ಪಂದ್ಯಕ್ಕೆ ಮಳೆ ಅಡ್ಡಿ; ಹೊರಬಿದ್ದ ಕೆಕೆಆರ್

7

ಪಂದ್ಯಕ್ಕೆ ಮಳೆ ಅಡ್ಡಿ; ಹೊರಬಿದ್ದ ಕೆಕೆಆರ್

Published:
Updated:
ಪಂದ್ಯಕ್ಕೆ ಮಳೆ ಅಡ್ಡಿ; ಹೊರಬಿದ್ದ ಕೆಕೆಆರ್

ಡರ್ಬನ್ (ಪಿಟಿಐ): ಐಪಿಎಲ್ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡದವರು ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಈ ತಂಡಕ್ಕೆ ಬುಧವಾರ ಅದೃಷ್ಟ ಕೈಕೊಟ್ಟಿತು.ಕಿಂಗ್ಸ್‌ಮೀಡ್ ಕ್ರೀಡಾಂಗಣದಲ್ಲಿ ಪರ್ತ್ ಸ್ಕಾರ್ಚರ್ಸ್‌ ವಿರುದ್ಧ ಬುಧವಾರ ರಾತ್ರಿ ನಡೆಯಬೇಕಿದ್ದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಹಾಗಾಗಿ ಈ ಪಂದ್ಯವನ್ನು ರದ್ದುಗೊಳಿಸಲಾಯಿತು. ಉಭಯ ತಂಡಗಳಿಗೆ ತಲಾ ಎರಡು ಪಾಯಿಂಟ್ ನೀಡಲಾಯಿತು. ಈ ಕಾರಣದಿಂದ ಗೌತಮ್ ಗಂಭೀರ್ ಸಾರಥ್ಯದ ನೈಟ್ ರೈಡರ್ಸ್ ತಂಡದ ಸೆಮಿಫೈನಲ್ ಹಾದಿ ಮುಚ್ಚಿ ಹೋಯಿತು. ಟೂರ್ನಿಯ ಪೈಪೋಟಿಯಲ್ಲಿ ಉಳಿಯಲು ಈ ತಂಡದವರು ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಪರ್ತ್ ತಂಡದವರು 14 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿದ್ದರು. ಆಗ ಮಳೆ ಸುರಿಯಿತು. ಆದರೆ ಮತ್ತೆ ಮಳೆ ನಿಲ್ಲದ ಕಾರಣ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಲು ತೀರ್ಮಾನಿಸಿದರು.ಈ ಪಂದ್ಯದಲ್ಲಿ ಹರ್ಷಲ್ ಗಿಬ್ಸ್ ಅವರನ್ನು ಮೊದಲ ಓವರ್‌ನಲ್ಲಿಯೇ ವೇಗಿ ಬ್ರೆಟ್ ಲೀ ಔಟ್ ಮಾಡಿದರು. ಆದರೆ ಎರಡನೇ ವಿಕೆಟ್ ಜೊತೆಯಾಟದಲ್ಲಿ ಶಾನ್ ಮಾರ್ಷ್ ಹಾಗೂ ಸೈಮನ್ ಕ್ಯಾಟಿಚ್ ನೈಟ್ ರೈಡರ್ಸ್ ತಂಡದ ಬೌಲರ್‌ಗಳನ್ನು ಕಾಡಿದರು. ಇವರಿಬ್ಬರು 70 ರನ್ ಕೂಡಿ ಹಾಕಿದರು. 40 ಎಸೆತಗಳನ್ನು ಎದುರಿಸಿದ     ಮಾರ್ಷ್ 38 ರನ್ ಗಳಿಸಿದರು. 32 ಎಸೆತಗಳನ್ನು ಎದುರಿಸಿದ ಕ್ಯಾಟಿಚ್ 4 ಬೌಂಡರಿ ಸಮೇತ 43 ರನ್ ಗಳಿಸಿದರು. ಸಂಕ್ಷಿಪ್ತ ಸ್ಕೋರ್: ಪರ್ತ್ ಸ್ಕಾರ್ಚರ್ಸ್‌: 14 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 91 (ಶಾನ್ ಮಾರ್ಷ್ 38, ಸೈಮನ್ ಕ್ಯಾಟಿಚ್ ಔಟಾಗದೆ 43; ಬ್ರೆಟ್ ಲೀ 11ಕ್ಕೆ1, ಜಾಕ್ ಕಾಲಿಸ್ 24ಕ್ಕೆ1). ಫಲಿತಾಂಶ: ಪಂದ್ಯ ರದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry