ಪಂಚತಾರಾ ಸವಲತ್ತು ವಿದೇಶ ಯಾನಕ್ಕೆ ಕತ್ತರಿ

7

ಪಂಚತಾರಾ ಸವಲತ್ತು ವಿದೇಶ ಯಾನಕ್ಕೆ ಕತ್ತರಿ

Published:
Updated:

ನವದೆಹಲಿ (ಪಿಟಿಐ): ಹಣಕಾಸು ಪರಿಸ್ಥಿತಿ ಬಿಗುವಿನಿಂದ ಕೂಡಿರುವ ಹಿನ್ನೆಲೆಯಲ್ಲಿ ಬಜೆಟ್ ಕೊರತೆ ನಿಯಂತ್ರಿಸುವ ಸಲುವಾಗಿ ಸರ್ಕಾರವು ಸಚಿವರ ಹಾಗೂ ಅಧಿಕಾರಿಗಳ ವಿದೇಶ ಪ್ರಯಾಣ ವೆಚ್ಚ ಕಡಿತ ಸೇರಿದಂತೆ ಹಲವು ಕ್ರಮಗಳನ್ನು ಶೀಘ್ರವೇ ಜಾರಿಗೊಳಿಸುವ ಸಾಧ್ಯತೆ ಇದೆ.ಪಂಚತಾರಾ ಹೋಟೆಲ್‌ಗಳಲ್ಲಿ ನಡೆಸುವ ಸಭೆಗಳಿಗೂ ಇದು ಅನ್ವಯವಾಗಲಿದೆ. ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕೆ ನೀಡಬೇಕಾಗುವ ನಿಧಿಯನ್ನೂ ಕಡಿಮೆ ಮಾಡಲಾಗುತ್ತದೆ. ಹೆಚ್ಚುವರಿ ಹಣ ಕೇಳುವ ಮೊದಲು ಈಗಾಗಲೇ ನೀಡಿರುವ  ಹಣವನ್ನು ಪರಿಣಾಮಕಾರಿ ಬಳಸಿಕೊಳ್ಳುವುದಕ್ಕೆ ಒತ್ತು ನೀಡಲಾಗುವುದು.ಅಂದರೆ, ವೆಚ್ಚ ಕಡಿತದ ಅಂಗವಾಗಿ, ಒಂದೆಡೆ ಸಂಸ್ಥೆಗಳ ಖರ್ಚು ವೆಚ್ಚಗಳನ್ನು ಮಿತಗೊಳಿಸುವ ಮತ್ತೊಂದೆಡೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ನೀಡುವ ಅನುದಾನವನ್ನೂ ಸ್ವಲ್ಪಮಟ್ಟಿಗೆ ಕಡಿತ ಮಾಡುವ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.ಆರ್ಥಿಕ ಪರಿಸ್ಥಿತಿ ಉಸಿರುಗಟ್ಟುತ್ತಿರುವುದರಿಂದ, ಜನಪ್ರಿಯವಲ್ಲದ ಕೆಲವು ವೆಚ್ಚ ಕಡಿತ ಕ್ರಮಗಳನ್ನು ತಾವು ಕೈಗೊಳ್ಳುವುದಾಗಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಬುಧವಾರ ಲೋಕಸಭೆಯಲ್ಲಿ ಪ್ರಕಟಿಸಿದ್ದರು.ವಿದೇಶ ಪ್ರಯಾಣ ಬೆಳೆಸುವ ಸಚಿವರು ಹಾಗೂ ಅಧಿಕಾರಿಗಳಿಗೆ ಸಾಮಾನ್ಯ ದರ್ಜೆ ಭತ್ಯೆಗಳನ್ನಷ್ಟೇ ನೀಡಲಾಗುವುದು. ಇದು ದೇಶೀಯ ವಿಮಾನ ಪ್ರಯಾಣಕ್ಕೂ ಅನ್ವಯವಾಗಲಿದೆ.ಕಳೆದ ವರ್ಷ ಇದೇ ರೀತಿಯ ಪರಿಸ್ಥಿತಿ ಉದ್ಭವಿಸಿದ್ದಾಗ  ಸರ್ಕಾರವು ವಿದೇಶಿ ಪ್ರಯಾಣಕ್ಕೆ ಮಿತಿ ಹೇರುವ ಜತೆಗೆ ಅಧಿಕಾರಿಗಳಿಗೆ ಪಂಚತಾರಾ ಹೋಟೆಲ್‌ಗಳಲ್ಲಿ ಸಮಾವೇಶ ನಡೆಸದಿರಲು ಸೂಚಿಸಿತ್ತು.ಅದಕ್ಕೆ ಮುನ್ನ 2009ರಲ್ಲಿ, ಜಾಗತಿಕ ಆರ್ಥಿಕ ಮುಗ್ಗಟ್ಟಿನ ವೇಳೆ, ಯೋಜನೇತರ ವೆಚ್ಚವನ್ನು ಶೇ 10ರಷ್ಟು ತಗ್ಗಿಸಲು ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳಿಗೆ ಹಣಕಾಸು ಸಚಿವಾಲಯ ಸೂಚಿಸಿತ್ತು.ಪ್ರಕಾಶನ, ವೃತ್ತಿಪರ ಸೇವೆ, ಜಾಹೀರಾತು- ಪ್ರಚಾರ, ಕಚೇರಿ ವೆಚ್ಚ, ಪೆಟ್ರೋಲ್, ತೈಲ, ಲುಬ್ರಿಕೆಂಟ್ ಇತ್ಯಾದಿಗಳ ಮೇಲಿನ ವೆಚ್ಚಕ್ಕೆ ಈ ಕಡಿತ ಅನ್ವಯವಾಗಿತ್ತು. ವಿದೇಶ ಪ್ರಯಾಣದ ವೆಚ್ಚಕ್ಕೆ ಕೂಡ ಕಡಿವಾಣ ಹಾಕಿತ್ತು. ಆದರೆ, ಭದ್ರತಾ ಉದ್ದೇಶದ ಅಗತ್ಯಗಳಿಗೆ ಈ ಮಿತಿಯಿಂದ ವಿನಾಯಿತಿ ನೀಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry