ನ್ಯೂಯಾರ್ಕ್‌ ಹಿಮಪಾತ: 13 ಸಾವು

7

ನ್ಯೂಯಾರ್ಕ್‌ ಹಿಮಪಾತ: 13 ಸಾವು

Published:
Updated:

ನ್ಯೂಯಾರ್ಕ್‌ (ಪಿಟಿಐ): ಈಶಾನ್ಯ ಅಮೆರಿಕದಾದ್ಯಂತ ಶೀತಗಾಳಿ ಹಾಗೂ ಹಿಮಪಾತಕ್ಕೆ ಕನಿಷ್ಠ 13 ಮಂದಿ ಬಲಿಯಾಗಿದ್ದಾರೆ. ತಾಪಮಾನ ಭಾರಿ ಕುಸಿದಿದ್ದು, ಬಾಸ್ಟನ್‌ನಿಂದ ನ್ಯೂಯಾರ್ಕ್‌ವರೆಗೆ ಹಲವಾರು ಇಂಚು ದಪ್ಪ ಹಿಮ ಬಿದ್ದಿದೆ.  ಹಾಗಾಗಿ ವಾರಾಂತ್ಯದ ಮೋಜಿಗೆ ಕಡಿವಾಣ ಬಿದ್ದಂತೆ ಆಗಿದೆ.ಪ್ರತಿಕೂಲ ಹವಾಮಾನದ ಕಾರಣ ಸಾವಿರಾರು ವಿಮಾನಗಳ ಹಾರಾಟ ರದ್ದಾಗಿದೆ. ಈಗಷ್ಟೇ ಅಧಿಕಾರ ವಹಿಸಿಕೊಂಡಿರುವ ನ್ಯೂಯಾರ್ಕ್‌ ಮೇಯರ್‌ ಬಿಲ್‌ ಡೆ ಬ್ಲಾಸಿಯೊ ಅವರಿಗೆ ಪರಿಸ್ಥಿತಿ ನಿಭಾಯಿಸುವುದು ದೊಡ್ಡ ಸವಾಲಾಗಿದೆ. ‘ಅನಗತ್ಯವಾಗಿ ಹೊರಗೆ ಬರಬೇಡಿ, ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ’ ಎಂದು ಅವರು ಜನತೆಗೆ ಮನವಿ ಮಾಡಿಕೊಂಡಿದ್ದಾರೆ.‘ರಾತ್ರಿ ವೇಳೆ ಶೀತಗಾಳಿಯಿಂದಾಗಿ  ತಾಪಮಾನವು ಶೂನ್ಯ ಡಿಗ್ರಿಗಿಂತಲೂ ಕಡಿಮೆ ಆಗುವ ಸಾಧ್ಯತೆ ಇದೆ. ದೀರ್ಘಕಾಲದವರೆಗೆ ಚಳಿಯ ವಾತಾವರಣಕ್ಕೆ ತೆರೆದುಕೊಂಡರೆ ಚರ್ಮಕ್ಕೆ ಹಾನಿಯಾಗಬಹುದು. ಅಲ್ಲದೇ ದೇಹದ ಉಷ್ಣತೆ ಸಾಮಾನ್ಯ ಪ್ರಮಾಣಕ್ಕಿಂತ ಕುಸಿದು ಅನಾರೋಗ್ಯ ಉಂಟಾಗಬಹುದು’ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.ನ್ಯೂಯಾರ್ಕ್‌, ಬಾಸ್ಟನ್‌ ಹಾಗೂ ಫಿಲಡೆಲ್ಫಿಯಾದಲ್ಲಿ  ತಾಪಮಾನ ಮೈನಸ್‌ 10 ಡಿಗ್ರಿ ಫ್ಯಾರನ್‌ಹೀಟ್‌ಗೆ ಕುಸಿಯುವ ಸಾಧ್ಯತೆ ಕೂಡ ಇದೆ. ನ್ಯೂಯಾರ್ಕ್‌ನಲ್ಲಿ ತಾಸಿಗೆ 33 ಮೈಲಿ ವೇಗದಲ್ಲಿ ಶೀತಗಾಳಿ ಬೀಸುತ್ತಿದೆ. 6 ಇಂಚು ದಪ್ಪ ಹಿಮ ಬಿದ್ದಿದೆ. ಪ್ರತಿಕೂಲ ಹವಾಮಾನದಿಂದಾಗಿ ನ್ಯೂಯಾರ್ಕ್‌­ನಲ್ಲಿ ಈಗಾಗಲೇ ತುರ್ತು ಸ್ಥಿತಿ ಘೋಷಿಸಲಾಗಿದೆ. ಲಾಂಗ್‌ ಐಯ್ಲೆಂಡ್‌ನಿಂದ ಅಲ್ಬನಿಗೆ ಸಂಪರ್ಕ ಕಲ್ಪಿಸುವ ಮೂರು ಪ್ರಮುಖ ಹೆದ್ದಾರಿಗಳನ್ನು ಮುಚ್ಚಲಾಗಿದೆ.ದೇಶಾದ್ಯಂತ ಕನಿಷ್ಠ 2,200 ವಿಮಾನಗಳ ಹಾರಾಟ ರದ್ದಾಗಿದೆ. ಸುಮಾರು 3,000 ವಿಮಾನಗಳು  ವಿಳಂಬವಾಗಿ ಸಂಚರಿಸಿವೆ. ಷಿಕಾಗೊದಲ್ಲಿ ಸುಮಾರು 18 ಇಂಚು ಹಾಗೂ ಮಿಡ್‌ವೇ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ 12ಕ್ಕೂ ಹೆಚ್ಚು ಇಂಚು ಹಿಮ ಬಿದ್ದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry