ನ.26ರೊಳಗೆ ತನಿಖೆ ಪೂರೈಸಿ

7

ನ.26ರೊಳಗೆ ತನಿಖೆ ಪೂರೈಸಿ

Published:
Updated:

ಬೆಂಗಳೂರು: ಭದ್ರಾ ಮೇಲ್ದಂಡೆ ಗುತ್ತಿಗೆ ಕಾಮಗಾರಿಯಲ್ಲಿ ಅವ್ಯವಹಾರದ ಆರೋಪ ಹೊತ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅಕ್ರಮ ಆಸ್ತಿ ಗಳಿಕೆ ಆರೋಪ ಹೊತ್ತ ಎಚ್.ಡಿ.ಬಾಲಕೃಷ್ಣೇ ಗೌಡ ಅವರ ವಿರುದ್ಧ ನಡೆಯುತ್ತಿರುವ ತನಿಖೆಯನ್ನು ನ.26ರ ಒಳಗೆ ಪೂರ್ಣಗೊಳಿಸುವಂತೆ ಲೋಕಾಯುಕ್ತ ವಿಶೇಷ ಕೋರ್ಟ್ ಬುಧವಾರ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ.ಈ ಪೈಕಿ, ಯಡಿಯೂರಪ್ಪನವರ ವಿರುದ್ಧ ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತ ಅವರು ದಾಖಲು ಮಾಡಿರುವ ಪ್ರಕರಣ ಒಂದು ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪುತ್ರ ಬಾಲಕೃಷ್ಣೇಗೌಡರ ವಿರುದ್ಧ ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯ ನಿವೃತ್ತ ಮೆಕ್ಯಾನಿಕಲ್ ಎಂಜಿನಿಯರ್ ಎಸ್.ಎನ್.ಬಾಲಕೃಷ್ಣ ಅವರು ದಾಖಲಿಸಿರುವ ದೂರು ಇನ್ನೊಂದು.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ವೇಳೆ ನೀರಾವರಿ ನಿಗಮದ ಅಧ್ಯಕ್ಷರೂ ಆಗಿದ್ದರು. ಆ ಸಂದರ್ಭದಲ್ಲಿ ಅವ್ಯವಹಾರ ಎಸಗಿದ್ದಾರೆ ಎನ್ನುವುದು ದತ್ತ ಅವರ ಆರೋಪ. ಅದೇ ರೀತಿ, ಕೆಎಎಸ್ ಅಧಿಕಾರಿಯಾಗಿದ್ದ ಬಾಲಕೃಷ್ಣೇಗೌಡರು 2005ರಲ್ಲಿ ಸ್ವಯಂ ನಿವೃತ್ತಿ ಪಡೆದ ನಂತರ 77 ಕೋಟಿ ರೂಪಾಯಿಗಳ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎನ್ನುವುದು ಬಾಲಕೃಷ್ಣ ಅವರ ಆರೋಪ. ಈ ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ನಡೆಸುತ್ತಿದ್ದಾರೆ.ಬಾಲಕೃಷ್ಣೇಗೌಡರ ಪ್ರಕರಣದಲ್ಲಿ ತನಿಖೆ ನಡೆಸಲು ತಮಗೆ ಇನ್ನೂ 9 ತಿಂಗಳ ಕಾಲಾವಕಾಶ ಬೇಕು ಎಂದು ತನಿಖಾಧಿಕಾರಿ ಪ್ರಸನ್ನ ವಿ. ರಾಜು ಅವರು ನ್ಯಾಯಾಧೀಶರನ್ನು ಕೋರಿದರು. ಬೇರೆ ಬೇರೆ ಹಂತಗಳಲ್ಲಿ ಈ ಪ್ರಕರಣದ ವಿಚಾರಣೆ ನಡೆಸಬೇಕಿರುವ ಕಾರಣ, ತಮಗೆ ಇನ್ನೂ ಹೆಚ್ಚಿನ ಕಾಲಾವಕಾಶ ಬೇಕಾಗಿದೆ ಎಂದು ಅವರು ಮನವಿ ಮಾಡಿಕೊಂಡರು. ಆದರೆ ಕೋರಿಕೆಯನ್ನು ನ್ಯಾಯಾಧೀಶರು ಮಾನ್ಯ ಮಾಡಲಿಲ್ಲ.ನ್ಯಾಯಾಂಗ ಬಂಧನ ವಿಸ್ತರಣೆ: ಈ ಮಧ್ಯೆ, ಕೆಐಎಡಿಬಿ ಭೂಹಗರಣದಲ್ಲಿ ಸಿಲುಕಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಅವರ ಪುತ್ರ- ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಹಾಗೂ ಇಟಾಸ್ಕಾ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ನವೆಂಬರ್ 26ರ ವರೆಗೆ ವಿಸ್ತರಿಸಿ ನ್ಯಾಯಾಧೀಶ ಸುಧೀಂದ್ರ ರಾವ್ ಆದೇಶಿಸಿದ್ದಾರೆ.ಈ ಮೂವರ ನ್ಯಾಯಾಂಗ ಬಂಧನದ ಅವಧಿಯು ಬುಧವಾರ ಮುಗಿದ ಹಿನ್ನೆಲೆಯಲ್ಲಿ ಜಗದೀಶ್ ಹಾಗೂ ಶ್ರೀನಿವಾಸ್ ಕೋರ್ಟ್‌ಗೆ ಖುದ್ದು ಹಾಜರು ಇದ್ದರು. ಆದರೆ ನಾಯ್ಡು ಅವರು ಕ್ಯಾನ್ಸರ್ ಚಿಕಿತ್ಸೆಗೆ ಮುಂಬೈನ ಲೀಲಾವತಿ ಆಸ್ಪತ್ರೆಗೆ ತೆರಳಿರುವ ಹಿನ್ನೆಲೆಯಲ್ಲಿ ಅವರು ಹಾಜರಾಗಲಿಲ್ಲ.ಅವರನ್ನು ಕೋರ್ಟ್ ಅನುಮತಿ ಪಡೆದು ಮುಂಬೈಗೆ ಕರೆದುಕೊಂಡು ಹೋಗಿರುವ ಬಗ್ಗೆ ಅವರ ಪರ ವಕೀಲ ಜೀವನ್ ಕೋರ್ಟ್ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ನಾಯ್ಡು ಅವರ ಆರೋಗ್ಯದ ವಸ್ತುಸ್ಥಿತಿಯ ಕುರಿತಾಗಿ ಮುಂದಿನ ವಿಚಾರಣೆ ವೇಳೆ ದಾಖಲೆ ನೀಡುವಂತೆ ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ಅವರಿಗೆ ನ್ಯಾಯಾಧೀಶರು ಸೂಚಿಸಿದರು.ಈ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಜಗ್ಗಯ್ಯ, ವೆಂಕಯ್ಯ ತಲೆಮರೆಸಿಕೊಂಡಿದ್ದು ಇದುವರೆಗೆ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರತ್ಯೇಕ ಆರೋಪಪಟ್ಟಿ ತಯಾರಿಸಲು ಆದೇಶಿಸಲಾಗಿದೆ. ಇದೇ ಪ್ರಕರಣದ ಇನ್ನೊಬ್ಬ ಆರೋಪಿ ಮಂಡಕ್ಕಿ ಮಂಜು, ಜಾಮೀನು ರದ್ದತಿಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಲಾಗಿದೆ. ಈ ಎಲ್ಲ ಅರ್ಜಿಗಳ ವಿಚಾರಣೆ ನ. 26ರಂದು ವಿಚಾರಣೆಗೆ ಬರಲಿದೆ.ಅಪ್ಪನ ಅಪ್ಪುಗೆಯಲ್ಲಿ ಕಂದ

ಸುಮಾರು ಎರಡೂವರೆ ತಿಂಗಳಿನಿಂದ ಮಗನನ್ನು ಮುದ್ದಾಡಲು ಹಾತೊರೆಯುತ್ತಿದ್ದ ಅಪ್ಪ ಹಾಗೂ ಅಪ್ಪನ ಅಪ್ಪುಗೆಗೆ ಕಾತರಿಸಿದ್ದ ಮೂರುವರೆ ವರ್ಷದ ಪುಟಾಣಿಗೆ ಬುಧವಾರ ಅಕ್ಷರಶಃ `ಬೆಳಕಿನ ಹಬ್ಬ~.

ಆಗಸ್ಟ್ 8ರಿಂದ ನ್ಯಾಯಾಂಗ ಬಂಧನದಲ್ಲಿರುವ ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಹಾಗೂ ಅವರ ಪುತ್ರ ಸಂಜೀತ್ ಅವರಿಗೆ ಈ ಹಬ್ಬದ ವಾತಾವರಣ ಕಲ್ಪಿಸಿದ್ದು ನಗರದ ಸಿವಿಲ್ ಕೋರ್ಟ್ ಆವರಣ.ಈ ಕೋರ್ಟ್ ಸಮುಚ್ಚಯದಲ್ಲಿ ಇರುವ ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಜಗದೀಶ್ ಅವರನ್ನು ಕರೆತರಲಾಗಿತ್ತು. ಅವರಿಗೆ ವಿಧಿಸಲಾಗಿದ್ದ ನ್ಯಾಯಾಂಗ ಬಂಧನದ ಅವಧಿ ಬುಧವಾರಕ್ಕೆ ಕೊನೆಗೊಂಡಿದ್ದ ಹಿನ್ನೆಲೆಯಲ್ಲಿ, ವಿಚಾರಣೆಗೆಂದು ಅವರು ಕೋರ್ಟ್‌ಗೆ ಬಂದಿದ್ದರು. ಅವರ ಸಂಬಂಧಿಯೊಬ್ಬರು ಪುತ್ರನನ್ನು ಕೋರ್ಟ್‌ಗೆ ಕರೆತಂದಿದ್ದರು.ಮಗನನ್ನು ನೋಡುತ್ತಿದ್ದಂತೆ ಜಗದೀಶ್ ಭಾವುಕರಾದರು. ಬೆಂಗಾವಲು ಇದ್ದ ಪೊಲೀಸರ ಅನುಮತಿ ಪಡೆದು ಮಗನನ್ನು ಎತ್ತಿಕೊಂಡು ಮುದ್ದಾಡಿದರು. ನಂತರ ಕೋರ್ಟ್ ಕಲಾಪ ಮುಗಿಸಿದ ಬಳಿಕ ಪುನಃ ಮಗನನ್ನು ಎತ್ತಿಕೊಂಡು ಅವನ ಕೈಯಲ್ಲಿದ್ದ ಬಿಸ್ಕತ್ ತಿನ್ನಿಸಿ ಸಮಾಧಾನ ಪಟ್ಟುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry