ಪಕ್ಷಗಳಲ್ಲಿ ನಡೆದಿದೆ ಸೋಲಿನ ಆತ್ಮಾವಲೋಕನ

7

ಪಕ್ಷಗಳಲ್ಲಿ ನಡೆದಿದೆ ಸೋಲಿನ ಆತ್ಮಾವಲೋಕನ

Published:
Updated:

ತುಮಕೂರು: ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರದ ಗದ್ದುಗೆ ಏರುವ ಜತೆಗೆ ಆರು ತಾಲ್ಲೂಕು ಪಂಚಾಯಿತಿ ಆಡಳಿತ ಹಿಡಿದ ಸಂಭ್ರಮದಲ್ಲಿ ಜೆಡಿಎಸ್ ತೇಲುತ್ತಿದ್ದರೆ, ಪ್ರಪಾತಕ್ಕೆ ಕುಸಿದ ಕಾರಣಗಳಿಗಾಗಿ ಕಾಂಗ್ರೆಸ್ ಹುಡುಕಾಟ ನಡೆಸುತ್ತಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡು ಬೀಗುತ್ತಿದೆ. ಇನ್ನಷ್ಟು ಸೀಟು ಗೆಲ್ಲದಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಿವೆ.ಗೆಲ್ಲಲೇಬೇಕೆಂಬ ಛಲವುಳ್ಳವರು ಕೇವಲ ಒಂದು ಸೋಲಿನಿಂದ ಖಂಡಿತ ಪಾಠ ಕಲಿಯುತ್ತಾರೆ. ಆದರೆ, ಕಾಂಗ್ರೆಸ್ ಇತ್ತೀಚಿನ ವರ್ಷಗಳಲ್ಲಿ ಚುನಾವಣೆಯಿಂದ ಚುನಾವಣೆಗೆ ಪ್ರಪಾತಕ್ಕೆ ಕುಸಿಯುತ್ತಿದೆ. ಆದರೂ ಪಾಠ ಕಲಿಯುತ್ತಿಲ್ಲ. ಆಗಿರುವ ಲೋಪವನ್ನು ಹೇಗೆ ಸರಿಪಡಿಸಿಕೊಳ್ಳುವುದು? ಎನ್ನುವ ಆತ್ಮಾವಲೋಕನವೂ ಪಕ್ಷದ ‘ಚಿಂತಕರ ಚಾವಡಿ’ಯಲ್ಲಿ ನಡೆದಂತೆ ಕಾಣುತ್ತಿಲ್ಲ.ಹೀಗಾಗಿ ರಾಷ್ಟ್ರೀಯ ಪಕ್ಷವೆಂಬ ಹಣೆಪಟ್ಟಿಯುಳ್ಳ ಪಕ್ಷ ಜಿಲ್ಲೆಯಲ್ಲಿ ಕ್ಷೀಣಿಸುತ್ತಿದೆ. ಕಳೆದ ವಿಧಾನಸಭೆ ಚುನಾವಣೆ, ತುರುವೇಕೆ, ಮಧುಗಿರಿ ಉಪ ಚುನಾವಣೆ, ಲೋಕಸಭಾ ಚುನಾವಣೆ, ವಿಧಾನ ಪರಿಷತ್ ಚುನಾವಣೆ, ಗ್ರಾ.ಪಂ.ಚುನಾವಣೆಯಲ್ಲೂ ದಯನೀಯ ಸೋಲು ಕಂಡರೂ ಪಕ್ಷದ ಜಿಲ್ಲಾ ಅಧ್ಯಕ್ಷರು ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುವ ಮಾತು ಆಡಿಲ್ಲ. ಜತೆಗೆ ಪಕ್ಷದೊಳಗೆ ರಾಜೀನಾಮೆ ಕೇಳುವ ಮಂದಿಯೂ ಇಲ್ಲ ಎಂದು ವಿಷಾದಿಸುತ್ತಾರೆ ಕಾಂಗ್ರೆಸ್‌ನ ಯುವ ಮುಖಂಡರೊಬ್ಬರು.ಕಾಂಗ್ರೆಸ್ ಮಧುಗಿರಿಯಲ್ಲಿ 4 ಜಿ.ಪಂ. ಸ್ಥಾನ, 18 ತಾ.ಪಂ. ಸ್ಥಾನಗಳನ್ನು ಪಕ್ಷದ ವರ್ಚಸ್ಸಿನಿಂದ ಗೆದ್ದುಕೊಂಡಿದೆ ಎನ್ನುವುದಕ್ಕಿಂತ ಮಾಜಿ ಶಾಸಕ ಕೆ.ಎನ್.ರಾಜಣ್ಣ ವೈಯಕ್ತಿಕ ವರ್ಚಸ್ಸು, ‘ಶ್ರಮ’ಕ್ಕೆ ಸಿಕ್ಕಿರುವ ಪ್ರತಿಫಲ ಎಂದು ವಿಶ್ಲೇಷಿಸಲಾಗುತ್ತಿದೆ. ಮಧುಗಿರಿ ಹೊರತುಪಡಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸಾಧನೆ ಏನು? ಎನ್ನುವ ನಿಷ್ಠಾವಂತ ಕಾರ್ಯಕರ್ತರ ಪ್ರಶ್ನೆಗೆ ಪಕ್ಷದ ಜಿಲ್ಲೆಯ ಘಟಾನುಘಟಿ ನಾಯಕರು ಏನೆಂದು ಉತ್ತರಿಸಿಯಾರು?ಪಾವಗಡ ತಾಲ್ಲೂಕಿನಲ್ಲಿ ಟಿಕೆಟ್ ಹಂಚುವಾಗಲೇ ಮಾಡಿದ ಎಡವಟ್ಟುಗಳನ್ನು ಪಕ್ಷದ ಪ್ರಮುಖ ನಾಯಕರೊಬ್ಬರ ಗಮನಕ್ಕೆ ತಂದಾಗ ‘ಹೋದರೆ ಹೋಗಲಿ ಬಿಡಿ. ಕೇವಲ ಒಂದು ವಿಧಾನಸಭಾ ಕ್ಷೇತ್ರವಷ್ಟೆ’ ಎನ್ನುವ ಮಾತು ಆಡಿದ್ದರೆನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಅವರ ಹುಂಬತನಕ್ಕೆ ಪಾವಗಡವಷ್ಟೇ ಅಲ್ಲ, ಮಧುಗಿರಿ ಹೊರತುಪಡಿಸಿ ಜಿಲ್ಲೆಯ ಎಲ್ಲೆಡೆ ಕಾಂಗ್ರೆಸ್ ಸಾಮ್ರಾಜ್ಯ ಕೊಚ್ಚಿಹೋಗಿದೆ.ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರು ತಮ್ಮ ತಪ್ಪು ಅರಿತುಕೊಳ್ಳದೆ ಮತದಾರರತ್ತ ಬೆರಳು ತೋರುತ್ತಿದ್ದಾರೆ. ಪಕ್ಷದೊಳಗೆ ನಿಷ್ಠಾವಂತ ಕಾರ್ಯಕರ್ತರನ್ನು ಬೆಳೆಸದೆ, ಗುರುತಿಸದೆ ಈಗ ‘ಮತದಾರರು ಕೈಹಿಡಿಯಲಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಹಣದ ಮುಂದೆ ನಮ್ಮ ತತ್ವ ಸಿದ್ಧಾಂತ ನಡೆಯಲಿಲ್ಲ’ ಎಂದು ಗೊಣಗಿದರೆ ಅದರಿಂದ ಫಲವೇನು? ಎನ್ನುವ ಮಾತು ಕೂಡ ಪಕ್ಷದ ಆಂತರಿಕ ವಲಯದಲ್ಲಿ ಚರ್ಚಿತವಾಗುತ್ತಿದೆ.ಕಾಂಗ್ರೆಸ್ ಟಿಕೆಟ್ ನೀಡಿದ್ದ ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಜಿ.ಪಂ. ಅಭ್ಯರ್ಥಿ, ಇಡಗೂರು ತಾ.ಪಂ. ಅಭ್ಯರ್ಥಿ ಚುನಾವಣೆಗೂ ಮೊದಲೇ ಜೆಡಿಎಸ್ ಪಾಳೆಯಕ್ಕೆ ಪಲಾಯನ ಮಾಡಿದ್ದರು. ಆಗಲೂ ಕಾಂಗ್ರೆಸ್ ಎಚ್ಚೆತ್ತುಕೊಳ್ಳಲಿಲ್ಲ; ತನ್ನ ಅಭ್ಯರ್ಥಿಗಳನ್ನು ಜೆಡಿಎಸ್ ಹೈಜಾಕ್ ಮಾಡಿದೆ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷರು ಪತ್ರಿಕಾ ಹೇಳಿಕೆ ನೀಡಿ ಕೈತೊಳೆದುಕೊಂಡರು. ಗೆಲ್ಲುವ ಸಾಮರ್ಥ್ಯ ಇಲ್ಲದವರಿಗೂ ಬಲವಂತದಿಂದ ಟಿಕೆಟ್ ನೀಡಿ ‘ಲೆಕ್ಕ’ಕ್ಕೆ ಮಾತ್ರ ಕಣಕ್ಕಿಳಿಸಿದ್ದರು. ಗೆಲ್ಲುವ ಹುರಿಯಾಳುಗಳನ್ನು ಗುರುತಿಸಲಿಲ್ಲ ಎನ್ನುವ ನೋವಿನ ನುಡಿಗಳು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಂದಲೂ ಕೇಳಿಬರುತ್ತಿವೆ. ‘ಊರೆಲ್ಲ ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತಾಗುವ ಮುನ್ನ ಕಾಂಗ್ರೆಸ್ ಇನ್ನಾದರೂ ಪಾಠ ಕಲಿಯಬೇಕು ಎನ್ನುವುದು ಯುವ ಕಾಂಗ್ರೆಸಿಗರ ಆಶಯ.ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ, ಬುಕ್ಕಾಪಟ್ಟಣ, ತುಮಕೂರು ಗ್ರಾಮಾಂತರ ಕ್ಷೇತ್ರದ ಗೂಳೂರು, ಊರುಕೆರೆ, ಕೊರಟಗೆರೆ ತಾಲ್ಲೂಕಿನ ತೋವಿನಕೆರೆ, ಕುಣಿಗಲ್ ತಾಲ್ಲೂಕಿನ ಎಡೆಯೂರು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಇನ್ನೂ ಆರು ಸ್ಥಾನಗಳನ್ನು ಜೆಡಿಎಸ್ ಕಳೆದುಕೊಂಡಿದೆ. ಜತೆಗೆ ಯಾವುದೇ ಪೂರ್ವ ತಯಾರಿ ಇಲ್ಲದೆ ಚುನಾವಣೆಗೆ ಇಳಿಯಲಾಗಿತ್ತು. ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರೆ ಕನಿಷ್ಠ 40 ಸ್ಥಾನಗಳನ್ನು ಗೆಲ್ಲುವ ಅವಕಾಶ ಇತ್ತು ಎಂಬುದು ಜೆಡಿಎಸ್ ಮಾಜಿ ಶಾಸಕರೊಬ್ಬರ ಲೆಕ್ಕಾಚಾರ.‘ಈ ಬಾರಿ ಬಿಜೆಪಿಗೆ ಕನಿಷ್ಠ 20ರಿಂದ 22 ಜಿ.ಪಂ. ಸ್ಥಾನ ಗೆಲ್ಲುವ ಅವಕಾಶ ಇತ್ತು. ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿಲ್ಲ. ಟಿಕೆಟ್ ಹಂಚುವಾಗಲೇ ಎಡವಿದರು. ನಾವು ಸೂಚಿಸಿದವರಿಗೆ ಟಿಕೆಟ್ ನೀಡಲೇ ಇಲ್ಲ. ಇಡೀ ಜಿಲ್ಲೆಯಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಗೆ ಪಕ್ಷದ ರಾಜ್ಯ ಕಾರ್ಯದರ್ಶಿ ಕಾರಣ. ತುರುವೇಕೆರೆ, ಗುಬ್ಬಿಯಲ್ಲಿ ಆಗಿರುವ ಹಿನ್ನಡೆಗೂ ಅಲ್ಲಿನ ಸ್ಥಳೀಯ ನಾಯಕರಿಬ್ಬರು ಕಾರಣ. ಒಟ್ಟಾರೆ ಪಕ್ಷದ ಜಿಲ್ಲಾ ನಾಯಕರ ನಡುವೆ ಸಹಕಾರ ಮತ್ತು ಸಮನ್ವಯತೆ ಮೂಡಿ ಬರಲಿಲ್ಲ. ಹೀಗಾಗಿ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು’ ಎಂದು ಸಂಸದ ಜಿ.ಎಸ್.ಬಸವರಾಜು ವಿಷಾದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry