ಶುಕ್ರವಾರ, ಜನವರಿ 24, 2020
21 °C

ಪಂಚಾಯಿತಿಗಳಲ್ಲೂ ಬೆರಳಚ್ಚು ಹಾಜರಾತಿ ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಕಚೇರಿಗೆ ವಿಳಂಬವಾಗಿ ಬರುವುದು, ಚಕ್ಕರ್ ಹೊಡೆದಿದ್ದರೂ ಮರುದಿನ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ಸಂಬಳ ಎಣಿಸುತ್ತಿದ್ದ ಕೆಲವು ಅಧಿಕಾರಿ ಮತ್ತು ನೌಕರರಿಗೆ ಅಂಕುಶ ಹಾಕಲು ಮುಂದಾಗಿರುವ ಸರ್ಕಾರ, ಪಂಚಾಯತ್ ರಾಜ್ ವ್ಯವಸ್ಥೆಯ ಮೂರು ಹಂತದ ಆಡಳಿತದಲ್ಲೂ ಬಯೋಮೆಟ್ರಿಕ್ ಹಾಜರಾತಿ ಅಳವಡಿಸಲು ನಿರ್ಧರಿಸಿದೆ.ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಡಿ. 31ರೊಳಗೆ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೂಚಿಸಿದೆ. ಇದರ ಸಂಪೂರ್ಣ ಹೊಣೆಯನ್ನು ಆಯಾ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ವಹಿಸಲಾಗಿದೆ.ಕಡತಗಳ ವಿಲೇವಾರಿಯಲ್ಲಿ ವಿಳಂಬ, ಅನವಶ್ಯಕವಾಗಿ ಜನಸಾಮಾನ್ಯರನ್ನು ಕಚೇರಿಗೆ ಅಲೆಸುವುದು, ದೈನಂದಿನದ ಆಡಳಿತದಲ್ಲಿ ಸಾಕಷ್ಟು ಏರುಪೇರು ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರವು ಅಧಿಕಾರಿ ಮತ್ತು ನೌಕರರಲ್ಲಿ ಶಿಸ್ತು ತರಲು ಬಯೋಮೆಟ್ರಿಕ್ ಹಾಜರಾತಿ ಮೊರೆ ಹೋಗಿದೆ.ಜಿಲ್ಲಾ ಪಂಚಾಯಿತಿ, ಏಳು ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲೆಯಲ್ಲಿನ 232 ಗ್ರಾಮ ಪಂಚಾಯಿತಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಮೆಷಿನ್ ಅಳವಡಿಸಬೇಕಾಗಿದ್ದು, ಅದಕ್ಕೆ ತಗಲುವ ವೆಚ್ಚವನ್ನು ಆಯಾ ಪಂಚಾಯತ್ ನಿಧಿಯಿಂದ ಭರಿಸುವಂತೆಯೂ ಸೂಚಿಸಿದೆ.

ತಮ್ಮ ಕಚೇರಿಯಲ್ಲಿನ ಸಿಬ್ಬಂದಿಗಳ ಸಂಖ್ಯೆಗೆ ಅನುಗುಣವಾಗಿ ರೀಡರ್ ಅನ್ನು ಖರೀದಿಸಬೇಕು. ಇದರೊಂದಿಗೆ, ಕಂಪ್ಯೂಟರ್, ಅಂತರ್ಜಾಲ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕಿದೆ. ಇ-–ಆಡಳಿತ ಗುರುತಿಸುವ ಮಾರಾಟಗಾರರಿಂದ ಈ ಎಲ್ಲ ಪರಿಕರಗಳನ್ನು ಖರೀದಿಸಬೇಕು ಎಂದು ತಾಕೀತು ಮಾಡಿದ್ದಾರೆ.ಅಲ್ಲದೆ, ಬಯೋಮೆಟ್ರಿಕ್ ಉಪಕರಣಗಳನ್ನು ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕತೆ ಅಧಿನಿಯಮ 1999 ಮತ್ತು ನಿಯಮಗಳು 2000 ಅನ್ನು ಪಾಲಿಸಬೇಕು ಎಂದು ಈ ಸಂಬಂಧ ಹೊರಡಿಸಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ, ಬೇಕಾಗುವ ತಂತ್ರಾಂಶವನ್ನು ನ್ಯಾಷನಲ್ ಇನ್‌ಫರ್ಮೆಟಿಕ್‌ ಸೆಂಟರ್ (ಎನ್ಐಸಿ) ಅಥವಾ ಇ-–ಆಡಳಿತ ಇಲಾಖೆಯವರಿಂದ ಪಡೆಯುವಂತೆಯೂ ಸೂಚಿಸಿದೆ.ಬಯೋಮೆಟ್ರಿಕ್ ಹಾಜರಾತಿ ಜೊತೆಗೆ ಅಧಿಕಾರಿ ಹಾಗೂ ನೌಕರರ ಚಲನ-ವಲನದ ಮೇಲೆ ಕಣ್ಣಿಡಲು ಪ್ರತ್ಯೇಕ ಪುಸ್ತಕವನ್ನೂ ಕಡ್ಡಾಯವಾಗಿ ನಿರ್ವಹಿಸಬೇಕು. ಹಾಗೇ, ಅನ್ಯ ಕಾರ್ಯನಿಮಿತ್ತ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಕಚೇರಿಯಿಂದ ಹೊರಗುಳಿದಿದ್ದರೆ, ಆ ಅವಧಿಯನ್ನು ಕಡ್ಡಾಯವಾಗಿ ದಾಖಲಿಸಬೇಕು ಎಂದು ತಿಳಿಸಲಾಗಿದೆ.

ವಿಳಂಬ: ಡಿ. 31ರೊಳಗೆ ಬಯೋಮೆಟ್ರಿಕ್ ಹಾಜರಾತಿ ಅಳವಡಿಸಿಕೊಳ್ಳಬೇಕು ಎಂದು ಸರ್ಕಾರ ಸೂಚಿಸಿದ್ದರೂ ಈ ಪದ್ಧತಿ ಇನ್ನಷ್ಟು ವಿಳಂಬವಾಗುವ ಸಾಧ್ಯತೆಯೂ ಇದೆ. ರಾಜ್ಯ ಸರ್ಕಾರದ ಸೂಚನೆಯನ್ವಯ ಬಯೋಮೆಟ್ರಿಕ್‌್ ಹಾಜರಾತಿ ಕಾರ್ಯ ಆರಂಭಿಸಲಾಗುವುದು. ಪ್ರಾಯೋಗಿಕವಾಗಿ ಕೆಲವೆಡೆ ಮಾಡಲಾಗುವುದು. ಆ ನಂತರ ಅದನ್ನು ಉಳಿದ ಕಡೆಗಳಲ್ಲಿ ವಿಸ್ತರಿಸಲಾಗುವುದು. ಡಿಸೆಂಬರ್‌ ಅಂತ್ಯಕ್ಕೆ ಪೂರ್ಣಗೊಳ್ಳುವುದು ಕಷ್ಟ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಸಿಇಒ ಪಿ.ಸಿ. ಜಯಣ್ಣ.

–ಕೆ. ಚೇತನ್‌

ಪ್ರತಿಕ್ರಿಯಿಸಿ (+)