ನ್ಯೂಜಿಲೆಂಡ್‌ನಲ್ಲಿ ತಲೆಮರೆಸಿಕೊಂಡ ಆರೋಪಿ !

7

ನ್ಯೂಜಿಲೆಂಡ್‌ನಲ್ಲಿ ತಲೆಮರೆಸಿಕೊಂಡ ಆರೋಪಿ !

Published:
Updated:

ಬೆಂಗಳೂರು: 1994ರ ವೈದ್ಯಕೀಯ ಸೀಟು ಹಂಚಿಕೆ ಹಗರಣದ ಪ್ರಮುಖ ಆರೋಪಿ ಎಂ.ಆರ್.ಪ್ರಕಾಶ್ ದಶಕದ ಹಿಂದೆಯೇ ನ್ಯೂಜಿಲೆಂಡ್‌ಗೆ ಪರಾರಿಯಾಗಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಹತ್ತು ವರ್ಷಗಳಿಂದಲೂ ಪ್ರಕರಣದ ವಿಚಾರಣೆಗೆ ಹಾಜರಾಗದೇ ಕಣ್ಣಾಮುಚ್ಚಾಲೆ ಆಡುತ್ತಿರುವ ಈತನ ಪಾಸ್‌ಪೋರ್ಟ್ ಹಿಂದಕ್ಕೆ ಪಡೆಯುವಂತೆ ಲೋಕಾಯುಕ್ತ ಪೊಲೀಸರು ಈಗ ವಿದೇಶಾಂಗ ಸಚಿವಾಲಯದ ಮೊರೆ ಹೋಗಿದ್ದಾರೆ.ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದ ಪ್ರಕಾಶ್, ನಕಲಿ ದಾಖಲೆ ಸೃಷ್ಟಿಸಿ ವೈದ್ಯಕೀಯ ಸೀಟುಗಳನ್ನು ವರ್ಗಾಯಿಸಿದ 26 ಪ್ರಕರಣಗಳಲ್ಲಿ ಪ್ರಮುಖ ಆರೋಪಿ. 2001-2004ರ ನಡುವೆ ಈತನ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ 26 ಆರೋಪಪಟ್ಟಿಗಳನ್ನು ಸಲ್ಲಿಸಲಾಗಿದೆ. ಆದರೆ, 2001ರಿಂದಲೇ ಈತ ತಲೆ ಮರೆಸಿಕೊಂಡಿರುವುದರಿಂದ ಅಷ್ಟೂ ಪ್ರಕರಣಗಳ ವಿಚಾರಣೆಗೆ ದಶಕದಿಂದಲೂ ಗ್ರಹಣ ಕವಿದಿದೆ.ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಸೀಟು ದೊರಕಿದ ಬಳಿಕ ಪ್ರವೇಶ ಪಡೆಯದ ವಿದ್ಯಾರ್ಥಿಗಳ ಸೀಟುಗಳನ್ನು ಪ್ರಕಾಶ್ ಮತ್ತು ಇತರೆ ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಅನರ್ಹ ವಿದ್ಯಾರ್ಥಿಗಳಿಗೆ ವರ್ಗಾವಣೆ ಮಾಡುತ್ತಿದ್ದರು. ದೊಡ್ಡ ಪ್ರಮಾಣದ ಹಣ ಪಡೆದು ಇಂತಹ ಅಕ್ರಮ ಎಸಗಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಬಯಲಿಗೆ ಬಂದಿತ್ತು.ವೈದ್ಯಕೀಯ ಶಿಕ್ಷಣ ಇಲಾಖೆಯ ಆಗಿನ ನಿರ್ದೇಶಕ ಡಾ.ಎಂ.ವಿ.ರಾಮಣ್ಣ, ಉಪ ನಿರ್ದೇಶಕ ಡಾ.ಜಯರೇಣುಕಾರ್ಯ, ಖಾಸಗಿ ವೈದ್ಯ ಡಾ.ಲಕ್ಷ್ಮೀಪತಿ ಬಾಬು ಮತ್ತು ಪ್ರಕಾಶ್ ಈ ಹಗರಣದ ಪ್ರಮುಖ ಆರೋಪಿಗಳು. ಇವರೊಂದಿಗೆ ನಕಲಿ ದಾಖಲೆ ಸೃಷ್ಟಿಸಿ ವೈದ್ಯಕೀಯ ಸೀಟು ಪಡೆದಿದ್ದ 26 ವಿದ್ಯಾರ್ಥಿಗಳ ವಿರುದ್ಧವೂ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು.ದಶಕದಿಂದ ಕಣ್ಣಾಮುಚ್ಚಾಲೆ: 2001ರಿಂದಲೂ ಹಂತ ಹಂತವಾಗಿ ಪ್ರಕರಣಗಳ ವಿಚಾರಣೆ ಆರಂಭವಾಗಿದೆ. ಆಗಿನಿಂದಲೂ ಪ್ರಕಾಶ್‌ಗೆ ಸಮನ್ಸ್ ಜಾರಿ ಮಾಡುವಂತೆ ಲೋಕಾಯುಕ್ತ ಪೊಲೀಸರಿಗೆ ವಿಶೇಷ ನ್ಯಾಯಾಲಯ ಹಲವು ಬಾರಿ ಆದೇಶ ಹೊರಡಿಸಿತ್ತು. ಮೈಸೂರಿನಲ್ಲಿರುವ ಪ್ರಕಾಶ್ ತಂದೆಯ ಮನೆಯನ್ನು ಹುಡುಕಿಕೊಂಡು ಹೋದರೆ, ಅಲ್ಲಿ ಆರೋಪಿಯ ಸುಳಿವೇ ಇರಲಿಲ್ಲ. 25ಕ್ಕೂ ಹೆಚ್ಚು ಬಾರಿ ಜಾಮೀನುರಹಿತ ವಾರೆಂಟ್ ಹೊರಡಿಸಿದರೂ ಪ್ರಯೋಜನವಾಗಿರಲಿಲ್ಲ.ಪರಿಣಾಮವಾಗಿ ಹತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಈ ಪ್ರಕರಣಗಳ ವಿಚಾರಣೆ ಕೇವಲ `ಮುಂದೂಡಿಕೆ~ಯ ಹಂತದಲ್ಲೇ ನಿಂತಿದೆ.ಕೆಲವು ದಿನಗಳ ಹಿಂದೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ಪ್ರಕಾಶ್ ವಿರುದ್ಧ ಮತ್ತೆ ವಾರೆಂಟ್ ಹೊರಡಿಸಿದ್ದರು.ವಾರೆಂಟ್ ಹಿಡಿದು ಹೊರಟ ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿ ಎಚ್.ಎಸ್.ಮಂಜುನಾಥ್ ಮತ್ತು ಇನ್‌ಸ್ಪೆಕ್ಟರ್ ಕೆ.ರವಿಶಂಕರ್, ಜೆ.ಪಿ.ನಗರದ ರಾಗಿಗುಡ್ಡದ ಹಿಂಭಾಗದಲ್ಲಿ ಪ್ರಕಾಶ್ ಮನೆ ಹೊಂದಿರುವುದನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಅಲ್ಲಿ ಬಾಡಿಗೆದಾರರಿದ್ದರು. ಅವರಿಗೂ ಪ್ರಕಾಶ್ ಕುರಿತು ಮಾಹಿತಿಯೇ ಇರಲಿಲ್ಲ.ಜೆ.ಪಿ.ನಗರದಲ್ಲೇ ಇರುವ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗೆ ಬಾಡಿಗೆ ಹಣ ಸಂದಾಯ ಮಾಡುವುದಾಗಿ ಬಾಡಿಗೆದಾರ ತಿಳಿಸಿದ್ದರು. ಬ್ಯಾಂಕ್ ಖಾತೆಯ ಮಾಹಿತಿ ಆಧರಿಸಿ ಮುಂದುವರಿದಾಗ ಪ್ರಕಾಶ್ ಅವರ ಷಡ್ಡಕ ಅನಂತಮೂರ್ತಿ ಬಾಡಿಗೆ ಪಡೆಯುತ್ತಿದ್ದಾರೆ ಎಂಬುದು ಖಚಿತವಾಗಿತ್ತು.
ಪತ್ತೆಗಾಗಿ ನೋಟಿಸ್

ನ್ಯೂಜಿಲೆಂಡ್ ವಾಪಸ್ ಕಳುಹಿಸಿದಲ್ಲಿ ದೇಶಕ್ಕೆ ಕಾಲಿಡುತ್ತಿದ್ದಂತೆಯೇ ಪ್ರಕಾಶ್‌ನನ್ನು ವಶಕ್ಕೆ ಪಡೆಯಲು ಲೋಕಾಯುಕ್ತ ಪೊಲೀಸರು ಮುಂದಾಗಿದ್ದಾರೆ.

ನಾಪತ್ತೆಯಾಗಿರುವ ಆರೋಪಿಯ ಪತ್ತೆಗಾಗಿ ನೋಟಿಸ್ ಹೊರಡಿಸುವಂತೆ (ಲುಕ್‌ಔಟ್ ನೋಟಿಸ್) ಶಿವಶಂಕರ್ ಅವರು ಬೆಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈಗಾಗಲೇ ನೋಟಿಸ್ ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೇಶದ ಎಲ್ಲ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಿಗೆ `ಲುಕ್‌ಔಟ್ ನೋಟಿಸ್~ ರವಾನಿಸಲಾಗಿದೆ. ವಿವಿಧ ರಾಜ್ಯಗಳ ಪೊಲೀಸ್ ಮುಖ್ಯಸ್ಥರು ಮತ್ತು ಗುಪ್ತಚರ ವಿಭಾಗಗಳಿಗೂ ಕಳುಹಿಸಲಾಗಿದೆ. ಪ್ರಕಾಶ್ ಕಂಡ ತಕ್ಷಣವೇ ವಶಕ್ಕೆ ಪಡೆದು ಬೆಂಗಳೂರು ಪೊಲೀಸರಿಗೆ ಒಪ್ಪಿಸುವಂತೆ ಮನವಿ ಮಾಡಲಾಗಿದೆ ಎಂದು ಗೊತ್ತಾಗಿದೆ.

ಅವರನ್ನು ವಿಚಾರಿಸಿದಾಗ, ಪ್ರಕಾಶ್ ಕುಟುಂಬ ಸಮೇತನಾಗಿ ದಶಕದ ಹಿಂದೆಯೇ ನ್ಯೂಜಿಲೆಂಡ್‌ನ ಆಕ್ಲೆಂಡ್‌ಗೆ ಪರಾರಿಯಾಗಿರುವುದು ತಿಳಿಯಿತು. ಆಕ್ಲೆಂಡ್‌ನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಪ್ರಕಾಶ್, ಅಲ್ಲಿನ ನ್ಯೂ ವಿಂಡ್ಸರ್‌ನ ಮೈರೋ ಸ್ಟ್ರೀಟ್‌ನಲ್ಲಿ ವಾಸವಿರುವ ಬಗ್ಗೆ ಮಾಹಿತಿ ನೀಡಿದರು.ಹತ್ತು ವರ್ಷಗಳಿಂದ ತಲೆ ಮರೆಸಿಕೊಂಡಿರುವ ಆರೋಪಿ ಸುಳಿವು ದೊರೆತದ್ದರಿಂದ ಕೊಂಚ ನಿರಾಳರಾದ ಲೋಕಾಯುಕ್ತ ಪೊಲೀಸರು, ಅನಂತಮೂರ್ತಿ ಅವರನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಆಗ, ಪ್ರಕಾಶ್ ಆಕ್ಲೆಂಡ್‌ನಲ್ಲಿ ಇರುವ ಬಗ್ಗೆ ನ್ಯಾಯಾಧೀಶರ ಎದುರು ಹೇಳಿಕೆ ನೀಡಿದರು. ಸಂಪೂರ್ಣ ಮಾಹಿತಿ ಪಡೆದ ನ್ಯಾಯಾಧೀಶರು, ಆರೋಪಿಯನ್ನು ನ್ಯೂಜಿಲೆಂಡ್‌ನಿಂದ ಭಾರತಕ್ಕೆ ಕರೆತರುವ ಪ್ರಕ್ರಿಯೆ ಆರಂಭಿಸುವಂತೆ ವಿದೇಶಾಂಗ ಕಚೇರಿಗೆ ಮನವಿ ಮಾಡಲು ಆದೇಶಿಸಿದ್ದರು.

 

ನ್ಯಾಯಾಲಯದ ಆದೇಶದಂತೆ ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್ ಬೆಂಗಳೂರಿನ ಪಾಸ್‌ಪೋರ್ಟ್ ಕಚೇರಿಗೆ ಕೋರಿಕೆ ಸಲ್ಲಿಸಿದ್ದರು.ಷೋಕಾಸ್ ನೋಟಿಸ್ ಜಾರಿ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ `ಆರೋಪಿಗಳ ಗಡಿಪಾರು ಒಪ್ಪಂದ~ ಇಲ್ಲ.ಈ ಕಾರಣದಿಂದ ಪಾಸ್‌ಪೋರ್ಟ್ ಹಿಂದಕ್ಕೆ ಪಡೆಯುವ ಮೂಲಕವೇ ಆತನನ್ನು ಕರೆಸಿಕೊಳ್ಳಬೇಕಿದೆ. ಈ ಸಂಬಂಧ ಪ್ರಕ್ರಿಯೆ ಆರಂಭಿಸಿದ ವಿದೇಶಾಂಗ ವ್ಯವಹಾರಗಳ ಇಲಾಖೆ, ಪಾಸ್‌ಪೋರ್ಟ್ ಹಿಂದಕ್ಕೆ ಪಡೆಯುವ ಕುರಿತು ಪ್ರಕಾಶ್‌ಗೆ ಷೋಕಾಸ್ ನೋಟಿಸ್ ಜಾರಿ ಮಾಡುವಂತೆ ನ್ಯೂಜಿಲೆಂಡ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಗೆ ನಿರ್ದೇಶನ ನೀಡಿತು.ರಾಯಭಾರ ಕಚೇರಿ ಈಗಾಗಲೇ ಷೋಕಾಸ್ ನೋಟಿಸ್ ಜಾರಿಮಾಡಿದೆ ಎಂದು ಲೋಕಾಯುಕ್ತದ ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.ನೋಟಿಸ್‌ಗೆ ಉತ್ತರ ನೀಡಲು ಪ್ರಕಾಶ್‌ಗೆ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಸಮರ್ಪಕ ಉತ್ತರ ನೀಡದಿದ್ದರೆ ಪಾಸ್‌ಪೋರ್ಟ್ ಹಿಂದಕ್ಕೆ ಪಡೆಯಲಾಗುತ್ತದೆ.ನಂತರ ಸಹಜವಾಗಿಯೇ ನ್ಯೂಜಿಲೆಂಡ್ ಆತನನ್ನು ದೇಶದಿಂದ ವಾಪಸ್ ಕಳುಹಿಸುತ್ತದೆ. ಪ್ರಕರಣದ ಮುಂದಿನ ವಿಚಾರಣೆ ಜೂನ್ 1ಕ್ಕೆ ನಿಗದಿಯಾಗಿದೆ. ಅಷ್ಟರೊಳಗೆ ಆರೋಪಿಯನ್ನು ದೇಶಕ್ಕೆ ಕರೆತರಲು ಲೋಕಾಯುಕ್ತ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry