ಪಕ್ಷಗಳ ತೆರಿಗೆರಹಿತ ಆದಾಯ 2,490 ಕೋಟಿ

7

ಪಕ್ಷಗಳ ತೆರಿಗೆರಹಿತ ಆದಾಯ 2,490 ಕೋಟಿ

Published:
Updated:

ನವದೆಹಲಿ (ಪಿಟಿಐ): ದೇಶದ ಹತ್ತು ಪ್ರಮುಖ ರಾಜಕೀಯ ಪಕ್ಷಗಳು ಐದು ವರ್ಷಗಳ ಅವಧಿಯಲ್ಲಿ ಪಡೆದ ತೆರಿಗೆ ವಿನಾಯಿತಿ ಆದಾಯದ ಮೊತ್ತ ಬರೊಬ್ಬರಿ 2,490 ಕೋಟಿ ರೂಪಾಯಿಗಳು. ಇದರಲ್ಲಿ ಸಿಂಹಪಾಲು (ಶೇ 80ಕ್ಕಿಂತ ಅಧಿಕ) ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷ ಬಿಜೆಪಿ ಪಡೆದಿವೆ.

ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ಮೂಲಕ ಆದಾಯ ತೆರಿಗೆ ಇಲಾಖೆ ಈ ವಿವರ ನೀಡಿದ್ದು ದೇಣಿಗೆ ಇಲ್ಲವೆ ರೂ 20,000ಕ್ಕಿಂತ ಕಡಿಮೆ ದೇಣಿಗೆ ನೀಡಿದ ವ್ಯಕ್ತಿಗಳ ಮಾಹಿತಿ ಇದರಲ್ಲಿ ಸೇರಿಸಲಾಗಿಲ್ಲ. 2007-08ರಿಂದ 2011-12ರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಗರಿಷ್ಠ ರೂ 1385.36 ಕೋಟಿ ತೆರಿಗೆ ವಿನಾಯಿತಿ ಆದಾಯ ಹೊಂದಿದ್ದರೆ ಹೆಚ್ಚುಕಡಿಮೆ ಈ ಮೊತ್ತದ ಅರ್ಧದಷ್ಟು ಅಂದರೆ ರೂ 682 ಕೋಟಿ ಆದಾಯ ಬಿಜೆಪಿಯದು ಎಂದು ತಿಳಿಸಲಾಗಿದೆ.

ಬಿಜೆಪಿ ಮಿತ್ರ ಪಕ್ಷ ಜೆಡಿಯು  (2008-09 ಹೊರತುಪಡಿಸಿ) ರೂ 15.51 ಕೋಟಿ, ಮಾಯಾವತಿ ನೇತೃತ್ವದ ಬಿಎಸ್‌ಪಿಯ ತೆರಿಗೆ ವಿನಾಯಿತಿ ಆದಾಯ 2007-08, 2008-09 ಹಾಗೂ 2011-12ರ ಹಣಕಾಸು ವರ್ಷಗಳಲ್ಲಿ ಒಟ್ಟು ರೂ 147.18 ಕೋಟಿ. 2009-10ರಲ್ಲಿ ಅಪೂರ್ಣ ತೆರಿಗೆ ಮಾಹಿತಿ ಸಲ್ಲಿಸಲಾಗಿದ್ದರೆ, 2010-11ರಲ್ಲಿ ಯಾವುದೇ ರೀತಿಯ ತೆರಿಗೆ ವಿನಾಯಿತಿ ಸಿಕ್ಕಿರಲಿಲ್ಲ.

2007ರಿಂದ 2012ರ ಅವಧಿಯಲ್ಲಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಹೊಂದಿದ ತೆರಿಗೆ ವಿನಾಯಿತಿ ಆದಾಯದ ಮೊತ್ತ ರೂ 141.34 ಕೋಟಿ ಆಗಿದ್ದರೆ, ಸಿಪಿಎಂ ಇದೇ ಅವಧಿಯಲ್ಲಿ ಹೊಂದಿದ ತೆರಿಗೆ ವಿನಾಯಿತಿ ಆದಾಯ ರೂ 85.61 ಕೋಟಿ. 2008-09ರ ಸಾಲಿನಲ್ಲಿ ಸಿಪಿಎಂಗೆ ಇಂತಹ ಆದಾಯ ಶೂನ್ಯವಾಗಿತ್ತು. ಮತ್ತೊಂದು ಎಡಪಕ್ಷ ಸಿಪಿಐ 2008-09 ಹಾಗೂ 2009-10ರ ಅವಧಿಯಲ್ಲಿ ಹೊಂದಿದ್ದ ತೆರಿಗೆ ರಹಿತ ಆದಾಯದ ಮೊತ್ತ ರೂ 28.47 ಕೋಟಿ.

2009 ಹಾಗೂ 2010ರ ಹಣಕಾಸು ವರ್ಷಗಳಲ್ಲಿ ಜೆಡಿಎಸ್‌ನ ತೆರಿಗೆರಹಿತ ಆದಾಯ ರೂ 7.16 ಕೋಟಿಯಾಗಿದ್ದರೆ, ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ 2007ರಿಂದ 2011ರ ಹಣಕಾಸು ವರ್ಷದಲ್ಲಿ ಹೊಂದಿದ್ದ ತೆರಿಗೆ ರಹಿತ ಆದಾಯ ರೂ 2.55 ಕೋಟಿ ಮಾತ್ರ. ಲಾಲು ಪ್ರಸಾದ್ ಅವರ ಆರ್‌ಜೆಡಿ 2008ರಿಂದ 2011ರ ತೆರಿಗೆ ರಹಿತ ಆದಾಯ ದಾಖಲಾದದ್ದು ರೂ 2.85 ಕೋಟಿ. ಹಿಸ್ಸಾರ್‌ನ ಆರ್‌ಟಿಐ ಕಾರ‌್ಯಕರ್ತ ರಮೇಶ್ ವರ್ಮಾ ಆದಾಯ ತೆರಿಗೆ ಇಲಾಖೆಯಿಂದ ಪಡೆದ ಉತ್ತರದಲ್ಲಿ ಈ ಮಾಹಿತಿ ನೀಡಲಾಗಿದೆ.

ಆದಾಯ ತೆರಿಗೆ ಇಲಾಖೆ ಕಾಯ್ದೆ 1961ರ ಪರಿಚ್ಛೇದ 13ಎ ಅನ್ವಯ ರಾಜಕೀಯ ಪಕ್ಷಗಳ ಆದಾಯದ ಮೇಲೆ ವಿನಾಯಿತಿ ನೀಡಲಾಗುತ್ತಿದೆ. ರೂ 20,000ಕ್ಕಿಂತ ಹೆಚ್ಚಿನ ಆದಾಯ ಇಲ್ಲವೆ ದೇಣಿಗೆ ಸ್ವೀಕರಿಸಿದಲ್ಲಿ ರಾಜಕೀಯ ಪಕ್ಷಗಳು ಈ ಕುರಿತು ಲೆಕ್ಕ ಇಡಬೇಕಾಗುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry