ಪಂಜರದೊಳಗಿನ ಆತ್ಮ

7

ಪಂಜರದೊಳಗಿನ ಆತ್ಮ

Published:
Updated:

ಆತ್ಮವೇ ಅಮೂರ್ತ. ಅಮೂರ್ತ ಆತ್ಮಕ್ಕೆ ಮೂರ್ತ ರೂಪ ನೀಡುವುದಾದರೆ ಹೇಗಿರುತ್ತದೆ? ಇದು ಯಾರ ಊಹೆಗೂ ನಿಲುಕದಂಥ ವಿಷಯ. ಆತ್ಮಕ್ಕೆ ದೇಹವೆಂಬುದು ಉಡುಗೆ ಇದ್ದಂತೆ. ಸ್ವತಂತ್ರ ಆತ್ಮಕ್ಕೆ ದೇಹ ಸಿಕ್ಕಾಗ ಅದೊಂದು ಪಂಜರದಲ್ಲಿ ಸಿಲುಕಿದಂತೆ. ದೇಹಕ್ಕೆ ಜೀವ ಸಿಗಬಹುದು. ಆದರೆ ಆತ್ಮದ ಭಾವ ಏನು? ಈ ಪ್ರಶ್ನೆಯನ್ನಿರಿಸಿಕೊಂಡು ಕೀರ್ತಿ ಸವಿತಾ ಶಾಸ್ತ್ರಿ ಒಂದು ನೃತ್ಯ ರೂಪಕವನ್ನೇ ಸಿದ್ಧಪಡಿಸಿದ್ದಾರೆ.  ಅದಕ್ಕೆ `ಸೋಲ್ ಆಫ್ ಕೇಜ್~ ಎಂಬ ಹೆಸರು.  ಸಾವಿನ ನಂತರದ ಬದುಕಿನ ಬಗ್ಗೆ, ಚಿರಂತನ ಆತ್ಮದ ಬಗ್ಗೆ ಒಂದಷ್ಟು ಮಾಹಿತಿ ನೀಡುವಲ್ಲಿ, ಕುತೂಹಲ ಕೆರಳಿಸುವಲ್ಲಿ ಈ ನೃತ್ಯರೂಪಕ ಸಫಲವಾಗುತ್ತದೆ.

ಸವಿತಾ ಶಾಸ್ತ್ರಿ ಮೂಲತಃ ತಮಿಳುನಾಡಿನವರು. ತಂದೆ ಸುಬ್ರಹ್ಮಣ್ಯಂ ಬ್ಯಾಂಕ್ ಉದ್ಯೋಗಿ, ತಾಯಿ ಸರೋಜ ಗೃಹಿಣಿ. ನ್ಯೂರೊ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆದರೆ ಮೈ ಮನಸುಗಳೆರಡೂ ಆರಿಸಿಕೊಂಡದ್ದು ನೃತ್ಯದ ಗೀಳನ್ನು. ಆ ಗೀಳೇ ಗುರಿಯಾದದ್ದು. ಬದುಕಿನ ಹಾದಿ ಕರೆದೊಯ್ದದ್ದು ಕ್ಯಾಲಿಪೊರ್ನಿಯಾಕ್ಕೆ. ಅಲ್ಲಿಯೂ `ಸಾಯಿ ಸ್ಕೂಲ್ ಆಫ್ ಆರ್ಟ್ಸ್~ ಸ್ಥಾಪಿಸಿದರು. ಭಾರತೀಯ ನೃತ್ಯ ಶಾಸ್ತ್ರ ಕಲಿಸಿದರು. 

 ಚೌಡಯ್ಯ ಸ್ಮಾರಕ ಭವನದಲ್ಲಿ `ಸೋಲ್ ಆಫ್ ಕೇಜ್~ ಭರತನಾಟ್ಯ ಪ್ರದರ್ಶನ ನೀಡಲು ಬೆಂಗಳೂರಿಗೆ ಬಂದಿದ್ದ ಇವರು `ಮೆಟ್ರೊ~ ಜೊತೆ ಮಾತಿಗಿಳಿದರು...

ಭರತನಾಟ್ಯ ಕಲಿಯಲೇಬೇಕು ಎಂದು ಅನಿಸಿದ್ದು ಯಾಕೆ?

ಅಪ್ಪ ಬ್ಯಾಂಕ್ ಉದ್ಯೋಗಿಯಾಗಿದ್ದರಿಂದ ಬಾಲ್ಯವನ್ನು ಮುಂಬೈನಲ್ಲಿ ಕಳೆದೆ. ಮನೆಯ ಹತ್ತಿರ ರಾಜರಾಜೇಶ್ವರಿ ಕಲಾಮಂದಿರ ಇದ್ದಿದ್ದರಿಂದ ನಿತ್ಯ ಅಲ್ಲಿಗೆ ವೈಜಯಂತಿಮಾಲಾ ಸೇರಿದಂತೆ ಹಲವು ನಟಿಯರು ಭರತನಾಟ್ಯ ಪ್ರದರ್ಶನ ನೀಡಲು ಬರುತ್ತಿದ್ದರು. ಅವರನ್ನು ನೋಡಿ ಭರತನಾಟ್ಯ ಕಲಿಯಬೇಕೆಂಬ ಆಸೆ ಉಂಟಾಯಿತು.

ನಿಮ್ಮ ಮನೆಯಲ್ಲಿ ಒತ್ತಾಸೆಯಾದವರು ಯಾರು?

ನಮ್ಮದು ಸಾಂಪ್ರದಾಯಿಕ ತಮಿಳು ನಾಡಿನ ಬ್ರಾಹ್ಮಣ ಕುಟುಂಬ. ಮನೆಯಲ್ಲಿ ಭರತನಾಟ್ಯ ಎಂದರೆ ಮೂಗು ಮುರಿಯುತ್ತಿದ್ದರು. ಅವರ ಪ್ರಕಾರ ಮೊದಲು ಶಿಕ್ಷಣ, ನಂತರ ಸಂಗೀತ, ಆದಾದ ನಂತರ ಭರತನಾಟ್ಯ. ಆ ಸಮಯದಲ್ಲಿ ನಾನು ಭರತನಾಟ್ಯ ಕಲೀತೀನಿ ಎಂದಾಗ ಬೇಡ ಎಂದವರೇ ಹೆಚ್ಚು. ಇನ್ನು ಪ್ರೇರಣೆ ಎಲ್ಲಿಂದ ಬರಬೇಕು.

ಭರತನಾಟ್ಯದ ಮೊದಲ ಗುರು? ರಂಗ ಪ್ರವೇಶ ಮಾಡಿದ್ದು ಯಾವಾಗ?

ಮೊದಲು ಮಹಲಿಂಗಂ ಪಿಳ್ಳೈ ಅನ್ನುವವರ ಬಳಿಯಲ್ಲಿ ಕಲಿತೆ, ನಂತರದ ದಿನಗಳಲ್ಲಿ ಧನಂಜಯ, ಆದ್ಯ ಕೆ.ಲಕ್ಷ್ಮಣ ನನ್ನ ಗುರುಗಳು. ನಾನು ಒಂಬತ್ತನೇ ವಯಸ್ಸಿನಲ್ಲಿ ರಂಗಪ್ರವೇಶ ಮಾಡಿದೆ.

ನಿಮ್ಮ ಪ್ರಕಾರ ನೃತ್ಯ ಎಂದರೇನು?

ಮನುಷ್ಯನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಸುಂದರ ಮಾಧ್ಯಮ ಅದು.

ಭರತನಾಟ್ಯ ಒಂದು ವರ್ಗದವರಿಗೆ ಮಾತ್ರ ಸೀಮಿತವಾಗಿ ಎಲ್ಲರಿಗೂ ತಲುಪವಂತಹ

ಮಾಧ್ಯಮವಾಗಿಲ್ಲ ಅನ್ನಿಸುತ್ತದೆ ಅಲ್ಲವೇ?

ಹೌದು. ಇದು ಕೇವಲ ಕೆಲವೇ ವರ್ಗದ ಜನರಿಗೆ ಮಾತ್ರ ಅರ್ಥವಾಗುವುದರಿಂದ ಇದು ಕ್ಲಾಸ್ ಆಗಿದೆ, ಮಾಸ್‌ಗೆ ತಲುಪುತ್ತಿಲ್ಲ. ಯುವಜನರಿಗೆ ಬೇಕಾದ ಉದ್ವೇಗಕಾರಿ ಸಂಗೀತ ಇದರಲ್ಲಿ ಇಲ್ಲದಿರುವುದೇ ಕಾರಣವಾಗಿರಬಹುದು. ಹೆಚ್ಚು ಜನರಿಗೆ ತಲುಪಲೆಂದೇ ಒಂದಷ್ಟು ಪ್ರಯೋಗಗಳನ್ನು ಮಾಡುತ್ತಿದ್ದೇನೆ. ಏನಾಗುವುದೋ ನೋಡೋಣ. 

ನಿಮ್ಮ ಮಹತ್ವಾಕಾಂಕ್ಷಿ ಪ್ರಯೋಗ `ಸೋಲ್ ಆಫ್ ಕೇಜ್~ ಬಗ್ಗೆ?

ಹುಟ್ಟು, ಸಾವಿನ ಪಾತ್ರಗಳ ನಿರೂಪಣೆಯ ಜೊತೆಯಲ್ಲಿ ನೃತ್ಯ ನಡೆಯುತ್ತದೆ, ಇಲ್ಲಿ ಒಂದು ಚಿಕ್ಕ ಮಗುವನ್ನು ತಾಯಿ ಆಟ ಆಡಿಸಿ ಮಲಗಿಸುತ್ತಾಳೆ, ನಂತರ ಅದರ ಆತ್ಮ ಸ್ವರ್ಗಕ್ಕೆ ಹೋಗುತ್ತದೆ ಅಲ್ಲಿ ಮೃತ್ಯು ದೇವತೆ (ಕಿಂಗ್ ಆಫ್ ಡೆಥ್) ಎಂದು ಹೇಳುತ್ತೇನೆ, ಅಲ್ಲಿಗೆ ಹೋದ ಆತ್ಮ ಹೇಗೆ ತನ್ನ ತಂದೆ ತಾಯಿಯರು ಇಲ್ಲದಿರುವುದನ್ನು ನೋಡಿ ಮೃತ್ಯು ದೇವತೆಯನ್ನು ಕೇಳುತ್ತದೆ. ತನಗೆ ವಾಪಸ್ಸು ಭೂಮಿಗೆ ತನ್ನ ತಾಯಿಯ ಬಳಿ ಕಳುಹಿಸಲು. ಆದರೆ ಅದು ಆಗುವುದಿಲ್ಲವೆಂದು ಹೇಳಿದಾಗ ಹೇಗೆ ತನ್ನ ವಿಶಿಷ್ಟ ಶಕ್ತಿಯ ಮೂಲಕ ತನ್ನ ತಾಯಿಯನ್ನು ಕರೆಸಿಕೊಳ್ಳುತ್ತಾಳೆ, ಇದನ್ನು ನೋಡಿದ ಮೃತ್ಯುದೇವತೆ ಹೆದರುತ್ತಾನೆ. ಅವನು ಮುಂದೆ ಏನು ಮಾಡುತ್ತಾನೆ ಅನ್ನುವುದೇ ಇದರ ಕಥಾವಸ್ತು.

ಮರೆಯಲಾಗದ ಅನುಭವ..

ಒಂದು ಬಾರಿ ಸಿಡ್ನಿಯಲ್ಲಿ ನೃತ್ಯ ಪ್ರದರ್ಶನಕ್ಕೆ ತಯಾರಿ ನಡೆಸಿದ್ದೆ. ಅದೊಂದು ಬಹುಭಾಷಾ ಸಾಂಸ್ಕೃತಿಕ ಕೇಂದ್ರವಾಗಿದ್ದರಿಂದ ಅಕ್ಕ ಪಕ್ಕ ಸುಮಾರು ವಿವಿಧ ರೀತಿಯ ನೃತ್ಯ ಪ್ರದರ್ಶನ ನಡೆಯುತ್ತಿತ್ತು. ವೃದ್ಧ ದಂಪತಿ ಯಾವುದೋ ನೃತ್ಯ ಪ್ರದರ್ಶನಕ್ಕೆ ಹೋಗುವ ಬದಲು ಇಲ್ಲಿಗೆ ಬಂದಿದ್ದರು, ನನ್ನ ನೃತ್ಯ ಪ್ರದರ್ಶನ ನೋಡಿದ ನಂತರ ಇಬ್ಬರಲ್ಲೂ ಕಣ್ಣೀರು. ಜೀವನದಲ್ಲಿ ಇಂತಹ ನೃತ್ಯವನ್ನು ನೋಡಿಯೇ ಇಲ್ಲ ಎಂದರು. ಅದು ನನಗೆ ಮರೆಯಲಾಗದ ಅನುಭವ.

ಹವ್ಯಾಸಗಳ ಬಗ್ಗೆ ಹೇಳಿ?

ಪ್ರಯಾಣ ಮತ್ತು ಯೋಗ.

ಪಾಶ್ಚಿಮಾತ್ಯರು ಭಾರತದ ಬಗ್ಗೆ ಏನು ಯೋಚಿಸುತ್ತಾರೆ?

ಕಳೆದ ಹಲವು ದಶಕಗಳಲ್ಲಿ ಹಿಂದಿ ಸಿನಿಮಾ ಮೂಲಕ ಜನರಿಗೆ ಭಾರತದ ಕಲೆಯ ಬಗ್ಗೆ ತುಂಬಾ ಗೌರವ ಬಂದಿದೆ. ಇಲ್ಲಿನ ಪ್ರತಿಯೊಂದು ವಿಷಯವನ್ನು ಆಸಕ್ತಿಯಿಂದ ಕಲಿಯಲು ಅವರು ಇಷ್ಟ ಪಡುತ್ತಾರೆ.

ಮುಂದಿನ ಯೋಜನೆಗಳು?

`ಸೋಲ್ ಆಫ್ ಕೇಜ್~ ನೃತ್ಯ ಪ್ರದರ್ಶನ ಈಗಾಗಲೇ ನವದೆಹಲಿ, ಬೆಂಗಳೂರು, ಮುಂಬೈ, ಕೋಲ್ಕತ್ತದಲ್ಲಿ ಪ್ರದರ್ಶನ ನೀಡುತ್ತ್ದ್ದಿದೇನೆ. ಮುಂದಿನ ದಿನಗಳಲ್ಲಿ ಇತರೆ ಮೆಟ್ರೊಗಳಿಗೂ ವಿಸ್ತರಿಸುವ ಯೋಚನೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry