ಪಂಪ್‌ಸೆಟ್ ಸಕ್ರಮ: ರೈತರಿಗಿಲ್ಲ ಆಸಕ್ತಿ!

7

ಪಂಪ್‌ಸೆಟ್ ಸಕ್ರಮ: ರೈತರಿಗಿಲ್ಲ ಆಸಕ್ತಿ!

Published:
Updated:
ಪಂಪ್‌ಸೆಟ್ ಸಕ್ರಮ: ರೈತರಿಗಿಲ್ಲ ಆಸಕ್ತಿ!

ಮೈಸೂರು: ಪಂಪ್‌ಸೆಟ್ ಸಕ್ರಮಕ್ಕೆ ಸರ್ಕಾರ ಮೂರನೇ ಬಾರಿ ಗಡವು ವಿಸ್ತರಿಸಿದ್ದರೂ ಶ್ರೀಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವ್ಯಾಪ್ತಿಯ ಐದು ಜಿಲ್ಲೆಯ ರೈತರು ನಿರಾಸಕ್ತಿ ತೋರಿಸಿದ್ದಾರೆ. ಸೆಸ್ಕ್ ಗುರುತಿಸಿದ 52,299 ಅಕ್ರಮ ಪಂಪ್‌ಸೆಟ್‌ಗಳ ಪೈಕಿ ಈವರೆಗೆ ಕೇವಲ 12,520 ಪಂಪ್‌ಸೆಟ್‌ಗಳು ಸಕ್ರಮಗೊಂಡಿದ್ದು, ಆರ್‌ಆರ್ ಸಂಖ್ಯೆ ಪಡೆದಿವೆ.ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪರಿವರ್ತಕ, ಕಂಬ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಅನಧಿಕೃತ ಪಂಪ್‌ಸೆಟ್‌ಗಳನ್ನು (ಕಾಲುವೆಗಳಿಂದ ನೀರನ್ನು ಎತ್ತುವ ಕೃಷಿ ಪಂಪ್‌ಸೆಟ್‌ಗಳನ್ನು ಹೊರತು ಪಡಿಸಿ) ಸಕ್ರಮಗೊಳಿಸಲು ರಾಜ್ಯ ಸರ್ಕಾರ 2011ರ ಮಾರ್ಚ 11ರಂದು ಆದೇಶ ಹೊರಡಿಸಿತ್ತು. ಅಂಥ ಪಂಪ್‌ಸೆಟ್ ಹೊಂದಿದ ರೈತರು ಸಕ್ರಮಕ್ಕೆ ಮೇ 15ರ ಒಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು.ಇದಕ್ಕೆ ರೈತರು ಸರಿಯಾಗಿ ಸ್ಪಂದಿಸದ ಕಾರಣ ಕೊನೆಯ ದಿನಾಂಕವನ್ನು ಜು.31ರ ವರೆಗೆ ವಿಸ್ತರಿಸಲಾಗಿತ್ತು. ಬಳಿಕ ಡಿ.31ರವೆಗೆ ಗಡುವು ನೀಡಲಾಯಿತು. ಆದರೂ ರೈತರು ಸಕ್ರಮಕ್ಕೆ ಆಸಕ್ತಿ ತೋರಲಿಲ್ಲ. ಈ ಮಧ್ಯೆ ವಿಧಾನಸಭೆಯಲ್ಲಿ ಚರ್ಚೆ ನಡೆದಾಗ ಸಚಿವೆ ಶೋಭಾ ಕರಂದ್ಲಾಜೆ ಅವರು ಕೊನೆಯ ದಿನಾಂಕವನ್ನು ಈಗ ಮಾ.31ರ ವರೆಗೆ ವಿಸ್ತರಿಸಿದರು.ಸೆಸ್ಕ್ ತನ್ನ ವ್ಯಾಪ್ತಿಯ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಯಲ್ಲಿ 52,299 ಅನಧಿಕೃತ ವಿದ್ಯುತ್ ಸಂಪರ್ಕ ಪಡೆದಿರುವ ಪಂಪ್‌ಸೆಟ್‌ಗಳಿವೆ ಎಂದು ಗುರುತಿಸಿದೆ. ಈ ಪೈಕಿ 43,844 ಪಂಪ್‌ಸೆಟ್‌ಗಳು ಸೆಸ್ಕ್ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡಿದ್ದು, ಉಳಿದ 8455 ರೈತರು ಪಂಪ್‌ಸೆಟ್‌ಗಳನ್ನು ನೋಂದಣಿ ಕೂಡ ಮಾಡಿಲ್ಲ. ಹೀಗಾಗಿ ನೋಂದಣಿ ಮಾಡಿಸಿಕೊಂಡ ರೈತರು ಪಂಪ್‌ಸೆಟ್ ಸಕ್ರಮಕ್ಕೆ ಬರಬಹುದು ಎಂಬ ಆಶಾ ಭಾವನೆಯೊಂದಿಗೆ ಸೆಸ್ಕ್ ಕಾಯುತ್ತಿದೆ.ಒಂದು ಪಂಪ್‌ಸೆಟ್ ಸಕ್ರಮಕ್ಕೆ ರೂ. 70 ಸಾವಿರ ಖರ್ಚಾಗಬಹುದು ಎಂದು ಸರ್ಕಾರ ಅಂದಾಜಿಸಿದೆ. ಇದರಲ್ಲಿ ರೈತರು ರೂ.10 ಸಾವಿರ, ಸರ್ಕಾರ ರೂ.25 ಸಾವಿರ ಹಾಗೂ ರೂ.35 ಸಾವಿರವನ್ನು ಆಯಾ ವಿದ್ಯುತ್ ಕಂಪೆನಿಗಳು ಭರಿಸಲಿವೆ. ಹೀಗಾಗಿ ಪಂಪ್‌ಸೆಟ್ ಹೊಂದಿದರ ರೈತರು ರೂ.10 ಸಾವಿರ ಮತ್ತು ಒಂದು ಎಚ್‌ಪಿ ಸಾಮರ್ಥ್ಯದ ಮೋಟಾರ್‌ಗೆ ರೂ.680ರಂತೆ ಹಣ ಪಾವತಿಸಬೇಕು. ಇದು ರೈತರಿಗೆ ಹೊರೆಯಾಗುತ್ತಿರುವ ಕಾರಣ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂದು ಸೆಸ್ಕ್ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry