ಪಂಚವೀಣಾವಾದನದ ಪಾಂಡಿತ್ಯ

7

ಪಂಚವೀಣಾವಾದನದ ಪಾಂಡಿತ್ಯ

Published:
Updated:
ಪಂಚವೀಣಾವಾದನದ ಪಾಂಡಿತ್ಯ

ಐದು ವೀಣೆಗಳು...ಹತ್ತು ಕೈಗಳು... ನುಡಿಸುತ್ತಿದ್ದ ರಾಗ, ದನಿ, ಸ್ವರ ಒಂದೇ... ನಾಟರಾಗದಲ್ಲಿ ಮೂಡಿಬಂದ ಹುಲಿಯೂರು ದೊರೆಸ್ವಾಮಿ ರಚನೆಯ ಸರಸೀರುಹಾಸನ ಪ್ರಿಯೆ... ಕುವೆಂಪು ಕಲಾಕ್ಷೇತ್ರದ ನಾಲ್ಕು ಗೋಡೆಗಳ ಮಧ್ಯೆ ಅನುರಣನಗೊಳ್ಳುತ್ತಿತ್ತು.

 

ತನ್ಮಯರಾಗಿದ್ದ ಪ್ರೇಕ್ಷಕವೃಂದ ಎಚ್ಚರಗೊಂಡಿದ್ದು ಹಾಡು ಮುಗಿದಾಗಲೇ.

ಸಂಗೀತ ಪರಿಕರಗಳಲ್ಲಿ ವೀಣೆಗೆ ಅಗ್ರಸ್ಥಾನ. ಅದು ವಿದ್ಯಾದೇವತೆ ಸರಸ್ವತಿಯ ಕೈಯಲ್ಲಿದೆ ಎಂಬ ಕಾರಣಕ್ಕೂ ಇರಬಹುದು. ವೀಣಾ ಕಲಾವಿದರ ರಾಗ ತಾಳಗಳ ಭೋರ್ಗರೆತಕ್ಕೆ ಸಾಕ್ಷಿಯಾಗಿದ್ದು ಆಕಾಶವಾಣಿ ಹಬ್ಬದ `ಪಂಚವೀಣಾವಾದನ~. ವೀಣೆ ಇತಿಹಾಸದ ಸುಪ್ರಸಿದ್ಧ ವಿದ್ವಾಂಸ ದೊರೆಸ್ವಾಮಿ ಪುತ್ರ ಬಾಲಕೃಷ್ಣ ಈ ವಿಶಿಷ್ಟ ಕಾರ್ಯಕ್ರಮದ ಹೊಣೆ ಹೊತ್ತಿದ್ದರು.

 

ಬ್ಯಾಂಕ್ ಉದ್ಯೋಗಿಯೂ ಆಗಿರುವ ಇವರು ವಿಜ್ಞಾನ ತಂತ್ರಜ್ಞಾನಗಳೆರಡರಲ್ಲೂ ಪರಿಣತರು. ಇವರು ಆಕಾಶವಾಣಿಯ `ಅಮೃತವರ್ಷಿಣಿ~ ಸಂಗೀತ ಕಾರ್ಯಕ್ರಮದ ರೂವಾರಿಯೂ ಹೌದು.ಮೈಸೂರು ವಿವಿಯಲ್ಲಿ ಸಂಗೀತದ ಪದವಿ ಮುಗಿಸಿ ಆಕಾಶವಾಣಿಯಲ್ಲಿ ಎ ಗ್ರೇಡ್ ಕಲಾವಿದರಾಗಿ ಕಾರ್ಯನಿರ್ವಹಿಸುತ್ತಿರುವ ಬಾಲಕೃಷ್ಣ ವೀಣೆ ಹಿಡಿದು ಕುಳಿತರೆ ಹೊಮ್ಮುವ ನಾದಗಳು ಝೇಂಕಾರ ಹಬ್ಬಿಸುತ್ತವೆ. ಸಂಗೀತದ ಲಕ್ಷ್ಯ-ಲಕ್ಷಣಗಳಲ್ಲಿ ಪಾಂಡಿತ್ಯ ಹೊಂದಿರುವ ಇವರು ಕಳೆದ 35 ವರ್ಷಗಳಿಂದ ವೀಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

 

ಪಂಚವೀಣಾ ವಾದನದಲ್ಲಿ ಅವರಿಗೆ ಜೊತೆಯಾದವರು ಗೀತಾ ರಮಾನಂದ್, ರೇವತಿ ಮೂರ್ತಿ, ಮಂಜುಳಾ ಸುರೇಂದ್ರ ಮತ್ತು ವಾಣಿ ಯದುನಂದನ್. ಇವರೆಲ್ಲರೂ ಆಕಾಶವಾಣಿ ಕಲಾವಿದರು.ಪಕ್ಕವಾದ್ಯದಲ್ಲಿ ಸಹಕರಿಸಿದ್ದು ಕೃಷ್ಣಮೂರ್ತಿ. ಮೃದಂಗದ ಹಿತಮಿತ ಛಾಪು ಬೆರೆಸುವ ಕಲೆ ಇವರಿಗೆ ಒಲಿದಿದ್ದಕ್ಕೆ ಅಲ್ಲಿ ಸಾಕ್ಷಿ ಸಿಗುತ್ತಿತ್ತು. ಕಿಂಕಿಣಿ ದನಿಯೊಂದಿಗೆ ಸಂಗೀತ ಸಂಜೆಗೆ ಮತ್ತಷ್ಟು ಮೆರುಗು ತುಂಬಿತ್ತು ಘಟದಲ್ಲಿ ಸಹಕರಿಸಿದ ಆರ್.ರಮೇಶ್.ಶ್ರೀರಂಜಿನಿ ರಾಗ, ರೂಪಕತಾಳದಲ್ಲಿ ಮೂಡಿಬಂದ ತ್ಯಾಗರಾಜರ ಸೊಗಸುಗಾ ಮೃದಂಗ ತಾಳಮು ನಾದಕ್ಕೆ ನೆರೆದಿದ್ದ ಸಮೂಹ ತಲೆತೂಗಿತ್ತು. ಕಲ್ಯಾಣಿರಾಗದ ನಿಧಿಚಾಲ ಸುಖಮು ಸ್ವರ ಕೊನೆಗೊಂಡಾಗ ಚಪ್ಪಾಳೆಗಳ ಸುರಿಮಳೆ. ಸಾಳಗ ಭೈರವಿ ರಾಗದಲ್ಲಿ ತಿಲ್ಲಾನ ತಾಳ ಕೊನೆಗೊಂಡಾಗ ಸಂಗೀತಪ್ರೇಮಿಗಳೆಲ್ಲಾ ರೋಮಾಂಚನ.ಬಳಿಕ ಎಸ್ ಸೌಮ್ಯ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮನ ಪ್ರೇಕ್ಷಕರನ್ನು ಮತ್ತಷ್ಟು ಮುದಗೊಳಿಸಿತು. ಸುಧಾಮಾಧುರ‌್ಯ ಭಾಷಣ, ಪೂರ್ವಿಕಲ್ಯಾಣಿರಾಗದ ಪರಲೋಕ ಸಾಧನವೇ ಮನಸಾ, ರೂಪಕತಾಳದ ಹಣ್ಣು ಬಂದಿದೆ, ಶಂಕರಾಭರಣ ರಾಗದ ಅಕ್ಷಯ ಲಿಂಗವಿಭೋ, ದುರ್ಗಾ ರಾಗದ ಮುದ್ದುಕೃಷ್ಣನ ಹಾಡು ಸಾಂಸ್ಕೃತಿಕ ಹಬ್ಬಕ್ಕೆ ಮತ್ತಷ್ಟು ಕಳೆಕಟ್ಟಿತು.ಜನಸಾಮನ್ಯರಿಗೂ ಆಕಾಶವಾಣಿಗೂ ಇರುವ ಅಂತರವನ್ನು ಕಡಿಮೆ ಮಾಡಬೇಕೆಂಬ ಉದ್ದೇಶದಿಂದ ಈ ಹಬ್ಬ ಆಯೋಜಿಸಿಲಾಗಿದೆ. ನಮ್ಮ ಕೇಳುಗರೇ ಇಲ್ಲಿನ ಪ್ರೇಕ್ಷಕರಾಗಬೇಕು ಎಂಬುದು ಆಯೋಜಕರ ಕಳಕಳಿ. ಪಂಚೇದ್ರಿಯಗಳಿಗೆ ಪಂಚ ಸವಿಯ ನಿನಾದ ನೀಡಿದ ಪಂಚವೀಣಾವಾದನ ಬಹುದಿನಗಳ ಕಾಲ ನೆನಪಿನಲ್ಲುಳಿಯುವಂತಿತ್ತು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry