ಪಂಟರ್ ಏಕದಿನಕ್ರಿಕೆಟ್ ಯುಗಾಂತ್ಯ

7

ಪಂಟರ್ ಏಕದಿನಕ್ರಿಕೆಟ್ ಯುಗಾಂತ್ಯ

Published:
Updated:
ಪಂಟರ್ ಏಕದಿನಕ್ರಿಕೆಟ್ ಯುಗಾಂತ್ಯ

ರಿಕಿ ಪಾಂಟಿಂಗ್ ಕೊನೆಯ ಐದು ಏಕದಿನ ಪಂದ್ಯಗಳಲ್ಲಿ ಗಳಿಸಿದ್ದು ಕ್ರಮವಾಗಿ 2, 1, 6, 2, 7 ರನ್. ಅಷ್ಟು ಹೊತ್ತಿಗಾಗಲೇ ಆಸೀಸ್ ಮಾಧ್ಯಮಗಳ ತುಪಾಕಿಯಿಂದ ಟೀಕೆಗಳ ಸಿಡಿಮದ್ದು ಸಿಡಿದಾಗಿತ್ತು. ಆಸ್ಟ್ರೇಲಿಯಾದ ರಾಷ್ಟ್ರೀಯ ಆಯ್ಕೆಗಾರರ ಸಹನೆಯ ಕಟ್ಟೆ ಒಡೆಯಲು ಕೂಡ ಹೆಚ್ಚು ಸಮಯ ಬೇಕಾಗಲಿಲ್ಲ. ಇನ್ನು ಸಾಕು; ಈ ಅನುಭವಿಯ ನೀರಸ ಆಟವಿನ್ನು ಸಹನೀಯವಲ್ಲವೆಂದು ಕೂಡ ನಿರ್ಧರಿಸಿ ಬಿಟ್ಟರು. ಎರಡು ವಿಶ್ವಕಪ್ ಗೆದ್ದುಕೊಟ್ಟ ನಾಯಕನೇ ಕಾಂಗರೂಗಳ ನಾಡಿನ ತಂಡಕ್ಕೆ ಬೇಡವಾಗಿಬಿಟ್ಟ! ಅಲ್ಲಿಗೆ ಮುಗಿಯಿತು `ಪಂಟರ್~ ಖ್ಯಾತಿಯ ಆಟಗಾರನ ಏಕದಿನ ಕ್ರಿಕೆಟ್ ಯುಗ.ತಂಡದ ಯಶಸ್ಸಿಗಾಗಿ ಆಡಿದ ನೂರಾರು ಇನಿಂಗ್ಸ್‌ಗಳು ಮರೆತು ಹೋದವು. ಮೂವತ್ತು ಶತಕಗಳು ಹಾಗೂ ಎಂಬತ್ತೆರಡು ಅರ್ಧ ಶತಕಗಳೂ ಮರೆತು ಹೋದವು. ಏಕದಿನ ಕ್ರಿಕೆಟ್ ಭವಿಷ್ಯಕ್ಕೆ ತೆರೆ ಎಳೆಯಲು ನಿರ್ಣಾಯಕವಾಗಿ ಉಳಿದಿದ್ದು ಕೊನೆಯ ಐದು ಇನಿಂಗ್ಸ್‌ಗಳು ಮಾತ್ರ. ತ್ರಿಕೋನ ಸರಣಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ಒಂದರಲ್ಲಿಯೂ ಎರಡಂಕಿಯ ಮೊತ್ತ ಮುಟ್ಟಲಿಲ್ಲ ಎನ್ನುವುದೇ ಆಯ್ಕೆಗಾರರು ಈ ಹಿರಿಯ ಕ್ರಿಕೆಟಿಗನನ್ನು ತಂಡದಿಂದ ಹೊರಗೆ ಹಾಕಲು ಕಾರಣವಾಯಿತು. ಈ ಘಟನೆಯಿಂದ ಪಾಂಟಿಂಗ್ ನೊಂದುಕೊಂಡರೂ ಎಲ್ಲ ಆಟಗಾರರೂ ಎಂದಾದರೂ ಒಂದು ದಿನ ಇಂಥ ಸ್ಥಿತಿ ಎದುರಿಸಲೇಬೇಕೆಂದು ಕಹಿಯನ್ನು ನುಂಗಿಕೊಂಡು ನಕ್ಕರು.`ನಾನಿನ್ನು ತಂಡಕ್ಕೆ ಅಗತ್ಯವೆನಿಸಿದ ಆಟಗಾರನಲ್ಲ~ ಎಂದು ಹೇಳುವಾಗ ರಿಕಿ ಮನದೊಳಗೇ ಅನುಭವಿಸಿದ್ದ ಕಿರಿಕಿರಿ ಮುಚ್ಚಿಡಲಂತೂ ಸಾಧ್ಯವಾಗಲಿಲ್ಲ. ಆದರೂ ನಿವೃತ್ತಿ ಎನ್ನುವ ಕಟುಸತ್ಯ ಒಪ್ಪಿಕೊಂಡರು. ಅದು ನಿಗದಿತ ಓವರುಗಳ ಕ್ರಿಕೆಟ್‌ಗೆ ಮಾತ್ರ ಸೀಮಿತ. ಟೆಸ್ಟ್‌ನಲ್ಲಿ ಇನ್ನೊಂದಿಷ್ಟು ಕಾಲ ಆಡಬೇಕೆನ್ನುವ ತುಡಿತ ಮಾತ್ರ ನಿರಂತರ. ಟೆಸ್ಟ್ ನಲ್ಲಿ ಇನ್ನೂ ಅವರ ಬ್ಯಾಟ್‌ಗೆ ಬಲವಿದೆ. ಭಾರತ ವಿರುದ್ಧದ ಸರಣಿಯಲ್ಲಿ ಗತ್ತಿನ ಆಟವಾಡಿ ತಮ್ಮ ತಾಕತ್ತಿನ್ನೂ ಕುಗ್ಗಿಲ್ಲವೆಂದು ಸಾಬೀತುಪಡಿಸಿದ್ದಾರೆ. ಆದ್ದರಿಂದ ಆಯ್ಕೆಗಾರರು ಟೆಸ್ಟ್ ತಂಡದಿಂದ ಅವರನ್ನು ಸದ್ಯಕ್ಕಂತೂ ಹೊರಗೆ ತಳ್ಳಲು ಸಾಧ್ಯವಿಲ್ಲ. ಆದರೆ ಆಸೀಸ್ ದೇಶಿ ಕ್ರಿಕೆಟ್‌ನಲ್ಲಿ ಹೊಸ ಪ್ರತಿಭೆಗಳು ಹೊಳೆಯುತ್ತಿದ್ದಾರೆ. ಈ ಸ್ಪರ್ಧೆಯ ಬಿರುಗಾಳಿಯಲ್ಲಿ ಬ್ಯಾಟಿಂಗ್ ಬಲದಿಂದ ಪಾಂಟಿಂಗ್ ಇನ್ನೆಷ್ಟು ಕಾಲ ಗಟ್ಟಿಯಾಗಿ ನಿಲ್ಲುತ್ತಾರೆಂದು ಕಾಯ್ದು ನೋಡಬೇಕು.ಮೇಲ್ಪಂಕ್ತಿಯಲ್ಲಿ ಆಡಿ ಕ್ರಿಕೆಟ್ ಲೋಕದಲ್ಲಿ ಮೆರೆದ ಈ ಬ್ಯಾಟ್ಸ್‌ಮನ್‌ಗೆ ತಮ್ಮ ದೇಶದ ಕ್ರಿಕೆಟ್ ಆಯ್ಕೆಗಾರರು ಯೋಚನೆ ಮಾಡುವ ರೀತಿ ಹೇಗೆಂದು ಗೊತ್ತು. ಇದೇ ಕಾರಣಕ್ಕೆ ಅವರು ಮುಂಚಿತವಾಗಿಯೇ ತಮಗೆ ಇನ್ನು ತಂಡದಲ್ಲಿ ಸ್ಥಾನವಿಲ್ಲವೆಂದು ನಿರ್ಧರಿಸಿದ್ದು. ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಜಾನ್ ಇನ್ವರರಿಟಿ ಕರೆ ಮಾಡಿದಾಗಲೇ ಇನ್ನು ತಡ ಮಾಡುವುದು ಬೇಡವೆಂದು ತೀರ್ಮಾನಿಸಿದರು.ಮರುದಿನವೇ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದರು. ಒಂದು ರೀತಿಯಲ್ಲಿ ಹಾಗೆ ಮಾಡಿದ್ದೇ ಸರಿ. ಇನ್ನಷ್ಟು ಅವಮಾನ ಆಗುವುದೂ ತಪ್ಪಿತು. ಪಾಂಟಿಂಗ್ ಸಮಯಕ್ಕೆ ಸರಿಯಾಗಿ ಕೈಗೊಂಡ ನಿರ್ಧಾರವು ಭಾರತದ ಕೆಲವು ಹಿರಿಯ ಆಟಗಾರರಿಗೆ ಮಾದರಿ ಎನಿಸುವ ಮಾರ್ಗ.ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ಆಡುವುದನ್ನು ಬಿಡುವುದೇ ಒಳಿತು ಎನ್ನುವ ಧ್ವನಿಗಳು ಈಗಾಗಲೇ ಬಲ ಪಡೆದುಕೊಂಡಿವೆ. `ಲಿಟಲ್ ಚಾಂಪಿಯನ್~ ಜೊತೆಗೆ ದೀರ್ಘ ಕಾಲ ಆಡಿದ್ದ ಸೌರವ್ ಗಂಗೂಲಿ ಕೂಡ ಸಚಿನ್‌ಗೆ `ಇನ್ನು ಏಕದಿನ ಕ್ರಿಕೆಟ್ ಸಾಕು~ ಎನ್ನುವ ಸಲಹೆ ನೀಡಿದ್ದಾರೆ. ಆದರೆ ಮುಂಬೈನ ಬ್ಯಾಟ್ಸ್‌ಮನ್ ಕಿವಿಗೊಡುತ್ತಿಲ್ಲ.ನಿಗದಿತ ಓವರುಗಳ ಪಂದ್ಯಗಳಲ್ಲಿ ಅವರು ತಂಡಕ್ಕೆ ದೊಡ್ಡ ಮೊತ್ತದ ಕೊಡುಗೆ ನೀಡಲು ಸಾಧ್ಯವಾಗುತ್ತಿಲ್ಲ. ಇಂಥ ಹಿರಿಯ ಆಟಗಾರರು ಇರುವುದರಿಂದ ಕ್ಷೇತ್ರ ರಕ್ಷಣೆ ದುರ್ಬಲವಾಗುತ್ತಿದೆ ಎಂದು ನಾಯಕ ಮಹೇಂದ್ರ ಸಿಂಗ್ ದೋನಿ ದೂರಿದ್ದಾರೆ.`ಮಹಿ~ಯಂತೆ ಎಲ್ಲರೂ ಧ್ವನಿ ಎತ್ತುವ ಮುನ್ನ ಮರ‌್ಯಾದೆ ಉಳಿಸಿಕೊಂಡು ವಿದಾಯ ಹೇಳುವುದೇ ಉಚಿತ ಎನ್ನುವುದು ಕ್ರಿಕೆಟ್ ವಲಯದಲ್ಲಿ ಹರಡಿಕೊಂಡಿರುವ ಮಾತು.

ಪಾಂಟಿಂಗ್ ಅವರನ್ನು ತಂಡದಿಂದ ಕಿತ್ತೊಗೆದ ಆಸೀಸ್ ಆಯ್ಕೆಗಾರರಂಥ ಧೈರ್ಯವು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿಗಂತೂ ಇಲ್ಲ. ಸಚಿನ್ ಸಹವಾಸಕ್ಕೆ ಹೋದರೆ ದೇಶವೇ ತಿರುಗಿ ಬೀಳುತ್ತದೆ ಎನ್ನುವ ಭಯ ಅವರಿಗಿದೆ. ಸ್ಥಿತಿ ಹೀಗಿರುವಾಗ ಇನ್ನಷ್ಟು ಆಡಬೇಕು ಹಿರಿಯ ಕ್ರಿಕೆಟಿಗನೊಬ್ಬ ಯೋಚನೆ ಮಾಡುವುದು ಸೂಕ್ತವಂತೂ ಅಲ್ಲ. ಪಾಂಟಿಂಗ್ ನಿವೃತ್ತಿಯ ನಂತರ ಎಲ್ಲರೂ ತೆಂಡೂಲ್ಕರ್ ಕಡೆಗೆ ನೋಡುತ್ತಿರುವುದಂತೂ ಸತ್ಯ. ಪ್ರದರ್ಶನ ಮಟ್ಟದಲ್ಲಿ ಇನ್ನಷ್ಟು ಕುಸಿತ ಕಂಡು ಕ್ರಿಕೆಟ್ ಪ್ರೇಮಿಗಳು ಕೆಂಡವಾಗುವ ಮೊದಲೇ `ಪಂಟರ್~ ಏಕದಿನ ಕ್ರಿಕೆಟ್‌ನಿಂದ ದೂರವಾದರು. ಸರಿಯಾದ ಸಮಯಕ್ಕೆ ಸೂಕ್ತ ನಿರ್ಧಾರಕ್ಕೆ ಬಂದ ಅವರಿಗೆ ಗೌರವವೂ ಸಿಕ್ಕಿತು. ಈಗ ಎಲ್ಲರೂ ಪಾಂಟಿಂಗ್ ಪರವಾಗಿ ಮಾತನಾಡುತ್ತಿದ್ದಾರೆ. ಎರಡು ವಿಶ್ವಕಪ್ ಗೆದ್ದ ಮಾಜಿ ನಾಯಕನನ್ನು ಅವಮಾನ ಮಾಡಬಾರದಿತ್ತೆಂದು ಆಸ್ಟ್ರೇಲಿಯಾದ ಕೆಲವು ಮಾಜಿ ಆಟಗಾರರೇ ಧ್ವನಿ ಎತ್ತಿದ್ದಾರೆ. ಅದು ಏನೇ ಇರಲಿ; ಆಟದಲ್ಲಿ ಬಲ ಇರುವವರೆಗೆ ಮಾತ್ರ ಆಟಗಾರನಿಗೆ ಗೌರವ. ಒಮ್ಮೆ ಶಕ್ತಿ ಇಳಿಮುಖವಾದರೆ ಹಿಂದಿನೆಲ್ಲ ಸಾಧನೆಗಳು ಮರೆತು ಹೋಗುತ್ತವೆ. ಆದ್ದರಿಂದಲೇ ಪಾಂಟಿಂಗ್ ಹಾದಿಯನ್ನು ಅನುಸರಿಸಿ ತೆಂಡೂಲ್ಕರ್ ಕೂಡ ಎತ್ತರದಲ್ಲಿ ಇರುವಾಗಲೇ ಬದಿಗೆ ಸರಿಯಲೆನ್ನುವುದು `ದಾದಾ~ ಕಾಳಜಿ! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry