ಸೋಮವಾರ, ಏಪ್ರಿಲ್ 19, 2021
25 °C

ನ.10ರಂದು ಕಾಂಗ್ರೆಸ್‌ಗೆ: ಪುಟ್ಟಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇದೇ 10ರಂದು ತಮ್ಮನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಮಗೆ ಭರವಸೆ ನೀಡಿದ್ದಾರೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್.ಪುಟ್ಟಸ್ವಾಮಿ ತಿಳಿಸಿದ್ದಾರೆ.ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷ ಸೇರಲು ಪುಟ್ಟಸ್ವಾಮಿ ತಮ್ಮ ಬೆಂಬಲಿಗರೊಂದಿಗೆ ಅಲ್ಲಿಗೆ ಬಂದಿದ್ದರು. ಆದರೆ, ಅರಕಲಗೂಡು ಶಾಸಕ ಎ.ಮಂಜು (ಪುಟ್ಟಸ್ವಾಮಿ ಇದೇ ಕ್ಷೇತ್ರದವರು) ಅವರ ತೀವ್ರ ವಿರೋಧದ ಕಾರಣದಿಂದಾಗಿ ಶನಿವಾರವೇ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಪರಮೇಶ್ವರ್ ಹಿಂದೇಟು ಹಾಕಿದ್ದರು.ಈ ಬೆಳವಣಿಗೆ ಕುರಿತು ಭಾನುವಾರ `ಪ್ರಜಾವಾಣಿ~ ಜೊತೆ ಮಾತನಾಡಿದ ಪುಟ್ಟಸ್ವಾಮಿ, `ಅ. 28ರಂದೇ ಹಾಸನದಲ್ಲಿ ನಾನು ಕಾಂಗ್ರೆಸ್ ಪಕ್ಷ ಸೇರಬೇಕಿತ್ತು.  ಪಕ್ಷದ ಹಿರಿಯ ಮುಖಂಡರ ಸೂಚನೆಯಂತೆ ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ನಿಗದಿಯಾಗಿತ್ತು. ಕೆಲವು ಕಾರಣಗಳಿಂದ ಅದು ಸಾಧ್ಯವಾಗಿಲ್ಲ. ಇದೇ 10ರಂದು ಪಕ್ಷಕ್ಕೆ ಸೇರ್ಪಡೆ ಮಾಡಿಸಿಕೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟ ಭರವಸೆ ನೀಡಿದ್ದಾರೆ~ ಎಂದು ತಿಳಿಸಿದರು.`ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷರು ನಿರಾಕರಿಸಿಲ್ಲ. ಆದರೆ, ಸ್ಥಳೀಯ ಶಾಸಕರು ದೆಹಲಿಯಲ್ಲಿದ್ದ ಕಾರಣದಿಂದ ಅವರ ಜೊತೆ ನೇರವಾಗಿ ಚರ್ಚಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನವೆಂಬರ್ 10ರಂದು ಪಕ್ಷಕ್ಕೆ ಸೇರುವಂತೆ ಪರಮೇಶ್ವರ್ ಅವರು ಶನಿವಾರ ಸೂಚಿಸಿದರು. ಕಾರ್ಯಕ್ರಮ ನಿಗದಿಗೂ ಈಗಾಗಲೇ ಅವರು ಸಂಬಂಧಿಸಿದವರಿಗೆ ಸೂಚನೆ ನೀಡಿದ್ದಾರೆ~ ಎಂದರು.

ಕೃಷ್ಣ ಆಗಮನ... `ತೊಂದರೆ ಇಲ್ಲ~             ಕೊಪ್ಪಳ:
ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ರಾಜ್ಯ ರಾಜಕಾರಣಕ್ಕೆ ಮರಳಿರುವುದು ತಮ್ಮ ಪಕ್ಷಕ್ಕೆ ಆನೆ ಬಲ ಬಂದಿರುವ ರೀತಿ ಕಾಂಗ್ರೆಸ್ ಕಾರ್ಯಕರ್ತರು ವರ್ತಿಸುತ್ತಿದ್ದಾರೆ. ಆದರೆ ಅವರಿಂದ  ಆ ಪಕ್ಷಕ್ಕೆ ಯಾವುದೇ ರೀತಿ ಲಾಭವಾಗದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.ಎಸ್.ಎಂ.ಕೃಷ್ಣ ಅವರು ಒಕ್ಕಲಿಗ ಸಮುದಾಯದ ನಾಯಕ ಎಂಬುದಾಗಿ ಬಿಂಬಿಸಿಕೊಂಡರೂ ಜೆಡಿಎಸ್‌ನ ಓಟಕ್ಕೆ ತಡೆಯೊಡ್ಡಲು ಆಗುವುದಿಲ್ಲ. ಜೆಡಿಎಸ್ ಕೇವಲ ಒಕ್ಕಲಿಗರ ಪಕ್ಷವಲ್ಲ. ಎಲ್ಲ ಸಮಾಜವನ್ನು ಪ್ರತಿನಿಧಿಸುವ ಪಕ್ಷವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಕೃಷ್ಣ ಆಗಮನದಿಂದ ರಾಜ್ಯ ರಾಜಕಾರಣದಲ್ಲಿ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದರು. ಅಭಿಪ್ರಾಯಪಟ್ಟರು.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವಾಗಿದ್ದರೂ ನಾಯಕರ ಒಳ ಜಗಳದಿಂದಾಗಿ ಗೊಂದಲಮಯವಾಗಿದೆ. ಪಕ್ಷದ ನಾಯಕರೊಬ್ಬರೂ ಕೇಂದ್ರ ಸಚಿವ ಸ್ಥಾನ ತ್ಯಜಿಸಿ ರಾಜ್ಯಕ್ಕೆ ಮರಳಿಸಿದ್ದಕ್ಕೆ ಇಲ್ಲಿನ ನಾಯಕರೊಬ್ಬರಿಗೆ ಹೊಟ್ಟೆನೋವು ಆರಂಭವಾಗಿದೆ. ಈ ನೋವು ತಾಳದೆ ಈಗ ದೆಹಲಿಗೆ ಹೋಗುತ್ತಿದ್ದಾರೆ ಎಂದು ಹೆಸರು ಪ್ರಸ್ತಾಪಿಸದೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಟೀಕಿಸಿದರು.

 

 `ಹೆಚ್ಚಿನ ಶಕ್ತಿ ಬಂದಿದೆ~

ಬೆಂಗಳೂರು: `ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ರಾಜ್ಯ ರಾಜಕಾರಣಕ್ಕೆ ಮರಳಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬಂದಿದೆ~ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.`ಕೃಷ್ಣ ಪ್ರಭಾವಿ ನಾಯಕರು. ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವಿ ನಾಯಕರು. ಪಕ್ಷ ಸಂಘಟನೆಯಲ್ಲಿ ಉತ್ತಮ ಅನುಭವ ಹೊಂದಿದ್ದಾರೆ~ ಎಂದರು.  `ರಾಜ್ಯ ಕಾಂಗ್ರೆಸ್‌ನಲ್ಲಿ ಕೃಷ್ಣ ಅವರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಮುಂದಿನ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಒಗ್ಗಟ್ಟಿನಿಂದ ಎದುರಿಸಲಿದೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ~ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.