ಗುರುವಾರ , ಏಪ್ರಿಲ್ 22, 2021
30 °C

ಪಂಚಮಿ ಹಬ್ಬ: ಈ ಬಾರಿ... ಬಲು ದುಬಾರಿ...!

ಪ್ರಜಾವಾಣಿ ವಾರ್ತೆ/ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಲಕ್ಷ್ಮೇಶ್ವರ: ನಾಗರ ಪಂಚಮಿ ಬಂದೈತಿ ನಾಡಿಗೆ ಹರುಷ ತಂದೈತಿ ರೈತ ಸಂತಸದಾಗ ಹಾಡೈತಿ...

ಈ ಜಾನಪದ ಹಾಡಿನಲ್ಲಿ ಪಂಚಮಿ ಹಬ್ಬದ ಮಹತ್ವ ಮತ್ತು ಅದರ ಸಡಗರ ತುಂಬಿಕೊಂಡಿದೆ. ಆದರೆ ಈ ಬಾರಿ ಬೆಲೆ ಏರಿಕೆ ಪಂಚಮಿ ಹಬ್ಬಕ್ಕೆ ಬಿಸಿ ಮುಟ್ಟಸಿದ್ದು ಸಾಮಾನ್ಯ ಜನ ಹಬ್ಬ ಮಾಡಲು ಹೆಣಗಾಡುತ್ತಿದ್ದಾರೆ.ತಾಲ್ಲೂಕಿನ ಜನತೆ ಕಳೆದ ವರ್ಷದ ಬರಗಾಲದ ಬವಣೆಯಿಂದ ಇನ್ನೂ ಹೊರ ಬಂದಿಲ್ಲ. ಇಂಥ ಕಠಿಣ ಪರಿಸ್ಥಿತಿಯಲ್ಲಿ ಈ ಬಾರಿ ಮುಂಗಾರು ಮಳೆ ಸಹ ಕೈಕೊಟ್ಟಿದ್ದು ಅಗತ್ಯ ವಸ್ತುಗಳ ಬೆಲೆ ಗಗನ ಮುಟ್ಟುತ್ತಿವೆ. 

ಪಂಚಮಿ ಹಬ್ಬಕ್ಕೆ ಶೇಂಗಾ, ಎಳ್ಳು, ಪುಠಾಣಿ, ರವೆ ಉಂಡಿ ಕಟ್ಟುವುದು ಸಾಮಾನ್ಯ. ಆದರೆ ಉಂಡಿ ತಯಾರಿಕೆಗೆ ಬೇಕಾಗಿರುವ ವಸ್ತುಗಳ ಬಹಳ ದುಬಾರಿಯಾಗಿದ್ದು ಜನತೆ ಕಂಗಾಲಾಗಿದ್ದಾರೆ.ಬೆಲ್ಲದ ಬೆಲೆಯಲ್ಲಿ ಬಹಳ ಹೆಚ್ಚಳವಾಗಿದ್ದು  ಕೊಲ್ಲಾಪುರಿ ಬೆಲ್ಲ ಕೆಜಿಗೆ 36ರಿಂದ 38 ರೂಪಾಯಿಗೆ ಮಾರಾಟವಾಗುತ್ತಿದ್ದರೆ ಸಾಮಾನ್ಯ ಬೆಲ್ಲದ ಬೆಲೆ 32 ರೂಪಾಯಿ ಇದೆ. ಪುಠಾಣಿ ಬೆಲೆ ಕೆಜಿಗೆ 75 ರೂಪಾಯಿ ಇದ್ದರೆ ಶೇಂಗಾ ಬೀಜ ಕೆಜಿಗೆ 72ರಂತೆ ಮಾರಾಟ ಆಗುತ್ತಿದೆ.ಇನ್ನು ಎಳ್ಳಿನ ಬೆಲೆ ಕೇಳಿಯೇ ಗ್ರಾಹಕರು ಹೌಹಾರುತ್ತಿದ್ದಾರೆ. ಕೆಜಿ ಕರಿಎಳ್ಳಿನ ಬೆಲೆ ಬರೋಬ್ಬರಿ ಒಂದು ನೂರು ರೂಪಾಯಿ ಇದ್ದರೆ ಬಿಳಿ ಎಳ್ಳು ಕೆಜಿಗೆ 80 ರೂಪಾಯಿ ತಲುಪಿದೆ. ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ಈಚೆಗೆ ರೈತರು ಎಳ್ಳು ಬೆಳೆಯುವುದನ್ನೇ ಕಡಿಮೆ ಮಾಡಿದ್ದಾರೆ. ಹೀಗಾಗಿ ಎಳ್ಳಿನ ಬೆಲೆಯಲ್ಲಿ ಹೆಚ್ಚಳ ಆಗಿದೆ.ಹೀಗೆಯೇ ಎಲ್ಲ ವಸ್ತುಗಳ ಬೆಲೆಯೂ ಏರುಮುಖವಾಗಿದ್ದು ಸಾಮಾನ್ಯ ಜನರನ್ನು ಕಂಗೆಡಿಸಿದೆ. `ಮಳಿ ಇಲ್ಲ, ಬೆಳಿ ಇಲ್ಲ, ಕೆಲ್ಸ ಮದ್ಲ ಇಲ್ಲ. ಇಂತಾದ್ದರಾಗ ಹಬ್ಬ ಮಾಡೂದು ಹ್ಯಂಗರಿ~ ಎಂದು ಹಬ್ಬದ ಸಂತೆಗೆ ಬಂದಿದ್ದ ಸಮೀಪದ ಯಲ್ಲಾಪುರ ಗ್ರಾಮದ ಫಕ್ಕಣ್ಣ ಪ್ಯಾಟಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.ಸರಿಯಾಗಿ ಮಳೆ ಆಗಿದ್ದರೆ ಇಷ್ಟೊತ್ತಿಗಾಗಲೇ ಬೆಳೆದ ಬೆಳೆಯಲ್ಲಿ ರೈತರು ಎಡೆ ಹೊಡೆದು ಖುಷಿಯಿಂದ ಪಂಚಮಿ ಹಬ್ಬ ಆಚರಿಸುತ್ತಿದ್ದರು. ಉಂಡಿ ತಿಂದು ಜೋಕಾಲಿ ಜೀಕಿ ಕೇಕೇ ಹಾಕಿ ಕುಣಿದಾಡುತ್ತಿದ್ದರು. ಆದರೆ ಈ ವರ್ಷದ ಮುಂಗಾರು ಮಳೆ ವೈಫಲ್ಯ ಹಬ್ಬದ ಮೇಲೆ ಕರಿಛಾಯೆ ಮೂಡಿಸಿದ್ದು ಜನತೆಯಲ್ಲಿ ನಿರುತ್ಸಾಹ ಮನೆ ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.