ಭಾನುವಾರ, ಜೂನ್ 20, 2021
23 °C

ಪಂಚ ಕಲಾವಿದರ ಕುಂಚಲೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖ್ಯಾತ ಕಲಾವಿದರಾದ ಅನಿರುದ್ಧ್ ಕಣ್ಣನ್, ಕೇರಳದ ಜೀರಿನ್ ಸೂಸಾನ್ ಜಾನ್, ದೆಹಲಿಯ ಕೇಶವ್ ಕುಮಾರ್, ಹೈದರಾಬಾದ್‌ನ ಕುಮಾರಸ್ವಾಮಿ ಹಾಗೂ ರಘುನಾಥ್ ಮಿಸ್ಕಿನ್ ಅವರ ಇತ್ತೀಚಿನ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಮಾರ್ಚ್ 7ರವರೆಗೆ ನಡೆಯಲಿದೆ.ಯಾವುದೇ ದೇಶದ ಮೇಲೆ ಶತ್ರುಗಳು ದಾಳಿ ನಡೆಸಿದಾಗ ದೇಶವನ್ನು, ದೊರೆಯನ್ನು ವಿಪತ್ತಿನಿಂದ ರಕ್ಷಿಸಲು ಒಂದು ಬಲಿಷ್ಠ ಪಡೆ ಇರುತ್ತದೆ. ದಷ್ಟ-ಪುಷ್ಟರಾಗಿರುವ ಈ ಸಂರಕ್ಷಕರು ಎದುರಾದ ಆಪತ್ತಿನಿಂದ ಪಾರುಮಾಡಬಲ್ಲ ಶಕ್ತಿವಂತರು. ಇವರು ತಮ್ಮ ಪ್ರಾಣವನ್ನು ಒತ್ತೆ ಇಟ್ಟಾದರೂ ದೇಶರಕ್ಷಣೆ ಕಾರ್ಯದಲ್ಲಿ ತೊಡಗುತ್ತಾರೆ.

 

ದೇಶಪ್ರೇಮ ಇವರ ಜೀವನದ ಉಸಿರಾಗಿರುತ್ತದೆ. ಕಲಾವಿದ ಜೀರಿನ್ ಸೂಸಾನ್ ಜಾನ್ ಅವರ `ಸೇವಿಯರ್~ ಕಲಾಕೃತಿ ಆಪದ್ಬಾಂಧವನನ್ನು ಕುರಿತದ್ದು. ಸಂರಕ್ಷಕರಲ್ಲಿ ಇರುವ ಗುಣಗಳು ಹಾಗೂ ಅವರ ಜೀವನ ಮುಳ್ಳಿನ ಹಾಸಿಗೆ ಎಂಬುದು ಈ ಕಲಾಕೃತಿಯಲ್ಲಿ ನಿಚ್ಚಳವಾಗಿ ಮೂಡಿಬಂದಿದೆ.ಕಲಾವಿದರಿಗೆ ಶ್ರೀಕೃಷ್ಣನೆಂದರೆ ಅಚ್ಚುಮೆಚ್ಚು. ಕೃಷ್ಣನ ಆಟೋಪಗಳು, ಕಲ್ಯಾಣ ಗುಣಗಳು ಎಲ್ಲವೂ ಇವರ ಕಲಾಕೃತಿಗೆ ವಸ್ತು ವಿಷಯವಾಗಬಲ್ಲವು. ಕೊಳಲನ್ನು ಊದುತ್ತಾ ನಿಂತರೆ ಗೋವುಗಳಷ್ಟೇ ಅಲ್ಲ ಗೋಪಿಕೆಯರು ಕೃಷ್ಣನ ಎದುರು ಬಂದು ನಿಲ್ಲುತ್ತಿದ್ದರು. ಕೃಷ್ಣನ ಕೊಳಲಿನ ದನಿಗೆ ಅಂತಹ ಮಾಧುರ್ಯವಿದೆ.

 

ಕೇಶವ್ ಕುಮಾರ್ ಅವರ ಕುಂಚದಲ್ಲಿ ಮೈದಳೆದಿರುವ ಕೃಷ್ಣನ ಕಲಾಕೃತಿ ನವಿರಾಗಿದೆ. ಕೃಷ್ಣ ಕೊಳಲನ್ನು ನುಡಿಸುವಾಗ ಗೋವು-ಗೋಪಿಕೆಯರು ಆತನ ಮುಂದೆ ನಿಂತು ಕೊಳಲಿನ ನಿನಾದಕ್ಕೆ ಪರವಶರಾಗಿರುವ ಪರಿ ಮನೋಹರವಾಗಿದೆ ಮೂಡಿಬಂದಿದೆ.

ಹೆಣ್ಣಿಗೂ ಪ್ರಕೃತಿಗೂ ಅವಿನಾಭಾವ ಸಂಬಂಧ.

 

ಅನುಭವಿಗಳು ಹೆಣ್ಣನ್ನು ನಿಸರ್ಗದ ಅಪರಾವತಾರ ಎಂದೂ ಕರೆಯುತ್ತಾರೆ. ಇದು ಅತಿಶಯೋಕ್ತಿಯೇನಲ್ಲ. ಹೆಣ್ಣಿನಲ್ಲೂ ಪ್ರಕೃತಿಯಷ್ಟೇ ಸಹಜವಾದ ಸೌಂದರ್ಯವಿದೆ. ಲಾಲಿತ್ಯವಿದೆ. ಹೆಣ್ಣಿನ ಭಾವನೆಗಳು ಕೂಡ ಅಷ್ಟೇ ನವಿರಾದವು. ಹೆಣ್ಣು ವಾತ್ಸಲ್ಯದ ಸಂಕೇತ. ಪ್ರೇಮ ದೇವತೆ. ಅವಳಲ್ಲಿ ಸಕಲ ಗುಣಗಳು ಒಸರುತ್ತವೆ. ಹಾಗಾಗಿಯೇ ಕಲಾವಿದ ಕುಮಾರಸ್ವಾಮಿ ಅವರು ರಚಿಸಿರುವ `ವಿಮೆನ್ ಅಂಡ್ ನೇಚರ್~ ಕಲಾಕೃತಿ ಹೆಣ್ಣು ಹಾಗೂ ಪ್ರಕೃತಿಯ ಸಂಗಮದಂತಿದೆ.ಕಲಾವಿದ ಅನಿರುದ್ಧ್ ಅವರು ತಮ್ಮ ಅಮೂರ್ತ ಭಾವಕ್ಕೆ ಗಾಢ ಬಣ್ಣಗಳನ್ನು ಬಳಸಿಕೊಂಡು ಅಭಿವ್ಯಕ್ತಿಗೊಳಿಸಿದ್ದಾರೆ. ರಂಗು ರಂಗಿನ ಹಸಿರು, ಕೆಂಪು ಹಾಗೂ ನೀಲಿ ಬಣ್ಣದ ಮುಖೇನ ತಮ್ಮ ಭಾವನೆಗಳಿಗೆ ಮೂರ್ತ ನೀಡಿದ್ದಾರೆ. ರಘುನಾಥ್ ಅವರ ಕಲಾಕೃತಿಗಳಲ್ಲಿ ಜನಪದದ ಸೊಗಡಿದೆ. ಹಳ್ಳಿ ಹೆಣ್ಣು ಮಕ್ಕಳ ವೇಷಭೂಷಣ, ಮುಗ್ಧತೆ ಇವೆಲ್ಲವೂ ಇವರ ಕಲಾಕೃತಿಯಲ್ಲಿ ವಿಜೃಂಭಿಸಿವೆ.ಸ್ಥಳ: ರಿನೈಸೆನ್ಸ್ ಗ್ಯಾಲರಿ, 104, ವೆಸ್ಟ್ ಮಿನಿಸ್ಟರ್ 13, ಕನ್ನಿಂಗ್‌ಹ್ಯಾಂ ರಸ್ತೆ, ಮಾಹಿತಿಗೆ: 2220 2232. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.