ಪಂಚಾಯತ್ ಸಬಲೀಕರಣಕ್ಕೆ ಅಭಿಯಾನ

7

ಪಂಚಾಯತ್ ಸಬಲೀಕರಣಕ್ಕೆ ಅಭಿಯಾನ

Published:
Updated:

ಬೆಂಗಳೂರು: ಪಂಚಾಯಿತಿಗಳು ಹಾಗೂ ಗ್ರಾಮಸಭೆಗಳ ಬಲವರ್ಧನೆ, ಸದಸ್ಯರಿಗೆ ಸೂಕ್ತ ತರಬೇತಿ ಇತ್ಯಾದಿ ಉದ್ದೇಶಗಳನ್ನು ಇಟ್ಟುಕೊಂಡು ಕೇಂದ್ರ ಸರ್ಕಾರ ರೂಪಿಸಿರುವ `ರಾಜೀವ್‌ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನ' ಈ ವರ್ಷ ರಾಜ್ಯದಲ್ಲೂ ಜಾರಿಗೆ ಬರಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.ಈ ಯೋಜನೆಗೆ ಕೇಂದ್ರ ಸರ್ಕಾರ 75ರಷ್ಟು ಹಾಗೂ ರಾಜ್ಯ ಸರ್ಕಾರ ಶೇ 25ರಷ್ಟು ಅನುದಾನ ಭರಿಸಲಿವೆ. ಈ ವರ್ಷ 100 ಕೋಟಿ ರೂಪಾಯಿ ವೆಚ್ಚ ಮಾಡಲಿದ್ದು, ಮೊದಲ ಹಂತದಲ್ಲಿ ಜಿಲ್ಲೆಗೊಂದು ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಈ ಯೋಜನೆ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಈಗಾಗಲೇ ಒಪ್ಪಿಗೆ ನೀಡಿದ್ದು, ಅನುಷ್ಠಾನದ ಪೂರ್ವ ಸಿದ್ಧತೆಗಳು ಆರಂಭವಾಗಿವೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ ತರಬೇತಿ, ಪುನರ್‌ಮನನ ಶಿಬಿರಗಳ ವ್ಯವಸ್ಥೆ ಮಾಡಲಾಗುವುದು ಎಂದರು.ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ರುದ್ರಭೂಮಿ, ಆಟದ ಮೈದಾನ, ಬಯಲು ರಂಗಮಂದಿರ, ಸಾರ್ವಜನಿಕ ಗ್ರಂಥಾಲಯಗಳ ನಿರ್ಮಾಣ ಸೇರಿದಂತೆ ಗ್ರಾಮ ಪಂಚಾಯಿತಿಗಳು ಮುಖ್ಯವಾಗಿ 15 ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಆದರೆ, ಸದಸ್ಯರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಆದ್ದರಿಂದ ತರಬೇತಿಯ ಅಗತ್ಯವಿದೆ ಎಂದರು.ಸದಸ್ಯರ ಜೊತೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಎಂಜಿನಿಯರ್‌ಗಳಿಗೂ ತರಬೇತಿ ನೀಡಲಾಗುವುದು. ಅಧಿಕಾರಿಗಳು ಹೊಸದಾಗಿ ಬಂದಿರುತ್ತಾರೆ. ಹೊರ ಗುತ್ತಿಗೆ ಮೇಲೆ ನೇಮಕ ಮಾಡಿಕೊಂಡಿರುವ ಎಂಜಿನಿಯರ್‌ಗಳಿಗೆ ಗ್ರಾಮೀಣ ಮಟ್ಟದಲ್ಲಿ ಕೈಗೆತ್ತಿಕೊಳ್ಳುವ ಕಾಮಗಾರಿಗಳ ಬಗ್ಗೆ ಸರಿಯಾದ ಕೌಶಲ ಇರುವುದಿಲ್ಲ. ಹೀಗಾಗಿ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.ಕಾನೂನು, ಆಡಳಿತಾತ್ಮಕ ವಿಷಯಗಳು, ಗ್ರಾಮ ಪಂಚಾಯಿತಿ ಅನುಷ್ಠಾನಗೊಳಿಸಬೇಕಾದ ಕಾರ್ಯಕ್ರಮಗಳು ಇತ್ಯಾದಿಗಳ ಬಗ್ಗೆ ಸದಸ್ಯರಿಗೆ ತರಬೇತಿ ನೀಡಲಾಗುವುದು. ಸಂವಿಧಾನ ಬದ್ಧವಾದ ಸ್ಥಳೀಯ ಆಡಳಿತವನ್ನು ಬಲಪಡಿಸುವುದು. ಗ್ರಾಮ ಪಂಚಾಯಿತಿಗಳು, ಗ್ರಾಮಸಭೆಗಳು ತೆಗೆದುಕೊಳ್ಳುವ ನಿರ್ಣಯಗಳ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಮಾಡುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಪ್ರಕ್ರಿಯೆ ಶುರುವಾಗಿದೆ. ಒಂದು ಸಾವಿರ ಘಟಕಗಳಿಗೆ ಅಗತ್ಯವಿರುವ ಉಪಕರಣಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ. ಮೊದಲ ಹಂತದಲ್ಲಿ 5500 ಕೆರೆಗಳ ಪುನಶ್ಚೇತನ ಕಾರ್ಯ ಆರಂಭವಾಗಿದೆ ಎಂದರು.ಗ್ರಾಮೀಣಾಭಿವೃದ್ಧಿ ವಿವಿ ಸ್ಥಾಪನೆಗೆ ನಿರ್ಧಾರ

ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಆರಂಭಿಸಲು ತೀರ್ಮಾನಿಸಿದ್ದು, ಇದರ ರೂಪುರೇಷಗಳನ್ನು ಸಿದ್ಧಪಡಿಸಲು ತಜ್ಞರ ಸಮಿತಿ ರಚಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ ಹೇಳಿದರು.ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಭಿನ್ನವಾಗಿರುತ್ತದೆ. ಇದರ ಅಡಿ ಸಂಯೋಜನೆ ಹೊಂದಿದ ಕಾಲೇಜುಗಳು ಇರುವುದಿಲ್ಲ. ವಿ.ವಿ ಕ್ಯಾಂಪಸ್‌ನಲ್ಲೇ ಕೋರ್ಸ್‌ಗಳನ್ನು ಆರಂಭಿಸಲಾಗುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಶೌಚಾಲಯ, ಇಂಗುಗುಂಡಿ ನಿರ್ಮಾಣ ಸೇರಿದಂತೆ ಇಲಾಖೆಯ ಅಧೀನದಲ್ಲಿ ತೆಗೆದುಕೊಳ್ಳುವ ಕಾಮಗಾರಿಗಳ ಕೌಶಲದ ಬಗ್ಗೆ ತಿಳಿಸಿಕೊಡಬೇಕು ಎಂಬುದು ವಿಶ್ವವಿದ್ಯಾಲಯ ಸ್ಥಾಪನೆಯ ಆಶಯ. ತಜ್ಞರ ಸಮಿತಿ ನೀಡುವ ವರದಿ ಆಧರಿಸಿ ಇದಕ್ಕೆ ಅಂತಿಮ ರೂಪ ನೀಡಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry