ಪಂಚಾಯತ್ ರಾಜ್ ಪ್ರಯೋಗ - ಪ್ರಹಸನ

7

ಪಂಚಾಯತ್ ರಾಜ್ ಪ್ರಯೋಗ - ಪ್ರಹಸನ

Published:
Updated:
ಪಂಚಾಯತ್ ರಾಜ್ ಪ್ರಯೋಗ - ಪ್ರಹಸನ

ಕರ್ನಾಟಕದ ಶಾಸನಸಭೆಯ ಬಹುಮಟ್ಟಿನ ಸದಸ್ಯರು ತಾವು ಪಾಸು ಮಾಡುವ ಮಸೂದೆಗಳನ್ನು ಓದಿರುವುದಿಲ್ಲ ಎನ್ನುವುದೊಂದು ಸಾರ್ವಜನಿಕ ರಹಸ್ಯ. ತಾವೇ ಪಾಸು ಮಾಡಿರುವ ಕಾಯ್ದೆ ವಿರುದ್ಧವೇ ಮಾತನಾಡುವ, ವರ್ತಿಸುವ ಪ್ರಸಂಗಗಳೂ ಇಲ್ಲದೇ ಇಲ್ಲ. ಅದಕ್ಕೊಂದು ಉದಾಹರಣೆ ಪಂಚಾಯತ್‌ರಾಜ್ ಕಾನೂನುಗಳು ನಡೆದು ಬಂದ ಬಗೆ.ಕರ್ನಾಟಕ ರಾಜ್ಯವು ಉದಯವಾದ ಮೇಲೆ ಮೂರು ಕಾನೂನುಗಳು ಬಂದಿವೆ- ಅರವತ್ತರ ಮತ್ತು ಎಂಬತ್ತರ ದಶಕಗಳಲ್ಲಿ ಎರಡು ಮತ್ತು ತೊಂಬತ್ತರ ದಶಕದಲ್ಲಿ ಒಂದು. ಕೊನೆಯ ಕಾನೂನು ಹತ್ತು ವರ್ಷಗಳ ಹಿಂದೆ ಸಂಪೂರ್ಣ ಪರಿಷ್ಕೃತವೂ ಆಯಿತು.ಮೊದಲ ಕಾನೂನು ಬಂದಾಗ ಅಧಿಕಾರ ವಿಕೇಂದ್ರಿಕರಣದ ಸಲುವಾಗಿ ಪಂಚಾಯತ್‌ರಾಜ್ ಸಂಸ್ಥೆಗಳನ್ನು (ಪಂ.ರಾ.ಸಂ) ಬಲಪಡಿಸುವದರ ಬಗೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಅಧಿಕಾರದಲ್ಲಿದ್ದ ಅವಿಭಜಿತ ಕಾಂಗ್ರೆಸ್ ಸರ್ಕಾರಗಳಿಗೆ ಯಾವ ಸ್ಪಷ್ಟ ಕಲ್ಪನೆಯೂ ಬದ್ಧತೆಯೂ ಇರಲಿಲ್ಲ.ವಿಚಾರ ಸ್ಪಷ್ಟತೆ ಬಂದುದು 1983ರಲ್ಲಿ ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆಯರ ನೇತೃತ್ವದಲ್ಲಿ ಮೊದಲ ಬಾರಿ ಕಾಂಗ್ರೆಸ್ಸೇತರ ಸರ್ಕಾರ  ಅಧಿಕಾರಕ್ಕೆ ಬಂದಾಗ. ಇದರ ಫಲವಾಗಿ ಮೂಡಿ ಬಂದದ್ದು ಎರಡನೆಯ ಕಾನೂನು. ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯರಿಂದ ಸ್ಥಳೀಯವಾಗಿ ಪರಿಹಾರ ಸಿಗಬೇಕೆಂಬ ಉದಾತ್ತ ಕಲ್ಪನೆಯ ಹಿನ್ನೆಲೆಯಲ್ಲಿ ಮೂರು ಹಂತದ- ಅಂದರೆ, ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ಪಂ.ರಾ. ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು.

 

1983ರಲ್ಲಿ ಪಾಸಾದ ಈ ಕಾನೂನಿಗೆ ರಾಷ್ಟ್ರಪತಿಗೆ ಮನ್ನಣೆ ಸಿಗಲೂ ವಿಳಂಬವಾಗಿ, 1987ರಲ್ಲಿ ಇದರನ್ವಯ ಚುನಾವಣೆ ನಡೆದು ಹೊಸ ಸಂಸ್ಥೆಗಳು ಅಧಿಕಾರಕ್ಕೆ ಬಂದಾಗ, ಕರ್ನಾಟಕದ ಪ್ರಯೋಗ ದೇಶದಾದ್ಯಂತ ಸಂಚಲನವನ್ನೇ ಮೂಡಿಸಿತು. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಪ್ರವೃತ್ತವಾಗಬೇಕೆಂದು ಪ್ರಚೋದನೆ ಒದಗಿದುದು ಕರ್ನಾಟಕದ ಪ್ರಯೋಗದಿಂದ ಎಂದೂ ಹೇಳಬಹುದು.ಆದರೆ ಇವೆರಡೂ ಅಲ್ಪಾಯುಷಿಗಳಾದವು. ಸಂವಿಧಾನದ ರಕ್ಷಣೆಯಿಲ್ಲದ ಈ ಕಾನೂನುಗಳ ಅನ್ವಯ ಅಸ್ತಿತ್ವಕ್ಕೆ ಬಂದ ಪಂ.ರಾ. ಸಂಸ್ಥೆಗಳು ರಾಜ್ಯ ಸರ್ಕಾರದ ಮರ್ಜಿ - ಮುಲಾಜು ಅವಲಂಬಿಸಬೇಕಾಯಿತು. ರಾಜಕೀಯ ಕಾರಣಕ್ಕಾಗಿ ಅಂದು ಅಧಿಕಾರದಲ್ಲಿದ್ದ ರಾಜ್ಯ ಸರ್ಕಾರಗಳು ಇವುಗಳನ್ನು ಬೆಳೆಯಲು ಬಿಡಲಿಲ್ಲ. ಕೊಡಮಾಡಬೇಕೆಂಬ ಅಧಿಕಾರವನ್ನು ಕೊಡದೇ ಮೊಳಕೆಯಲ್ಲಿಯೇ ಹೊಸಕಿ ಹಾಕಿದವು.ಮೂರನೆಯ ಕಾನೂನು 1993ರಲ್ಲಿ ಬಂದಾಗ ಪರಿಸ್ಥಿತಿ ಬೇರೆಯೇ ಆಗಿತ್ತು. ಈಗಾಗಲೇ ರಾಜೀವ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನದ 73 ಮತ್ತು 74ರ ತಿದ್ದುಪಡಿಯ ಮೂಲಕ ಪಂ.ರಾ. ಸಂಸ್ಥೆಗಳಿಗೆ ರಕ್ಷಣೆಯನ್ನು ಒದಗಿಸಿ, ಈ ಸಂಸ್ಥೆಗಳನ್ನು ರಾಜ್ಯ ಸರ್ಕಾರಗಳ ಕಪಿಮುಷ್ಠಿಯಿಂದ ಪಾರು ಮಾಡಿತ್ತು.ಸಂವಿಧಾನದ ತಿದ್ದುಪಡಿಯನ್ವಯ ಮೊದಲ ಪಂಚಾಯತ್ ಕಾನೂನು ರಚಿಸಿದ ಕೀರ್ತಿ ಕರ್ನಾಟಕದ್ದಾಗಿತ್ತು. ಈ ಶ್ರೇಯಸ್ಸನ್ನು ತಂದುಕೊಟ್ಟವರು ಅಂದಿನ ಪಂಚಾಯತ್ ರಾಜ್ ಮತ್ತು ಗ್ರಾಮಿಣಾಭಿವೃದ್ಧಿ ಮಂತ್ರಿಗಳಾಗಿದ್ದ ದಿ. ಎಂ.ವೈ. ಘೋರ್ಪಡೆಯವರು. ಒಂದು ದಶಕದ ನಂತರ ಈ ಕಾನೂನಿಗೆ ಅಮೂಲಾಗ್ರ ತಿದ್ದುಪಡಿ ತಂದವರು ಇವರೇ. ಆದರೆ ಇವೆರಡರ ಅನುಷ್ಠಾನವನ್ನು ಮಾಡುವ ಅವಕಾಶ ಅವರಿಗೆ ಇರಲಿಲ್ಲ.ಜನತಾದಳವು ರಾಜ್ಯದಲ್ಲಿ ಪಂಚಾಯತ್‌ಗಳ ಸಬಲೀಕರಣದಲ್ಲಿ ಮೊದಲ ಹೆಜ್ಜೆಯನ್ನು ಇಟ್ಟಿದ್ದು ನಿಜ. ಆರಂಭದಲ್ಲಿ ಕಂಡ ಉತ್ಸಾಹ ಮುಂದುವರಿಯಲಿಲ್ಲ. ಈ ಕಾನೂನು ತರುವಲ್ಲಿ ಪ್ರಮುಖ ಪಾತ್ರವಹಿಸಿದ ಸಂಬಂಧಪಟ್ಟ ಮಂತ್ರಿ ದಿ. ಅಬ್ದುಲ್ ನಜೀರ್ ಸಾಬ್ ಇರುವವರೆಗೆ ಎಲ್ಲವೂ ಚೆನ್ನಾಗಿತ್ತು. ಅವರ ನಿಧನದ ನಂತರ ಭಟ್ಟಿ ಕೆಟ್ಟಿದ್ದು ಮುಂದೆ ಸುಧಾರಿಸಲೇ ಇಲ್ಲ. ಹೆಗಡೆಯವರಿಗೆ ಈ ಕಡೆಗೆ ಗಮನ ಕೊಡಲು ವೇಳೆಯೇ ಇರಲಿಲ್ಲ.1989ರ ಚುನಾವಣೆಯಲ್ಲಿನ ಸೋಲು ಹಿನ್ನಡೆ ತಂದರೆ, 1994ರಲ್ಲಿ ಅಧಿಕಾರ ಮರಳಿ ಪಡೆದಾಗ, ಹೆಗಡೆಯವರ ಬದಲಾಗಿ ಮುಖ್ಯಮಂತ್ರಿಗಳಾಗಿ ಬಂದವರು ದೇವೇಗೌಡರು. ಅವರು ಮೊದಲಿನಿಂದಲು ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆ ಇಲ್ಲದವರು ಎಂದೇ ಪ್ರಸಿದ್ಧರಾದವರು. ಹೆಗಡೆ ಕಾಲದ ಕಾನೂನನ್ನು ಬದಲಿ ಮಾಡುವಾಗ ಕಾಂಗ್ರೆಸ್ ಕೈಬಿಟ್ಟಿದ್ದ ಹಲವಾರು ಗಮನಾರ್ಹ ಅಂಶಗಳನ್ನು ಮರಳಿ ತರುವ ಯಾವ ಪ್ರಯತ್ನವನ್ನೂ ಜನತಾದಳ ಸರ್ಕಾರ ಮಾಡುವ ಗೊಡವೆಗೆ ಹೋಗಲಿಲ್ಲ.ಬಿಟ್ಟ ಹೊಳಹನ್ನು ಮರಳಿ ತರಬೇಕೆನ್ನುವ ಹೆಗಡೆಯವರ ಕೂಗು ಅವರ ಪಕ್ಷದ ಸರ್ಕಾರಕ್ಕೆ ಕೇಳಿಸಲೇ ಇಲ್ಲ. ಸಮಾಜದ ಎಲ್ಲ ವರ್ಗಗಳಿಗೂ ಅಧಿಕಾರ ಅನುಭವಿಸುವ ಅವಕಾಶ ಒದಗಿಸುವ ಹೆಸರಿನಲ್ಲಿ, ಅಧ್ಯಕ್ಷ-ಉಪಾಧ್ಯಕ್ಷರ ಅವಧಿಯನ್ನು ಅರವತ್ತರಿಂದ ಇಪ್ಪತ್ತು ತಿಂಗಳಿಗೆ ಇಳಿಸಿ, ಪಂಚಾಯತ್‌ರಾಜ್ ವ್ಯವಸ್ಥೆ ಇನ್ನಷ್ಟು ದುರ್ಬಲಗೊಳ್ಳಲು ಕಾರಣರಾದರು.ಗ್ರಾಮೀಣ ಭಾಗದಿಂದ ಬದಲಿ ಧುರೀಣತ್ವ ಉದ್ಭವಿಸಬೇಕೆಂಬ ಮುಖ್ಯ ಉದ್ದೇಶಕ್ಕೆ ಕೊಡಲಿ ಪೆಟ್ಟು ಬಿದ್ದಿತು. ಪಂ.ರಾ. ಸಂಸ್ಥೆಗಳಿಗೆ ಹೆಚ್ಚಿನ ಆರ್ಥಿಕ ಆಡಳಿತಾತ್ಮಕ ಅಧಿಕಾರ ಕೊಡಬೇಕೆನ್ನುವ ವಿಷಯದಲ್ಲಿ ಸರ್ಕಾರ ಹಿಂದೆ ಮುಂದೆ ನೋಡತೊಡಗಿತು. ನಂತರ ಪಕ್ಷ ಹೋಳು ಹೋಳಾಗಿ ಒಡೆದ ನಂತರ ಜನತಾದಳವು ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೊಡನೆ ಅಧಿಕಾರ ಹಂಚಿಕೊಂಡರೂ, ಅಧಿಕಾರ ವಿಕೇಂದ್ರೀಕರಣದತ್ತ ಮೂಡಿ ಬಂದ ತಾತ್ಸಾರ ಕಡಿಮೆ ಆಗಲಿಲ್ಲ.ಕಾಂಗ್ರೆಸ್ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಸಂವಿಧಾನದ 73ನೆಯ ತಿದ್ದುಪಡಿಯಾದ ನಂತರ ಇಡೀ ದೇಶದಲ್ಲಿ ಹೊಸ ಕಾನೂನು ರಚಿಸಿದ ಕೀರ್ತಿ ಕಾಂಗ್ರೆಸಿಗೆ ಬಂದರೂ ಅದನ್ನು ಕಾರ್ಯರೂಪಕ್ಕೆ ತರುವ ಅವಕಾಶದಿಂದ ಕಾಂಗ್ರೆಸ್ 1993ರಲ್ಲಿ ವಂಚಿತವಾಯಿತು.ಐದು ವರ್ಷದ ನಂತರ 1999ರಲ್ಲಿ ಈ ಅವಕಾಶ ಪ್ರಾಪ್ತವಾದರೂ, ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ನೇತೃತ್ವದ ಸರ್ಕಾರಕ್ಕೆ ಘೋರ್ಪಡೆಯವರು ಬಯಸಿದ ಕಾನೂನಿನ ಆಮೂಲಾಗ್ರ ಬದಲಾವಣೆಗಳನ್ನು ಬೇಗ ತರಲಾಗಲಿಲ್ಲ. ಇದಕ್ಕೆ ಹಲವಾರು ಕಂಟಕಗಳು ಎದುರಾದವು. ಮುಖ್ಯಮಂತ್ರಿ ಕೃಷ್ಣರಿಗೂ ಅಂತಹ ಆಸಕ್ತಿ ಇರಲಿಲ್ಲ.ಪಕ್ಷದ ಧುರೀಣ ಮಣಿಶಂಕರ್ ಅಯ್ಯರ್ ಮಧ್ಯಸ್ತಿಕೆಯಿಂದ ಪಂ.ರಾ. ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ಕೊಡುವ ತಿದ್ದುಪಡಿ ವಿಧೇಯಕ ಪಾಸಾದರೂ ಅದು ಕಾರ್ಯರೂಪಕ್ಕೆ ಬರಲು ಸುಮಾರು ಒಂದು ವರ್ಷ ಬೇಕಾಯಿತು. 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವದ ನಂತರ 2004ರ ಆಗಸ್ಟ್‌ನಲ್ಲಿ ಧರ್ಮಸಿಂಗ್‌ರ ಸಮ್ಮಿಶ್ರ ಸರಕಾರದಲ್ಲಿ ಕಾರ್ಯರೂಪಕ್ಕೆ ಬಂದಿತು. ಇದು ಆದದ್ದು ಪಕ್ಷದ ಧುರೀಣರ ಆಸಕ್ತಿಯಿಂದ ಅಲ್ಲ.ವಿಧಾನಸಭಾ ಆಶ್ವಾಸನೆ ಸಮಿತಿಯ ಅಧ್ಯಕ್ಷರಾದ ಡಿ.ಆರ್. ಪಾಟೀಲರು ಇದರ ಬಗ್ಗೆ ಕೊಟ್ಟ ಆಶ್ವಾಸನೆ ಈಡೇರಿಸುವಂತೆ ಆಡಳಿತ ಯಂತ್ರದ ಮೇಲೆ ಒತ್ತಡ ತಂದಿದ್ದರಿಂದ ಸೂಕ್ತ ಸರ್ಕಾರಿ ಆಜ್ಞೆಗಳು ಹೊರಡುವಂತಾಯಿತು. ಅದರ ಪ್ರಕಾರ ಪಂ.ರಾ. ಸಂಸ್ಥೆಗಳಿಗೆ ಕೊಡಮಾಡಲಾಗುವ ಅನುದಾನದಲ್ಲಿ ಗಣನೀಯ ಹೆಚ್ಚಳವಾಯಿತು.

 

ಮೊದಲ ಬಾರಿ ಸರ್ಕಾರದ ಅಂದಾಜು ಪತ್ರಿಕೆಯಲ್ಲಿ ಪಂಚಾಯತ್ ಕಿಡಕಿಯನ್ನು ತೆರೆಯಲಾಯಿತು. ಪಂಚಾಯತ್ ರಾಜ್ ಚಳವಳಿಯಲ್ಲಿ ಇದೊಂದು ಮೈಲುಗಲ್ಲು. ಆದರೆ ಸರ್ಕಾರದ ನಿರ್ಲಿಪ್ತತೆ ಎಷ್ಟಿತ್ತು ಎಂದರೆ ತಾವು ಕೈಕೊಂಡ ಐತಿಹಾಸಿಕ ಕ್ರಮಗಳ ಅರಿವು ಅಂದಿನ ಮುಖ್ಯಮಂತ್ರಿ ಧರ್ಮಸಿಂಗರಿಗಾಗಲೀ, ಉಪಮುಖ್ಯಮಂತ್ರಿ ಮತ್ತು ಹಣಕಾಸು ಮಂತ್ರಿಗಳಾದ ಸಿದ್ದರಾಮಯ್ಯನವರಿಗೂ ಇರಲಿಲ್ಲ.ಇದರ ಬಗೆಗೆ ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪವನ್ನೂ ಕಾಂಗ್ರೆಸ್ಸಿಗೆ ಮಾಡಲಾಗಲಿಲ್ಲ.

ಕ್ಷಗಳ ಪರಿಸ್ಥಿತಿಯೇ ಡೋಲಾಯಮಾನವಾಗಿರುವಾಗ, ಶಾಸಕರು ಹೆಚ್ಚಿನ ಆಸಕ್ತಿ ಹೇಗೆ ತೆಗೆದುಕೊಂಡಾರು? 1983ರಲ್ಲಿ ಹೆಗಡೆ ಸರ್ಕಾರ ಈ ಕಾನೂನು ತರುವುದರ ಬಗ್ಗೆ ವಿಚಾರ ಮಾಡಿದಾಗ ಶಾಸಕರು ಪಕ್ಷಾತೀತವಾಗಿ ವಿರೋಧ ಮಾಡಿದುದು ಇನ್ನು ನೆನಪಿನಲ್ಲಿ ಹಸುರಾಗಿದೆ. ಮೊದಲಿನ ಕರಡು ವಿಧೇಯಕದಲ್ಲಿ ಪಂ.ರಾ. ವ್ಯವಸ್ಥೆಯಲ್ಲಿ ಶಾಸಕರಿಗೆ ಯಾವ ಸ್ಥಾನವೂ ಇರಲಿಲ್ಲ.ಶಾಸಕರ ತೀವ್ರ ವಿರೋಧವನ್ನು ಗಮನಿಸಿ ಹೆಗಡೆ ಸರ್ಕಾರವು ವಿಧೇಯಕಕ್ಕೆ ಎಲ್ಲರ ಸಮ್ಮತಿ ಪಡೆಯುವ ದೃಷ್ಟಿಯಿಂದ ಕೆಲವು ರಾಜಿ ಸಂಧಾನ ಮಾಡಿಕೊಂಡಿತು. ಇದರ ಪ್ರಕಾರ ಎಲ್ಲ ಸಂಸ್ಥೆಗಳಲ್ಲಿ ಶಾಸಕರಿಗೆ ಪದನಿಮಿತ್ತ ಸದಸ್ಯತ್ವ ಲಭ್ಯವಾಯಿತು. ಈ ಆಮಿಷ ನೀಡಿ ಹೆಗಡೆಯವರು ವಿಧೇಯಕಕ್ಕೆ ಅನುಮೋದನೆ ಪಡೆಯುವುದರಲ್ಲಿ ಯಶಸ್ವಿಯಾದರು.

ಯಾವ ದೃಷ್ಟಿಯಿಂದ ನೋಡಿದರೂ ಇದೊಂದು ಅಸಂಗತ ವ್ಯವಸ್ಥೆ. ಯಾವ ವೇದಿಕೆಗಳಿಗೆ ಯಾರು ಚುನಾಯಿತರಾಗಿಲ್ಲವೋ, ಅವರಿಗೆ ಆ ವೇದಿಕೆಗಳ ಸದಸ್ಯತ್ವ ನೀಡುವುದು ತಾತ್ವಿಕವಾಗಿ, ನೈತಿಕವಾಗಿ ಸರಿಯಲ್ಲ. ಎಲ್ಲ ಪಂ.ರಾ. ಕ್ಷೇತ್ರಗಳು ವಿಧಾನಸಭಾ ಮತಕ್ಷೇತ್ರಗಳಲ್ಲಿ ಬರುತ್ತವೆ ಎಂದು ಇದನ್ನು ಸಮರ್ಥಿಸಿಕೊಂಡರೆ, ಎಲ್ಲ ಸಂಸದರಿಗೂ ಶಾಸನ ಸಭೆಗಳು ಪದನಿಮಿತ್ತ ಸದಸ್ಯತ್ವ ಕೊಡುವ ಪ್ರಸಂಗ ಬರುತ್ತದೆ. ಆದರೆ ಹಾಗೆ ಮಾಡಲು ಸಾಧ್ಯವೇ?ಪಂ.ರಾ. ಸಂಸ್ಥೆಗಳು ಬಲಗೊಂಡರೆ ತಮ್ಮ ಸ್ಥಾನಮಾನ ಅಧಿಕಾರಕ್ಕೆ ಚ್ಯುತಿ ಬಂದೀತು ಎಂಬ ಸಂಶಯ ಅವರ ಮನಸ್ಸಿನಲ್ಲಿ ಇನ್ನೂ ಮನೆಮಾಡಿರುವದರಿಂದ, ಪಂ.ರಾ. ಸಂಸ್ಥೆಗಳ ಸಂಬಂಧ ಪಟ್ಟ ವಿಷಯಗಳು, ಅವುಗಳ ನಿರ್ವಹಣೆ, ಅವುಗಳಿಗಿರುವ ಸಮಸ್ಯೆಗಳು, ಅವರಿಗೆ ಬೇಕಾಗಿರುವ ಹೆಚ್ಚಿನ ಸೌಲಭ್ಯ ಮೊದಲಾದ ವಿಷಯಗಳು ವಿಧಾನಸಭಾ ಅಧಿವೇಶಗಳಲ್ಲಿ ಚರ್ಚೆಗೆ ಬರುವದೇ ಇಲ್ಲ.ಚರ್ಚೆಯಾದರೆ ಅವುಗಳಲ್ಲಿರುವ ಕುಂದು ಕೊರತೆಗಳು ಪಂ.ರಾ. ಸಂಸ್ಥೆಗಳಲ್ಲಿರುವ ಭ್ರಷ್ಟಾಚಾರ ಇವುಗಳ ಬಗೆಗೆ ಮತ್ತು ಅವುಗಳಿಗೆ ಕೊಟ್ಟಿರುವ ಅಧಿಕಾರ ಹಿಂಪಡೆಯುವದರ ಬಗೆಗೆ ಬರುತ್ತವೆಯೇ ಹೊರತು ಬೇರೆ ವಿಷಯಗಳು ಬರುವದಿಲ್ಲ. ಪಂ.ರಾ. ಸಂಸ್ಥೆಗಳ ಮತಗಳಿಂದ ಆರಿಸಿ ಬರುವ ಸ್ಥಳಿಯ ಸಂಸ್ಥೆ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆರಿಸಿ ಬರುತ್ತಿರುವ ಶಾಸಕರೂ ತಮ್ಮ ತುಟಿ ಬಿಚ್ಚದಿರುವದು ಇನ್ನೊಂದು ವಿಶೇಷ.ಬಿಜೆಪಿಯು ಸರ್ಕಾರದಲ್ಲಿ ಭಾಗಿಯಾಗಲು ಶುರುವಾದಂದಿನಿಂದ ಪಂ.ರಾ. ಸಂಸ್ಥೆಗಳ ಕೊಟ್ಟ ಅಧಿಕಾರವನ್ನು ಮೊಟಕು ಮಾಡುವ ಪ್ರಯತ್ನಗಳು ನಡೆಯುತ್ತಲೇ ಇವೆ. 2007ರಲ್ಲಿ ಅಧಿಕಾರ ಮೊಟಕುಗೊಳಿಸುವ ವಿಧೇಯಕವು ಶಾಸನಸಭೆಯ ಎರಡೂ ಸದನಗಳಲ್ಲಿ ಪಾಸಾಯಿತು. ವಿಧಾನ ಪರಿಷತ್ತಿನಲ್ಲಿ ವಿಧೇಯಕದ ಪರ ಮತ್ತು ವಿರುದ್ಧ ಮತಗಳು ಸಮವಾದಾಗ ಅಂದಿನ ಸಭಾಪತಿ ಪ್ರೊ. ಚಂದ್ರಶೇಖರ್ ಅವರು ತಮ್ಮ ನಿರ್ಣಾಯಕ ಮತವನ್ನು ವಿಧೇಯಕದ ಪರವಾಗಿ ಚಲಾಯಿಸಿ ಪಾಸು ಮಾಡಿಸಿದರು.

 

ದುರ್ದೈವವೆಂದರೆ, ಪ್ರೊ. ಚಂದ್ರಶೇಖರ್ ಜನತಾದಳದಲ್ಲಿ ಇರುವಾಗ ಅಧಿಕಾರ ವಿಕೇಂದ್ರಿಕರಣದ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದವರು. ಕಾಂಗ್ರೆಸ್ಸಿಗೆ ಬಂದಮೇಲೆ, ವಿಕೇಂದ್ರೀಕರಣದ ಬಗ್ಗೆ ಪಕ್ಷಕ್ಕೆ ಬದ್ಧತೆ ಇದೆ ಎಂಬ ಕಾಂಗ್ರೆಸ್ ಅಧ್ಯಕ್ಷರ ಘೋಷಣೆಯ ಅರಿವಿದ್ದ ಅವರೇ, ಕೊಟ್ಟ ಅಧಿಕಾರ ವಾಪಸು ಪಡೆಯುವ ವಿಧೇಯಕಕ್ಕೆ ಮತ ನೀಡುತ್ತಾರೆ ಎನ್ನುವುದು ಶಾಸಕರ ಮನಸ್ಥಿತಿಯ ಬಗ್ಗೆ ಕನ್ನಡಿ ಹಿಡಿದಂತಿದೆ.

 

ಅಂದು ಪಂ.ರಾ. ಸಂಸ್ಥೆಗಳ ನೆರವಿಗೆ ಬಂದವರು ಅಂದಿನ ರಾಜ್ಯಪಾಲರಾದ ಹಂಸರಾಜ ಭಾರದ್ವಾಜ್. ಈ ತಿದ್ದುಪಡಿ ವಿಧೇಯಕ ಹೇಗೆ ಸಂವಿಧಾನ ವಿರೋಧಿ ಎನ್ನುವುದನ್ನು ವಿವರಿಸಿದ ರಾಜ್ಯಪಾಲರು ಅದನ್ನು ಶಾಸನ ಸಭೆಗೆ ಹಿಂತಿರುಗಿಸಿದರು.

ಲೇಖಕರು ಹಿರಿಯ ಪತ್ರಕರ್ತರು ಮತ್ತು ಅಂಕಣಕಾರರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry