ಪಂಕ್ಚರ್ ಅಂಗಡಿ ಪಾಂವ್ ಪಾಂವ್

7

ಪಂಕ್ಚರ್ ಅಂಗಡಿ ಪಾಂವ್ ಪಾಂವ್

Published:
Updated:

ಇದು ರಿಜ್ವಾನ್ ಪಾಷಾ, ಇರ್ಫಾನ್ ಹುಸೇನ್ ಮತ್ತು ಫಯಾಜ್ ಖಾನ್ ಎಂಬ ಮೂವರು ಮೆಕ್ಯಾನಿಕ್‌ಗಳ ಕಥೆ. ಹಲಸೂರು ರಸ್ತೆಯಲ್ಲಿ ಪುಟ್ಟದೊಂದು ಮೆಕ್ಯಾನಿಕ್ ಅಂಗಡಿ ನಡೆಸುತ್ತಿರುವ ಇವರ ಕಾರ್ಯವ್ಯಾಪ್ತಿ ಮಾತ್ರ ದೊಡ್ಡದು. ಸಂಕಷ್ಟದಲ್ಲಿರುವ ಯಾವುದೇ ವ್ಯಕ್ತಿ ಇವರಿಗೆ ಕರೆ ಮಾಡಿದರೆ ಸಾಕು ಅಲ್ಲಿ ರಂಗಪ್ರವೇಶ ಮಾಡುತ್ತಾರೆ. ಅಂದಹಾಗೆ, ಇದು ಮೊಬೈಲ್ ಪಂಕ್ಚರ್ ಸರ್ವಿಸ್ ಕಥೆ...ಮಧ್ಯರಾತ್ರಿ 12 ದಾಟಿತ್ತು. ದಿಲೀಪ್ ಮತ್ತು ಅವರ ಸ್ನೇಹಿತ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಾಜಿನಗರಕ್ಕೆ ಹಿಂತಿರುಗುತ್ತಿದ್ದರು. ನುಣುಪಾದ ರಸ್ತೆಯ ನಡುವೆ ಅಲ್ಲಲ್ಲಿ ಗುಂಡಿಗಳಿದ್ದರೂ ಅವರ ಬೈಕ್‌ನ ಸ್ಪೀಡೋಮೀಟರ್ ಮುಳ್ಳು 80 ಕಿಲೋ ಮೀಟರ್‌ನ ಆಸುಪಾಸಿನಲ್ಲಿತ್ತು. ಬೈಕ್ ಹೆಬ್ಬಾಳ ದಾಟಿ ಸಿಬಿಐ ನಿಲ್ದಾಣದ ಹತ್ತಿರ ಬರುತ್ತಿದ್ದಂತೆ ದಿಲೀಪ್ ಕಿವಿಗೆ ಢಂ ಎಂಬ ಶಬ್ದ ಅಪ್ಪಳಿಸಿತು.

ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿ ಬೈಕ್ ಸಮತೋಲನ ಕಳೆದುಕೊಂಡಿತ್ತು. ವೇಗದಲ್ಲಿದ್ದ ಬೈಕನ್ನು ನಿಯಂತ್ರಣಕ್ಕೆ ತೆಗೆದುಕೊಂಡು ನಿಲ್ಲಿಸುವಷ್ಟರಲ್ಲಿ ಅವನಿಗೆ ಸಾಕು ಸಾಕಾಗಿತ್ತು. ನೋಡಿದರೆ ಟೈರ್ ಪಂಕ್ಚರ್! 

ಆ ವೇಳೆಗೆ ಗಡಿಯಾರದ ಮುಳ್ಳು ರಾತ್ರಿ 12.30 ತೋರಿಸುತ್ತಿತ್ತು. ಆ ಸಮಯದಲ್ಲಿ ಅವರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ದಿಲೀಪ್ ಸ್ನೇಹಿತ ನಗುತ್ತಾ ಯಾರಿಗೋ ಕರೆ ಮಾಡಿದ. ಹತ್ತು ನಿಮಿಷದಲ್ಲಿ ಒಬ್ಬ ಮೆಕ್ಯಾನಿಕ್ ಅಲ್ಲಿಗೆ ಬಂದರು. ಆತನ ಹೆಸರು ಫಯಾಜ್.

ಹದಿನೈದು ನಿಮಿಷದಲ್ಲಿ ಬೈಕ್ ರೆಡಿಯಾಯಿತು. ಮಧ್ಯರಾತ್ರಿಯಲ್ಲಿ ಸಹಾಯ ಮಾಡಿದ ಮೆಕ್ಯಾನಿಕ್‌ಗೆ ಥ್ಯಾಂಕ್ಸ್ ಹೇಳಿ ದಿಲೀಪ್ ಶಿವಾಜಿನಗರ ತಲುಪಿದ.ಕಳೆದ ನಾಲ್ಕೈದು ವರ್ಷಗಳಿಂದ ನಗರದಲ್ಲಿ ಮೊಬೈಲ್ ಪಂಕ್ಚರ್ ಸೇವೆ ಒದಗಿಸುತ್ತಿರುವ  ಹಲಸೂರಿನ ಎಚ್‌ಕೆಜಿಎನ್ ವೆಹಿಕಲ್ಸ್ ಪ್ರೊಫೆಷನಲ್ಸ್‌ನ ಮೆಕ್ಯಾನಿಕ್‌ಗಳ ನೆನಪಿನ ಬುತ್ತಿಯಲ್ಲಿ ಇಂಥ ಸಾಕಷ್ಟು ಸ್ವಾರಸ್ಯಕರ ಸಂಗತಿಗಳು ಅಡಗಿವೆ.

ಮೊಬೈಲ್ ಸರ್ವಿಸ್ ಆರಂಭಿಸಿದ ಮೊದಲು 24 ಗಂಟೆಯೂ ಸೇವೆ ನೀಡುತ್ತಿದ್ದ ಇವರು ಈಗ ಅದನ್ನು 12 ಗಂಟೆಗೆ ಸೀಮಿತಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ವಿಪರೀತವಾಗಿ ಹೆಚ್ಚಿರುವ ವಾಹನ ದಟ್ಟಣೆ ಹಾಗೂ ಗಲ್ಲಿಗೊಂದರಂತೆ ತಲೆ ಎತ್ತಿರುವ ಮೊಬೈಲ್ ಮೆಕ್ಯಾನಿಕ್ ಶಾಪ್‌ಗಳ ಸ್ಪರ್ಧೆ ಇದಕ್ಕೆ ಕಾರಣವಂತೆ. ಈಗ ಮುಖ್ಯವಾಗಿ ಎಂ.ಜಿ.ರಸ್ತೆ, ಟ್ರಿನಿಟಿ ವೃತ್ತ ಹಾಗೂ ಹಲಸೂರು ಸುತ್ತಮುತ್ತ ಇವರ ಸೇವೆ ಲಭ್ಯ.

ಟ್ರಿನಿಟಿ ಸರ್ಕಲ್ ಸುತ್ತಮುತ್ತ ಸಾಕಷ್ಟು ಬಹುರಾಷ್ಟ್ರೀಯ ಕಂಪೆನಿಗಳು ಇವೆ. ನಮ್ಮ ಗ್ಯಾರೇಜ್ ಕೂಡ ಎಂಎನ್‌ಸಿ ಕಂಪೆನಿಗಳು ಸುತ್ತುವರಿದಿರುವ ಜಾಗದ ಮಧ್ಯೆ ಇದೆ. ಅಲ್ಲಿನ ಉದ್ಯೋಗಿಗಳ ಕಾರು ಅಥವಾ ಬೈಕ್ ಪಂಕ್ಚರ್ ಆದರೆ ಅಥವಾ ರಿಪೇರಿಗೆ ಬಂದರೆ ನಾವೇ ಸರಿ ಮಾಡಿಕೊಡುತ್ತಿದ್ದೆವು. ವಾಹನ ರಿಪೇರಿ ಇದ್ದವರು ಕೆಲಸದ ಒತ್ತಡದಲ್ಲಿದ್ದಾಗ ಅವುಗಳನ್ನು ಕಂಪೆನಿಗಳ ಪಾರ್ಕಿಂಗ್‌ಲಾಟ್‌ನಲ್ಲಿ ನಿಲ್ಲಿಸಿ ಸರಿಮಾಡಿಕೊಡುವಂತೆ ಕೇಳುತ್ತಿದ್ದರು. ನಾವು ಅಲ್ಲಿಗೆ ಹೋಗಿ ಬೈಕ್, ಕಾರುಗಳ ರಿಪೇರಿ ಮಾಡಿ ನಂತರ ಅಲ್ಲಿ ನಮ್ಮ ವಿಸಿಟಿಂಗ್ ಕಾರ್ಡ್‌ನ್ನು ಹಾಕಿ ಬರುತ್ತಿದ್ದೆವು.

ಅವಶ್ಯಕತೆ ಬಿದ್ದಾಗೆಲ್ಲಾ ನಮ್ಮ ನಂಬರ್‌ಗೆ ಅವರು ಹಿಂತಿರುಗಿ ಕರೆ ಮಾಡುತ್ತಿದ್ದರು... ಮೊಬೈಲ್ ಪಂಚ್ಚರ್ ಸರ್ವಿಸ್ ಶುರುಮಾಡಿದ ಬಗ್ಗೆ ಹೀಗೆ ನೆನಪಿಸಿಕೊಳ್ಳುತ್ತಾರೆ ಫಯಾಜ್.ಬಹುತೇಕ ಜನರು ಪೆಟ್ರೋಲ್ ಬಂಕ್‌ಗಳಲ್ಲಿ ಅಥವಾ ಅದರ ಪಕ್ಕದಲ್ಲಿ ಪಂಕ್ಚರ್ ಹಾಕುತ್ತಾರೆ ಎಂದು ಅಂದುಕೊಂಡಿರುತ್ತಾರೆ. ಈ ಮಾದರಿಯ ಸೇವೆ ಕೆಲ ಬಂಕ್‌ಗಳಲ್ಲಿ ಇರಬಹುದು.

ಆದರೆ ಎಲ್ಲೆಡೆಯೂ ಈ ಸೇವೆ ಲಭ್ಯವಿರುವುದಿಲ್ಲ. `ಬೈಕ್ ಪಂಕ್ಚರ್ ಆದರೆ ಅದನ್ನು ಅಲ್ಲಿಂದ ಗ್ಯಾರೇಜ್‌ಗೆ ತಳ್ಳಿಕೊಂಡು ಹೋಗುವುದು ದೊಡ್ಡ ಹಿಂಸೆ. ಯಮಭಾರದ ಬೈಕ್‌ನ್ನು ಗ್ಯಾರೇಜ್‌ಗೆ ತಳ್ಳಿಕೊಂಡು ಹೋಗುವಷ್ಟರಲ್ಲಿ ಬೆವರು ಕಿತ್ತುಬರುತ್ತದೆ. ಬೈಕ್ ಸವಾರರಿಗೆ ಎದುರಾಗುವ ಈ ಕಿರಿಕಿರಿಯನ್ನು ನಿವಾರಿಸುವುದು ನಮ್ಮ ಉದ್ದೇಶ' ಎನ್ನುತ್ತಾರೆ ಫಯಾಜ್.

ಕಳೆದ ಕೆಲವು ವರ್ಷಗಳಿಂದಲೇ ಕಾರ್ಯನಿರ್ವಹಿಸುತ್ತಿರುವ ಮೊಬೈಲ್ ಪಂಕ್ಚರ್ ಅಂಗಡಿಗಳು ಸಹ ಈಗ ಸಾಕಷ್ಟು ಬದಲಾವಣೆಗೆ ಒಳಗಾಗಿವೆ. ಹೊಸ ರೂಪದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಅಂಗಡಿಗಳೀಗ ಪಂಕ್ಚರ್ ಹಾಕುವುದರ ಜತೆಗೆ ಪೆಟ್ರೋಲ್ ಖಾಲಿ ಆದರೆ ತಂದು ಕೊಡುವುದು, ಬೈಕ್ ಕೆಟ್ಟುಹೋದರೆ ಅಲ್ಲಿಯೇ ರಿಪೇರಿ ಮಾಡಿಕೊಡುವುದು ಹೀಗೆ ತಮ್ಮ ಸೇವೆಯನ್ನು ವಿಸ್ತರಿಸಿಕೊಂಡಿವೆ.

ಕರೆ ಮಾಡಿದ ಗ್ರಾಹಕರು ತಮಗೆ ಬೇಕಿರುವ ಸೇವೆಯ ಸ್ವರೂಪವನ್ನು ಮೊದಲೇ ತಿಳಿಸಿದರೆ ಸಾಕು. ಅಗತ್ಯವಿರುವ ಸೇವೆ ಒದಗಿಸಲು ಮೆಕ್ಯಾನಿಕ್‌ಗಳು ಅದಕ್ಕೆ ಸಜ್ಜಾಗಿ ಬರುತ್ತಾರೆ. `ಬೈಕ್ ಅಥವಾ ಕಾರಿನ ಮಾಲೀಕರು ಪಂಕ್ಚರ್ ಆದಾಗ ಕರೆ ಮಾಡುತ್ತಾರೆ. ಕೆಲವರು ಹೊಸ ಟೈರ್, ಟ್ಯೂಬ್ ಅಥವಾ ಬ್ಯಾಟರಿ ಬೇಕು ಎಂದೂ ಬೇಡಿಕೆ ಇಡುತ್ತಾರೆ. ಅವೆಲ್ಲವನ್ನೂ ನಾವು ಪೂರೈಸುತ್ತೇವೆ' ಎನ್ನುತ್ತಾರೆ ಅವರು.ಫಯಾಜ್ ಅವರಿಗೆ ಪ್ರತಿದಿನ 10ರಿಂದ 12 ಕರೆಗಳು ಪಂಕ್ಚರ್‌ಗೆಂದು ಬರುತ್ತವಂತೆ. ಅದರಲ್ಲಿ ಐದಾರು ಕರೆಗಳು ರಾತ್ರಿವೇಳೆ ಬರುತ್ತವಂತೆ. ಅಲ್ಲದೇ ಅವರಿಗೆ 200 ಮಂದಿ `ರೆಗ್ಯುಲರ್ ಕಸ್ಟಮರ್‌ಗಳು' ಇದ್ದಾರಂತೆ. ಇವರೆಲ್ಲರೂ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ  ಕೆಲಸ ಮಾಡುತ್ತಿರುವವರು. ಅವರಿಗೆಲ್ಲಾ ಸೇವೆ ನೀಡುತ್ತಾರೆ. ಬೈಕ್ ಪಂಕ್ಚರ್‌ಗೆ ರೂ. 80, ಕಾರಿಗೆ 120 ರೂ. ಹಾಗೂ ಟ್ಯೂಬ್‌ಲೆಸ್ ಪಂಚ್ಚರ್‌ಗೆ ರೂ. 200 ಶುಲ್ಕ ವಿಧಿಸುತ್ತಾರೆ.`ಕಚೇರಿಗಳು ಮುಚ್ಚಿದ್ದರೆ ನಮ್ಮ ಬಿಸಿನೆಸ್ ಕೂಡ ಡಲ್' ಎನ್ನುವ ಫಯಾಜ್ ಅವರಿಗೆ ಈ ಕೆಲಸ ಸಾಕಷ್ಟು ತೃಪ್ತಿ ನೀಡಿದೆಯಂತೆ. ಸದ್ಯಕ್ಕೆ ಇವರ ಕಾರ್ಯವ್ಯಾಪ್ತಿ 5ರಿಂದ 10 ಕಿಲೋ ಮೀಟರ್. ತುರ್ತು ಸಂದರ್ಭದಲ್ಲಿ ಅದಕ್ಕಿಂತ ದೂರವಿದ್ದರೂ ಬಂದು ಪಂಕ್ಚರ್ ಹಾಕಿಕೊಡುತ್ತೇವೆ ಎನ್ನುತ್ತಾರೆ ಅವರು.ನಗರದಲ್ಲಿ ದಿನದ ಇಪ್ಪತ್ತನಾಲ್ಕೂ ಗಂಟೆ ಸೇವೆ ನೀಡುವ ವ್ಯವಸ್ಥೆ ಕೂಡ ಇದೆ. ನಗರದ ಎಲ್ಲ ಭಾಗದಲ್ಲೂ ಇವರ ಸೇವೆಯನ್ನು ಪಡೆದುಕೊಳ್ಳಬೇಕೆಂದರೆ ವಾಹನ ಮಾಲೀಕರು ಮೊದಲು ಚಂದಾದಾರರಾಗಬೇಕು. ಬೈಕ್ ಮಾಲೀಕರು ವರ್ಷಕ್ಕೆ ರೂ.549, ಕಾರ್ ಮಾಲೀಕರು ರೂ. 999 ಹಣ ಕಟ್ಟಿ ಹೆಸರು ನೋಂದಣಿ ಮಾಡಿಕೊಳ್ಳಬೇಕು.ಆದರೆ, ಈ ವ್ಯವಸ್ಥೆ ಮಾಲೀಕರಿಗೆ ಲಾಭಕ್ಕಿಂತ ನಷ್ಟ ತರುವುದೇ ಹೆಚ್ಚು. ಚಂದಾದಾರರಾಗಿರುವವರ ಬೈಕ್ ಒಮ್ಮಮ್ಮೆ ಒಂದು ಬಾರಿಯೂ ಪಂಕ್ಚರ್ ಅಥವಾ ರಿಪೇರಿಗೆ ಬರದಿರಬಹುದು. ಹಾಗಾಗಿ ನಾವು ಈ ರೀತಿ ಸೇವೆ ಒದಗಿಸುವತ್ತ ಒಲವು ತೋರಿಲ್ಲ ಎನ್ನುತ್ತಾರೆ ಫಯಾಜ್.ಪಂಕ್ಚರ್ ಆದ ಬೈಕನ್ನು ಟ್ರಾಫಿಕ್ ನಡುವೆ ತಳ್ಳುತ್ತಾ ಒದ್ದಾಡುವ ಕಷ್ಟವನ್ನು ಬೈಕ್ ಸವಾರರು ಈಗ ಅನುಭವಿಸಬೇಕಿಲ್ಲ. ಬೈಕ್ ಅಥವಾ ಕಾರಿನ ಮಾಲೀಕರು ವಾಹನವನ್ನು ರಸ್ತೆ ಬದಿಗೆ ಪಾರ್ಕ್ ಮಾಡಿ ನಮಗೊಂದು ಕರೆ ಮಾಡಿ, 20 ನಿಮಿಷದಲ್ಲಿ ನಾವಿಲ್ಲಿರುತ್ತೇವೆ ಎನ್ನುತ್ತಾರೆ ಫಯಾಜ್. ಮಾಹಿತಿಗೆ 96635 77023 (ಇರ್ಫಾನ್), 99002 29341 (ರಿಜ್ವಾನ್), 98803 23451 (ಫಯಾಜ್).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry