ಪಂಪ ಪ್ರಶಸ್ತಿ: ಸಮ್ಮೇಳನದ ಅಪ್ರಬುದ್ಧ ನಿರ್ಣಯ

7

ಪಂಪ ಪ್ರಶಸ್ತಿ: ಸಮ್ಮೇಳನದ ಅಪ್ರಬುದ್ಧ ನಿರ್ಣಯ

Published:
Updated:

ಈ ಹಿಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಅಂಗೀಕರಿಸಿದ ನಿರ್ಣಯಗಳನ್ನು ಅಂಗೀಕರಿಸುವಂತೆ ಸರ್ಕಾರವನ್ನು ಒತ್ತಾಯಿಸುವುದರ ಹೊರತಾಗಿ ಮತ್ತೆ ಹೊಸ ನಿರ್ಣಯಗಳನ್ನು ಈ ಸಲದ ಸಮ್ಮೇಳನ ಅಂಗೀಕರಿಸುವುದಿಲ್ಲ ಎಂಬ ಸುದ್ದಿ 77ನೇ ಸಮ್ಮೇಳನ ನಡೆಯುವುದಕ್ಕೆ ಮುಂಚೆ ಕೇಳಿಬಂದಿತ್ತಾದರೂ ಸಮ್ಮೇಳನದ ಕೊನೆಯ ದಿನದ ಮಹಾಧಿವೇಶನ ಒಂಬತ್ತು ನಿರ್ಣಯಗಳನ್ನು ಅಂಗೀಕರಿಸಿದೆ.ಪಂಪ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಈಗ ಅದು ನಡೆಯುತ್ತಿರುವ ಬನವಾಸಿಯಿಂದ ಗದಗ ಜಿಲ್ಲೆಯ ಅಣ್ಣಿಗೇರಿಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸುವುದು ಅವುಗಳಲ್ಲಿ ಒಂದು. ಆದರೆ ಈ ನಿರ್ಣಯವನ್ನು ಮಂಡಿಸುವ ಮುನ್ನ ಕಸಾಪ ಕಿಂಚಿತ್ ಯೋಚನೆಯನ್ನೂ ಮಾಡಿಲ್ಲವೆಂದೇ ಭಾವಿಸುವಷ್ಟು ಅಪ್ರಬುದ್ಧ ನಿರ್ಣಯ ಅದು.   ಅಣ್ಣಿಗೇರಿ ಪಂಪನ ಜನ್ಮಸ್ಥಳ. ಬನವಾಸಿ ಆದಿಕವಿಯ ಕರ್ಮಭೂಮಿ. ಪಂಪ ಭಾರತ ರಚನೆಯಾದುದು, ಪಂಪ ನಾಡೋಜ ಎನಿಸಿದ್ದು ಹೀಗೆ ಅನೇಕ ಮಹತ್ವಗಳಿಗೆ ಬನವಾಸಿ ಮಣ್ಣು ಸಾಕ್ಷಿಯಾಗಿದೆ. ಅಣ್ಣಿಗೇರಿಯಲ್ಲಿ ಪಂಪನ ಹೆಸರನ್ನು ಚಿರಸ್ಥಾಯಿಗೊಳಿಸುವುದಕ್ಕೆ ಅಗತ್ಯವಿರುವ ಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ತರಲು ಅವಕಾಶವಿದೆ. ಅದನ್ನು ಯಾರೂ ವಿರೋಧಿಸಲಾರರು. ಆ ನಿಟ್ಟಿನಲ್ಲಿ ಯೋಚಿಸುವ ಬದಲಿಗೆ  ‘ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ’ ಎಂದ ಪಂಪನ ಆ ಪರಿಸರದ ಅಂತರಾಳದ ಪ್ರೀತಿಗೇ ಅಂಕುಶ ಹಾಕುವ ನಿರ್ಣಯಕ್ಕೆ ಕಸಾಪ ಸಮ್ಮೇಳನ ಮುಂದಾಗಬಾರದಾಗಿತ್ತು.

ಸರ್ಕಾರಿ ಕೃಪಾಪೋಷಿತ ಉತ್ಸವವಾಗುವುದಕ್ಕೆ ಪೂರ್ವದಲ್ಲೇ ಕದಂಬೋತ್ಸವ ಕೂಡಾ  ಜನರಿಂದ ಜನರಿಗಾಗಿ ಜನರೇ ನಡೆಸುವ ಉತ್ಸವವಾಗಿತ್ತು.ಬನವಾಸಿ, ಶಿರ್ಸಿ ಹಾಗೂ ಸುತ್ತಮುತ್ತಲ ಭಾಗದ ನಾಗರಿಕರು ಪತ್ರಕರ್ತ ಗೋಪಾಲಕೃಷ್ಣ ಆನವಟ್ಟಿ ನೇತೃತ್ವದಲ್ಲಿ ಒಂದಾಗಿ ಕದಂಬೋತ್ಸವ ಆಚರಿಸುತ್ತ ಮಹಾಕವಿಯನ್ನು ದೊಡ್ಡರೀತಿಯಲ್ಲೇ ನೆನಪು ಮಾಡಿಕೊಂಡು ಸಂಭ್ರಮಿಸುವ ಕಾರ್ಯಕ್ರಮ ಸಂಘಟಿಸುತ್ತಿದ್ದರು. ನಂತರದಲ್ಲಿ 1992ರಿಂದ ಸರ್ಕಾರದ ಕೈಗೆ ಅದು ಬಂದುದು, ಪಂಪ ಪ್ರಶಸ್ತಿ ಸ್ಥಾಪನೆಯಾಗಿ ನಾಡಿನ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿ ರೂಪುಗೊಂಡಿದ್ದು ಕಳೆದ ಒಂದೂವರೆ ಎರಡು ದಶಕದ ಇತಿಹಾಸ.

ಇಷ್ಟೆಲ್ಲ ಹಿನ್ನೆಲೆ ಕಸಾಪದ ಸೂತ್ರಧಾರರಿಗೆ ಗೊತ್ತಿಲ್ಲ ಎಂದೇನೂ ಅಲ್ಲ. ಕಸಾಪ ಕಾರ್ಯಕಾರಿಯಲ್ಲಿ ಯಾರೇ ಈ ವಿಷಯವನ್ನು ಪ್ರಸ್ತಾಪಿಸಲಿ, ಅವರ ಅವಿವೇಕಿತನದ ಸಲಹೆಯನ್ನು ಕಸಾಪ ಮಾನ್ಯ ಮಾಡಬೇಕಾಗಿರಲಿಲ್ಲ. ಚರ್ಚೆಯ ಸಮಯದಲ್ಲಿ ಇದನ್ನು ಸೂಕ್ತ ರೀತಿಯಲ್ಲಿ ಪರಾಮರ್ಶೆಗೆ ಒಳಪಡಿಸದೆ ಕೈಗೊಂಡ ಎಡವಟ್ಟಿನ ಈ ನಿರ್ಣಯವನ್ನು ಅಪ್ರಬುದ್ಧ ಎನ್ನದೆ ಇನ್ನೇನೆಂದು ಕರೆಯೋಣ...?ಬೆಂಗಳೂರು ಸಮ್ಮೇಳನ ಈ ನಿರ್ಣಯ ಕೈಗೊಂಡ ಸಂದರ್ಭದಲ್ಲಿ ಪಂಪ ಪ್ರಶಸ್ತಿ ಪುರಸ್ಕೃತ ಕೆಲವಾದರೂ ಸಾಹಿತಿಗಳು ಅಲ್ಲಿದ್ದರೂ ಅವರಿಗೆ ಉಸಿರೆತ್ತಲೂ ಎಡೆ ಸಿಗದಂತೆ ನಿರ್ಣಯ ಅಂಗೀಕಾರವಾಗಿದ್ದು ಮತ್ತು ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರು ಸುಮ್ಮನೇ ಕುಳಿತ್ತಿದ್ದದ್ದು ಚೋದ್ಯವೇ ಸರಿ.ಒಂದೇ ಸಮಾಧಾನದ ಸಂಗತಿ ಎಂದರೆ ಸಾಹಿತ್ಯ ಸಮ್ಮೇಳನ ಅಂಗೀಕರಿಸುವ ನಿರ್ಣಯಗಳನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸುವುದಿಲ್ಲ ಎನ್ನುವುದು. ಕಸಾಪದ ಕಪಾಟಿನಲ್ಲಿರುವ ನೂರಾರು ನಿರ್ಣಯಗಳ ಸಾಲಿಗೆ ಈ ನಿರ್ಣಯವೂ ಸೇರಲಿದೆ ಎನ್ನುವುದು ಸಂತೋಷದ ಸಂಗತಿ, ಸೇರಲಿ ಎನ್ನುವುದು ಪಂಪ ಹಾಗೂ ಆತನ ಪಾದದೂಳಿಗೆ ಬಿದ್ದ ಬನವಾಸಿಯ ಅಭಿಮಾನಿಗಳೆಲ್ಲರ ಹಾರೈಕೆ.-

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry