ಮಂಗಳವಾರ, ಮೇ 24, 2022
31 °C

ನ್ಯಾ. ಸೋಮಶೇಖರ ವರದಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ರಾಜ್ಯದ ವಿವಿಧೆಡೆ ಚರ್ಚ್‌ಗಳ ಮೇಲೆ ನಡೆದ ದಾಳಿಗೆ ಸಂಬಂಧಿಸಿ ನ್ಯಾಯಮೂರ್ತಿ ಸೋಮಶೇಖರ ಆಯೋಗವು ನೀಡಿದ ವರದಿ ಏಕಪಕ್ಷೀಯವಾಗಿದೆ ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ಕ್ರೈಸ್ತ ಸಂಘಟನೆಗಳ ಸಂಯುಕ್ತ ವೇದಿಕೆ ಆಶ್ರಯದಲ್ಲಿ ಮಂಗಳವಾರ ಮೌನ ಮೆರವಣಿಗೆ ನಡೆಯಿತು.ಕೇಶ್ವಾಪುರದ ಫಾತಿಮಾ ಹೈಸ್ಕೂಲ್ ಆವರಣದಿಂದ ಮೆರವಣಿಗೆಯಲ್ಲಿ ತಹಸೀಲ್ದಾರ ಕಚೇರಿಗೆ ಆಗಮಿಸಿದ ಐದು ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನಾಕಾರರು ತಹಸೀಲದಾರ ಎಸ್. ಎಸ್. ಬಿರಾದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಚರ್ಚ್ ದಾಳಿಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಬೇಕು, ನಿರಪರಾಧಿಗಳಿಗೆ ಪರಿಹಾರ ನೀಡಬೇಕು, ಮರು ತನಿಖೆ ನಡೆಸಬೇಕು, ನ್ಯಾಯಮೂರ್ತಿ ಸೋಮಶೇಖರ ಆಯೋಗದ ವರದಿಯನ್ನು ತಿರಸ್ಕರಿಸಬೇಕು, ಕ್ರೈಸ್ತರ ಮೇಲಿನ ದೌರ್ಜನ್ಯ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಮತ್ತಿತರ ಬರಹಗಳನ್ನು ಒಳಗೊಂಡ ಫಲಕಗಳನ್ನು ಪ್ರದರ್ಶಿಸಲಾಯಿತು.ಸೋಮಶೇಖರ ಆಯೋಗ ನೀಡಿದ ಮಧ್ಯಂತರ ವರದಿ ಕ್ರೈಸ್ತರಲ್ಲಿ ಆಶಾಭಾವನೆ ಮೂಡಿಸಿತ್ತು. ಆದರೆ 2011ರ ಜನವರಿಯಲ್ಲಿ ಸಲ್ಲಿಸಿದ ಅಂತಿಮ ವರದಿಯಲ್ಲಿ ಮಧ್ಯಂತರ ವರದಿಗೆ ವ್ಯತಿರಿಕ್ತವಾದ ಅಂಶಗಳಿದ್ದವು.ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸಲು ಸರ್ಕಾರ ಮುಂದಾಗಬೇಕು, ಕ್ರೈಸ್ತ ಯುವಕರ ಮೇಲೆ ದಾಖಲಿಸಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.ಕ್ರೈಸ್ತ ಸಂಘಟನೆಗಳ ಸಂಯುಕ್ತ ವೇದಿಕೆಯ ಅಧ್ಯಕ್ಷ ರೆವರೆಂಡ್ ಜೆ. ಪ್ರಭಾಕರ ರಾವ್, ಉಪಾಧ್ಯಕ್ಷ ಬಿಷಪ್ ಪೀಟರ್ ಮಚಾದೋ, ಕಾರ್ಯದರ್ಶಿ ಡಾ. ಪ್ರಭಾಕರ ಶಡ್ರಕ್, ಜಂಟಿ ಕಾರ್ಯದರ್ಶಿ ರೆ. ಆರ್. ಜೆ. ನಿರಂಜನ, ಕೋಶಾಧಿಕಾರಿ ಸುನೀಲ ಮಹಾಡೆ, ಪ್ರೊ. ಪಿ.ವಿ. ಅಲೆಗ್ಸಾಂಡರ್, ಫಾ. ಜೋ. ರೋಡ್ರಿಗಸ್, ಫಾ. ವಿಲಿಯಂ ಬೋರ್ಜ್ ಮುಂತಾದವರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.