ಪಕ್ಷಾಂತರ ಪೀಕಲಾಟ: ಪ್ರಬಲರಿಗೆ ಹುಡುಕಾಟ

7

ಪಕ್ಷಾಂತರ ಪೀಕಲಾಟ: ಪ್ರಬಲರಿಗೆ ಹುಡುಕಾಟ

Published:
Updated:
ಪಕ್ಷಾಂತರ ಪೀಕಲಾಟ: ಪ್ರಬಲರಿಗೆ ಹುಡುಕಾಟ

ಬಳ್ಳಾರಿ: ಯಾವ ಪಕ್ಷದಿಂದ ಸ್ಪರ್ಧಿಸಿದರೆ ಒಳಿತು, ದುಡ್ಡಿನ ಪ್ರವಾಹದ ಎದುರು ಈಜಲು ಸಾಧ್ಯವೇ, ಗೆಲುವು ಮತ್ತು ಅಧಿಕಾರ ದೊರಕಿಸಿಕೊಟ್ಟ ಪಕ್ಷದಿಂದಲೇ ಮತ್ತೆ ಸ್ಪರ್ಧಿಸಿದರೆ ಗೆಲ್ಲಬಹುದೇ, ಯಾರಿಗೆ ಟಿಕೆಟ್ ನೀಡಿದರೆ ಚೆನ್ನ... ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿರುವ ಜಿಲ್ಲೆಯ ಪ್ರಸಕ್ತ ರಾಜಕೀಯ ಸ್ಥಿತಿಗತಿಯು, ಪಕ್ಷಗಳಲ್ಲಿ ಅಸ್ಪಷ್ಟತೆ ಮತ್ತು ಗೊಂದಲವನ್ನು ಉಂಟುಮಾಡಿದೆ.ಗಣಿಗಾರಿಕೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತೊಡಗಿರುವವರೇ ಬಳ್ಳಾರಿ, ಸಂಡೂರು, ಕೂಡ್ಲಿಗಿ, ಕಂಪ್ಲಿ ಮತ್ತು ಹೊಸಪೇಟೆ (ವಿಜಯನಗರ )ಕ್ಷೇತ್ರಗಳಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಮತ್ತೊಮ್ಮೆ ಹಣದ ಹೊಳೆ ಹರಿಯುವ ಸಾಧ್ಯತೆಗಳಂತೂ ನಿಚ್ಚಳವಾಗಿವೆ.ಕಳೆದ ಬಾರಿಯ ಚುನಾವಣೆಯಲ್ಲಿ ಹರಿದ `ಗಣಿ ಹಣದ ಹೊಳೆ'ಯಿಂದಾಗಿ ಈ ಬಾರಿ ಜಿಲ್ಲೆಯ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುವುದಕ್ಕೂ, `ಹಣವೊಂದೇ ಮಾನದಂಡ' ಎಂಬ ಸಾಮಾನ್ಯ ನಂಬಿಕೆ ಬಹುತೇಕ ಆಕಾಂಕ್ಷಿಗಳಲ್ಲಿ ಮೂಡಿದೆ.ಜಿಲ್ಲೆಯ ಒಟ್ಟು ಒಂಬತ್ತು ವಿಧಾನಸಭೆ ಕ್ಷೇತ್ರಗಳಲ್ಲಿ ಎರಡು ಪರಿಶಿಷ್ಟ ಜಾತಿಗೂ, ಐದು ಪರಿಶಿಷ್ಟ ಪಂಗಡಕ್ಕೂ ಮೀಸಲಿದ್ದು, ನಗರ ಪ್ರದೇಶಗಳಾದ ಬಳ್ಳಾರಿ ಮತ್ತು ಹೊಸಪೇಟೆ (ವಿಜಯನಗರ) ಕ್ಷೇತ್ರಗಳು ಸಾಮಾನ್ಯ ಅಭ್ಯರ್ಥಿಗಳ ಸ್ಪರ್ಧೆಗೆ ಲಭ್ಯವಿವೆ.ಒಂಬತ್ತರ ಪೈಕಿ ಎಂಟರಲ್ಲಿ ಜಯ ಸಾಧಿಸಿದ್ದ ಬಿಜೆಪಿಯಿಂದ ಹೊರಬಂದಿರುವ ಶ್ರೀರಾಮುಲು, ಬಿಎಸ್‌ಆರ್ ಕಾಂಗ್ರೆಸ್ ಪಕ್ಷವನ್ನೇ ಹುಟ್ಟುಹಾಕಿದ್ದರಿಂದ ಜಿಲ್ಲೆಯಲ್ಲಿ ಬಿಜೆಪಿಯ ಸ್ಥಿತಿ ಅಯೋಮಯವಾಗಿದೆ. ಸದ್ಯ ಪಕ್ಷದಲ್ಲೇ ಮುಂದುವರಿದಿರುವ ನಾಲ್ವರು ಶಾಸಕರ ಪೈಕಿ ಒಂದಿಬ್ಬರಲ್ಲಿ, `ಮತ್ತೆ ಗೆಲುವು ಪಡೆಯಬೇಕೆಂದರೆ ಅದೇ ಪಕ್ಷದಿಂದ ಸ್ಪರ್ಧಿಸಬೇಕೇ, ಬೇಡವೇ' ಎಂಬ ಜಿಜ್ಞಾಸೆ ಇರುವುದರಿಂದ ಬಿಜೆಪಿಯ `ಸ್ಪಷ್ಟ' ಅಭ್ಯರ್ಥಿಗಳ ಬಗ್ಗೆ ಗೊಂದಲ ಇದೆ.ಕಳೆದ ಚುನಾವಣೆಯಲ್ಲಿ ಛಿದ್ರವಾಗಿರುವ ತನ್ನ ಭದ್ರಕೋಟೆಯನ್ನು ಮತ್ತೆ ಬಲಪಡಿಸಿಕೊಳ್ಳಲು ಬಯಸಿರುವ ಕಾಂಗ್ರೆಸ್, `ಯಾರಿಗೆ ಟಿಕೆಟ್ ನೀಡಿದರೆ ಒಳಿತು'  ಎಂಬ ಆಲೋಚನೆ ನಡೆಸಿದ್ದು, ಆಕಾಂಕ್ಷಿಗಳಿಂದ ಅರ್ಜಿಯನ್ನೂ ಸ್ವೀಕರಿಸಿದೆ. ಜಿಲ್ಲೆಯಲ್ಲಿ ಒಡೆದ ಮನೆಯಾಗಿರುವ ಬಿಜೆಪಿಯಿಂದ, ಬಿ.ಎಸ್. ಯಡಿಯೂರಪ್ಪ ಅವರ ಕೆಜೆಪಿಯಿಂದ ಸ್ಪರ್ಧಿಸಲು ಅಷ್ಟಾಗಿ ಆಸಕ್ತಿ ಕಂಡುಬಂದಂತೆ ಕಾಣುತ್ತಿಲ್ಲ.ಬಳ್ಳಾರಿ:  ಹಾಲಿ ಶಾಸಕ ಜಿ.ಸೋಮಶೇಖರ ರೆಡ್ಡಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸ್ಪರ್ಧಿಲಿದ್ದಾರೆ. ಅವರ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್‌ನ ಅತಿರಥ ಮಹಾರಥರು ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದಾರೆ.ಕಳೆದ ಬಾರಿ ಕೇವಲ ಸಾವಿರ ಮತಗಳ ಅಂತರದಲ್ಲಿ ಸೋತಿರುವ ರಾಜ್ಯಸಭಾ ಸದಸ್ಯ ಅನಿಲ್ ಲಾಡ್, ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ಎಂ.ದಿವಾಕರಬಾಬು, ಮಾಜಿ ಸಂಸದ ಕೆ.ಸಿ. ಕೊಂಡಯ್ಯ, ಇಕ್ಬಾಲ್ ಅಹ್ಮದ್, ನಾಸಿರ್ ಹುಸೇನ್,  ಮಹಾಲಿಂಗಯ್ಯ ಸ್ವಾಮಿ (ರಾಜಣ್ಣ) ಮತ್ತಿತರರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇವರ ಪೈಕಿ ಪಕ್ಷ ಯಾರಿಗೆ ಟಿಕೆಟ್ ನೀಡಲಿದೆ ಎಂಬ ಕುತೂಹಲ ಇದೆ.ಬಳ್ಳಾರಿ ಗ್ರಾಮೀಣ (ಎಸ್‌ಟಿ ಮೀಸಲು): 2008ರಲ್ಲಿ ಬಿಜೆಪಿಯಿಂದ ಗೆದ್ದು ಸಚಿವರಾಗಿದ್ದ ಬಿ.ಶ್ರೀರಾಮುಲು ರಾಜೀನಾಮೆ ನೀಡಿ 2011ರ ನವೆಂಬರ್‌ನಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲೂ ಜಯಸಿದ್ದಾರೆ. ಅವರ ವಿರುದ್ಧ ಎರಡೂ ಬಾರಿ ಸೋತಿರುವ ಕಾಂಗ್ರೆಸ್‌ನ ಬಿ.ರಾಮಪ್ರಸಾದ್ ಮತ್ತೆ ಟಿಕೆಟ್ ಕೋರಿದ್ದು, ಅವರೊಂದಿಗೆ ವಿ.ಕೆ. ಬಸಪ್ಪ, ಹಗರಿ ಹೊನ್ನೂರಪ್ಪ (ವಂಡ್ರಿ) ಮತ್ತಿತರರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಗಾದಿಲಿಂಗಪ್ಪ ಮತ್ತೆ ಟಿಕೆಟ್ ಕೋರುವರೇ ಎಂಬುದೂ ಬಹಿರಂಗವಾಗಿಲ್ಲ. ಜೆಡಿಎಸ್ ಟಿಕೆಟ್ ಖಾತರಿಪಡಿಸಿಕೊಂಡಿರುವ ಮೀನಳ್ಳಿ ತಾಯಣ್ಣ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಕೆಜೆಪಿ ಚುನಾವಣಾ ಸಿದ್ಧತೆಯನ್ನೇ ನಡೆಸಿಲ್ಲ.ಹೊಸಪೇಟೆ (ವಿಜಯನಗರ): ಕಳೆದ ಬಾರಿ ಬಿಜೆಪಿಯಿಂದ ಜಯಿಸಿರುವ ಆನಂದ್‌ಸಿಂಗ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಅದೇ ಪಕ್ಷದಲ್ಲಿ ಮುಂದುವರಿಯುವರೇ ಎಂಬುದು ಸ್ಪಷ್ಟವಾಗಿಲ್ಲ.ಆದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸುವವರ ದಂಡೇ ಟಿಕೆಟ್‌ಗೆ ಅರ್ಜಿ ಸಲ್ಲಿಸಿದೆ. ಕಳೆದ ಬಾರಿ ಆನಂದ್‌ಸಿಂಗ್ ಗೆಲುವನ್ನು ಸುಲಭವಾಗಿಸಿದ್ದ `ಕಾಂಗ್ರೆಸ್‌ನ ಬಂಡಾಯ' ಈ ಬಾರಿಯೂ ಮುಂದುವರಿಯುವ ಸುಳಿವು ದೊರೆತಿದ್ದು, ಎಚ್.ಆರ್. ಗವಿಯಪ್ಪ, ದೀಪಕ್ ಸಿಂಗ್ ಇಬ್ಬರೂ ಟಿಕೆಟ್‌ನ ಪ್ರಬಲ ಆಕಾಂಕ್ಷಿಗಳು.ಸಚಿವ ಆನಂದ್‌ಸಿಂಗ್ ಸೋದರ ಸಂಬಂಧಿ ಸಂಯುಕ್ತಾ ರಾಣಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಇಳಿಯುವ ಸಾಧ್ಯತೆ ಇದೆ. ನಗರಸಭೆ ಸದಸ್ಯ ಕೊಟ್ರೇಶ್ ಜೆಡಿಎಸ್‌ನಿಂದ ಸ್ಪರ್ಧೆ ಬಯಸಿದ್ದು, ಆನಂದ್ ಸಿಂಗ್ ಅವರ `ನಡೆ' ಕೆಜೆಪಿ ಮತ್ತು ಬಿಜೆಪಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದೆ. ಸಿಪಿಎಂ ಪಕ್ಷವೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಯಲಿದೆ.ಕಂಪ್ಲಿ (ಎಸ್.ಟಿ. ಮೀಸಲು): ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ಕಳೆದ ಬಾರಿಯ ಚುನಾವಣೆ ವೇಳೆ ರೂಪುಗೊಂಡಿರುವ ಈ ಕ್ಷೇತ್ರದಿಂದ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದ ಟಿ.ಎಚ್. ಸುರೇಶಬಾಬು ಮುಂಬರುವ ಚುನಾವಣೆಯಲ್ಲಿ ಬಿಎಸ್‌ಆರ್ ಪಕ್ಷದಿಂದ ಸ್ಪರ್ಧಿಸಲಿದ್ದು, ಕಾಂಗ್ರೆಸ್ ಟಿಕೆಟ್‌ಗೆ ತೀವ್ರ ಪೈಪೋಟಿ ಇದೆಯಾದರೂ ಅವರಲ್ಲಿ ಪ್ರಮುಖ ಆಕಾಂಕ್ಷಿಗಳು ಸ್ಥಳೀಯರೇ ಅಲ್ಲ ಎಂಬುದು ಗಮನಾರ್ಹ. ಮಾಜಿ ಶಾಸಕಿ ಗುಜ್ಜಲ ಜಯಲಕ್ಷ್ಮಿ, ಕಮಲಾ ಮರಿಸ್ವಾಮಿ, ಸರಸ್ವತಿ, ಗುಜ್ಜಲ ನಾಗರಾಜ, ಪುಷ್ಪಾವತಿ, ಡಿ.ನಾರಾಯಣಪ್ಪ ಮತ್ತಿತರರು ಹಸ್ತದ ಗುರುತಿನಲ್ಲಿ ಕಣಕ್ಕಿಳಿಯಲು ಯತ್ನಿಸುತ್ತಿದ್ದಾರೆ. ಜೆಡಿಎಸ್‌ನಿಂದ ಬಿ.ನಾರಾಯಣಪ್ಪ ಕಗ್ಗಲ್ ವೀರೇಶ, ಕೆಜೆಪಿಯಿಂದ ಕೊಡಗು ಜಿಲ್ಲೆಯ ವಿರಾಜಪೇಟೆ ಮಾಜಿ ಶಾಸಕ ಎಚ್.ಡಿ. ಬಸವರಾಜ್, ಬಿಜೆಪಿಯಿಂದ ಜೆ.ಎನ್. ಗಣೇಶ್ ಸ್ಪರ್ಧಿಸುವ ಸಾಧ್ಯತೆಗಳಿವೆ. ಸಿಪಿಎಂ ಕೂಡ ಸ್ಪರ್ಧೆಗಿಳಿಯುವುದು ವಿಶೇಷ.ಕೂಡ್ಲಿಗಿ (ಎಸ್‌ಟಿ): ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದ ಹಾಲಿ ಶಾಸಕ ಬಿ.ನಾಗೇಂದ್ರ, ಬಳ್ಳಾರಿ ಗ್ರಾಮೀಣ ಉಪ ಚುನಾವಣೆಯ ವೇಳೆ ಬಿಜೆಪಿ ಪರ ನಿಲ್ಲದೆ, ಬಿಎಸ್‌ಆರ್ ಜತೆ ಗುರುತಿಸಿಕೊಂಡು ಗಮನ ಸೆಳೆದಿದ್ದರು. ಆದರೆ, ಮುಂಬರುವ ಚುನಾವಣೆಯಲ್ಲಿ ಬಿಎಸ್‌ಆರ್ ಪಕ್ಷದಿಂದ ಸ್ಪರ್ಧಿಸುವ ಬಗ್ಗೆ ಗುಮಾನಿ ಇದೆ. ಇವರು ಕ್ಷೇತ್ರದಲ್ಲಿ ಪ್ರಬಲವಾಗಿರುವ ಕಾಂಗ್ರೆಸ್ ಸೆಳೆತಕ್ಕೆ ಸಿಲುಕಿದ್ದಾರೆ ಎಂಬ ವದಂತಿಯೂ ಹಬ್ಬಿದೆ.ಕಾಂಗ್ರೆಸ್‌ನಿಂದಲೂ ಆಕಾಂಕ್ಷಿಗಳಿದ್ದು, ನಾಗೇಂದ್ರ ವಿರುದ್ಧ ಕಳೆದ ಬಾರಿ ಸೋತಿದ್ದ ನರಸಿಂಹಗಿರಿ ವೆಂಕಟೇಶ, ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ, ಗುಜ್ಜಲ ರಘು ಟಿಕೆಟ್ ಕೋರಿದ್ದಾರೆ. ಒಂದೊಮ್ಮೆ ನಾಗೇಂದ್ರ ಪಕ್ಷಾಂತರ ಮಾಡಿದಲ್ಲಿ ದಿಢೀರ್ ಬೆಳವಣಿಗೆಗಳು ನಡೆದು, ಪ್ರಮುಖ ಧ್ರುವೀಕರಣದ ಸಾಧ್ಯತೆಗಳಿವೆ. ಬಿಜೆಪಿ ಮತ್ತು ಬಿಎಸ್‌ಆರ್ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸದಿರುವುದೂ ವದಂತಿಗಳಿಗೆ ಇಂಬುನೀಡಿದೆ.ಸಿರುಗುಪ್ಪ (ಎಸ್‌ಟಿ ಮೀಸಲು): ಕ್ಷೇತ್ರದಲ್ಲಿ ಹಾಲಿ ಶಾಸಕ, ಬಿಜೆಪಿಯ ಎಂ.ಎಸ್. ಸೋಮಲಿಂಗಪ್ಪ ಅವರನ್ನು ಸೋಲಿಸಲು ಬಿಎಸ್‌ಆರ್ ಕಾಂಗ್ರೆಸ್ ಪಣ ತೊಟ್ಟಿದ್ದು ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಆದರೂ ನಿವೃತ್ತ ಜಿಲ್ಲಾಧಿಕಾರಿ ಬಿ.ಶಿವಪ್ಪ ಅಥವಾ ಜೆ.ಶಾಂತಾ ಅವರ ಹೆಸರು ಮುಂಚೂಣಿಯಲ್ಲಿದೆ.ಇತ್ತೀಚೆಗಷ್ಟೇ ನಿಧನರಾಗಿರುವ ಕಾಂಗ್ರೆಸ್‌ನ ಮುಖಂಡರಾದ ಶಂಕರರೆಡ್ಡಿ, ಬಿ.ಇ. ರಾಮಯ್ಯ ಅವರ ಪರ ಇದ್ದ ಗುಂಪನ್ನು ಸೆಳೆಯಲು ಜಿ.ಸೋಮಶೇಖರರೆಡ್ಡಿ, ಬಿ.ಶ್ರೀರಾಮುಲು ತೀವ್ರ ಪ್ರಯತ್ನ ನಡೆಸಿರುವುದು ವಿಶೇಷ.

ಶಾಸಕ ಸೋಮಲಿಂಗಪ್ಪ ಅವರ ನಡೆಯೇ ನಿಗೂಢವಾಗಿದ್ದು, ಕಾಂಗ್ರೆಸ್‌ಗೆ ನೆಗೆಯಬಹುದು ಎಂಬ ವದಂತಿಗಳು ಹರಡಿವೆ. ಆದರೆ, ಕಾಂಗ್ರೆಸ್‌ನಿಂದ ಎಚ್.ರಾಮಯ್ಯ, ಬಿ.ಎಂ. ನಾಗರಾಜ್, ಬಿ.ಕೆ. ರಘು, ಕಮಲಾ ಮರಿಸ್ವಾಮಿ ಟಿಕೆಟ್ ಕೋರಿದ್ದಾರೆ.

ಸೋಮಲಿಂಗಪ್ಪ ವಿರುದ್ಧ ಅಕ್ರಮ ಆಸ್ತಿ ಆರೋಪ ಮಾಡಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿರುವ ಬಿ.ಈರಣ್ಣ, ಕಳೆದ ಬಾರಿ ಸೋತಿರುವ ಎಚ್.ಎಂ. ಮಲ್ಲಿಕಾರ್ಜುನ, ಬಳ್ಳೊಳ್ಳಿ ಶೇಖಣ್ಣ ಜೆಡಿಎಸ್ ಟಿಕೆಟ್ ಬಯಸಿದ್ದಾರೆ.ಸಂಡೂರು (ಎಸ್‌ಟಿ ಮೀಸಲು): ಕ್ಷೇತ್ರದಲ್ಲಿ ಪ್ರಬಲರಾಗಿರುವ ಲಾಡ್ ಸಹೋದರರ ಆಪ್ತ, ಕಾಂಗ್ರೆಸ್‌ನ ಹಾಲಿ ಶಾಸಕ ಈ.ತುಕಾರಾಂ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಖಚಿತ.ಕ್ಷೇತ್ರದಲ್ಲಿ ಒಂದಷ್ಟು ಹಿಡಿತ ಹೊಂದಿರುವ ಮಾಜಿ ಶಾಸಕ ಸಿರಾಜ್ ಶೇಖ್ ಆಪ್ತ ಜಿ. ಚಿನ್ನಬಸಪ್ಪ ಬಿಎಸ್‌ಆರ್‌ನಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ. ಜತೆಗೆ ರಾಯಚೂರು ಸಂಸದ ಸಣ್ಣ ಫಕೀರಪ್ಪ ಅವರ ಹೆಸರೂ ಕೇಳಿಬರುತ್ತಿದೆ.

ಬಿಜೆಪಿ ಮತ್ತು ಕೆಜೆಪಿಯಿಂದ ಸ್ಪರ್ಧಿಸಲು ಆಸಕ್ತ ಅಭ್ಯರ್ಥಿಗಳು ಮುಂದೆ ಬರಬೇಕಿದೆ.ಹೂವಿನ ಹಡಗಲಿ (ಎಸ್‌ಸಿ ಮೀಸಲು): ಬಿಜೆಪಿಯ ಹಾಲಿ ಶಾಸಕ ಚಂದ್ರಾ ನಾಯ್ಕ ಅದೇ ಪಕ್ಷದಿಂದ ಸ್ಪರ್ಧಿಸುವುದು ಖಚಿತ. ಕಾಂಗ್ರೆಸ್‌ನಿಂದ ಹರಪನಹಳ್ಳಿಯ ಮಾಜಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ಎಸ್.ದೂದ್ಯಾ ನಾಯ್ಕ, ಕೋಮ್ಯಾ ನಾಯ್ಕ, ಜಿ.ಬುಳ್ಳಪ್ಪ, ವಿ.ಪಿ. ಪರಮೇಶ್ವರ ನಾಯ್ಕ, ಹಂಪಸಾಗರ ರಾಮಾ ನಾಯ್ಕ, ಕಾಶಿನಾಥ ನಾಯ್ಕ, ಶಿವಪುರ ಸುರೇಶ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.ಬಿಎಸ್‌ಆರ್‌ನಿಂದ ಶಿವಪ್ಪ ನಾಯ್ಕ, ಮೀರಾ ಬಾಯಿ, ಕೊಟ್ರೇಶ ನಾಯ್ಕ, ಮಾರೆಪ್ಪ ಹಾಗೂ ಕೆಜೆಪಿಯಿಂದ ತೋಟ್ಯಾ ನಾಯ್ಕ ಹೆಸರು ಕೇಳಿಬರುತ್ತಿದೆ.ಹಗರಿ ಬೊಮ್ಮನಹಳ್ಳಿ (ಎಸ್‌ಸಿ ಮೀಸಲು): ಕ್ಷೇತ್ರ ಪುನರ್ ವಿಂಗಡಣೆಯಿಂದ ಕಳೆದ ಬಾರಿ ಅಸ್ವಿತ್ವಕ್ಕೆ ಬಂದಿರುವ ಈ ಕ್ಷೇತ್ರದಲ್ಲಿ ಹಾಲಿ ಶಾಸಕ, ಬಿಜೆಪಿಯ ನೇಮರಾಜ ನಾಯ್ಕ ಸ್ಪರ್ಧಿಸುವುದು ಖಚಿತವಾದರೂ ಪಕ್ಷಾಂತರಕ್ಕೆ ಹಾತೊರೆಯುತ್ತಿದ್ದಾರೆ ಎಂಬ ವದಂತಿಗಳಿವೆ.ಇವರ ವಿರುದ್ಧ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದ ಜಿಲ್ಲಾ ಪಂಚಾಯ್ತಿ ಚೋರನೂರು ಸದಸ್ಯ, ಕಾಂಗ್ರೆಸ್‌ನ ಭೀಮಾ ನಾಯ್ಕ ಇತ್ತೀಚೆಗಷ್ಟೇ ಬಿಎಸ್‌ಆರ್ ಕಾಂಗ್ರೆಸ್ ಸೇರಿದ್ದು ಟಿಕೆಟ್ ಖಾತರಿಯಾಗಿದೆ. ಮರಿಯಮ್ಮನಹಳ್ಳಿ ಕೃಷ್ಣಾ ನಾಯ್ಕ, ಪಿ.ಎಚ್. ದೊಡ್ಡರಾಮಣ್ಣ, ಹೆಗ್ಡಾಳ್ ರಾಮಣ್ಣ, ರಾರಾಳು ಕೃಷ್ಣಾ ನಾಯ್ಕ, ಕಮಲಾಪುರದ ಸೋಮಲಾ ನಾಯ್ಕ,  ಸಿ.ಬಸವರಾಜ್ ಕಾಂಗ್ರೆಸ್ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್‌ನಿಂದ ಮಾತಾ ಗ್ಯಾಸ್ ಎರ‌್ರಿಸ್ವಾಮಿ, ಪಾಂಡುರಂಗ ನಾಯ್ಕ ಸ್ಪರ್ಧೆ ಬಯಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry