ಪಕ್ಷಾಂತರಿಗಳೇ ನಿಮಗೆ ಕಾದಿದೆ ನೀರಿಲ್ಲದ ಬಾವಿ..!

7

ಪಕ್ಷಾಂತರಿಗಳೇ ನಿಮಗೆ ಕಾದಿದೆ ನೀರಿಲ್ಲದ ಬಾವಿ..!

Published:
Updated:

ಹಾವೇರಿ (ಬ್ಯಾಡಗಿ, ಸರ್ವಜ್ಞ ವೇದಿಕೆ): `ಮಂಗನಂತೆ ಪಕ್ಷಾಂತರ ಮಾಡುವ ರಾಜಕಾರಣಿಗಳೇ, ನಿಮಗೆ ಕಾದಿದೆ ನೀರಿಲ್ಲದ ಬಾವಿ.. ಹೆಸರಿಗೆ ಗ್ರಾಮಾಭಿವೃದ್ಧಿ ಅಲ್ಲಿ ನಡೆಯುತ್ತಿರುವುದು ರಾಜಕಾರಣಿಗಳ ಜೇಬಿನ ಗಾತ್ರಾಭಿವೃದ್ಧಿ...!ಹೀಗೆ ಭ್ರಷ್ಟ ರಾಜಕೀಯ ವ್ಯಕ್ತಿಗಳಿಗೆ ಎಚ್ಚರಿಕೆಯನ್ನು ಕೊಟ್ಟವರು ಬೇರೆ ಯಾರೂ ಅಲ್ಲ. ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಬಾಲಕವಿಯತ್ರಿ ನಮೃತಾ ಕುಂದಾಪುರ.ಜಿಲ್ಲೆಯ ಬ್ಯಾಡಗಿಯಲ್ಲಿ ನಡೆದ ಐದನೇ ಜಿಲ್ಲಾ ಉತ್ಸವದ ಎರಡನೇ ದಿನವಾದ ಭಾನುವಾರ ಬ್ಯಾಡಗಿ ಪಟ್ಟಣದ ಬಿಇಎಸ್ ಕಾಲೇಜು ಸಭಾಂಗಣದಲ್ಲಿ ನಡೆದ ಮಕ್ಕಳ ಕವಿಗೋಷ್ಠಿಯಲ್ಲಿ ಅವಳು `ಓ ದುಷ್ಟ ರಾಜಕಾರಣಿಗಳೇ~ ಎನ್ನುವ ಕವನ ವಾಚನದಲ್ಲಿ  `ಭ್ರಷ್ಟಾಚಾರವನ್ನೇ ಬಂಡವಾಳ ಮಾಡಿಕೊಂಡು ರಾಜಕಾರಣ ಮಾಡುತ್ತಿರುವ ರಾಜಕೀಯ ವ್ಯಕ್ತಿಗಳ ಬಣ್ಣ ಬಯಲು ಮಾಡಿ ಎನ್ನುವ ಸಂದೇಶವನ್ನು ಜನರಿಗೆ ನೀಡಿದಳು.`ಸ್ವಾತಂತ್ರ್ಯಕ್ಕಾಗಿ ಗಾಂಧಿ ಹೋರಾಟ, ಭ್ರಷ್ಟಾಚಾರ ನಿರ್ಮೂಲನೆಗಾಗಿ ಅಣ್ಣಾ ಹಜಾರೆ ಹೋರಾಟ ನೆನಪಿಸಿಕೊಳ್ಳುವ ಮೂಲಕ ಇನ್ನೂ ಎಷ್ಟು ದಿನ ಈ ಹೋರಾಟ, ಇದಕ್ಕಿಲ್ಲವೇ ಕೊನೆ ಎಂಬ ಪ್ರಶ್ನೆಯನ್ನು ಬ್ಯಾಡಗಿಯ ಸುಶೀಲಕುಮಾರ `ಹೋರಾಟ~ ಎನ್ನುವ ಕವನದಲ್ಲಿ ಎತ್ತುತ್ತಲೇ, ಜೀವನದಲ್ಲಿ ಗುರಿ ಇರಲಿ, ಅದುವೇ ಭ್ರಷ್ಟಾಚಾರ ನಿರ್ಮೂಲನೆಯಾಗಿರಲಿ ಎಂಬ ಸಲಹೆಯನ್ನು ನೀಡಿದ.ಹಾನಗಲ್ ತಾಲ್ಲೂಕಿನ ಶೇಷಗಿರಿ ಗ್ರಾಮದ ಸುನೀತಾ ಗೆಳೆತನದ ಬಗ್ಗೆ ಕವನ ವಾಚಿಸಿ `ಮೋಸವಿಲ್ಲ, ದ್ವೇಷವಿಲ್ಲ. ಕೆಟ್ಟ ಭಾವನೆ ಇಲ್ಲದ ಮುದ್ದು ನನ್ನ ಗೆಳೆತಿಯರು ಎಂದು ಹೇಳುವ ಮೂಲಕ ಗೆಳತಿಯರನ್ನು ಸ್ಮರಿಸಿದರೆ, ಸವಣೂರಿನ ಸೀಮಾ ಮಠಪತಿ ಓ ನನ್ನ ತಾಯಿ ಎನ್ನುವ ಕವನದಲ್ಲಿ ತಾಯಿಯ ಸ್ಮರಣೆ ಮಾಡಿದಳು.ಹಿರೇಕೆರೂರಿನ ಪೂಜಾ ಅಂಗಡಿ `ಪ್ರಕೃತಿ ಮತ್ತು ಮರಗಳು~ ಎನ್ನುವ ಕವನ ವಾಚನ ಮಾಡಿ, ಮರವಿಲ್ಲದೇ ಬದುಕುವರೇನಯ್ಯ, ಮರವೇ ಪ್ರಕೃತಿಯ ಸೊಬಗು, ಪ್ರಕೃತಿ ನಾಶವಾದರೆ, ನಮ್ಮ ನಾಶವಯ್ಯ ಎಂದು ಪರಿಸರದ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಮೂಲಕ ಎಲ್ಲರ ಗಮನ ಸೆಳೆದರೆ, ಸವಣೂರಿನ ಶಾರದಾ ಕುಲಕರ್ಣಿ `ಸಮಾಜದಿ ಹೆಣ್ಣ~ ಎಂಬ ಶಿರ್ಷಿಕೆ ಕವನದಲ್ಲಿ ಸಮಾಜ ಅವಳನ್ನು ನಡೆಸಿಕೊಳ್ಳುತ್ತಿರುವ ಎಲ್ಲ ಹಂತಗಳನ್ನು ವಿವರಿಸಿ ಮಹಿಳೆಯಿಂದ ಚಪ್ಪಾಳೆ ಗಿಟ್ಟಿಸಿದಳು.ಹಾವೇರಿಯ ವೀರಣ್ಣ ಹಂಚಿನಾಳ ಬೇಕು ಎನ್ನುವ ಹಾಸ್ಯ ಕವನದಲ್ಲಿ `ದೀಪ ಬೆಳಗಲು ಎಣ್ಣೆ ಬೇಕು, ಮನೆ ಬೆಳಗಲು ಹೆಣ್ಣು ಬೇಕು, ಸದಾ ನಿಮ್ಮ ಮುಖದಲ್ಲಿ ಪೌಂಡ್ಸ್ ಪೌಡರ್ ಬೇಕು~ ಎಂದು ಹೇಳುವ ಮೂಲಕ ನಗೆಗಡಲಲ್ಲಿ ತೇಲುವಂತೆ ಮಾಡಿದನು.ಬಾಲ ಕವಿಗಳಾದ ಸುನಿತಾ ಶೇಷಗಿರಿ, ಸೀಮಾ ಮಠಪತಿ, ಶಾರದಾ ಕುಲಕರ್ಣಿ, ಚೈತ್ರಾ ಬಿಜ್ಜೂರ, ಮೇನಕಾ ವಾಲಿ, ಶ್ವೇತಾ ಬಿ.ಎಂ, ರೂಪಾ ಹಡಪದ, ಅನುಪಮಾ ಕುರಿಯವರ, ಶಿವಕುಮಾರ ಡೊಳ್ಳಿ, ಶಿಲ್ಪಾ ಪೊಲೇಶಿ ಮೊದಲಾದವರು ತಮ್ಮ ಕವನ ವಾಚಿಸಿದರು. ಈ ಎಳೆಯ ಕ್ಕಳ ಬಾಯಲ್ಲಿ ಹರಿದು ಬಂದ ಕವನಗಳಲ್ಲಿ ಭ್ರಷ್ಟಾಚಾರ, ಅಸಹ್ಯ ರಾಜಕೀಯ ವ್ಯವಸ್ಥೆ, ರಾಜಕೀಯ ವಿಡಂಬಣೆ, ಅಧಿಕಾರದ ಅಹಂಕಾರ ಬಿಚ್ಚಿಟ್ಟರೆ, ಇನ್ನೂ ಕೆಲವರು ಅಮ್ಮ-ಗುರುವಿನ ಸ್ಮರಣೆ, ಪ್ರಕೃತಿ, ಪ್ರೀತಿ, ದೇಶಭಕ್ತಿ, ಭಾಷಾಭಿಮಾನ, ಹೆಣ್ಣಿನ ಶೋಷಣೆಯ ಆಕ್ರಂದನವನ್ನು ಕುರಿತು ಚಿಂತನೆಗೆ ಹಚ್ಚಿದರು.ಪ್ರಾಚಾರ್ಯ ವಿರೂಪಾಕ್ಷಯ್ಯ ಕೂಗನೂರಮಠ ಅಧ್ಯಕ್ಷತೆ ವಹಿಸಿದ್ದರು. ಕವಿ ವಿಜಯಕಾಂತ ಪಾಟೀಲ ಆಶಯ ಭಾಷಣ ಮಾಡಿದರು. ವಿದ್ಯಾರ್ಥಿನಿ ಅಕ್ಷತಾ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಮೂಕಳ್ಳಿ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry