ನ್ಯೂಜಿಲೆಂಡ್‌ಗೆ ತೀರ ಸುಲಭ ಗೆಲುವು

7

ನ್ಯೂಜಿಲೆಂಡ್‌ಗೆ ತೀರ ಸುಲಭ ಗೆಲುವು

Published:
Updated:

ಚೆನ್ನೈ (ಪಿಟಿಐ): ಒಟ್ಟು 31.5 ಓವರ್‌ಗಳಲ್ಲಿ ಪಂದ್ಯ ಮುಕ್ತಾಯ. ಕೀನ್ಯಾವನ್ನು ಬೇಗ ಕಟ್ಟಿಹಾಕಿದ ನ್ಯೂಜಿಲೆಂಡ್ ಗೆಲುವಿನ ಗುರಿ ಮುಟ್ಟಲು ತೆಗೆದುಕೊಂಡಿದ್ದು ಕೇವಲ ಎಂಟು ಓವರ್. 252 ಎಸೆತಗಳು ಬಾಕಿ ಇರುವಂತೆಯೇ ಹತ್ತು ವಿಕೆಟ್‌ಗಳ ಜಯವನ್ನು ಕಿವೀಸ್ ಪಡೆಯವರು ಪಡೆದರು!ಇದು ಈ ಬಾರಿಯ ವಿಶ್ವಕಪ್‌ನಲ್ಲಿ ದಾಖಲಾದ ಅತ್ಯಂತ ಕಡಿಮೆ ಮೊತ್ತ. ಎಂ.ಎ.ಚಿದಂಬರಮ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯವು ಹೀಗೆ ಆರಂಭವಾಯಿತು ಎನ್ನುವುದರಲ್ಲಿ ಮುಗಿದು ಹೋಯಿತು. ಎರಡೂವರೆ ತಾಸು ಕೂಡ ಬೇಕಾಗಲಿಲ್ಲ. ಡೇನಿಯಲ್ ವೆಟೋರಿ ನಾಯಕತ್ವದ ತಂಡವು ಕೇವಲ 37 ನಿಮಿಷಗಳಲ್ಲಿ ತಮ್ಮ ಇನಿಂಗ್ಸ್ ಶಾಸ್ತ್ರವನ್ನು ಮುಗಿಸಿತು.ಟಾಸ್ ಗೆದ್ದ ಕೀನ್ಯಾ ಎದುರಾಳಿಗಳಲ್ಲಿ ಭಯ ಹುಟ್ಟಿಸುವಂಥ ಆಟವಾಡುತ್ತದೆನ್ನುವ ನಿರೀಕ್ಷೆ ಹುಸಿಯಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಜಿಮ್ಮಿ ಕಮಾಂಡೆ ನೇತೃತ್ವದ ತಂಡವು ನೂರರ ಗಡಿಯನ್ನು ದಾಟುವುದಕ್ಕೂ ನ್ಯೂಜಿಲೆಂಡ್ ಬೌಲರ್‌ಗಳು ಅವಕಾಶ ನೀಡಲಿಲ್ಲ. ‘ಪಂದ್ಯ ಶ್ರೇಷ್ಠ’ ಗೌರವಕ್ಕೆ ಪಾತ್ರರಾದ ಹ್ಯಾಮಿಷ್ ಬೆನೆಟ್ (5-0-16-4) ಆರಂಭದಲ್ಲಿಯೇ ಕೀನ್ಯಾಕ್ಕೆ ಭಾರಿ ಪೆಟ್ಟು ನೀಡಿದರು.  ಸೆರೆನ್ ವೇಟರ್ಸ್, ಕಾಲಿನ್ಸ್ ಒಬುಯಾ ಹಾಗೂ ಮೌರಿಸ್ ಒವುಮಾ ಅವರು ಎಲ್‌ಬಿಡಬ್ಲ್ಯೂ ಬಲೆಗೆ ಬೀಳುವಂತೆ ಮಾಡಿದ ಹ್ಯಾಮಿಷ್ ಅವರು ಸ್ಟೀವ್ ಟಿಕೊಲೊ ಅವರನ್ನು ಬೌಲ್ಡ್ ಮಾಡಿದರು. ಈ ನಾಲ್ಕು ದೊಡ್ಡ ವಿಕೆಟ್‌ಗಳ ಪತನದ ನಂತರ ಕೀನ್ಯಾ ಸತ್ವವನ್ನೇ ಕಳೆದುಕೊಂಡಿತು. ಟಿಮ್ ಸೌಥಿ ಹಾಗೂ ಜೇಕಬ್ ಓರಾಮ್ ಕೂಡ ತಲಾ ಮೂರು ವಿಕೆಟ್ ಕಬಳಿಸಿದರು. ಕೀನ್ಯಾದ ಸರದಿ ಕೊನೆಯ ನಾಲ್ವರು ಬ್ಯಾಟ್ಸ್‌ಮನ್‌ಗಳು ಸ್ಕೋರ್ ಮೊತ್ತದಲ್ಲಿ ಭಾರಿ ವ್ಯತ್ಯಾಸ ಆಗುವಂತೆ ಮಾಡಲಿಲ್ಲ. ಔಟಾಗದೆ ಉಳಿದ ರಾಕೆಪ್ ಪಟೇಲ್ (16; 46 ನಿ., 23 ಎ., 1 ಬೌಂಡರಿ) ಅವರ ಸಹನೆಯ ಆಟವೂ ಆಟಕ್ಕುಂಟು ಲೆಕ್ಕಕ್ಕೆ ಇಲ್ಲವೆನ್ನುವಂತಾಯಿತು. ಕೀನ್ಯಾ ಪರವಾಗಿ ಪಟೇಲ್ ಹೊರತು ಎರಡಂಕಿಯ ಮೊತ್ತವನ್ನು ತಲುಪಿದ್ದು ಸೆರೆನ್ ವೇಟರ್ಸ್ (16; 49 ನಿ., 42 ಎ., 1 ಬೌಂಡರಿ) ಹಾಗೂ ಕಾಲಿನ್ಸ್ ಒಬುಯಾ (14; 32 ನಿ., 19 ಎ., 2 ಬೌಂಡರಿ) ಅವರು ಮಾತ್ರ.ಕೀನ್ಯಾವನ್ನು ಬೇಕ ಕಟ್ಟಿಹಾಕಿದ ನ್ಯೂಜಿಲೆಂಡ್ ಜಯದ ಗುರಿಯನ್ನು ಕೂಡ ಅಷ್ಟೇ ಚುರುಕಾಗಿ ಮುಟ್ಟಿತು. ಎಂಟು ಓವರುಗಳಲ್ಲಿ 72 ರನ್‌ಗಳನ್ನು ಗಳಿಸುವ ಮೂಲಕ ವಿಶ್ವಕಪ್‌ನಲ್ಲಿ ಅತ್ಯಂತ ವೇಗವಾಗಿ ಗೆದ್ದ ಸಂಭ್ರಮ ಪಡೆಯಿತು. ಅಜೇಯ ಆಟವಾಡಿದ ಮಾರ್ಟಿನ್ ಗುಪ್ಟಿಲ್ (39; 37 ನಿ., 32 ಎ., 5 ಬೌಂಡರಿ, 2 ಸಿಕ್ಸರ್) ಹಾಗೂ ಬ್ರೆಂಡನ್ ಮೆಕ್ಲಮ್ (26; 37 ನಿ., 17 ಎ., 4 ಬೌಂಡರಿ) ಅವರು ತಮ್ಮ ತಂಡವು ಹತ್ತು ವಿಕೆಟ್‌ಗಳ ಅಂತರದ ವಿಜಯಕ್ಕೆ ಕಾರಣರಾದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry