ಪಂತುಲು ಕೊಡುಗೆ ಅವಿಸ್ಮರಣೀಯ

7

ಪಂತುಲು ಕೊಡುಗೆ ಅವಿಸ್ಮರಣೀಯ

Published:
Updated:
ಪಂತುಲು ಕೊಡುಗೆ ಅವಿಸ್ಮರಣೀಯ

ಬೆಂಗಳೂರು: `ಚಿತ್ರ ನಿರ್ದೇಶಕ ದಿವಂಗತ ಬಿ.ಆರ್.ಪಂತುಲು ಅವರು ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿಯಾಗಿದ್ದರು. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯ~ ಎಂದು ಹಿರಿಯ ಚಿತ್ರನಟಿ ಡಾ.ಬಿ.ಸರೋಜಾದೇವಿ ಹೇಳಿದರು.ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಯೋಗದೊಂದಿಗೆ ಸರಿಗಮ ಇಂಡಿಯಾ (ಆಡಿಯೊ) ಕಂಪೆನಿಯು ಗುರುವಾರ ಬಾದಾಮಿ ಹೌಸ್‌ನಲ್ಲಿ ಚಿತ್ರ ನಿರ್ದೇಶಕ ಬಿ.ಆರ್.ಪಂತಲು ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಶೇಷ ಸಿ.ಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಪಂತುಲು ನಿರ್ದೇಶನದಲ್ಲಿ ಕೆಲಸ ಮಾಡುವುದು ಎಂದರೆ ನಮಗೆ ತವರುಮನೆ ಇದ್ದ ಹಾಗಿತ್ತು. ಚಿತ್ರಕರಣದ ವೇಳೆ ಎಷ್ಟು ತಮಾಷೆ ಮಾಡುತ್ತಿದ್ದರೋ ಕೆಲಸದಲ್ಲಿ ಅಷ್ಟೇ ಶಿಸ್ತಿನಿಂದ ವರ್ತಿಸುತ್ತಿದ್ದರು. ಚಿತ್ರೀಕರಣ ಮುಗಿಯುವ ತನಕ ಕಲಾವಿದರನ್ನು ಅತ್ತಿತ್ತ ಕದಲಲು ಬಿಡುತ್ತಿರಲಿಲ್ಲ~ ಎಂದರು.`ಚಿತ್ರರಂಗ ವೃತ್ತಿಯಲ್ಲಿ ನನಗೆ ಮರೆಯಲಾಗದ ಚಿತ್ರವೆಂದರೆ `ಕಿತ್ತೂರು ಚೆನ್ನಮ್ಮ~. ಚಿತ್ರದ ಯುದ್ಧ ಸನ್ನಿವೇಶದ ಚಿತ್ರೀಕರಣ ಕಂಚಿಯಲ್ಲಿ ನಡೆಯುತ್ತಿತ್ತು. ಅದೇ ವೇಳೆ ನಾನು ತಮಿಳಿನಲ್ಲಿ ಅಭಿನಯಿಸಿದ್ದ `ಕೈಸಾರಿ~ ಚಿತ್ರ ಶತದಿನೋತ್ಸವ ಕಾರ್ಯಕ್ರಮಕ್ಕೆ ಚೆನ್ನೈಗೆ ತೆರಳಬೇಕಿತ್ತು. ಹಾಗಾಗಿ ಚಿತ್ರೀಕರಣಕ್ಕೆ ಬರಲು ಸಾಧ್ಯವಿಲ್ಲ ಎಂದು ಪಂತುಲು ಅವರಿಗೆ ತಿಳಿಸಿದೆ. ಚಿತ್ರೀಕರಣಕ್ಕೆ ಬನ್ನಿ ಆದಷ್ಟು ಬೇಗ ನಿಮ್ಮನ್ನು ಕಳುಹಿಸಿಕೊಡುತ್ತೇನೆ ಎಂಬ ಉತ್ತರ ಅವರಿಂದ ಬಂತು~ ಎಂದು ಹೇಳಿದರು.`ಅವರ ಮಾತಿಗೆ ಮೀರದೆ ಚಿತ್ರೀಕರಣಕ್ಕೆ ಬಂದೆ. ಇಡೀ ಯುದ್ಧದ ಚಿತ್ರೀಕರಣವನ್ನು ಮಧ್ಯಾಹ್ನದ ವೇಳೆಗೆ ಮುಕ್ತಾಯ ಮಾಡಿದರು. ಅದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಹಿಡಿದ ಕೆಲಸವನ್ನು ಜಾಣ್ಮೆಯಿಂದ ಹಾಗೂ ಶಿಸ್ತಿನಿಂದ ಮುಗಿಸುವ ಸ್ವಭಾವ ಅವರಲ್ಲಿತ್ತು. ಚಿತ್ರೀಕರಣ ಮುಗಿಸಿ ಚೆನ್ನೈನ ಕಾರ್ಯಕ್ರಮದಲ್ಲಿ ಭಾಗವಹಿಸಿದೆ~ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.ಹಿರಿಯ ನಟಿ ಡಾ.ಭಾರತಿ ವಿಷ್ಣುವರ್ಧನ್ ಮಾತನಾಡಿ, `ಚಿತ್ರರಂಗದಲ್ಲಿ ನನಗೆ ನೆಲೆ ಕಲ್ಪಿಸಿಕೊಟ್ಟಿದ್ದು ಪಂತುಲು ಅವರು. ಅವರ ನಿರ್ದೇಶನದ `ದುಡ್ಡೇ ದೊಡ್ಡಪ್ಪ~ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದೆ. `ಎಮ್ಮೆ ತಮ್ಮಣ್ಣ~ ಚಿತ್ರದ ಹಾಡಿನ ಚಿತ್ರೀಕರಣದ ಸಂದರ್ಭ. ಬೆಳಿಗ್ಗೆ 7 ಗಂಟೆಗೆ ಚಿತ್ರೀಕರಣಕ್ಕೆ ಸಮಯ ನಿಗದಿಯಾಗಿತ್ತು.ಬೆಳಿಗ್ಗೆ  6.45ಕ್ಕೆ ನಾನು ಚಿತ್ರೀಕರಣಕ್ಕೆ ಸಿದ್ದವಾಗಿದ್ದೆ. ಐದು ನಿಮಿಷ ಬೇಗ ಆಗಮಿಸಿದ ಪಂತುಲು ಅವರು ನನ್ನ ಮೇಕಪ್ ಗಮನಿಸಿ ನನ್ನನ್ನೇ ನಾಯಕಿಯಾಗಿ ಪ್ರಧಾನವಾಗಿಟ್ಟುಕೊಂಡು ಐತಿಹಾಸಿಕ ಚಿತ್ರ ನಿರ್ಮಾಣ ಮಾಡುವುದಾಗಿ~ ಹೇಳಿದರು ಎಂದರು.ನಟ ಪುನೀತ್ ರಾಜ್‌ಕುಮಾರ್ ಮಾತನಾಡಿ, `ಪಂತುಲು ಅವರ `ಸ್ಕೂಲ್ ಮಾಸ್ಟರ್~ ಚಿತ್ರ ನನಗೆ ಮರೆಯಲಾಗದ ಚಿತ್ರ. ಇಂದಿನ ಯಾವುದೇ ಚಿತ್ರ ಇದಕ್ಕೆ ಸಾಟಿಯಿಲ್ಲ~ ಎಂದರು.ದಿವಂಗತ ಬಿ.ಆರ್.ಪಂತುಲು ಅವರ ನಿರ್ಮಾಣ, ನಿರ್ದೇಶನದ 24 ಚಿತ್ರಗಳ 57 ಗೀತೆಗಳುಳ್ಳ ಮೂರು ವಿಶೇಷ ಸಿ.ಡಿ ಗಳನ್ನು ಬಿಡುಗಡೆ ಮಾಡಲಾಯಿತು. ಪಂತುಲು ಅವರ ಪುತ್ರಿ ಬಿ.ಆರ್.ವಿಜಯಲಕ್ಷ್ಮಿ, ಸರಿಗಮ ಇಂಡಿಯಾ ಕಂಪೆನಿಯ ಸಂಯೋಜಕ ಕೆ.ಪರಮೇಶ್ವರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry