ಪಂಚಾಯ್ತಿ: 15,823 ಪ್ರತಿನಿಧಿಗಳು ಅನಕ್ಷರಸ್ಥರು!

7

ಪಂಚಾಯ್ತಿ: 15,823 ಪ್ರತಿನಿಧಿಗಳು ಅನಕ್ಷರಸ್ಥರು!

Published:
Updated:

ದಾವಣಗೆರೆ: ರಾಜ್ಯದ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಹಾಗೂ ಗ್ರಾಮ ಪಂಚಾಯ್ತಿಗಳ ಚುನಾಯಿತ ಪ್ರತಿನಿಧಿಗಳ ಪೈಕಿ 15,823 ಮಂದಿ ಇದುವರೆಗೂ ಅನಕ್ಷರಸ್ಥರಾಗಿದ್ದು, ಪರಿಣಾಮಕಾರಿ ಆಡಳಿತ ನಿರ್ವಹಣೆಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ.ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸರ್ಕಾರದ ಕಾರ್ಯದರ್ಶಿ ವಿ. ರಶ್ಮಿ ಅವರಿಗೆ ಈಚೆಗೆ ಬರೆದಿರುವ ಪತ್ರದಲ್ಲಿ ಈ ಅಂಶ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಅನಕ್ಷರಸ್ಥ ಜನಪ್ರತಿನಿಧಿಗಳಿಗೆ `ಅಕ್ಷರ' ಕಲಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಕ್ರಮಕ್ಕೆ ಸಿದ್ಧತೆ ನಡೆಸಿದೆ.ರಾಜ್ಯದಲ್ಲಿ 30 ಜಿಲ್ಲಾ ಪಂಚಾಯ್ತಿ, 176 ತಾಲ್ಲೂಕು ಪಂಚಾಯ್ತಿ (ಈಚೆಗೆ ಹೊಸದಾಗಿ ಘೋಷಣೆಯಾದ ಕಿತ್ತೂರು ಸೇರಿದರೆ 177 ಆಗುತ್ತದೆ) ಹಾಗೂ 5,628 ಗ್ರಾಮ ಪಂಚಾಯ್ತಿಗಳಿವೆ. ಈ ಪೈಕಿ, ಗ್ರಾಮ ಪಂಚಾಯ್ತಿಗಳಲ್ಲಿರುವ ಜನಪ್ರತಿನಿಧಿಗಳಲ್ಲಿ ಅನಕ್ಷರಸ್ಥರ ಸಂಖ್ಯೆ ಜಾಸ್ತಿ ಇದೆ. ನಂತರದ ಸ್ಥಾನದಲ್ಲಿ ತಾಲ್ಲೂಕು ಪಂಚಾಯ್ತಿ ಇದೆ. ಪ್ರತಿ ಚುನಾವಣೆಯಲ್ಲಿ ಆಯ್ಕೆಯಾದ ಪ್ರತಿನಿಧಿಗಳಿಗೆ, ಅಧಿಕಾರದ ಅವಧಿ ಆರಂಭವಾದ ಕೆಲ ತಿಂಗಳಲ್ಲಿ ಅನಕ್ಷರಸ್ಥರನ್ನು ಗುರುತಿಸಿ ಅಕ್ಷರ ಅಭ್ಯಾಸ ಮಾಡಿಸುವ ಕಾರ್ಯ ನಡೆಸಲಾಗುತ್ತದೆ. ಆದರೆ, ಪ್ರಸ್ತುತ ಅವಧಿಯಲ್ಲಿ ಆಯ್ಕೆಯಾದವರಿಗೆ ಅಕ್ಷರ ಕಲಿಸುವ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಕೆಲ ಜಿಲ್ಲೆಗಳಲ್ಲಿ ಒಮ್ಮೆಯಷ್ಟೇ ಈ ಕಾರ್ಯ ನಡೆದಿದೆ ಎಂದು ಇಲಾಖೆಯ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.ಶೀಘ್ರ ಕಲಿಕಾ ಕೇಂದ್ರ ತೆರೆಯಿರಿ: `ರಾಜ್ಯದ 3 ಹಂತದ ಪಂಚಾಯತ್‌ರಾಜ್ ಸಂಸ್ಥೆಗಳಲ್ಲಿರುವ ಜನಪ್ರತಿನಿಧಿಗಳು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಅನಕ್ಷರತೆ ಬಹುದೊಡ್ಡ ತೊಡಕಾಗಿ ಪರಿಣಮಿಸಿದೆ. ಇದು, ವಿಕೇಂದ್ರೀಕರಣದ ಅರ್ಥಪೂರ್ಣ ಜಾರಿಗೂ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿನಿಧಿಗಳನ್ನು ಶೀಘ್ರವಾಗಿ ಅಕ್ಷರಸ್ಥರನ್ನಾಗಿಸುವ ತುರ್ತು ಅವಶ್ಯಕತೆ ಇದೆ. ಹೀಗಾಗಿ, ತಮ್ಮ ಜಿಲ್ಲೆಯಲ್ಲಿ ಬರುವ ಪಂಚಾಯ್ತಿಗಳ ಅನಕ್ಷರಸ್ಥ ಚುನಾಯಿತ ಪ್ರತಿನಿಧಿಗಳನ್ನು ಕೂಡಲೇ ಗುರುತಿಸಿ ಅವರಿಗೆ `ಶೀಘ್ರ ಕಲಿಕಾ ಕೇಂದ್ರ'ಗಳಲ್ಲಿ ಸಾಕ್ಷರತೆ ತರಬೇತಿ ನೀಡಲು ಕ್ರಮ ಕೈಗೊಳ್ಳಬೇಕು. ತೆಗೆದುಕೊಂಡ ಕ್ರಮಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಬೇಕು' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಜಿಲ್ಲಾಮಟ್ಟದಲ್ಲಿ ಸಾಕ್ಷರತೆ ಕಾರ್ಯಕ್ರಮ ಪ್ರಯತ್ನ ಆರಂಭವಾಗಿವೆ.ಮಹತ್ವದ ಕಾರ್ಯಕ್ರಮವಿದು: ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಬಿ. ಹೇಮಚಂದ್ರ, `ಜನಪ್ರತಿನಿಧಿಗಳಿಗೆ ಅಕ್ಷರ ಜ್ಞಾನ ಇಲ್ಲದಿರಬಹುದು; ಆದರೆ, ವ್ಯವಹಾರಿಕ ಜ್ಞಾನ ಇರುತ್ತದೆ. ಆಡಳಿತ ನಿರ್ವಹಣೆಯಲ್ಲಿ ಅಕ್ಷರ ಜ್ಞಾನ ಮಹತ್ವದ್ದಾಗಿದೆ. ಸರ್ಕಾರದಿಂದ ಯಾವ ಯೋಜನೆಗಳು ಬಂದಿದೆ, ಎಷ್ಟು ಅನುದಾನ ದೊರೆತಿದೆ. ಸಮರ್ಪಕವಾಗಿ ಅನುಷ್ಠಾನ ಸಾಧ್ಯವಾಗುತ್ತಿದೆಯೇ. ನಾವು ಯಾವ ಪತ್ರಕ್ಕೆ ಸಹಿ ಹಾಕುತ್ತಿದ್ದೇವೆ ಎಂಬ ಅರಿವು ಜನಪ್ರತಿನಿಧಿಗಳಿಗೆ ಇರಬೇಕಾಗುತ್ತದೆ. ಅದರಲ್ಲಿಯೂ ಮಹಿಳಾ ಜನಪ್ರತಿನಿಧಿಗಳು, ಮಾಹಿತಿ ಕೊರತೆಯಿಂದ ಅರಿವಿನ ಕೊರತೆ ಎದುರಿಸುತ್ತಿರುತ್ತಾರೆ. ಜನಪ್ರತಿನಿಧಿಗಳು ಅನಕ್ಷರಸ್ಥರಾಗಿದ್ದಲ್ಲಿ, ತಿಳಿವಳಿಕೆ ಇಲ್ಲದೆಯೇ ಅವ್ಯವಹಾರಕ್ಕೆ ಅವಕಾಶ ಆಗುವ ಸಾಧ್ಯತೆಯೂ ಇರುತ್ತದೆ. ಹಲವು ಪ್ರಕರಣಗಳಲ್ಲಿ, ಗೊತ್ತಿಲ್ಲದೇ ಸಹಿ ಹಾಕಿದೆವು ಎಂದು ಜನಪ್ರತಿನಿಧಿಗಳು ಹೇಳಿದ್ದನ್ನು ಕೇಳಿದ್ದೇನೆ. ಇಂತಹ ಘಟನೆಗಳು ಮರುಕಳಿಸದಿರಲು ಅಕ್ಷರ ಕಲಿಯುವ ಅಗತ್ಯವಿದೆ' ಎಂದರು.ವಯಸ್ಕರ ಶಿಕ್ಷಣ ಸಮಿತಿ ಮೂಲಕ, ಅನಕ್ಷರಸ್ಥ ಜನಪ್ರತಿನಿಧಿಗಳಿಗೆ ಅಕ್ಷರ ಕಲಿಸಲಾಗುವುದು ಎಂದು ಹೇಳಿದರು. ಲಭ್ಯ ಮಾಹಿತಿ ಪ್ರಕಾರ, ಜಿಲ್ಲಾ ಪಂಚಾಯ್ತಿ ಜನಪ್ರತಿನಿಧಿಗಳಲ್ಲಿ ಯಾರೂ ಅನಕ್ಷರಸ್ಥರಿಲ್ಲ; ಗ್ರಾಮ ಪಂಚಾಯ್ತಿಗಳಲ್ಲಿನ ಅನಕ್ಷರಸ್ಥರಿಗೆ ಸಾಕ್ಷರತೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸಿದ್ಧತೆ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry