ಸೋಮವಾರ, ಜೂನ್ 14, 2021
27 °C

ಪಕ್ಷದ ನಿರ್ಧಾರಕ್ಕೆ ಬದ್ಧ: ವಿಜಯಶಂಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಕಲಗೂಡು: ಪಕ್ಷದ ಸೂಚನೆಗೆ ತಲೆಬಾಗಿ ನಾನು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ತಿಳಿಸಿದರು.ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಶಿಸ್ತಿನ ಕಾರ್ಯ­ಕರ್ತನಾದ ನನಗೆ ಪಕ್ಷ ಎಲ್ಲ ಅಧಿಕಾರಗಳನ್ನು ನೀಡಿದೆ. ಈಗ ಪಕ್ಷದ ಅಣತಿಯಂತೆ ಹಾಸನ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಂದಿದ್ದು, ಸ್ಥಳೀಯ ಹಾಗೂ ರಾಷ್ಟ್ರದ ಸಮಸ್ಯೆ ಎರಡನ್ನೂ ಜನರ ಮುಂದೆ ಇಟ್ಟು ಮತ ಕೇಳಲಾಗುವುದು. ಸ್ಥಳೀಯ ಸಮಸ್ಯೆಗಳ ಕುರಿತಂತೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿ ತಿಳಿಸಿದರು.ಪಕ್ಷದ ಎಲ್ಲ ಕಾರ್ಯಕರ್ತರ ಬೆಂಬಲ ದೊರೆತಿದೆ. ಹಿರಿಯ ಮುಖಂಡ ಬಿ.ಬಿ. ಶಿವಪ್ಪ ಅವರು ಅಸಮಾಧಾನಗೊಂಡಿರುವುದು ನಿಜ. ರಾಜ್ಯ ನಾಯಕರು ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಿದ್ದಾರೆ, ಈ ಬಗ್ಗೆ ಯಾವುದೇ ಊಹಾಪೋಹಗಳು ಅನಗತ್ಯ ಎಂದರು.ಬಲಿಪಶು ಅಲ್ಲ: ಮೈಸೂರಿನಲ್ಲಿ ಗೆಲ್ಲುವ ಅವಕಾಶ ಇದ್ದ ನಿಮ್ಮನ್ನು ಹಾಸನದಿಂದ ಸ್ಪರ್ಧೆಗೆ ಇಳಿಸಿ ಬಲಿಪಶು ಮಾಡಲಾಗಿದೆಯೆ? ಹೀಗಾಗಿ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳುತ್ತಿ­ದ್ದೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಲೋಕಸಭೆಗೆ ಇದು ನನ್ನ ಕೊನೆಯ ಚುನಾವಣೆ. ರಾಜ್ಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಇಂದಿರಾ ಗಾಂಧಿ, ವಾಜಪೇಯಿ ಅಂತಹವರೆ ಸೋಲು ಅನುಭವಿಸಿದ್ದಾರೆ. ನಾನು ಬಲಿಪಶು ಎಂಬುದರಲ್ಲಿ ಯಾವುದೇ ಹುರುಳಿಲ್ಲ ಎಂದರು.‘ಬಿಜೆಪಿಯಿಂದ ಭ್ರಷ್ಟಾಚಾರ ನಿರ್ಮೂಲನೆ’

ಕಳೆದ ಹತ್ತು ವರ್ಷಗಳ ಕಾಲ ದೇಶದ ಚುಕ್ಕಾಣಿ ಹಿಡಿದಿದ್ದ ಯುಪಿಎ ಸರ್ಕಾರದ ಹಗರಣಗಳಿಂದ ಜನರು ಬೇಸತ್ತಿದ್ದು, ಬಿಜೆಪಿಯಿಂದ ಮಾತ್ರ ಭ್ರಷ್ಟಾಚಾರ ರಹಿತ ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯ  ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಎಚ್‌. ವಿಜಯಶಂಕರ್ ತಿಳಿಸಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ತೃತೀಯ ರಂಗ ಅವಕಾಶವಾದಿ ರಾಜಕಾರಣದ ಕೂಟ. ಇದಕ್ಕೆ ಯಾವುದೆೇ ತತ್ವ ಸಿದ್ಧಾಂತ, ತಾತ್ವಿಕ ಹಿನ್ನೆಲೆ ಇಲ್ಲ. ತೃತೀಯ ರಂಗದ ಹೆಸರಿನಲ್ಲಿ ಕೆಲವು ಪಕ್ಷಗಳು ಒಗ್ಗೂಡಿ ಅಧಿಕಾರ ಹಿಡಿದರೂ ಒಮ್ಮೆಯೂ ಅವಧಿ ಪೂರ್ಣ ಗೊಳಿಸಲು ಸಾಧ್ಯವಾಗಿಲ್ಲ ಎಂದರು.ದೇಶದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸುತ್ತಿದೆ, ಜನತೆ ಸುಭದ್ರ ಸರ್ಕಾರದ  ನಿರೀಕ್ಷೆಯ ಲ್ಲಿದ್ದಾರೆ. ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪಕ್ಷದ ಮುಖಂಡ ಮರಡಿ ಸೋಮಶೇಖರ್‌ ಮಾತನಾಡಿ, ತಾಲ್ಲೂಕಿನಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ದಶಕದಿಂದ ದುರಸ್ತಿ ಕಂಡಿಲ್ಲ. ಜನರು ಹಿಡಿಶಾಪ ಹಾಕುತ್ತಿದ್ದಾರೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಸಮೀಪಿಸುತ್ತಾ ಬಂದರೂ ಯಾವುದೆೇ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಕ್ಕೆ ಬಂದಿಲ್ಲ. ತಾಲ್ಲೂಕನ್ನು ಅಭಿವೃದ್ಧಿ­ಗೊಳಿಸಲು ಸಾಧ್ಯವಾಗದವರಿಂದ ಜಿಲ್ಲೆಯನ್ನು ಅಭಿವೃದ್ಧಿಗೊಳಿಸಲು ಸಾಧ್ಯವೆ? ಎಂದು ಪ್ರಶ್ನಿಸಿದರು.ಲೋಕಸಭಾ ಸದಸ್ಯರಿಗೆ ಹತ್ತು ವರ್ಷಗಳಿಂದ ಹಾಸನ– ಪಿರಿಯಾಪಟ್ಟಣ ರಸ್ತೆಯನ್ನು ದುರಸ್ತಿ­ಪಡಿಸಲು ಸಾಧ್ಯವಾಗದಷ್ಟು ತುರ್ತು ಕಾರ್ಯ­ಗಳಿದ್ದವೆೇ ಎಂದು ಟೀಕಿಸಿದರು.ವಿಧಾನ ಪರಿಷತ್‌ ಮಾಜಿ ಸದಸ್ಯ ಬಿ.ಆರ್‌. ಗುರುದೇವ್‌, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ರೇಣುಕುಮಾರ್‌, ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಟಿ. ಕೇಶವೇಗೌಡ, ಪಕ್ಷದ ಹಾಸನ ಲೋಕಸಭಾ ಉಸ್ತುವಾರಿ ಅಶ್ವಥ್‌ ನಾರಾಯಣ್, ಪಕ್ಷದ ಮುಖಂಡ ರಾಮಣ್ಣ ಮಾತನಾಡಿದರು. ಮುಖಂಡರಾದ ನವಿಲೆ ಅಣ್ಣಪ್ಪ, ಎಂ.ಕೆ. ನಟರಾಜ್‌, ಚನ್ನಕೇಶವ, ಎಂ.ಎಸ್‌. ಕೃಷ್ಣೇಗೌಡ ಸಭೆಯಲ್ಲಿ ಇದ್ದರು.ಹೊಳೆನರಸೀಪುರ ವರದಿ: ಈ ಬಾರಿ ಚುನಾವಣೆ­ಯಲ್ಲಿ ಮತದಾರರು ಜಾತಿ ರಾಜಕೀಯ­ ಮರೆತು ನೀತಿ ರಾಜಕೀಯಕ್ಕೆ ಆದ್ಯತೆ ನೀಡುತ್ತಾರೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ­ದಲ್ಲಿ ಶನಿವಾರ ಪೂಜೆ ಸಲ್ಲಿಸಲು ಆಗಮಿಸಿದ್ದ ವಿಜಯಶಂಕರ್‌ ಸುದ್ದಿಗಾರರೊಂದಿಗೆ ಮಾತನಾಡಿದರು.ನನಗೆ ಚುನಾವಣೆ ಹೊಸದಲ್ಲ. ಎರಡು ವಿಧಾನಸಭೆ, ನಾಲ್ಕು ಲೋಕಸಭೆ ಚುನಾವಣೆ­ಗಳಲ್ಲಿ ಸ್ಪರ್ಧಿಸಿ ಎರಡು ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ್ದೇನೆ.ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದಾಗ ಮೈಸೂರು ಅರಸರನ್ನು ಸೋಲಿಸಿ ಜಯಗಳಿಸಿದ್ದೆ. ಇದೇ ರೀತಿ ಫಲಿತಾಂಶ ಈಗಲೂ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನೀವು ಮೈಸೂರಿನವರು ಹಾಸನದಲ್ಲಿ ಬಂದು ಚುನಾವಣೆಗೆ ಸ್ಪರ್ಧಿಸುತ್ತಿದ್ದೀರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ಹೈಕಮಾಂಡ್‌ ಸೂಚನೆಯನ್ನು ಪಾಲಿಸಿದ್ದೇನೆ ಎಂದರು.ರಾಷ್ಟ್ರಮಟ್ಟದ ವೇದಿಕೆಯಲ್ಲಿ ರಾಜ್ಯದ ಸಮಸ್ಯೆಗಳು ಬಂದಾಗ ನಿಮ್ಮ ನಿಲುವೇನು? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದ ವಿಷಯ ಬಂದಾಗ ದೇಶದ ಪರವಾಗಿ ಇರುತ್ತೇನೆ. ನಮ್ಮ ರಾಜ್ಯದ ನೆಲ, ಜಲ, ಭಾಷೆಯ ವಿಷಯ ಬಂದಾಗ ನಾನು ನಮ್ಮ ರಾಜ್ಯದ ಪರವಾಗಿಯೇ ಹೊರಾಟ ಮಾಡುತ್ತೇನೆ. ಇದರಲ್ಲಿ ಯಾವುದೇ ಗೊಂದಲ, ರಾಜಿ ಇಲ್ಲ ಎಂದು ದೃಢವಾಗಿ ನುಡಿದರು.ಹಾಸನ ಜಿಲ್ಲೆಯ ಸಮಸ್ಯೆಗಳ ಬಗ್ಗೆ ನಿಮಗೇನು ತಿಳಿದಿದೆ? ಅವುಗಳ ಪರಿಹಾರಕ್ಕೆ ನಿಮ್ಮ ಸೂತ್ರ ಏನು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯ ಸಮಸ್ಯೆಗಳ ಬಗ್ಗೆ ಈಗಾಗಲೇ ಅರಿತಿದ್ದೇನೆ. ಎಲ್ಲ ಸಮಸ್ಯೆಗಳನ್ನು ಪಟ್ಟಿ ಮಾಡಲು ತಿಳಿಸಿದ್ದೇನೆ. ಹಾಸನದಲ್ಲೇ ಲೋಕಸಭಾ ಕಚೇರಿ ತೆರೆದು ಆಗಾಗ ಭೇಟಿ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಹೇಳಿದರು.‘ಬಿಜೆಪಿಗೆ ಅಧಿಕಾರ’

ಸಕಲೇಶಪುರ ವರದಿ: ಜಿಲ್ಲೆಯ ಮತದಾರರು ಈ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದು, ಬಿಜೆಪಿಗೆ ಅಧಿಕಾರ ನೀಡುವುದು ಖಚಿತ ಎಂದು ಲೋಕಸಭಾ ಚುನಾವಣೆಯ ಬಿಜೆಪಿ ಘೋಷಿತ ಅಭ್ಯರ್ಥಿ ವಿಜಯಶಂಕರ್‌ ಹೇಳಿದರು.ಇಲ್ಲಿಯ ಓಂ ಮಂದಿರದಲ್ಲಿ ಶನಿವಾರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರಿಂದ ದೇಶದ ಅಭಿವೃದ್ಧಿಯ ನಿರೀಕ್ಷೆಯಲ್ಲಿರುವ ಯುವಕರು ಸೇರಿದಂತೆ ಪ್ರತಿಯೊಬ್ಬರೂ ಬಿಜೆಪಿಗೆ ಮತ ನೀಡಲು ಉತ್ಸಾಹದಲ್ಲಿದ್ದಾರೆ. ಆ ಮತಗಳು ತಮ್ಮ ಪಕ್ಷಕ್ಕೆ ಬರುವಂತೆ ಕಾರ್ಯಕರ್ತರು ಹಗಲು ರಾತ್ರಿ ಕೆಲಸ ಮಾಡುವ ಅಗತ್ಯವಿದೆ ಎಂದರು.‘ನನ್ನನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳಿಸಿ, ದಶಕಗಳಿಂದ ಜಿಲ್ಲಾ ಕೇಂದ್ರದಲ್ಲಿ ಮುಚ್ಚಿರುವ ಸಂಸದರ ಕೊಠಡಿ ಬಾಗಿಲು ತೆಗೆದು ವಾರದಲ್ಲಿ ಒಂದು ದಿನ ಬೆಳಿಗ್ಗೆ 9ರಿಂದ ರಾತ್ರಿ 9ರ ತನಕ ಸಾರ್ವಜನಿಕರ ಕೆಲಸ ಮಾಡುತ್ತೇನೆ. ವಾರದಲ್ಲಿ ಒಂದು ದಿನ ಜಿಲ್ಲೆಯ ಪ್ರವಾಸ ಮಾಡಿ ಮತದಾರನ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ’ ಎಂದರು.ಮಾಜಿ ಶಾಸಕ ಬಿ.ಆರ್‌. ಗುರುದೇವ್‌ ಮಾತನಾಡಿ, ಎಚ್‌.ಡಿ. ದೇವೇಗೌಡರು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಇದುವರೆಗೂ ಒಂದೇ ಒಂದು ಪ್ರಶ್ನೆ ಕೇಳಿಲ್ಲ. ಪಕ್ಷದಿಂದ ಒಬ್ಬನೇ ಸಂಸದನಾಗಿರುವುದರಿಂದ ಏನೂ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಸಿದ್ಧ ಉತ್ತರ ಹೇಳುತ್ತಾರೆ. ಪ್ರಧಾನಿ ಆಗಿದ್ದಂತಹ ದೇವೇಗೌಡರಿಗೆ ಲೋಕಸಭೆಯಲ್ಲಿ ತನ್ನ ಜಿಲ್ಲೆಯ ಸಮಸ್ಯೆ ಕುರಿತು ಪ್ರಶ್ನೆ ಕೇಳುವುದಕ್ಕೆ ಅವಕಾಶ ಇಲ್ಲ ಎಂದರೆ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ ಎಂದು ಲೇವಡಿ ಮಾಡಿದರು.ಮತ್ತೊಂದೆಡೆ ತೃತೀಯ ರಂಗ ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಪ್ರಧಾನಿ ಆಗುವ ಸಾಧ್ಯತೆ ಇದೆ ಎಂದು ಮತದಾರರ ಕಿವಿಗೆ ಹೂವು ಮೂಡಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.ಮಲೆನಾಡಿನ ಜನರು ಬದಲಾವಣೆ ಬಯಸಿದ್ದಾರೆ. ಮೋದಿಯೇ ಮುಂದಿನ ಪ್ರಧಾನಿ ಎಂದು ಯುವಜನರು ಬಯಸಿದ್ದು, ಜಿಲ್ಲೆಯ ಜನರು ಅದಕ್ಕೆ ಮುನ್ನುಡಿ ಬರೆಯಲಿದ್ದಾರೆ. ಗ್ರಾಮ ಭಾರತ ಕಲ್ಪನೆಯಲ್ಲಿ ವಿಜಯಶಂಕರ್‌ ಹೊರಗಿನವರಲ್ಲ, ಇಲ್ಲಿಯ ಜನರು ತಮ್ಮ ಸಂಪೂರ್ಣ ಸ್ವಾಗತವಿದೆ ಎಂದರು.ಪಕ್ಷದ ಹಣವನ್ನು ಈ ವರೆಗೆ ಬಳಸಿಕೊಂಡಿಲ್ಲ, ಹೊರಗಿನವರು ಎಂಬ ಭಯ ಭೇಡ, ವರಷ್ಠರ ಆದೇಶ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.