ಪಕ್ಕದ ಮನೆ ವ್ಯಕ್ತಿ ಮೇಲೆ ಪೊಲೀಸ್ ಹಲ್ಲೆ

7

ಪಕ್ಕದ ಮನೆ ವ್ಯಕ್ತಿ ಮೇಲೆ ಪೊಲೀಸ್ ಹಲ್ಲೆ

Published:
Updated:

ಬೆಂಗಳೂರು: ನಗರ ವಿಶೇಷ ಪೊಲೀಸ್ ಘಟಕದ ಎಸ್‌ಐ ವೀರಕೆಂಪಯ್ಯ ಅವರು ಕಾರು ನಿಲುಗಡೆ ವಿಷಯವಾಗಿ ಪಕ್ಕದ ಮನೆಯ ವ್ಯಕ್ತಿಯೊಬ್ಬರ ಜತೆ ಜಗಳವಾಡಿ ಹಲ್ಲೆ ನಡೆಸಿರುವ ಘಟನೆ ಕಾಮಾಕ್ಷಿಪಾಳ್ಯ ಬಳಿಯ ಮೀನಾಕ್ಷಿನಗರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.



ಈ ಸಂಬಂಧ ಪಳನಿ ಎಂಬುವರು ದೂರು ಕೊಟ್ಟಿದ್ದಾರೆ. ಪಳನಿ ಮತ್ತು ವೀರಕೆಂಪಯ್ಯ, ಮೀನಾಕ್ಷಿನಗರದ ಅಕ್ಕಪಕ್ಕದ ಮನೆಗಳಲ್ಲಿ ವಾಸವಾಗಿದ್ದಾರೆ. ಪಳನಿ ಅವರ ಮನೆಗೆ ಬಂದಿದ್ದ ಶ್ರೀನಾಥ್ ಎಂಬುವರು ವೀರಕೆಂಪಯ್ಯ ಅವರ ಮನೆಯ ಕಾಂಪೌಂಡ್‌ನ ಮುಂದೆ ವಾಹನ ನಿಲ್ಲಿಸಿದ್ದರು. ಇದೇ ವೇಳೆಗೆ ಮನೆಗೆ ಬಂದ ವೀರಕೆಂಪಯ್ಯ, ಕಾರು ನಿಲುಗಡೆ ವಿಷಯವಾಗಿ ಪಳನಿ ಮತ್ತು ಶ್ರೀನಾಥ್ ಜತೆ ವಾಗ್ವಾದ ನಡೆಸಿದರು. ಈ ಹಂತದಲ್ಲಿ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದು ಎಸ್‌ಐ, ಅವರಿಬ್ಬರ ಮೇಲೂ ಮರದ ತುಂಡಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.



ಘಟನೆ ಸಂಬಂಧ ಹಲ್ಲೆ ಹಾಗೂ ಪ್ರಾಣ ಬೆದರಿಕೆ ಆರೋಪದ ಮೇಲೆ ಎಸ್‌ಐ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಲ್ಲೆಗೊಳಗಾಗಿರುವ ಪಳನಿ ಮತ್ತು ಶ್ರೀನಾಥ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ಹೇಳಿದ್ದಾರೆ.



ಆತ್ಮಹತ್ಯೆ

ನಗರದ ನಂದಿನಿಲೇಔಟ್ ಮತ್ತು ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.



ಕಾರು ಚಾಲಕರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂದಿನಿ ಲೇಔಟ್ ಸಮೀಪದ ಕಂಠೀರವ ನಗರದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.



ಗೌರಮ್ಮ ಎಂಬುವರ ಪುತ್ರ ಪ್ರಕಾಶ್ (22) ಆತ್ಮಹತ್ಯೆ ಮಾಡಿಕೊಂಡವರು. ಕಾರು ಚಾಲಕರಾಗಿದ್ದ ಅವರು ಲಗ್ಗೆರೆಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಆದರೆ, ಒಂದು ವಾರದ ಹಿಂದೆಯಷ್ಟೇ ಬೇರೊಬ್ಬ ಯುವಕನ ಜತೆ ಆ ಯುವತಿಯ ಮದುವೆಯಾಗಿತ್ತು. ಇದರಿಂದ ಬೇಸರಗೊಂಡಿದ್ದ ಪ್ರಕಾಶ್, ಕುಟುಂಬ ಸದಸ್ಯರೆಲ್ಲ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.



ಪ್ರೇಮ ವೈಫಲ್ಯದಿಂದ ಮನನೊಂದು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗೌರಮ್ಮ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂದಿನಿ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ.



ಮತ್ತೊಂದು ಪ್ರಕರಣ

ಕಾಮಾಕ್ಷಿಪಾಳ್ಯ ಬಳಿಯ ಗಜಾನನ ನಗರ ನಿವಾಸಿ ಶ್ರೀಧರ್ ಎಂಬುವರು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಅವರು, ಪತ್ನಿ ಶಶಿಕಲಾ ಜತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶಶಿಕಲಾ ಶಿಕ್ಷಕಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.



ಪತ್ನಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಶ್ರೀಧರ್ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.



ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry