ಸೋಮವಾರ, ಜನವರಿ 20, 2020
18 °C

ಪಂಜ: ಬ್ರಹ್ಮಕಲಶೋತ್ಸವದ ಜತೆಗೆ ನಾಗಮಂಡಲೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಸುಬ್ರಹ್ಮಣ್ಯ: ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 4.5 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣ ಕಾರ್ಯ ನಡೆಯುತ್ತಿದ್ದು, ಇದೇ 24ರಿಂದ ಫೆ.1ರ ವರೆಗೆ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲೋತ್ಸವ ನಡೆಯಲಿದೆ.ಸುಳ್ಯ ತಾಲ್ಲೂಕಿನಲ್ಲಿ ಎಷ್ಟೋ ವರ್ಷಗಳ ಬಳಿಕ ಪ್ರಥಮವಾಗಿ ನಡೆಯುವ ನಾಗಮಂಡಲೋತ್ಸವದಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಒಟ್ಟಾರೆ ಬ್ರಹ್ಮಕಲಶೋತ್ಸವದಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ದೇವಸ್ಥಾನ ಅಭಿವೃದ್ದಿ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷೆ ಡಾ.ಲೀಲಾವತಿ ಅವರು ಭಾನುವಾರ ದೇವಸ್ಥಾನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಈ ಸಂದರ್ಭದಲ್ಲಿ ವಿವಿಧ ವೈಧಿಕ,ಧಾರ್ಮಿಕ ಮತ್ತು ಸಾಂಸ್ಕತಿಕ ಕಾರ್ಯಕ್ರಮಗಳು ನೆರವೇರಲಿದೆ. ಫೆ.1ರಿಂದ 7ರವರೆಗೆ ವಾರ್ಷಾವಧಿ ಜಾತೋತ್ಸವಗಳು ನಡೆಯಲಿದೆ. ಈ ಬೃಹತ್ ದೇವತಾ ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ಹಾಗೂ ಉಪಸಮಿತಿಗಳನ್ನು ರಚಿಸಲಾಗಿದ್ದು, ಇದರೊಂದಿಗೆ ಗ್ರಾಮವಾರು ಮುಖ್ಯಸ್ಥರು,ಸಂಚಾಲಕರನ್ನು ನೇಮಿಸಲಾಗಿದೆ ಎಂದರು.ಕಳೆದ ಹಲವಾರು ದಿನಗಳಿಂದ ದಿನಂಪ್ರತಿ 350 ಮಿಕ್ಕಿದ ಭಕ್ತರು ಉಚಿತವಾಗಿ ಹಗಲಿರುಳು ಶ್ರಮದಾನ ಸೇವೆ ನಡೆಸುತ್ತಿದ್ದಾರೆ. ಈಗಾಗಲೇ ಹಸಿರು ಕಾಣಿಕೆ ಸಂಗ್ರಹ ಹಾಗೂ ಮೆರವಣೆಗೆ ಸಲುವಾಗಿ ಪ್ರತಿ ಊರಲ್ಲಿ ಹಸಿರು ಕಾಣಿಕಾ ಸಮಿತಿಗೆ ಸದಸ್ಯರ ಬೃಹತ್ ತಂಡವನ್ನು ಮಾಡಿಕೊಂಡು, ಅಡಿಕೆಗೊನೆ, ಕರಿಮೆಣಸು, ತೆಂಗಿನಕಾಯಿ ಬಾಳೆಗೊನೆ,ಗೆಂದಾಳೆ ಸೀಯಾಳ, ಸೋನಾಮಸೂರಿ ಬೆಳ್ತಿಗೆ ಅಕ್ಕಿ, ನಾಗಮಂಡಲಕ್ಕಾಗಿ ಹಿಂಗಾರ,ಎಳ್ಳೆಣ್ಣೆ, ಜೇನು,ದನದ ತುಪ್ಪ,ತರಕಾರಿ ಇತ್ಯಾದಿಗಳನ್ನು ಸಂಗ್ರಹಿಸುವ ಬಗ್ಗೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.ಈಗಾಗಲೇ ಅಭಿವೃದ್ದಿ ಕಾರ್ಯಗಳು ಪ್ರಗತಿ ಪಥದಲ್ಲಿದ್ದು, ಸಮಾರಂಭಕ್ಕಾಗಿ ಮತ್ತು ನಾಗಮಂಡಲೋತ್ಸವಕ್ಕಾಗಿ ಬೃಹದಾಕಾರದ ಚಪ್ಪರ, ಹೊರಾಂಗಣ ಚಪ್ಪರ, ಸದಾಶಿವ ಮತ್ತು ಪಂಚಲಿಂಗೇಶ್ವರ ದೇವರ ಶಿಲಾಮಯ ಗರ್ಭಗುಡಿ ನಿರ್ಮಾಣ, ರಾಜಗೋಪುರ, ಗರ್ಭಗುಡಿಯ ಛಾವಣೆಗೆ ತಾಮ್ರದ ಹೊದಿಕೆ, ನೆಲಹಾಸು, ನಂದಿಮಂಟಪ, ತೀರ್ಥಮಂಟಪ, ದೇವಿಗುಡಿ ಮತ್ತು ವಸಂತ ಮಂಟಪ ಇತ್ಯಾದಿ ಕೆಲಸಕಾರ್ಯಗಳು ಭರದಿಂದ ಸಾಗುತ್ತಿದೆ, ಸೀಮೆಯ 59 ಗ್ರಾಮಗಳ ಪ್ರತಿ ಮನೆ ಮನೆಗೂ ತೆರಳಿ ಆಮಂತ್ರಣ ಪತ್ರಿಕೆಯನ್ನು ತಲುಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ದೇವಳದ ಆಡಳಿತ ಮಕ್ತೇಸರ ಪುಟ್ಟಣ್ಣ ಗೌಡ ಚಿದ್ಗಲ್, ಸದಸ್ಯ ಡಾ.ಗೋಪಾಲಕೃಷ್ಣ ಭಟ್, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಕುಶಾಲಪ್ಪ ಗೌಡ ದೊಡ್ಡಮನೆ, ಸ್ವಾಗತ ಸಮಿತಿಯ ಸಂಚಾಲಕ ಮೋನಪ್ಪ ಪೂಜಾರಿ, ಹಸಿರು ಕಾಣಿಕೆ ಸಮಿತಿ ಸಂಚಾಲಕ ಗೋಪಾಲ ಕುದ್ವ, ಪ್ರಚಾರ ಸಮಿತಿ ಸಂಚಾಲಕ ಮಧುಪಂಜ ಇತರರು ಇದ್ದರು.

ಪ್ರತಿಕ್ರಿಯಿಸಿ (+)