ಪಂಪ್‌ಸೆಟ್‌ಗೆ ವಿದ್ಯುತ್: ರೈತರ ಧರಣಿ

ಶನಿವಾರ, ಮೇ 25, 2019
26 °C

ಪಂಪ್‌ಸೆಟ್‌ಗೆ ವಿದ್ಯುತ್: ರೈತರ ಧರಣಿ

Published:
Updated:

ದೇವದುರ್ಗ: ತಾಲ್ಲೂಕಿನ ಜಾಲಹಳ್ಳಿ ಹೋಬಳಿಯ ಮದರಕಲ್ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸಾಣೇರದೊಡ್ಡಿ ರೈತರಿಗೆ ಮೂರು ತಿಂಗಳಿಂದ ವಿದ್ಯುತ್ ಅಭಾವ ಉಂಟಾಗಿರುವ ಪರಿಣಾಮ ಬೆಳೆಗಳಿಗೆ ಮತ್ತು ಜನರಿಗೆ ಕುಡಿಯುವ ನೀರಿನ ತೊಂದರೆ ಎದುರಾಗಿದೆ.ಕೂಡಲೇ ಟ್ರಾನ್ಸ್‌ಫಾರ್ಮರ್ ನೀಡಬೇಕೆಂದು ಒತ್ತಾಯಿಸಿ ರೈತ ಸಂಘ (ಕೆಆರ್‌ಎಸ್) ತಾಲ್ಲೂಕು ಸಮಿತಿ ಕಾರ್ಯಕರ್ತರು ಶುಕ್ರವಾರ ಇಲ್ಲಿ ಜೆಸ್ಕಾಂ ಕಚೇರಿ ಮುಂದೆ  ಧರಣಿ ನಡೆಸಿದರು.ನಿವಾಸಿಗಳು ಮತ್ತು ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಪಟ್ಟಣದ ಹಜರತ್ ಜೈಹಿರುದ್ದೀನ್ ಪಾಶಾ ವೃತ್ತದಿಂದ ಜೆಸ್ಕಾಂ ಕಚೇರಿವರೆಗೂ ರ‌್ಯಾಲಿ ನಡೆಸಿ ನಂತರ ಕೆಲವು ಕಾಲ ಧರಣಿ ನಡೆಸಿ ಪ್ರತಿಭಟಿಸಿದರು. ಟ್ರಾನ್ಸ್‌ಫಾರ್ಮರ್ ಸುಟ್ಟು ಮೂರು ತಿಂಗಳು ಕಳೆದಿದೆ.

 

ಇಲಾಖೆಯ ಅಧಿಕಾರಿಗಳು ನಿರ್ಲಕ್ಷಿಸಿದ್ದರಿಂದ ರೈತರ ಬೆಳೆಗಳು ನೀರು ಇಲ್ಲದೆ ಬಾಡಿ ನಿಂತಿವೆ. ದೊಡ್ಡಿ ಜನರು ಪಕ್ಕದ ಗ್ರಾಮಕ್ಕೆ ಹೋಗಿ ನೀರು ತಂದು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.  ಜನರು ಕತ್ತಲಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಸಂಘದ ತಾಲ್ಲೂಕು ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ  ಆರೋಪಿಸಿದರು.ಲಿಖಿತ ಪತ್ರ:  ಸಾಣೇರದೊಡ್ಡಿ ಗ್ರಾಮದಲ್ಲಿ ವಿಫಲವಾಗಿರುವ 100 ಕೆ.ವಿ. ಟ್ರಾನ್ಸ್‌ಫಾರ್ಮರ್ ಅನ್ನು ಮೂರು ದಿನಗಳ ಒಳಗೆ ಅಳವಡಿಸಲಾಗುವುದು ಮತ್ತು ರಾಜೀಗಾಂಧಿ ಯೋಜನೆ ಅಡಿಯಲ್ಲಿ ಹಾಕಲಾದ ವಿದ್ಯುತ್ ಕಂಬಗಳಿಗೆ 15 ದಿನಗಳಲ್ಲಿ ಸಂಪರ್ಕ ಕಲ್ಪಿಸಲಾಗುವುದು ಎಂದು ಜಾಲಹಳ್ಳಿ ಶಾಖಾಧಿಕಾರಿ ಶ್ರೀನಿವಾಸ ಲಿಖಿತ ಭರವಸೆ ನೀಡಿದ ನಂತರ ಧರಣಿ ಹಿಂದಕ್ಕೆ ಪಡೆಯಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry