ಸೋಮವಾರ, ಮೇ 16, 2022
30 °C

ಪಂಚಾಯಿತಿ ಭೇಟಿ ಕಡ್ಡಾಯ: ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯಲ್ಲಿ ಈಗಾಗಲೆ ನಾಲ್ಕು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯಿತಿಗೂ ಭೇಟಿ ನೀಡಿ ಸನ್ನಿವೇಶ ಪರಿಶೀಲಿಸಬೇಕು. ಕಷ್ಟದಲ್ಲಿರುವವರಿಗೆ ನೆರವಾಗಬೇಕು~ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಎನ್.ಶ್ರೀನಿವಾಸಚಾರಿ ಸೂಚಿಸಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಉದ್ಯೋಗಖಾತ್ರಿ ಯೋಜನೆ ಅಡಿ ಕಾಮಗಾರಿಗಳನ್ನು ಶುರು ಮಾಡಿ. ಒಂದೇ ಕೆಲಸವಾದರೂ, ಐದೇ ಜನ ಬಂದರೂ ಸರಿ. ಗ್ರಾಮಸ್ಥರಿಗೆ ಕೆಲಸ ಕೊಡಿ ಎಂದರು.ಕೂಲಿಗಳು ಬರುತ್ತಿಲ್ಲ ಎಂಬುದು ಬೇರೆ ಮಾತು. ಮುಂದಿನ ಒಂದು ವಾರದೊಳಗೆ ಎಲ್ಲ ಪಂಚಾಯಿತಿಗಳಿಗೂ ಭೇಟಿ ನೀಡಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಜ್ಯಕ್ಕೆ ಅನುದಾನ ದೊರಕುತ್ತಿಲ್ಲ. ಜನಕ್ಕೆ ಕೆಲಸವೂ ದೊರಕುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ಅಕ್ಟೋಬರ್ ತಿಂಗಳಾದರೂ ಜಿಲ್ಲೆಯ ಕೇವಲ 9 ಪಂಚಾಯಿತಿಗಳಲ್ಲಿ ಮಾತ್ರ ಉದ್ಯೋಗ ಖಾತ್ರಿ ಯೋಜನೆಗೆ ಚಾಲನೆ ನೀಡಿರುವುದು ತೀವ್ರ ನಿರಾಶಾದಾಯಕ ಸಂಗತಿ ಎಂದು ಹೇಳಿದರು.ಬರ ಪರಿಸ್ಥಿತಿ ನಿರ್ವಹಣೆಗೆಂದು 15 ದಿನದ ಹಿಂದೆ 2 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರ ಶೀಘ್ರದಲ್ಲೆ ಇನ್ನೂ 1.5 ಕೋಟಿ ರೂಪಾಯಿ ಬಿಡುಗಡೆ ಮಾಡಲಿದೆ. ಜಿಲ್ಲಾಧಿಕಾರಿ ಅವರ ಬಳಿ ಇರುವ 70 ಲಕ್ಷವೂ ಸೇರಿದರೆ ನಾಲ್ಕು ಕೋಟಿಯಾಗುತ್ತದೆ. ಹಣಕ್ಕೆ ಕೊರತೆ ಇಲ್ಲ. ಹೀಗಾಗಿ ಜನರ ಸಮಸ್ಯೆ ನಿವಾರಿಸುವತ್ತ ಅಧಿಕಾರಿಗಳು ಗಂಭೀರ ಗಮನ ನೀಡುವಂತೆ ಸೂಚಿಸಿದರು.ನೀರು : ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತಹಶೀಲ್ದಾರ್‌ಗಳು, ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಒಟ್ಟಾಗಿ ಹಳ್ಳಿಗಳಿಗೆ ಭೇಟಿ ನೀಡಬೇಕು. ಟ್ಯಾಂಕರ್ ಮೂಲಕ ನೀರು ಪೂರೈಸುವಲ್ಲಿ, ಟ್ಯಾಂಕರ್‌ಗಳಿಗೆ ಎಷ್ಟು ಹಣ ಕೊಡಬೇಕು ಎಂಬುದನ್ನು ಜಿಲ್ಲಾ ಕೇಂದ್ರದಲ್ಲಿ ಸಭೆ ನಡೆಸಿ ದರ ನಿಗದಿ ಮಾಡಬೇಕು ಎಂದು ತಿಳಿಸಿದರು.ವಸತಿ ಯೋಜನೆ : ವಸತಿ ಯೋಜನೆ ಅಡಿ ಮನೆ ನಿರ್ಮಿಸುವಲ್ಲಿಯೂ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು ತೀವ್ರ ನಿರ್ಲಕ್ಷ್ಯ ಮತ್ತು ಅಸಾಮರ್ಥ್ಯ ತೋರಿದ್ದಾರೆ.ಕೆಲವು ಸಾವಿರ ಮನೆಗಳ ಗುರಿ ಇರುವಲ್ಲಿ ಕೆಲವು ನೂರು ಮನೆಗಳ ಗುರಿ ಮುಟ್ಟುವ ಪ್ರಯತ್ನ ನಡೆಯುತ್ತಿದೆ ಎನ್ನುವುದು ನಿರಾಶಾದಾಯಕ ಸಂಗತಿ. ಈ ತಿಂಗಳ ಅಂತ್ಯದೊಳಗೆ ರಾಜೀವಗಾಂಧಿ ವಸತಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲು ಸಕಲ ಸಿದ್ಧತೆ ನಡೆಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.ಡಿಸಿಸಿ ಬ್ಯಾಂಕ್ : ಜಿಲ್ಲಾ ಸಹಕಾರಿ ಬ್ಯಾಂಕಿನಲ್ಲಿ 32 ಸಾವಿರ ಸದಸ್ಯರಿದ್ದು, ಪ್ರಸ್ತುತ ಸಾಲಿನಲ್ಲಿ 1200 ಮಂದಿಗೆ ಮಾತ್ರ ಸಾಲ ನೀಡಲಾಗಿದೆ ಎಂದು ಬ್ಯಾಂಕ್‌ನ ಅಧಿಕಾರಿ ಶ್ರೀಧರ್ ತಿಳಿಸಿದಾಗ ಪ್ರತಿಕ್ರಿಯಿಸಿದ ಶ್ರೀನಿವಾಸಾಚಾರಿ, ಬ್ಯಾಂಕ್ ಅನ್ನು ಪುನಶ್ಚೇತನಗೊಳಿಸದೆ ಜಿಲ್ಲೆಯ ರೈತರಿಗೆ ನೆರವಾಗುವುದು ಅಸಾಧ್ಯ. ಈ ನಿಟ್ಟಿನಲ್ಲಿ ಬ್ಯಾಂಕಿನ ಎಲ್ಲ ಸದಸ್ಯರಿಗೆ ಸಾಲ ನೀಡುವಲ್ಲಿ ಮೊದಲು ಕ್ರಮ ಕೈಗೊಳ್ಳಬೇಕಾಗಿದೆ ಎಂದರು.ನಿಯಮ ಮೀರಿದ, ಸಾಲ ತೀರಿಸದ  ಸಹಕಾರ ಸಂಘಗಳನ್ನು ಮುಚ್ಚಿ ಹೊಸ ಸಂಘಗಳನ್ನು ಸ್ಥಾಪಿಸುವ ಬದಲು, ಹಳೇ ಸಂಘಗಳನ್ನೆ ಸರಿಪಡಿಸುವುದು ಉತ್ತಮ ಎಂದೂ ಅವರು ಸಲಹೆ ನೀಡಿದರು.`ಸ್ಥಳೀಯ ಶಾಸಕರು ಕೆಲಸ ಮಾಡಲು ಬಿಡುತ್ತಿಲ್ಲ. ಮಾನಸಿಕ ಹಿಂಸೆ ನೀಡುತ್ತಿದ್ದಾರೆ~ ಎಂದು ಶ್ರೀನಿವಾಸಪುರ ತಾಪಂ ಇಓ ಡಾ.ಕೃಷ್ಣಾರೆಡ್ಡಿಯವರ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ನಿಮಗೆ ಬೇಕಾದ ಸ್ಥಳಕ್ಕೆ ನಿಯುಕ್ತಿ ಮಾಡಿದರೆ ಕೆಲಸ ಮಾಡ್ತೀರಿ. ಇಲ್ಲವಾದರೆ ಆಗಲ್ಲ ಎಂಬುದು ನಿಮ್ಮದೇ ಸಮಸ್ಯೆ.  ತೀವ್ರತರನಾದ ಆರೋಗ್ಯ ಸಮಸ್ಯೆಗಳಿದ್ದಾಗಲೂ ನಾನು ವರ್ಗಾವಣೆಯಾದ ಸ್ಥಳಗಳಿಗೆ ಯಾವ ಹಿಂಜರಿಕೆಯೂ ಇಲ್ಲದೆ ಹೋಗಿ 30 ವರ್ಷ ಕೆಲಸ ಮಾಡಿರುವೆ. ಹಾಗೆ ಕೆಲಸ ಮಾಡುವುದಾದರೆ ಯಾವುದೂ ಸಮಸ್ಯೆ ಎನಿಸುವುದಿಲ್ಲ ಎಂದರು.

ವಾಸ್ತವ್ಯ : ಜನರ ಕೆಲಸ ಮಾಡುವಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ನಿಲುವು ಬದಲಾಗಬೇಕು ಎಂದು ಮುಖ್ಯ ಮಂತ್ರಿಗಳು ಹೇಳಿದ್ದಾರೆ.ಆದರೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯವಿಲ್ಲದೆ ಅಧೀನ ಅಧಿಕಾರಿಗಳಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ನುಡಿದ ಅವರು, ಎಷ್ಟು ಮಂದಿ ಕೇಂದ್ರಸ್ಥಾನದಲ್ಲಿ ವಾಸವಿಲ್ಲ? ಕೈ ಎತ್ತಿ ಎಂದು ಪ್ರಶ್ನಿಸಿದರು. ಅದಕ್ಕೆ ಯಾವೊಬ್ಬ ಅಧಿಕಾರಿಯೂ ಪ್ರತಿಕ್ರಿಯಿಸಲಿಲ್ಲ.ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ,  ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಶಾಂತಪ್ಪ, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ಜಯಪ್ರಕಾಶ್ ಸಮುದ್ರೆ ಮತ್ತು ಜಿಪಂ ಉಪಾಧ್ಯಕ್ಷ ಜಿ.ಸೋಮಶೇಖರ್ ಉಪಸ್ಥಿತರಿದ್ದರು.

ಕಾಡುವ ಸಮಸ್ಯೆ: ತೀವ್ರ ಆಕ್ಷೇಪ

ಕೋಲಾರ:
ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದರೂ ಹಳ್ಳಿಗಳಿಗೆ ಭೇಟಿ ನೀಡಿಲ್ಲ. ಕುಡಿಯುವ ನೀರಿನ ಸಮಸ್ಯೆಗಳಿರುವ ಹಳ್ಳಿಗಳ ಬಗ್ಗೆ ಖಚಿತ ಮಾಹಿತಿಯೇ ಇಲ್ಲ. ವಸತಿ ಯೋಜನೆ ಅಡಿ ಮನೆ ನಿರ್ಮಾಣ ಕೆಲಸದಲ್ಲಿ ನಿರ್ಲಕ್ಷ್ಯ, ಅಸಾಮರ್ಥ್ಯ, ಅದಕ್ಕೆ ಸಮರ್ಥನೆ ನೀಡುವಲ್ಲಿಯೂ ವಿಫಲ, ಜಿಲ್ಲಾ ಕೇಂದ್ರದಲ್ಲಿ ವಾಸವಿರದ ಬಹಳಷ್ಟು ಅಧಿಕಾರಿಗಳು...-ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಸಂಗತಿಗಳು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಎನ್.ಶ್ರೀನಿವಾಸಚಾರಿಯವರಲ್ಲಿ ತೀವ್ರ ಅಸಮಾಧಾನ ಮೂಡಿಸಿದವು. ಜಿಲ್ಲೆಯ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ಜಿಲ್ಲೆಯ ಉಪವಿಭಾಗಾಧಿಕಾರಿ, ತಹಶೀಲ್ದಾರರು, ಜಿಲ್ಲಾ ಪಂಚಾಯಿತಿ ಎಂಜಿನಿಯರುಗಳು ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ಒಟ್ಟಾರೆ ಕಾರ್ಯವೈಖರಿಗೆ ಅವರು ಬೇಸರ ವ್ಯಕ್ತಪಡಿಸಿದರು.ಅದರಲ್ಲೂ, ಜಿಲ್ಲೆಯ ಐವರು ಕಾರ್ಯನಿರ್ವಹಣಾಧಿಕಾರಿಗಳು ಅವರ ಸಿಟ್ಟಿಗೂ ಗುರಿಯಾದರು. `ಕಳೆದ ವರ್ಷ ಇವರೆಲ್ಲ ನಮ್ಮನ್ನು ಮೂರ್ಖರನ್ನಾಗಿಸಿದರು. ಈ ಬಾರಿ ಅದಕ್ಕೆ ಅವಕಾಶ ಕೊಡುವುದು ಬೇಡ~ ಎಂದು ಶ್ರೀನಿವಾಸಾಚಾರಿ ಸ್ಪಷ್ಟವಾಗಿ ನುಡಿದರು. ವಸತಿ ಯೋಜನೆ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಲು ಐವರಿಗೂ ಒಂದು ವಾರದ ಗಡುವು ನೀಡಿ. ಕೆಲಸ ಮಾಡದಿದ್ದರೆ ಮುಲಾಜಿಲ್ಲದೆ ನೋಟಿಸ್ ಕೊಡಿ ಎಂದು ಅವರು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಶಾಂತಪ್ಪನವರಿಗೆ ಸೂಚಿಸಿದರು.ವಸತಿ ಯೋಜನೆ ಅಡಿ ಖರೀದಿಸಬೇಕಾದ ಜಮೀನಿನ ಬಗ್ಗೆ ಮಾತನಾಡಿದ ಕೋಲಾರ ತಾಪಂ ಇಓ ಕೆ.ಎಸ್.ಭಟ್ ಮತ್ತು ಕೆಲಸ ಮಾಡಲು ಸ್ಥಳೀಯ ಶಾಸಕರು, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಬಿಡುತ್ತಿಲ್ಲ ಎಂದು ಆರೋಪಿಸಿದ ಶ್ರೀನಿವಾಸಪುರ ತಾಪಂ ಇಓ ಡಾ.ಕೃಷ್ಣಾಶ್ರಿೆಡ್ಡಿಯವರನ್ನು ಉಸ್ತುವಾರಿ ಕಾರ್ಯದರ್ಶಿ ಕಟುಮಾತುಗಳಿಂದ ಎಚ್ಚರಿಸಿದ ಘಟನೆಯೂ ನಡೆಯಿತು.ಮಾಹಿತಿ ಗೊಂದಲ:  ಸಭೆಯ ಆರಂಭದಲ್ಲೆ, ಜಿಲ್ಲೆಯ ಎಷ್ಟು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ ಎಂಬ ಕುರಿತು ತಹಶೀಲ್ದಾರರು, ಎಂಜಿನಿಯರ್ ಮತ್ತು ಕಾರ್ಯನಿರ್ವಹಣಾಧಿಕಾರಿಗಳು ನೀಡಿದ ಮಾಹಿತಿಯಲ್ಲಿ ವ್ಯತ್ಯಾಸ ಕಂಡು ಬಂದಾಗ ಶ್ರೀನಿವಾಸಾಚಾರಿ ಅಸಮಾಧಾನಗೊಂಡರು.ಈ ನಾಲ್ವರೂ ಅಧಿಕಾರಿಗಳು ಒಟ್ಟಾಗಿ ಕಾರ್ಯಯೋಜನೆ ರೂಪಿಸಿ ಸಮಸ್ಯೆ ಇರುವ ಹಳ್ಳಿಗಳಿಗೆ ಭೇಟಿ ಕೊಡಬೇಕು ಎಂದು ಕಳೆದ ವರ್ಷದ ಸಭೆಯಲ್ಲೆ ಹೇಳಿದ್ದರೂ ಯಾವ ಪ್ರಯೋಜನವೂ ಆಗಿಲ್ಲ ಎಷ್ಟು ಹಳ್ಳಿಗಳಿಗೆ ಉಪವಿಭಾಗಾಧಿಕಾರಿಯೂ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದೀರಿ? ಎಂಬ ಅವರ ಪ್ರಶ್ನೆಗೂ ಸಮಾಧಾನಕರ ಉತ್ತರ ದೊರಕಲಿಲ್ಲ. ಹೀಗಾಗಿ, `ಸಮಸ್ಯೆ ಇರುವ ಹಳ್ಳಿಗಳಿಗೆ ನೀವು ಹೋಗಿಲ್ಲ ಎಂದರೆ ಜಿಲ್ಲಾ ಕೇಂದ್ರದಲ್ಲಿ ಕುಳಿತು ಏನ್ ಕೆಲಸ ಮಾಡ್ತೀರಿ? ಎಂದು ಶ್ರೀನಿವಾಸಾಚಾರಿ ಪ್ರಶ್ನಿಸಿದರು.

 

ಕೃಷಿ ಇಳುವರಿ ಕುಸಿತ

 ಅಸಮರ್ಪಕ ಮುಂಗಾರು ಮಳೆಯಿಂದ ಆವರಿಸಿದ ಬರದ ಪರಿಣಾಮವಾವಾಗಿ ಜಿಲ್ಲೆಯ ಪ್ರಧಾನಬೆಳೆಯಾದ ರಾಗಿ ಮತ್ತಿತರ ಬೆಳೆಗಳ ಇಳುವರಿ ಶೇ 25ರಿಂದ 30ರಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಿಕ್ಕಣ್ಣ ತಿಳಿಸಿದರು.

ಮಾಹಿತಿ ಗೊಂದಲ

ನೀರಿನ ಸಮಸ್ಯೆ ಇರುವ ಹಳ್ಳಿಗಳಲ್ಲಿ ಪ್ರಸ್ತುತ ಎಷ್ಟು ಕೊಳವೆಬಾವಿಗಳಿವೆ? ಅವುಗಳ ಪೈಕಿ ಎಷ್ಟರಲ್ಲಿ ನೀರಿದೆ? ಯಾವಾಗ ಖಾಲಿ ಆಗಬಹುದು? ಹೆಚ್ಚುವರಿ ಕೊಳವೆಬಾವಿಗಳನ್ನು ಎಲ್ಲಿ ಕೊರೆಯಿಸಬೇಕು ಎಂಬ ಬಗ್ಗೆ ಸ್ಥಳ ಗುರುತಿಸಲಾಗಿದೆಯೇ? ಈ ಮಾಹಿತಿಗಳಿಲ್ಲದೆ ಹೊಸ ಕೊಳವೆಬಾವಿಗಳು ಬೇಕೆಂದು ಪಟ್ಟಿ ಕೊಟ್ಟ ಮಾತ್ರಕ್ಕೆ ನಿಮ್ಮ ಕೆಲಸ ಮುಗಿಯುವುದಿಲ್ಲ ಎಂದು ಶ್ರೀನಿವಾಸಾಚಾರಿ ಟೀಕಿಸಿದರು.ಅಧಿಕಾರಿಗಳು ನೀಡಿದ ಮಾಹಿತಿ ಗೊಂದಕ್ಕೆ ದಾರಿ ಮಾಡಿದ ಹಿನ್ನೆಲೆಯಲ್ಲಿ ಅಸಮಾಧಾನ ಅವರು ವ್ಯಕ್ತಪಡಿಸಿದರು.ಸಮಸ್ಯೆಯುಳ್ಳ 6-7 ಹಳ್ಳಿಗಳಿಗೆ ಭೇಟಿ ನೀಡಿರುವೆ ಎಂದು ಬಂಗಾರಪೇಟೆ ತಾಪಂ ಇಓ ನುಡಿದಾಗ, ಆ ಕೆಲಸಕ್ಕೆ ನಿಮ್ಮನ್ನು ನಿಯೋಜಿಸಿದವರು ಯಾರು? ಎಂದು ಶ್ರೀನಿವಾಸಾಚಾರಿ ಪ್ರಶ್ನಿಸಿದರು.ಅದಕ್ಕೆ ಅಧಿಕಾರಿ ಉತ್ತರ ನೀಡಲು ಸಾಧ್ಯವಾಗಲಿಲ್ಲ.  ವಸತಿ ಯೋಜನೆ ಪ್ರಗತಿ ಕುರಿತೂ ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಸಮರ್ಪಕ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಆಗಲೂ ಶ್ರೀನಿವಾಸಾಚಾರಿ ನಿರಾಶೆ ವ್ಯಕ್ತಪಡಿಸಿದರು.

`ಹನಿ ನೀರಾವರಿ ಬಳಸಿ~

ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ರೈತರಿಗೆ ಸಹಾಯಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕೊಳವೆ ಬಾವಿಗಳನ್ನು ಬಿಟ್ಟರೆ ಬೇರೆ ನೀರಿನ ಮೂಲವಿಲ್ಲ.ಹೀಗಾಗಿ ಎಲ್ಲ ರೈತರೂ ಸಾಧ್ಯವಾದಷ್ಟು ಮಟ್ಟಿಗೆ ಈ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು.

ಜಿಲ್ಲಾ ಸಹಕಾರಿ ಬ್ಯಾಂಕ್ ಸಾಲ ಸೌಲಭ್ಯವನ್ನು ಉದಾರವಾಗಿ ನೀಡಬೇಕು.  ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಗಳು ರೈತರಲ್ಲಿ ಸ್ಫೂರ್ತಿ, ಉತ್ಸಾಹ ತುಂಬಬೇಕು. ಶೇ 100ರಷ್ಟು ಪ್ರಗತಿಗೆ ಪ್ರಯತ್ನಿಸಬೇಕು ಎಂದು ಶ್ರೀನಿವಾಸಾಚಾರಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.