ಶನಿವಾರ, ನವೆಂಬರ್ 16, 2019
24 °C

ಪಂಜರು ಕೃಷಿ ಮೀನುಗಾರಿಕೆಗೆ ಮೆಚ್ಚುಗೆ

Published:
Updated:

ಕಾರವಾರ: ನಗರದ ಅಲಿಗದ್ದಾದಲ್ಲಿರುವ ಕೇಂದ್ರೀಯ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆಗೆ ಕೇಂದ್ರ (ಸಿಎಂಎಫ್‌ಆರ್‌ಐ) ಕೃಷಿ ಸಚಿವ ಶರದ್ ಪವಾರ ಶುಕ್ರವಾರ ಭೇಟಿ ನೀಡಿದರು.ಇಲ್ಲಿಯ ಬೈತಖೋಲ ಅಲೆತಡೆಗೋಡೆ ಬಳಿ ಅರಬ್ಬಿ ಸಮುದ್ರದಲ್ಲಿ ಸಂಸ್ಥೆಯ ಅಭಿವೃದ್ಧಿಪಡಿಸಿರುವ ಕುರುಡೆ (ಸಿಬಾಸ್), ಮಗ್ಗು (ಕೊಬಿಯಾ), ಕೊಕ್ಕರ (ಪಂಪನೊ) ಹಾಗೂ ಕೆಂಮ್ಸು( ರೆಡ್ ಸ್ನಾಪರ್) ಪಂಜರು ಕೃಷಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ದೇಶದ ವಿವಿಧ ರಾಜ್ಯಗಳಲ್ಲಿ ಮತ್ಸ್ಯ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಪಂಜರು ಕೃಷಿ ಮೀನುಗಾರಿಕೆಯ ಕುರಿತು ಸಂಸ್ಥೆಯ ವಿಜ್ಞಾನಿಗಳೊಂದಿಗೆ ಸಮಾಲೋಚನೆಯನ್ನೂ ನಡೆಸಿದರು.ಕೃಷಿ ಇಲಾಖೆ ಹಾಗೂ ಭಾರತೀಯ ಕೃಷಿ ಸಂಶೋಧನಾ ಕೇಂದ್ರ ಮಹಾನಿರ್ದೇಶಕ ಡಾ. ಎಸ್.ಅಯ್ಯಪನ್, ಸಿಎಂಎಫ್‌ಆರ್‌ಐ ಕೊಚ್ಚಿ ಕೇಂದ್ರ ಮುಖ್ಯಸ್ಥ  ಡಾ. ಜಿ.ಸಯಿದಾರಾವ್, ಮುಂಬೈ ಕೇಂದ್ರ ಮುಖ್ಯಸ್ಥ ಡಾ. ವಿನಯ ದೇಶಮುಖ, ಡಾ. ವೀರೇಂದ್ರ ವೀರ್‌ಸಿಂಗ್, ಮಂಗಳೂರು ಕೇಂದ್ರ ಮುಖ್ಯಸ್ಥ ದಿನೇಶ ಬಾಬು, ಮಹ್ಮದ್ ಕೋಯಾ ಮತ್ತಿತರರು ಹಾಜರಿದ್ದರು.ಸದ್ದಿಲ್ಲದೆ ಬಂದು ಹೋದ ಸಚಿವರು

ಕೇಂದ್ರ ಕೃಷಿ ಸಚಿವ ಶರದ್ ಪವಾರ ನಗರಕ್ಕೆ ಸದ್ದಿಲ್ಲದೆ ಬಂದು ಹೋದರು.ಕೇಂದ್ರದ ಸಚಿವರಾಗಿದ್ದರೂ ಪೊಲೀಸರು ಬಿಟ್ಟರೆ ರಾಜ್ಯಮಟ್ಟದ ಅಧಿಕಾರಿಗಳು ಯಾರೂ ಸ್ಥಳದಲ್ಲಿ ಇರಲಿಲ್ಲ. ಇಲ್ಲಿಯ ಅಲಿಗದ್ದಾದಲ್ಲಿರುವ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿ, ಬಳಿಕ ಸೀಬರ್ಡ್ ನೌಕಾನೆಲೆಗೆ ತೆರಳಿ ಮುಂಬೈಗೆ ಪ್ರಯಾಣ ಬೆಳೆಸಿದರು.ಕೇಂದ್ರದ ಸಚಿವರು ಬರುವವರಿದ್ದರೂ ಸಂಸ್ಥೆಯ ಅಧಿಕಾರಿಗಳು ಮಾಧ್ಯಮದವರಿಗೆ ಮಾಹಿತಿ ನೀಡಿರಲಿಲ್ಲ. ಸಂಸ್ಥೆಯ ಹೊರಗೆ ಕಟ್ಟಿದ ಬ್ಯಾನರ್‌ಗಳು ನೋಡಿ ಅಲ್ಲಿಯ ಸಿಬ್ಬಂದಿಯ ಬಳಿ ವಿಚಾರಿಸಿದ ಪವಾರ ಭೇಟಿ ವಿಷಯ ತಿಳಿದುಕೊಳ್ಳಬೇಕಾಯಿತು.ಕೈಕೊಟ್ಟ ವಿದ್ಯುತ್: ಮತ್ಸ್ಯ ಸಂಶೋಧನೆ ಸಂಸ್ಥೆ ಮಾಡಿರುವ ಸಾಧನೆಗಳ ಬಗ್ಗೆ ವಿಜ್ಞಾನಿಗಳು ಸಾಕ್ಷ್ಯಚಿತ್ರಗಳನ್ನು ಸಚಿವರಿಗೆ ತೋರಿಸುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಕೈಕೊಟಿತು.ಜನರೆಟರ್ ಆನ್ ಮಾಡಲು ವಿಳಂಬವಾಗಿದ್ದರಿಂದ ಸಚಿವ ಪವಾರ ಅವರು ಸಾಕ್ಷ್ಯಚಿತ್ರ ವೀಕ್ಷಿಸುವುದನ್ನು ಅರ್ಧಕ್ಕೆ ನಿಲ್ಲಿಸಿ ಪಂಜರು ಮೀನು ಕೃಷಿಯನ್ನು ನೋಡಲು ತೆರಳಿದರು.ಕರ್ನಾಟಕ ನೌಕಾ ವಲಯದ ಮುಖ್ಯಸ್ಥ, ರಿಯರ್ ಅಡ್ಮಿರಲ್ ಎ.ಕೆ.ಜೈನ್, ಕೇಂದ್ರೀಯ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಕೆ. ಫಿಲಿಪೋಸಿಸ್, ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಪ್ರತಿಕ್ರಿಯಿಸಿ (+)