಂದು ವಿಷಾದಿಸಿದರು. `ಕಕ್ಷಿದಾರರಿಗೆ ಶೇ ನೂರರಷ್ಟು ಸತ್ಯ ಸಂಗತಿ ಗೊತ್ತಿದ್ದರೆ, ವಕೀಲರಿಗೆ ಶೇ 50ರಷ್ಟು ಸತ್ಯಾಂಶ ಗೊತ್ತಿರುತ್ತದೆ. ಕೋರ್ಟ್‌ಗೆ ಮಾತ್ರ ವಸ್ತುಸ್ಥಿತಿ ಕುರಿತಂತೆ ಸರಿಯಾದ ಮಾಹಿತಿಯೇ ಇರುವುದಿಲ್ಲ~ ಎಂದರು.`ಕಾನೂನು ಎಂಬುದು ಸುವ್ಯವಸ್ಥಿತ ಸಮಾಜದ ಬೆನ್ನುಮೂಳೆ. ಕಾನೂನು ಬಿಟ್ಟು ನೆಮ್ಮದಿಯಿಂದ ಬದುಕಲು ಸಾಧ್ಯವೇ ಇಲ್ಲ~ ಎಂದ ಅವರು, `ವಕೀಲರು ಗೋಡೆ ಕಟ್ಟುವ ಗಾರೆ ಕೆಲಸದವರಾಗದೆ ನ್ಯಾಯ ವ್ಯವಸ್ಥೆಯ ಸೌಧವನ್ನು ಸದೃಢವಾಗಿ ಕಟ್ಟುವಂತಹ ನಿರ್ಮಾತೃಗಳು (ಆರ್ಕಿಟೆಕ್ಟರ್) ಆಗಬೇಕು~ ಎಂದು ಕಿವಿಮಾತು ಹೇಳಿದರು.`ಕೇವಲ ಕಾನೂನು ಓದಿಕೊಂಡರೆ ಒಳ್ಳೆಯ ವಕೀಲನಾಗಲು ಸಾಧ್ಯವಿಲ್ಲ. ಸಾಹಿತ್ಯ ಹಾಗೂ ಚರಿತ್ರೆಯ ಜ್ಞಾನವೂ ಅವರಿಗೆ ಇರಬೇಕು. ಲಾಭಕ್ಕಾಗಿ ಕಕ್ಷಿದಾರರ ದಿಕ್ಕು ತಪ್ಪಿಸದೆ ಸರಿಯಾದ ಮಾಹಿತಿಯನ್ನು ನೀಡಬೇಕು~ ಎಂದು ಸಲಹೆ ನೀಡಿದರು. ಕಕ್ಷಿದಾರರಿಗೂ ಪ್ರಾಮಾಣಿಕ ಸಲಹೆ ಬೇಕಾದಂತಿಲ್ಲ. ಕೇಸು ನಿಲ್ಲುವುದಿಲ್ಲ ಎಂದು ಹೇಳಿದರೆ ಅವರು ಬೇರೆ ವಕೀಲರ ಕಡೆಗೆ ಹೊರಟು ಬಿಡುತ್ತಾರೆ ಎಂದು ಅವರು ವಿಷಾದಿಸಿದರು.`ವಕೀಲರು ಎಲ್ಲ 64 ವಿದ್ಯೆಗಳನ್ನೂ ಕಲಿಯಬೇಕು. ಆದರೆ, ಆ ವಿದ್ಯೆಗಳ ಆಚರಣೆಗೆ ಇಳಿಯಬಾರದು. ಕಟಕಟೆಯಲ್ಲಿ ನಿಂತವರು ನಮಗೆ ಟೋಪಿ ಹಾಕದಂತೆ ಎಚ್ಚರ ವಹಿಸಲು ಹಾಗೂ ಅವರಿಂದ ಸತ್ಯಾಂಶ ಹೊರಹೊಮ್ಮುವಂತೆ ನೋಡಿಕೊಳ್ಳಲಷ್ಟೇ ಈ ವಿದ್ಯೆಗಳನ್ನು ಬಳಸಬೇಕು~ ಎಂದು ತಿಳಿಸಿದರು.`ದೇಶದ ಜನ ನ್ಯಾಯಾಂಗ ವ್ಯವಸ್ಥೆಯಲ್ಲಿ ಇನ್ನೂ ನಂಬಿಕೆ ಕಳೆದುಕೊಂಡಿಲ್ಲ. ನ್ಯಾಯದಾನ ದುಬಾರಿ ಹಾಗೂ ವಿಳಂಬ ಎಂಬುದಷ್ಟೇ ಅವರ ದೂರಾಗಿದೆ. ಶೀಘ್ರಗತಿ ತೀರ್ಪು ಬರುವಂತಹ ಬದಲಾವಣೆಯನ್ನು ಅವರು ಕೇಳುತ್ತಿದ್ದಾರೆ. ಅವರ ಬೇಡಿಕೆಗೆ ಸ್ಪಂದಿಸುವ ಯತ್ನವನ್ನು ನಾವು ಮಾಡಬೇಕಿದೆ. ಆದ್ದರಿಂದಲೇ ವ್ಯಾಜ್ಯಗಳ ಪರ್ಯಾಯ ಪರಿಹಾರ ವ್ಯವಸ್ಥೆಯಂತಹ ಬೈಪಾಸ್‌ಗಳನ್ನು ನಿರ್ಮಿಸಲಾಗಿದೆ~ ಎಂದು ಅವರು ವ್ಯಾಖ್ಯಾನಿಸಿದರು.`ವ್ಯಾಜ್ಯಗಳ ಪರ್ಯಾಯ ಪರಿಹಾರ ವ್ಯವಸ್ಥೆಗೆ ಸಂಸತ್ತು ಕಾನೂನಿನ ರೂಪ ನೀಡಿದ್ದು, ಸುಪ್ರೀಂ ಕೋರ್ಟ್ ಒಪ್ಪಿಗೆ ಮುದ್ರೆಯನ್ನು ಒತ್ತಿದೆ. ರಾಜ್ಯಗಳ ಅಗತ್ಯಕ್ಕೆ ತಕ್ಕಂತೆ ಹೈಕೋರ್ಟ್‌ಗಳು ನಿಯಮಾವಳಿ ರೂಪಿಸಿವೆ. ಇದರಿಂದ ಏನು ಪ್ರಯೋಜನ ಎಂಬಂತಹ ಒಡಕಿನ ಮಾತು ಬಿಟ್ಟು ಅದರ ಲಾಭ ಪಡೆಯಲು ಯತ್ನಿಸಬೇಕು~ ಎಂದು ಹೇಳಿದರು. ವಾಣಿಜ್ಯೋದ್ಯಮ ಸಂಸ್ಥೆಯಂತಹ ಸಂಘಟನೆಗಳು ನ್ಯಾಯ ಪಂಚಾಯಿತಿಗಳನ್ನು ಆರಂಭಿಸಬೇಕು ಎಂದು ಸಲಹೆ ನೀಡಿದರು.`ರಾಜ್ಯದಲ್ಲಿ ಕಳೆದ ವರ್ಷ 3.1 ಕೋಟಿ ದಾವೆಗಳು ದಾಖಲಾದರೆ 2.2 ಕೋಟಿ ದಾವೆಗಳನ್ನು ಬಗೆಹರಿಸಲಾಗಿದೆ. ಶೀಘ್ರ ನ್ಯಾಯದಾನಕ್ಕೆ ಕೋರ್ಟ್‌ಗಳು ಸಾಕಷ್ಟು ಶ್ರಮಿಸುತ್ತಿದ್ದು, ಅವುಗಳ ಮೇಲೆ ಗೂಬೆ ಕೂಡಿಸುವ ಅಗತ್ಯವಿಲ್ಲ~ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎನ್.ಪಿ. ಜವಳಿ, ಸುಕೊ ಬ್ಯಾಂಕ್ ಅಧ್ಯಕ್ಷ ಮನೋಹರ ಮಸ್ಕಿ, ಅಂದಾನಪ್ಪ ಸಜ್ಜನರ, ಶಂಕರಣ್ಣ ಮುನವಳ್ಳಿ, ಸಿ.ಆರ್. ಸುಂದರೇಶ, ಎಂ.ಸಿ. ಹಿರೇಮಠ, ಮದನ ದೇಸಾಯಿ, ವಸಂತ ಲದ್ವಾ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry