ಪಕ್ಷಭೇದ ಮರೆತು ಕೆಲಸ ಮಾಡಿ

7

ಪಕ್ಷಭೇದ ಮರೆತು ಕೆಲಸ ಮಾಡಿ

Published:
Updated:

ಉಪ್ಪಿನ ಬೆಟಗೇರಿ (ತಾ.ಧಾರವಾಡ): ಉತ್ತರ ಕರ್ನಾಟಕದ ವಿಶೇಷ ಸ್ಥಾನಮಾನ ದೊರಕುವುದಕ್ಕೆ ಸರ್ಕಾರದ ಮಟ್ಟದಲ್ಲಿ ಚಿಂತನೆ ಅವಶ್ಯಕ ಎಂದು ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಅಭಿಪ್ರಾಯಪಟ್ಟರು.ಕರ್ನಾಟಕ ವಿದ್ಯಾವರ್ಧಕ ಸಂಘದ ಜಾನಪದ ಮಂಟಪ ಹಾಗೂ ಉಪ್ಪಿನಬೆಟಗೇರಿಯ ಮೂರು ಸಾವಿರ ವಿರಕ್ತಮಠ ಇವುಗಳ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಗ್ರಾಮದ ಮೂರು ಸಾವಿರ ವಿರಕ್ತಮಠದದಲ್ಲಿ ಈಚೆಗೆ ಹಮ್ಮಿಕೊಂಡಿದ್ದ `ವಚನ ಭಜನಾ ಸಮಾವೇಶ-2012~ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಉತ್ತರ ಕರ್ನಾಟಕ ತನ್ನದೇ ವಿಶಿಷ್ಟ ಸಂಸ್ಕೃತಿ, ಕಲೆ, ಪರಂಪರೆ ಹೊಂದಿದೆ. ಈ ಭಾಗಕ್ಕೆ ವಿಶೇಷ ಸ್ಥಾನಮಾನ ಲಭಿಸಲು ಪ್ರಾಮಾಣಿಕ ಪ್ರಯತ್ನದ ಅಗತ್ಯವಿದ್ದು, ಈ ಭಾಗದ ಜನಪ್ರತಿನಿಧಿಗಳೆಲ್ಲ ಪಕ್ಷಭೇದ ಮರೆತು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ಸಲಹೆ ನೀಡಿದರು.ವಚನ ಅಳಿದರೆ ಸಂಸ್ಕೃತಿ ಉಳಿಯದು: ಬಸವಾದಿ ಶರಣರು ರಚಿಸಿರುವ ವಚನ ಸಾಹಿತ್ಯ ಜಾತಿ-ಮತ ಪಂಥಗಳನ್ನು ಮೀರಿ ನಿಂತಿದೆ. ಇಂತಹ ವಚನ ಸಾಹಿತ್ಯದಲ್ಲಿನ ನೀತಿಗಳನ್ನು ಅಳವಡಿಸಿಕೊಂಡಾಗ ಜೀವನದ ನಿಜವಾದ ಅರ್ಥ ತಿಳಿಯಲು ಸಾಧ್ಯ. ವಚನ ಸಾಹಿತ್ಯದ ಅಧ್ಯಯನ ನಿರಂತರವಾಗಿ ನಡೆಯಬೇಕಿದೆ. ವಚನ ಸಾಹಿತ್ಯ ಅಳಿದರೆ ನಮ್ಮ ಸಂಸ್ಕೃತಿಯೇ ಉಳಿಯದು ಎಂದು ಎಚ್ಚರಿಸಿದರು.ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷೇಶ್ವರ ಸ್ವಾಮೀಜಿ, ಬಸವಣ್ಣವರು ಜಾತಿ-ಲಿಂಗ ಭೇದಕ್ಕೆ ಮಣೆಹಾಕದೇ ಜನಸಾಮಾನ್ಯ ರನ್ನು ಮುಖ್ಯವಾಹಿನಿಗೆ ತಂದರು. ಜನರಿಗೆ ಅಕ್ಷರ ಜ್ಞಾನ ನೀಡಿ, ಅಕ್ಷರ ಕ್ರಾಂತಿಯೊಂದಿಗೆ ಸಂಸ್ಕೃತಿ ಕ್ರಾಂತಿ ಯ ಅಲೆ ಎಬ್ಬಿಸಿ ಜನಸಾಮಾನ್ಯರೂ ವಚನ ಬರೆ ಯುವಂತೆ ಮಾಡಿದರು. ಅವರ ವಚನಗಳ ತತ್ವಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಮುನವಳ್ಳಿ ಸೋಮಶೇಖರಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ಶಾಸಕಿ ಸೀಮಾ ಮಸೂತಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷ ಕಮಾಲಸಾಬ್ ಶೇತಸನದಿ, ಜಾನಪದ ವಿದ್ವಾಂಸ ಡಾ.ಶ್ರೀಶೈಲ ಹುದ್ದಾರ, ಜಾನಪದ ಮಂಟಪದ ಶಂಕರ ಕುಂಬಿ ಇದ್ದರು. ನಂತರ ನಡೆದ ವಚನ ಭಜನಾ ಸ್ಪರ್ಧೆಯಲ್ಲಿ ವಿವಿಧ ತಂಡಗಳಿಂದ ವಚನ ಸ್ಪರ್ಧೆ ನಡೆಯಿತು.ಡಾ.ಡಿ.ಜಿ.ಹಾಜವಗೋಳ, ಬಿ.ಜಿ.ಬಿರಾದಾರ, ಮಡಿವಾಳಪ್ಪ ಹೊಸೂರ, ರಮೇಶ ಮಸೂತಿ, ಕೃಷ್ಣಾ ಬದ್ನಿ, ಶಿವಾನಂದ ಲಗಮಣ್ಣವರ, ಚಂಬಣ್ಣ ಮಸೂತಿ, ಎಫ್.ವೈ.ಮಡಿವಾಳರ, ಮಡಿವಾಳಪ್ಪ ಮೆಟ್ಟಿನ ಇತರರು ಇದ್ದರು. ಗುರು ತಿಗಡಿ ಕಾರ್ಯಕ್ರಮ ನಿರೂಪಿಸಿದರು.ಪಾಪು ಮತ್ತೆ ಬರಲು ಬೇಕಾಯ್ತು ಮೂವತ್ತು...

ಮೂವತ್ತು ವರ್ಷಗಳ ಬಳಿಕ ಡಾ.ಪಾಟೀಲ ಪುಟ್ಟಪ್ಪ ಅವರು ಉಪ್ಪಿನ ಬೆಟಗೇರಿಗೆ ಆಗಮಿಸಿದರಿ. ಇದನ್ನು ಸ್ವತಃ ಅವರೇ ತಿಳಿಸಿದರು. 1982ರಲ್ಲಿ ನಡೆದ ಗೋಕಾಕ ಚಳುವಳಿಯ ಸಂದರ್ಭದಲ್ಲಿ ಉಪ್ಪಿನಬೆಟಗೇರಿ ಯವರೇ ಆಗಿದ್ದ ಶಾಸಕ ಚನ್ನಬಸಪ್ಪ ಪುಡಕಲಕಟ್ಟಿ ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೇಳಲು ಗ್ರಾಮಕ್ಕೆ ಬಂದಿದ್ದೆ ಎಂದು ಸ್ಮರಿಸಿದ ಪಾಪು, ಆ ಘಟನೆ ನಡೆದ ನಂತರ 30 ವರ್ಷದ ಬಳಿಕ ಈಗ ಬಸವ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಭಜನಾ ಸಮಾವೇಶಕ್ಕಾಗಿ ಆಗಮಿಸಿರುವೆ ಎಂದರು. ನಂತರ ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry