ನ. 19ಕ್ಕೆ ಹೊಸಪಕ್ಷ ಘೋಷಣೆ

7

ನ. 19ಕ್ಕೆ ಹೊಸಪಕ್ಷ ಘೋಷಣೆ

Published:
Updated:
ನ. 19ಕ್ಕೆ ಹೊಸಪಕ್ಷ ಘೋಷಣೆ

ಶಿಕಾರಿಪುರ (ಶಿವಮೊಗ್ಗ ಜಿಲ್ಲೆ): ತಾಲ್ಲೂಕಿನ ಆಯ್ದ ಮುಖಂಡರ ಜತೆ ಬುಧವಾರ ರಾತ್ರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪ್ರಸಕ್ತ ರಾಜಕಾರಣ ಕುರಿತು ಮುಖಂಡರ ಜತೆ ಚರ್ಚಿಸಿದ್ದು, ಇದೇ ನವೆಂಬರ್ 19ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಮಾರಂಭದ ನಂತರ ಹೊಸಪಕ್ಷ ಘೋಷಣೆ ಮಾಡುವ ಕುರಿತು ಬಿಎಸ್‌ವೈ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಹೊಸ ಪಕ್ಷ ರಚನೆ ಕುರಿತು ಹಿರಿಯ ಮುಖಂಡರಿಂದ ಅಭಿಪ್ರಾಯ, ಸಲಹೆಯನ್ನೂ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ನನ್ನ ಜತೆ ಸಹಕರಿಸಿ: ಬಿಎಸ್‌ವೈ

ತಾಲ್ಲೂಕಿನ ಅಮಟೆಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದ ತಾಲ್ಲೂಕಿನ ಸಾರ್ವಜನಿಕ ಕುಂದು-ಕೊರತೆ ಸಭೆಯಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ, ಪ್ರಸ್ತುತ ರಾಜಕಾರಣದಲ್ಲಿ ಯಾವುದೇ ಕ್ಷಣದಲ್ಲೂ ಏರುಪೇರು ಸಂಭವಿಸಿದರೂ ಹಿಂದಿನ ವರ್ಷಗಳಲ್ಲಿ ನೀವು ನನ್ನ ಜತೆ ಸಹಕರಿಸಿದಂತೆ, ಮುಂದಿನ ದಿನಗಳಲ್ಲೂ ನನ್ನ ಜತೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಸೇರಿದಂತೆ ಇತರೆ ನಾಯಕರು ಈಗ ಬಗರ್‌ಹುಕುಂ ರೈತರ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಈ ಹಿಂದೆ ತಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಇವರೆಲ್ಲಾ ಏಕೆ ಹೋರಾಟ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.ಈಗಾಗಲೇ ನಾನು ಮುಖ್ಯಮಂತ್ರಿ ಜಗದೀಶ  ಶೆಟ್ಟರ್ ಜತೆ  ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಮಾತುಕತೆ ನಡೆಸಿದ್ದು, ಕಾನೂನು ಪ್ರಕಾರವಾಗಿ ಹಿಂದಿನಿಂದ ಸಾಗುವಳಿ ಮಾಡುತ್ತ ಬಂದ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಲು ನಾನು ಬಿಡುವುದಿಲ್ಲ.ಬಗರ್‌ಹುಕುಂ ಜಮೀನುಗಳ ಬಗ್ಗೆ ಸುಪ್ರೀಂಕೋರ್ಟ್ ಬಿಗಿ ಕಾನೂನು ಮಾಡಿದ್ದು, ರೈತರು ಹೊಸದಾಗಿ ಒಂದು ಮರವನ್ನು ಕಡಿಯದೇ ಅರಣ್ಯ ಉಳಿಸುವ ಕಡೆ ಗಮನ ಹರಿಸಬೇಕು ಎಂದರು.ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ, ರಾಜ್ಯ ಮಹಿಳಾ ಆಯೋಗದ ಸದಸ್ಯೆ ಗಾಯತ್ರಿ ದೇವಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ರಮೇಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಬಂಗಾರಿ ನಾಯ್ಕ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry