ಪಂಕ್ತಿ ಭೇದ ನಿಷೇಧ ಆಗಲಿ

7

ಪಂಕ್ತಿ ಭೇದ ನಿಷೇಧ ಆಗಲಿ

Published:
Updated:

ಕುಂಜಾರುಗಿರಿಯ ದೇವಾಲಯವೊಂದರಲ್ಲಿ ನಡೆದ ಪಂಕ್ತಿ ಭೇದವನ್ನು ಮಣಿಪಾಲದ ದೀಪಾಲಿ ಕಾಮತ್ ಮತ್ತವರ ಕುಟುಂಬ ಬಹಿರಂಗಗೊಳಿಸಿದ್ದು ಮೆಚ್ಚುವ ಸಂಗತಿ. ಆದರೆ ವಾಸ್ತವವಾಗಿ ರಾಜ್ಯದ ವಿಶೇಷವಾಗಿ ದಕ್ಷಿಣ ಕನ್ನಡದ ಭಾಗದ ದೇವಾಲಯಗಳಲ್ಲಿ, ಮಠಗಳಲ್ಲಿ ಪಂಕ್ತಿ ಭೇದ ಮತ್ತು ಪೂಜಾ ಕೈಂಕರ್ಯಗಳು ಜಾತಿ ಆಧಾರದ ಮೇಲೆ ತಾರತಮ್ಯ ನಡೆಯುತ್ತಿರುವುದು   ಗುಟ್ಟೇನೂ ಅಲ್ಲ.ಆದರೂ, ಭಕ್ತಿಯ ಪರಾಕಾಷ್ಠೆಯಲ್ಲಿ ಮತ್ತು ಮೂಢ ನಂಬಿಕೆಯಿಂದಾಗಿ ತಿಳುವಳಿಕೆ ಇರುವ ಜನರೂ ದೇವರ ಹೆಸರಿನಲ್ಲಿ ನಡೆಯುತ್ತಿರುವ ಕೆಟ್ಟ ಮತ್ತು ಅಮಾನವೀಯ ಪರಂಪರೆಗೆ ದಾಸರಾಗಿರುವುದು ವಿಪರ್ಯಾಸ. ಜನರ ಮನಸ್ಸಿನಲ್ಲಿ ಬಿತ್ತಿರುವ ಈ ಮೌಢ್ಯವನ್ನು ಕೆಲವು `ಜಾಣಜನರು~ ಸ್ವಾರ್ಥಕ್ಕಾಗಿ ಮತ್ತು ಜಾತಿ ಅಹಂಕಾರದಿಂದ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ನಾಗರಿಕ ಸಮಾಜ ಒಪ್ಪಿಕೊಂಡು ಬಂದಿರುವುದು ದುರದೃಷ್ಟಕರ.ಇಷ್ಟಾದರೂ, ರಾಜ್ಯದಲ್ಲಿನ ಈಗಿನ ಸರ್ಕಾರವಂತೂ ಇಂತಹ ವ್ಯವಸ್ಥೆಯನ್ನೇ ಪೋಷಿಸುತ್ತಿರುವುದು ವಿಪರ್ಯಾಸ. ಮಾನವೀಯತೆಯನ್ನೂ ನಾಚಿಸುವ ಈ ಬಗೆಯ ಅನ್ಯಾಯ ಮತ್ತು ತಾರತಮ್ಯವನ್ನು ಒಗ್ಗಟ್ಟಿನಿಂದ ಪ್ರತಿಭಟಿಸುವ ಜನರೂ ಈಗಿಲ್ಲದಿರುವುದು ದುಃಖದ ಸಂಗತಿ. ವೈಚಾರಿಕತೆ ಬಗೆಗೆ ಮಾತನಾಡುವ ಹಲವು ಜನರೂ ವೈಯಕ್ತಿಕ ಬದುಕಿನಲ್ಲಿ ಪ್ರಾಮಾಣಿಕರಾಗಿಲ್ಲ. ಹೇಳುವುದೆಲ್ಲ ಜನರಿಗೆ ಮಾಡುವುದೆಲ್ಲ ತನಗೆ ಎನ್ನುವಂತೆ ಮಾತಿಗೂ ಕೃತಿಗೂ ತದ್ವಿರುದ್ಧ. ಹಾಗಾಗಿ ಪಂಕ್ತಿ ಭೇದ ಮತ್ತು ಇತರೆ ತಾರತಮ್ಯ ಮುಂದುವರಿಯಲು ಸಾಧ್ಯವಾಗಿದೆ.ಇದೇನೇ ಇರಲಿ ಸಂವಿಧಾನಕ್ಕೆ ಬದ್ಧವಾಗಿರಬೇಕಾಗಿರುವ ಆಡಳಿತ ವ್ಯವಸ್ಥೆ ಪ್ರಾಮಾಣಿಕವಾಗಿ ಇನ್ನಾದರೂ, ಪಂಕ್ತಿ ಭೇದವನ್ನು ಕಾನೂನು ಬದ್ಧವಾಗಿ ನಿಷೇಧಿಸಬೇಕು. ಇದನ್ನು ಉಲ್ಲಂಘಿಸುವ ದೇವಸ್ಥಾನ ಮತ್ತು ಮಠಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು. ಇಂತಹ ದಿಟ್ಟ ಕ್ರಮವನ್ನು ಈ ಸರ್ಕಾರದಿಂದ ನಿರೀಕ್ಷಿಸಬಹುದೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry