ಭಾನುವಾರ, ಡಿಸೆಂಬರ್ 15, 2019
18 °C

ಪಂಕಜ್ ಅಡ್ವಾಣಿಗೆ ಸಿನಿಮಾ ನಿರ್ಮಾಣದ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಂಕಜ್ ಅಡ್ವಾಣಿಗೆ ಸಿನಿಮಾ ನಿರ್ಮಾಣದ ಕನಸು

ಬೆಂಗಳೂರು: `ಸಿನಿಮಾ ಮಾಡುವ ಕನಸು, ಪುಸ್ತಕ ಬರೆಯುವ ಕನಸು.. ಹೀಗೆ ದಿನದಿನವೂ ಹೊಸ ಕನಸುಗಳು ಚಿಗುರುತ್ತಲೇ ಇವೆ...~ಈ ಕನಸುಗಳನ್ನು ಹೊರಹಾಕಿದವರು ಅಂತರರಾಷ್ಟ್ರೀಯ ಖ್ಯಾತಿಯ ಬಿಲಿಯರ್ಡ್ಸ್ ಚಾಂಪಿಯನ್, 26ರ ಹರೆಯದ ಪಂಕಜ್ ಅಡ್ವಾಣಿ.ನಗರದಲ್ಲಿ ಸೋಮವಾರ ಮಾನವ ಸಂಪನ್ಮೂಲ ವ್ಯಕ್ತಿ ಆರ್.ಇಳಂಗೊ ಅವರ `ಯು ಡೋಂಟ್ ನೀಡ್ ಎ ಗಾಡ್ ಫಾದರ್~ ಪುಸ್ತಕ ಬಿಡುಗಡೆ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ತಮ್ಮ ಕನಸುಗಳ ಎಳೆ ಬಿಡಿಸಿಟ್ಟರು.`ಸಿನಿಮಾದಲ್ಲಿ ನಾಯಕನಾಗಬೇಕೆ, ನಿರ್ದೇಶಕನಾಗಬೇಕೆ ಅಥವಾ ನಿರ್ಮಾಪಕನಾಗಬೇಕೆ ಎಂಬ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಬಾಲಿವುಡ್‌ನೊಂದಿಗೆ ಗುರುತಿಸಿಕೊಳ್ಳುವ ಆಸೆ ಬಹಳ ದಿನಗಳಿಂದ ಇದೆ. ಈಗಾಗಲೇ ಬಾಲಿವುಡ್‌ನಲ್ಲಿ ಒಳ್ಳೆಯ ನಾಯಕ ನಟರಿದ್ದಾರೆ. ಅಲ್ಲಿ ನನ್ನ ಸ್ಥಾನ ಏನು ಎಂಬ ಬಗ್ಗೆ ಇನ್ನೂ ಸ್ಪಷ್ಟ ಕಲ್ಪನೆಗಳಿಲ್ಲ. ಸಿನಿಮಾ ಮಾಡುವ ಕನಸಂತೂ ಇದೆ~ ಎಂದು ತಮ್ಮ ಮನದ ಇಂಗಿತ ವ್ಯಕ್ತ ಪಡಿಸಿದರು.`ಪುಸ್ತಕ ಬರೆಯುವ ಆಸೆಯೂ ನನ್ನೊಳಗೆ ಸುಪ್ತವಾಗಿ ಹುದುಗಿದೆ. ಅದು ಎಂದು ಸಾಕಾರವಾಗುವುದೋ ಗೊತ್ತಿಲ್ಲ. ಪುಸ್ತಕ ಬರೆಯಲು ಸಾಕಷ್ಟು ಮನೋಭೂಮಿಕೆ, ತಾಳ್ಮೆ ಹಾಗೂ ಸಮಯ ಬೇಕಾಗುತ್ತದೆ. ಅದಕ್ಕಾಗಿ ಕ್ರೀಡೆಯನ್ನು ಬಿಡಬೇಕೆ ಅಥವಾ ಕ್ರೀಡೆಯೊಂದಿಗೇ ಈ ಎಲ್ಲಾ ಕನಸುಗಳನ್ನು ನನಸಾಗಿಸಿಕೊಳ್ಳಲು ಸಾಧ್ಯವೇ ಎಂಬ ಬಗ್ಗೆ ಯೋಚಿಸುತ್ತಿದ್ದೇನೆ. ಆದರೆ ದಿನದಿನವೂ ಹೊಸ ಬಯಕೆಗಳು ಹುಟ್ಟುತ್ತಲೇ ಇವೆ. ಯಾವ ಕನಸುಗಳು ನನಸಾಗುತ್ತವೋ ಕಾದು ನೋಡಬೇಕು~ ಎಂದರು.`ಕೇವಲ ಕನಸುಗಳಷ್ಟೇ ಸಾಧನೆಗೆ ಸಾಲದು ಎಂಬುದರ ಅರಿವಿದೆ. ಸದ್ಯ ಕ್ರೀಡೆಯ ಬಗ್ಗೆಯೇ ಹೆಚ್ಚು ಗಮನ ನೀಡುತ್ತಿದ್ದೇನೆ. ಕ್ರೀಡೆ ನನ್ನ ಮೊದಲ ಆದ್ಯತೆ. ಹೀಗಾಗಿ ಕ್ರೀಡೆಯನ್ನೂ ಕಡೆಗಣಿಸಲು ಸಾಧ್ಯವಿಲ್ಲ~ ಎಂದು ಅವರು ನುಡಿದರು.`ಯು ಡೋಂಟ್ ನೀಡ್ ಎ ಗಾಡ್ ಫಾದರ್~ ಪುಸ್ತಕದ ಬಗ್ಗೆ ಮಾತನಾಡಿದ ಅವರು, `ಯಶಸ್ಸು ಸಾಧ್ಯವಾಗುವುದು ಅದೃಷ್ಟದಿಂದಲ್ಲ. ಸಾಧನೆಗೆ ಹೆಚ್ಚಿನ ಪರಿಶ್ರಮದ ಅಗತ್ಯವಿದೆ. ಪರಿಶ್ರಮದ ನಂತರವೂ ಸೋಲುಗಳು ಸಂಭವಿಸಬಹುದು. ಆದರೆ ಅದರಿಂದ ಕುಗ್ಗಬಾರದೆಂಬ ಸಂದೇಶ ಪುಸ್ತಕದಲ್ಲಿದೆ. ಶ್ರಮವಿಲ್ಲದೇ ಸಾಧನೆ ಸಾಧ್ಯವಿಲ್ಲ ಎಂಬುದನ್ನು ಪುಸ್ತಕದ ಪ್ರತಿ ಅಧ್ಯಾಯಗಳೂ ಹೇಳುತ್ತವೆ. ತಮ್ಮ ಅನುಭವಗಳನ್ನೇ ಇಲ್ಲಿನ ವಸ್ತುವಾಗಿಸಿಕೊಂಡು ಪುಸ್ತಕ ರಚಿಸಿರುವ ಇಳಂಗೊ ಅವರ ಬಗ್ಗೆ ಹೆಮ್ಮೆ ಎನಿಸುತ್ತದೆ~ ಎಂದರು.ಪುಸ್ತಕದ ಲೇಖಕ ಇಳಂಗೊ, `ಯಶಸ್ಸಿನ ಗುಟ್ಟು ಪರಿಶ್ರಮವೇ ಹೊರತು ಬೇರೇನೂ ಅಲ್ಲ. ನನ್ನ ಜೀವನದ ಅನುಭವಗಳನ್ನೇ ಇಲ್ಲಿ ದಾಖಲಿಸಲಾಗಿದೆ. ಕೇವಲ ವೃತ್ತಿ ಬದುಕಿನ ಯಶಸ್ಸು ಮಾತ್ರ ಬದುಕಿನ ಯಶಸ್ಸು ಎಂದು ತಿಳಿಯಬಾರದು. ವೈಯಕ್ತಿಕ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳುವುದೂ ಕೂಡ ದೊಡ್ಡ ಸಾಧನೆ. ಜೀವನದ ಪ್ರತಿ ಹಂತದಲ್ಲೂ ಸೋಲನ್ನು ಮೆಟ್ಟಿ ನಿಂತು ಗೆಲುವಿನ ಕಡೆಗೆ ನಡೆಯುವ ಎಲ್ಲರೂ ಯಶಸ್ಸು ಕಂಡುಕೊಳ್ಳಲು ಸಾಧ್ಯ~ ಎಂದರು.ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತೆ, ರಂಗಕರ್ಮಿ ಮುನಿರಾ ಸೇನ್ ಪುಸ್ತಕದ ಕೆಲವು ಅಧ್ಯಾಯಗಳನ್ನು ವಾಚಿಸಿದರು. ಟಾಟಾ ಮಾಕ್‌ಗ್ರಾಮ್ ಹಿಲ್ ಎಜುಕೇಷನ್ ಪ್ರೈವೇಟ್ ಲಿಮಿಟೆಡ್ ಪುಸ್ತಕವನ್ನು ಪ್ರಕಾಶಿಸಿದ್ದು, ಪುಸ್ತಕದ ಬೆಲೆ 250 ರೂಪಾಯಿಗಳು.

ಪ್ರತಿಕ್ರಿಯಿಸಿ (+)