ಶುಕ್ರವಾರ, ಜೂನ್ 5, 2020
27 °C

ಪಂದ್ಯ ಗೆಲ್ಲಿಸಬಲ್ಲ ತಾಕತ್ತು ನನಗಿದೆ

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಪಂದ್ಯ ಗೆಲ್ಲಿಸಬಲ್ಲ ತಾಕತ್ತು ನನಗಿದೆ

`ಯಾರೋ ಹೇಳಿದರೆಂದು ನನ್ನ ಬ್ಯಾಟಿಂಗ್ ಶೈಲಿ ಬದಲಾಯಿಸಿಕೊಳ್ಳಲು ಪ್ರಯತ್ನಿಸಿದೆ. ಇದು ನನ್ನ ಫಾರ್ಮ್‌ಗೆ ಕುತ್ತು ತಂತು. ನನ್ನ ಬ್ಯಾಟಿಂಗ್ ಶೈಲಿ ಮೇಲೆ ಕೆಟ್ಟ ಪರಿಣಾಮ ಬೀರಿತು. ಇನ್ನು ಮುಂದೆ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ ನನ್ನ ನೈಜ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಹಿಂತಿರುಗುತ್ತೇನೆ~-ಮೂರು ವರ್ಷಗಳ ಬಳಿಕ ಭಾರತ ಕ್ರಿಕೆಟ್ ತಂಡಕ್ಕೆ ಹಿಂತಿರುಗಿರುವ ರಾಬಿನ್ ಉತ್ತಪ್ಪ ಅವರು `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತಿದು.ಗೌತಮ್ ಗಂಭೀರ್ ವಿವಾಹವಾಗುತ್ತಿದ್ದು ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಕ್ರಿಕೆಟ್ ಪಂದ್ಯಕ್ಕೆ ಲಭ್ಯರಾಗುತ್ತಿಲ್ಲ. ಜೊತೆಗೆ ಸಚಿನ್, ಸೆಹ್ವಾಗ್ ಕೂಡ ಇಲ್ಲ. ಹಾಗಾಗಿ ಉತ್ತಪ್ಪ ಅವರಿಗೆ ಅವಕಾಶ ಒಲಿದುಬಂದಿದೆ.

 

2008ರಲ್ಲಿ ಕರಾಚಿಯಲ್ಲಿ ನಡೆದ ಏಷ್ಯಕಪ್ ಟೂರ್ನಿಯಲ್ಲಿ ರಾಬಿನ್ ಕೊನೆಯ ಬಾರಿ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಆಯ್ಕೆದಾರರು ಕೊಡಗಿನ ಆಟಗಾರನತ್ತ ಕಣ್ಣು ಹರಿಸಲಿಲ್ಲ.ಆದರೆ ಉತ್ತಪ್ಪ ದೇಶಿ ಕ್ರಿಕೆಟ್‌ನಲ್ಲಿ ಮಿಂಚುತ್ತಲೇ ಇದ್ದರು. ಪ್ರಮುಖವಾಗಿ ಐಪಿಎಲ್‌ನಲ್ಲಿ ಅವರಿಗೆ ಎಲ್ಲಿಲ್ಲದ ಬೇಡಿಕೆ ಬಂತು. ಈ ವರ್ಷದ ಆರಂಭದಲ್ಲಿ ನಡೆದ ಐಪಿಎಲ್ ಬಿಡ್‌ನಲ್ಲಿ ಭಾರಿ ಮೊತ್ತಕ್ಕೆ (9.6 ಕೋಟಿ ರೂ.) ಪುಣೆ ವಾರಿಯರ್ಸ್ ತಂಡಕ್ಕೆ ಮಾರಾಟವಾದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.`ರಾಬಿನ್ ಟ್ವೆಂಟಿ-20 ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಟಗಾರ~ ಎಂಬ ಮಾತುಗಳು ಕೇಳಿ ಬಂದವು. ಆದರೂ ಫಿಟ್‌ನೆಸ್ ಸಮಸ್ಯೆ ಕಾರಣ ಅವರನ್ನು ಪರಿಗಣಿಸಿರಲಿಲ್ಲ.ಆದರೆ ನಾಗಪುರದಲ್ಲಿ ಇದೇ ತಿಂಗಳ ಆರಂಭದಲ್ಲಿ ನಡೆದ ಚಾಲೆಂಜರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಗ್ರೀನ್ ತಂಡ ಪ್ರತಿನಿಧಿಸಿದ್ದ ರಾಬಿನ್ ಅಬ್ಬರದ ಶತಕದ ಮೂಲಕ ಆಯ್ಕೆದಾರರ ಗಮನ ಸೆಳೆದರು.ಚೆನ್ನೈನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟೂರ್ನಿಯಲ್ಲೂ ಮಿಂಚಿದರು. ಅದು 25 ವರ್ಷ ವಯಸ್ಸಿನ ಆಟಗಾರನ ಅದೃಷ್ಟ ಖುಲಾಯಿಸಲು ಕಾರಣವಾಯಿತು. ಅದೇ ಖುಷಿಯಲ್ಲಿ ಪತ್ರಿಕೆಗೆ ಉತ್ತಪ್ಪ ನೀಡಿರುವ ಸಂದರ್ಶನ ಇಲ್ಲಿದೆ.* ಮೂರು ವರ್ಷಗಳ ಬಳಿಕ ಭಾರತ ತಂಡಕ್ಕೆ ಹಿಂತಿರುಗ್ದ್ದಿದೀರಿ. ಮತ್ತೆ ಸ್ಥಾನ ಪಡೆಯುವ ವಿಶ್ವಾಸವಿತ್ತಾ?

ಖಂಡಿತ ವಿಶ್ವಾಸವಿತ್ತು. ಆ ಮೂರು ವರ್ಷ ನನಗೊಂದು ಬಿಡುವು ಎಂದು ಭಾವಿಸಿದ್ದೆ. ಈಗ ಮತ್ತೊಮ್ಮೆ ನನಗೆ ಅವಕಾಶ ಲಭಿಸಿದೆ. ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಪಂದ್ಯ ಆಡಲು ಸದ್ಯದಲ್ಲೇ ಕೋಲ್ಕತ್ತಕ್ಕೆ ತೆರಳುತ್ತಿದ್ದೇನೆ.ಆದರೆ ಒಂದು ಪಂದ್ಯಕ್ಕಷ್ಟೇ ಆಯ್ಕೆ ಆಗಿದ್ದೇನೆ. 11ರ ಬಳಗದಲ್ಲಿ ಆಡಲು ಅವಕಾಶ ಸಿಕ್ಕರೆ ಖಂಡಿತ ಅದನ್ನು ಸದುಪಯೋಗಪಡಿಸಿಕೊಳ್ಳುತ್ತೇನೆ. ನಾನು ದೇವರಲ್ಲಿ ಹೆಚ್ಚು ನಂಬಿಕೆ ಇಟ್ಟಿದ್ದೇನೆ. ನಂಬಿದವರನ್ನು ದೇವರು ಯಾವತ್ತೂ ಕೈಬಿಡುವುದಿಲ್ಲ.* ಚಾಲೆಂಜರ್ ಟ್ರೋಫಿಯಲ್ಲಿನ ಪ್ರದರ್ಶನ ಇದಕ್ಕೆ ಕಾರಣವೇ?

ಇರಬಹುದು. ಭಾರತ ಗ್ರೀನ್ ತಂಡದಲ್ಲಿ ಆಡಿದ್ದ ನಾನು ಭರ್ಜರಿ ಶತಕ ಕೂಡ ಗಳಿಸಿದ್ದೆ. ಅದು ಆಯ್ಕೆದಾರರ ಕಣ್ಣಿಗೆ ಬಿದ್ದಿದೆ.* ನಿಮ್ಮಿಂದ ಪ್ರತಿಯೊಬ್ಬರೂ ಸ್ಫೋಟಕ ಬ್ಯಾಟಿಂಗ್ ನಿರೀಕ್ಷಿಸುತ್ತಾರೆ. ಆಕ್ರಮಣಕಾರಿ ಆಟದ ಎಡವಟ್ಟಿನಿಂದಾಗಿ ನಿಮಗೆ ದೊಡ್ಡ ಮೊತ್ತದ ಇನಿಂಗ್ಸ್ ಕಟ್ಟಲು ಸಾಧ್ಯವಾಗುತ್ತಿಲ್ಲವೇ?

ಆಕ್ರಮಣಕಾರಿ ಬ್ಯಾಟಿಂಗ್ ನನ್ನ ಆಟದ ಶೈಲಿ. ಇದರಿಂದ ತಂಡದ ಗೆಲುವಿಗೆ ಅನೇಕ ಬಾರಿ ನೆರವಾಗಿದೆ. ಜೊತೆಗೆ ಅಭಿಮಾನಿಗಳು ಕೂಡ ನನ್ನಿಂದ ಆಕ್ರಮಣಕಾರಿ ಆಟ ನಿರೀಕ್ಷಿಸುತ್ತಾರೆ. ನನ್ನ ಪ್ರಮುಖ ಬಲವೇ ಆಕ್ರಮಣಕಾರಿ ಬ್ಯಾಟಿಂಗ್. ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.* ನಿಮ್ಮ ಬ್ಯಾಟಿಂಗ್ ಕ್ರಮಾಂಕ ಪದೇಪದೇ ಬದಲಾಗುತ್ತಿರುತ್ತಿದೆ. ಇದು ಪ್ರದರ್ಶನದ ಮೇಲೆ ಪರಿಣಾಮ ಬೀರಿದೆಯೇ?

ಖಂಡಿತ ಪರಿಣಾಮ ಬೀರಿದೆ. ನನಗೆ ನಿರ್ದಿಷ್ಟ ಕ್ರಮಾಂಕ ಎಂಬುದು ಇಲ್ಲ. ಏಳನೇ ಕ್ರಮಾಂಕದಲ್ಲೂ ಬ್ಯಾಟ್ ಮಾಡಿದ ಉದಾಹರಣೆ ಇದೆ. ತಂಡದ ಅಗತ್ಯಕ್ಕೆ ತಕ್ಕಂತೆ ಆಡಬೇಕು. ಆದರೆ ಯೋಜನಾಬದ್ಧ ಇನಿಂಗ್ಸ್ ಕಟ್ಟಲು ಇದರಿಂದ ಸಾಧ್ಯವಾಗುವುದಿಲ್ಲ. ದೊಡ್ಡ ಮೊತ್ತ ಗಳಿಸಲು ಕಷ್ಟವಾಗುತ್ತದೆ.* ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಇಷ್ಟಪಡುತ್ತೀರಿ?

ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕ್ರೀಸ್‌ಗೆ ತೆರಳುವುದು ಎಂದರೆ ನನಗಿಷ್ಟ.* ಭಾರತ ತಂಡದಲ್ಲಿ ಈಗ ಆರಂಭಿಕ ಸ್ಥಾನ ಪಡೆಯುವ ವಿಶ್ವಾಸವಿದೆಯೇ?

ನಿಜ, ಈಗ ತುಂಬಾ ಸ್ಪರ್ಧೆ ಇದೆ. ಆದರೆ ಅವಕಾಶ ಸಿಕ್ಕರೆ ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂಬ ಭರವಸೆ ಇದೆ.* ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸುತ್ತೀರಾ?

ಖಂಡಿತ, ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಿದರೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಐಪಿಎಲ್‌ನಲ್ಲಿ ನಾನೇ ವಿಕೆಟ್ ಕೀಪರ್.* ಮೂರು ವರ್ಷಗಳ ಬಿಡುವಿನ ಜೀವನ ಹೇಗಿತ್ತು?

ಉತ್ತಪ್ಪ ಸ್ಥಿರ ಪ್ರದರ್ಶನ ನೀಡುತ್ತಿಲ್ಲ ಎಂದು ಕೆಲವರು ಹೇಳುತ್ತಿದ್ದರು. ಅದಕ್ಕೆ ನನ್ನ ಆಟದ ಶೈಲಿ ಬದಲಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಇದರಿಂದ ಯಾವುದೇ ಉಪಯೋಗವಾಗಲಿಲ್ಲ. ಈ ಪ್ರಯತ್ನದಿಂದ ನನಗೆ ಕೆಟ್ಟದ್ದೇ ಆಯಿತು. ಹಾಗಾಗಿ ನನ್ನ ಮೊದಲಿನ ನೈಜ ಆಟಕ್ಕೆ ಹಿಂತಿರುಗಿದ್ದೇನೆ.

 

ಖಂಡಿತ ಈ ರೀತಿ ಆಟದಿಂದ ಸ್ಥಿರ ಪ್ರದರ್ಶನ ನೀಡುವುದು ಕಷ್ಟ. ಆದರೆ ಪಂದ್ಯ ಗೆಲ್ಲಿಸಬಲ್ಲ ತಾಕತ್ತು ನನಗಿದೆ. ಮೂರು ವರ್ಷಗಳ ಅವಧಿಯಲ್ಲಿ ಕಲಿಯಲು ತುಂಬಾ ಸಮಯ ಲಭಿಸಿತು. ಕುಟುಂಬದೊಂದಿಗೆ ಹೆಚ್ಚು ಕಾಲ ಕಳೆಯಲು ಸಾಧ್ಯವಾಯಿತು.* ರಣಜಿ ಕ್ರಿಕೆಟ್‌ಗೆ ಯಾವ ರೀತಿ ಸಿದ್ಧವಾಗುತ್ತಿದ್ದೀರಿ?

ರಣಜಿ ಕ್ರಿಕೆಟ್ ನವೆಂಬರ್ ಮೂರರಂದು ಶುರುವಾಗಲಿದೆ. ಚೆನ್ನೈನಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟೂರ್ನಿಯಲ್ಲಿ ಆಡಿದ್ದೇವೆ. ಈ ಬಾರಿಯ ರಣಜಿಯಲ್ಲೂ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ.* ಭುಜದ ನೋವು, ಫಿಟ್‌ನೆಸ್ ಹೇಗಿದೆ?

ಕಳೆದ ವರ್ಷ ಭುಜದ ನೋವಿನ ಕಾರಣ ಹೆಚ್ಚು ಪಂದ್ಯಗಳನ್ನು ಆಡಲು ಸಾಧ್ಯವಾಗಿರಲಿಲ್ಲ. ಈಗ ಎಲ್ಲವೂ ಸರಿಯಾಗಿದೆ. ಪೂರ್ಣ ಫಿಟ್ ಆಗಿದ್ದೇನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.