ನ್ಯೂಜಿಲೆಂಡ್ ಭೂಕಂಪ: ಮೃತರ ಸಂಖ್ಯೆ 98ಕ್ಕೆ ಏರಿಕೆ; 238 ಮಂದಿ ಕಣ್ಮರೆ

7

ನ್ಯೂಜಿಲೆಂಡ್ ಭೂಕಂಪ: ಮೃತರ ಸಂಖ್ಯೆ 98ಕ್ಕೆ ಏರಿಕೆ; 238 ಮಂದಿ ಕಣ್ಮರೆ

Published:
Updated:

ಮೆಲ್ಬರ್ನ್ (ಪಿಟಿಐ):  ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ಮಂಗಳವಾರ ಸಂಭವಿಸಿದ ಭೂಕಂಪದಲ್ಲಿ ಸಾವಿಗೀಡಾದವರ ಸಂಖ್ಯೆ 98ಕ್ಕೆ ಏರಿದೆ. ಅವಶೇಷಗಳಡಿಯಲ್ಲಿ ಸಿಲುಕಿರುವವರು ಬದುಕುಳಿದಿರುವ ಭರವಸೆಯೊಂದಿಗೆ ರಕ್ಷಣಾ ಕಾರ್ಯಕರ್ತರು ಕಾರ್ಯಾಚರಣೆ ಮುಂದುವರಿಸಿದ್ದಾರೆ.‘ಇದುವರೆಗೆ ಅವಶೇಷಗಳಡಿ ಸಿಲುಕಿದ್ದ 98 ಮೃತದೇಹಗಳು ದೊರಕಿದ್ದು, ತೀವ್ರವಾಗಿ ಗಾಯಗೊಂಡಿರುವ 164 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಂತರ 238 ಜನ ಕಾಣೆಯಾಗಿರುವುದು ದೃಢಪಟ್ಟಿದೆ.ಆದರೂ ಅವರಲ್ಲಿ ಕೆಲವರಾದರೂ ದುರಂತ ಸಂಭವಿಸುವ ಮುನ್ನವೇ ಕ್ರೈಸ್ಟ್‌ಚರ್ಚ್‌ನಿಂದ ನಿರ್ಗಮಿಸಿರಬಹುದು. ಕಾಣೆಯಾದವರಿಗಾಗಿ ತೀವ್ರ ಹುಡುಕಾಟ ನಡೆಸಲಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಡೇವ್ ಕ್ಲಿಫ್ ತಿಳಿಸಿದರು.‘ನಾವು ನಿರೀಕ್ಷಿಸಿರುವ ಪ್ರಮಾಣಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಮೃತರ ಸಂಖ್ಯೆಯಲ್ಲಿ ಏರಿಕೆಯಾಗುವ ಭಯ ಉಂಟಾಗಿದೆ’ ಎಂದು ನ್ಯೂಜಿಲೆಂಡ್ ಪ್ರಧಾನಿ ಜಾನ್ ಕೀ ಕಳವಳ ವ್ಯಕ್ತಪಡಿಸಿದ್ದಾರೆ.‘ಇಂತಹ ದುರಂತಗಳು ನಡೆದು ಎರಡು ಮೂರು ದಿನಗಳ ನಂತರವೂ ಜನರು ಅದೃಷ್ಟವಶಾತ್ ಬದುಕುಳಿದಿರುವ ನಿದರ್ಶನಗಳಿವೆ. ಇದೇ ಭರವಸೆಯೊಂದಿಗೆ ಪ್ರತಿ ಸ್ಥಳಗಳಲ್ಲಿಯೂ ಸೂಕ್ಷ್ಮವಾಗಿ ಕಾರ್ಯಾಚರಣೆ ಮುಂದುವರಿಸಲಾಗುವುದು’ ಎಂದು ಕಾರ್ಯಾಚರಣೆ ತಂಡದ ಮುಖ್ಯಸ್ಥ ಡೇವಿಡ್ ಲೂಯಿಸ್ ತಿಳಿಸಿದ್ದಾರೆ.ಮೃತಪಟ್ಟವರ ಗುರುತು ಪತ್ತೆಹಚ್ಚಲು ವೈದ್ಯಕೀಯ ತಜ್ಞರು ರಕ್ಷಣಾ ತಂಡಗಳ ಜೊತೆಗೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇದುವರೆಗೆ ಶೇ.60ರಷ್ಟು ಕಟ್ಟಡಗಳಲ್ಲಿ ಪರಿಶೀಲನೆ ನಡೆಸಲಾಗಿದೆ.ಅಧಿಕ ಸಂಖ್ಯೆಯ ಜಪಾನೀಯರು ಒಳಗೊಂಡಂತೆ 48 ವಿದೇಶಿ ವಿದ್ಯಾರ್ಥಿಗಳು ಜೀವಂತ ಸಮಾಧಿಯಾಗಿದ್ದಾರೆ ಎನ್ನಲಾಗಿರುವ ಸಿಟಿವಿ ಕಟ್ಟಡವನ್ನು ಶೋಧಿಸಲು ಜಪಾನಿನ ವಿಪತ್ತು ಪರಿಹಾರ ತಂಡ ಆಗಮಿಸಿದೆ.ನೀರಿನ ಕೊರತೆ: ಅವಘಡದ ಬಳಿಕ ನಗರಕ್ಕೆ ನೀರು ಪೂರೈಸುವ ಪೈಪುಗಳು ಒಡೆದು ಚರಂಡಿ ನೀರು ಮಿಶ್ರಣಗೊಂಡಿದ್ದು, ನೀರಿನ ಕೊರತೆ ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ. ನೀರು ಸರಬರಾಜನ್ನು ಸರಿಪಡಿಸಲು ಒಂದು ತಿಂಗಳು ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry