ಗುರುವಾರ , ಫೆಬ್ರವರಿ 25, 2021
30 °C

ಪಂಚಾಶ್ಚರ್ಯ ಸಂದೇಶ

ಡಾ. ಎಂ. ಎ. ಜಯಚಂದ್ರ Updated:

ಅಕ್ಷರ ಗಾತ್ರ : | |

ಪಂಚಾಶ್ಚರ್ಯ ಸಂದೇಶ

ಜಗತ್ತಿನ ಅನೇಕ ರೀತಿಯ ದಾನಗಳಲ್ಲಿ ಅನ್ನದಾನವೂ ಒಂದು. ಭಾರತೀಯ ಸಂಸ್ಕೃತಿಯಲ್ಲಿ ಅನ್ನದಾನಕ್ಕೆ ವಿಶೇಷ ಮಹತ್ವವಿದೆ. ಭಾರತದ ಬಹುತೇಕ ಮಠ, ಮಂದಿರಗಳಲ್ಲಿ ಅನ್ನದಾನ ಸರ್ವೇ ಸಾಮಾನ್ಯ. ಹಬ್ಬ ಹರಿದಿನಗಳಲ್ಲಿ ಸಾರ್ವಜನಿಕವಾಗಿ ಅನ್ನ ಸಂತರ್ಪಣೆ ನಡೆಯುವುದು. ಆ ದೇವ, ಈ ದೇವ ಮುಖ್ಯವಲ್ಲ, ಅನ್ನದೇವರೇ ಮುಖ್ಯ ಎಂಬುದು ಈ ನೆಲದ ಗುಣ. ಆದ್ದರಿಂದಲೇ ಅನ್ನವನ್ನು ಉತ್ಪಾದಿಸುವ ‘ಮೇಟಿ ವಿದ್ಯೆ’ಗೆ ಹೆಚ್ಚಿನ ಒತ್ತು.ಶ್ರಾವಕ ನಿಜವಾದ ಶ್ರಾವಕನಾಗಬೇಕಾದರೆ, ಆತ ಆಚರಿಸಲೇ ಬೇಕಾದ ಅವಶ್ಯಕ ಕರ್ತವ್ಯಗಳಲ್ಲಿ ದಾನವೂ ಒಂದು.  ಅವನು ಎಷ್ಟು ದಾನ ಮಾಡಬೇಕು? ಎಂಬ ಪ್ರಶ್ನೆಗೆ ಉತ್ತರ ಮುಕ್ತವಾಗಿದೆ.  ಅಲ್ಲಿ ನಿರ್ಬಂಧವಿಲ್ಲ. ಆದರೆ ಅದು ಆತನ ಶಕ್ತಿ ಮತ್ತು ವಿವೇಚನೆಗೆ ಬಿಟ್ಟದ್ದು.

ತಾನೇನಾದರೂ ಲೌಕಿಕ ಆಸ್ತಿಯನ್ನು ಸಂಪಾದಿಸಿದ್ದರೆ, ಅದನ್ನು ಮುಂದಿನ ಜನ್ಮಕ್ಕೆ ತೆಗೆದುಕೊಂಡು ಹೋಗುವ ಇರಾದೆಯಿದ್ದರೆ, ಅದನ್ನು ದಾನದ ಮುಖಾಂತರ ಪುಣ್ಯವನ್ನಾಗಿ ಪರಿವರ್ತಿಕೊಳ್ಳಲೇಬೇಕು ಎಂಬ ಪ್ರಜ್ಞೆ ಆತನಲ್ಲಿ ಜಾಗೃತವಾಗಿದ್ದರೆ ಸಾಕು.ಜೈನದರ್ಶನದಲ್ಲಿ ಚತುರ್ವಧ ದಾನ ಹೇಳಲಾಗಿದೆ.  ಅವುಗಳು ಹೀಗಿವೆ- ಅಭಯದಾನ, ಆಹಾರದಾನ, ಶಾಸ್ತ್ರದಾನ, ಓಷಧಿದಾನ.  ಇವುಗಳಲ್ಲಿ ಇಂದಿನ ಎಲ್ಲ ರೀತಿಯ ದಾನಗಳನ್ನು ಸಮಾವೇಶಗೊಳಿಸಬಹುದಾಗಿದೆ.ಈ ದಾನಗಳನ್ನು ಸ್ವತಃ ತಾನೇ ಕೊಡಬೇಕು.  ಕೊಡಲು ಶಕ್ತಿ ಹಾಗೂ ಅವ ಕಾಶ ಇಲ್ಲದಿದ್ದರೆ, ಅಂಥ ಶಕ್ತಿ ಇರುವವರಿಂದ ಕೊಡಿಸಬೇಕು, ಇಲ್ಲವೇ ಅವರಿಗೆ ಪ್ರೇರಣೆ ನೀಡಬೇಕು.  ಅದೂ ಸಾಧ್ಯವಿಲ್ಲದಿದ್ದರೆ, ಮತ್ತೊಬ್ಬರು ಕೊಟ್ಟದ್ದನ್ನು ಅನುಮೋದಿಸಬೇಕು, ಪ್ರಶಂಸಿಸಬೇಕು. 

ಅನುಮೋದಿತ ದಾನದ ಪುಣ್ಯವು, ತಾನೇ ಮಾಡಿದ ದಾನದ ಪುಣ್ಯಕ್ಕೆ ಎಳ್ಳಷ್ಟು ಕಡಿಮೆ ಯಾದುದಲ್ಲ ಎಂಬುದು ಜೈನನಂಬಿಕೆ. ಈ ನಾಲ್ಕು ಪ್ರಕಾರದ ದಾನಗಳಲ್ಲಿ ಆಹಾರದಾನಕ್ಕೆ ವಿಶೇಷ ಪ್ರಾಶಸ್ತ್ಯವಿದೆ.

ಈ ದಾನಕ್ಕೆ ಸಂಬಂಧಿಸಿದ ಅನೇಕ ಕಥೆಗಳು ಜೈನ ಸಾಹಿತ್ಯದ ಲ್ಲಿವೆ. ಅಧ್ಯಾತ್ಮ ಸಾಧನೆಗಾಗಿ ಮಾತ್ರ ತನ್ನ ಶರೀರವನ್ನು ಕಾಪಾಡಿಕೊಳ್ಳ ಬೇಕೆಂಬ ಭಾವನೆಯ ಜೈನಮುನಿಯೇ ಆಹಾರದಾನಕ್ಕೆ ಸರ್ವೋತ್ಕೃಷ್ಟ ಪಾತ್ರನಾದವನು. ಆತ ದಿನದಲ್ಲಿ ಒಮ್ಮೆ ಮಾತ್ರ ಆಹಾರವನ್ನು, ನೀರನ್ನು ಸ್ವೀಕರಿಸುತ್ತಾನೆ. ಸುಖಾಸೀನ­ನಾಗಲ್ಲ. ನಿಂತುಕೊಂಡು. ಪರಿಶುದ್ಧವಾದ ಅಹಿಂಸಾತ್ಮಕವಾದ ಆಹಾರವನ್ನು ವಿಧಿವತ್ತಾಗಿ ತನ್ನ ಕೈಬೊಗಸೆಗೆ ಹಾಕಿದುದನ್ನು ಮಾತ್ರ ಉಣ್ಣುತ್ತಾನೆ. ಅನಂತರ ದಾನಿಯನ್ನು ಹರಸಿ, ತಪಕ್ಕೆ ತೆರಳಿ, ಕರ್ಮ ನಾಶಗೊಳಿಸಿ ಕೇವಲಿಯಾಗುತ್ತಾನೆ.ಕೆಲವು ಮುನಿಗಳಿಗೆ, ವಿಶೇಷ ಸಂದರ್ಭದಲ್ಲಿ ನೀಡಿದ ಆಹಾರದಾನದಿಂದ ಐದು ರೀತಿಯ ಅಲೌಕಿಕ ಘಟನೆಗಳು ದೇವತೆಗಳಿಂದ ಜರಗುತ್ತವೆ. ಆಗ ದೇವದುಂದುಭಿ ಮೊಳಗುತ್ತದೆ. ದೇವತೆಗಳು ರತ್ನ ಚಿನ್ನದ ಮಳೆಗರೆಯುತ್ತಾರೆ. ಪುಷ್ಪವೃಷ್ಟಿ ಆಗುತ್ತದೆ. ವಾತಾವರಣವೆಲ್ಲ ತಂಪಾಗಿ ಸುಗಂಧಿತ ತಂಗಾಳಿ ಬೀಸುತ್ತದೆ.  ದೇವತೆಗಳು ಅಹೋ ದಾನ ಎಂದು ಉದ್ಗರಿಸುತ್ತಾ, ದಾನಿಯನ್ನು ಪ್ರಶಂಸಿಸುತ್ತಾರೆ.ಇಲ್ಲಿ ಗಮನಿಸಬೇಕಾದ ಒಂದು ಅಂಶವೇನೆಂದರೆ, ಜಿನಮುನಿಗಳು ದೇವತೆಗಳಿಂದ ಆಹಾರ ಸ್ವೀಕರಿಸು­ವುದಿಲ್ಲ/ಸ್ವೀಕರಿಸಬಾರದು. ಆಹಾರದಾನ ಮಾಡುವ ಅವಕಾಶ ದೇವತೆಗಳಿಗಿಲ್ಲ. ಆದ್ದರಿಂದ ಅವರು ಶ್ರೇಷ್ಠ ಆಹಾರದಾನವನ್ನು ಪಂಚಾ­ಶ್ಚರ್ಯದ ಮೂಲಕ ಅನು­ಮೋದಿಸುತ್ತಾರೆ.ನಾವು ಸಹ ಅಷ್ಟೆ, ಸರ್ವೋತ್ಕೃಷ್ಟ ಕಾರ್ಯಗಳನ್ನು ಶಕ್ತಿಯಿಲ್ಲದೆ, ಅವಕಾಶವಿಲ್ಲದೆ ಮಾಡಲಾರೆವು.   ಆದರೆ ಅಂಥ ಕಾರ್ಯಗಳನ್ನು ಕಂಡಾಗ   ಅನುಮೋದಿಸಬಹುದಲ್ಲವೆ? 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.