ಪಂಚಾಯಿತಿ ನಿರ್ಧಾರಕ್ಕೆ ನಾಗರಿಕರ ತರಾಟೆ

7

ಪಂಚಾಯಿತಿ ನಿರ್ಧಾರಕ್ಕೆ ನಾಗರಿಕರ ತರಾಟೆ

Published:
Updated:

ಕೃಷ್ಣರಾಜಪೇಟೆ: ತಾಲ್ಲೂಕಿನ ಮಾಕವಳ್ಳಿ ಕೋರಮಂಡಲ್ ಶುಗರ್ಸ್ ಕಂಪೆನಿಯ ಉದ್ದೇಶಿತ ಮದ್ಯಸಾರ ಘಟಕ ಮತ್ತು ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ನಿರಾಕ್ಷೇಪಣಾ ಪತ್ರ ನೀಡಿರುವ ಸ್ಥಳೀಯ ಪಂಚಾಯಿತಿಯ ಆಡಳಿತ ಮಂಡಳಿಯ ಕ್ರಮ ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ಸಾರ್ವಜನಿಕರ ಅಸಹನೆಗೆ ಕಾರಣವಾಯಿತು.ಸೆ.29ರಂದು ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಗ್ರಾಮಸಭೆ ಅಪೂರ್ಣವಾಗಿ ಮುಂದೂಡಲ್ಪಟ್ಟಿತ್ತು. ಮತ್ತೆ ನ.29ರಂದು ಮಾಕವಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಗ್ರಾಮ ಸಭೆ ಸಹ ಇದೇ ವಿಷಯದ ಚರ್ಚೆಗೆ ವೇದಿಕೆ ಒದಗಿಸಿತು. ಪಂಚಾಯಿತಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಕ್ರಮ ಸಾರ್ವಜನಿಕರ ಸಿಟ್ಟಿಗೆ ಕಾರಣವಾಯಿತು.ಉದೇಶಿತ ಮದ್ಯಸಾರ ಘಟಕದ ಕಲುಷಿತ ನೀರು ಮತ್ತು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ಘಟಕದ ಹಾರುಬೂದಿ ಇತರ ತ್ಯಾಜ್ಯಗಳಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ನಿರಾಕ್ಷೇಪಣಾ ಪತ್ರ ಮತ್ತು ಕಟ್ಟಡ ನಿರ್ಮಾಣ ಪರವಾನಿಗೆ ನೀಡದಂತೆ ಸಾರ್ವಜನಿಕರು ಒತ್ತಾಯಿಸಿದರು.  ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನೀಡಿದ ತಡೆಯಾಜ್ಞೆ ಮೀರಿ ಗ್ರಾಮ ಸಭೆಯಲ್ಲೂ ಚರ್ಚಿಸದೆ ಏಕ ಪಕ್ಷೀಯವಾಗಿ ಅನುಮತಿ ನೀಡಲಾಗಿದೆ. ಸಾರ್ವಜನಿಕರ ಲಿಖಿತ ಆಕ್ಷೇಪಣೆಗಳಿಗೂ ಮಣಿದಿಲ್ಲ ಎಂದು ಮುಖಂಡರಾದ ಯೋಗೇಶ್, ಕರೋಟಿ ತಮ್ಮಯ್ಯ ಇತರರು ಪ್ರಶ್ನಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜೇಗೌಡ ಸೇರಿದಂತೆ ಯಾವುದೇ ಜನಪ್ರತಿನಿಧಿ ಸೂಕ್ತ ಉತ್ತರ ನೀಡುವಲ್ಲಿ ವಿಫಲರಾದರು.ಪಂಚಾಯತ್ ರಾಜ್ ಕಾಯ್ದೆ 1993ರ ಕಲಂ 2 ಮತ್ತು 3ಎ ಅಡಿಯಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ತೆಗೆದುಕೊಳ್ಳುವ ತೀರ್ಮಾನ ಗ್ರಾಮ ಸಭೆಯಲ್ಲಿ ಚರ್ಚಿಸಲು, ವಿಮರ್ಶಿಸಲು, ಅಂಗೀಕರಿಸಲು, ತಿರಸ್ಕರಿಸಲು ಸಮಾನವಾದ ಅವಕಾಶ ನೀಡಲಾಗಿದೆ. ಇದರ ಆಧಾರದ ಮೇಲೆ ಗ್ರಾಮ ಸಭೆಯಲ್ಲಿ ಸಾರ್ವಜನಿಕರ ಬಹುಮತ ಪರಿಗಣಿಸಿ ಕೋರಮಂಡಲ್ ಶುಗರ್ಸ್ ಸಂಸ್ಥೆಗೆ ಉದ್ದೇಶಿತ ಘಟಕಗಳ ಸ್ಥಾಪನೆ ನೀಡಲು ಅವಕಾಶ ನೀಡಬಾರದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry