ಶನಿವಾರ, ಏಪ್ರಿಲ್ 17, 2021
33 °C

ಪಕ್ಷಾತೀತ ಹೋರಾಟಕ್ಕೆ ಸಂದ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

371ವಿಧಿ ತಿದ್ದುಪಡಿಗೆ ಸಮ್ಮತಿ: ಮಲ್ಲಿಕಾರ್ಜುನ ಖರ್ಗೆ ಅಭಿನಂದನೆ

ಗುಲ್ಬರ್ಗ:
ಹೈ-ಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತರುವ ಮಹತ್ವದ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ರಾಜಕೀಯ ಸಮಿತಿ ಸಮ್ಮತಿ ಸೂಚಿಸಿರುವುದು ಹೈದರಾಬಾದ್ ಕರ್ನಾಟಕ ಮತ್ತು ವಿಶೇಷವಾಗಿ ಗುಲ್ಬರ್ಗ ಕಂದಾಯ ವಿಭಾಗದ ಜನರಿಗೆ ಸಂತಸದ ವಿಷಯ ಎಂದು ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಿದ್ದುಪಡಿ ಕುರಿತು ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಕೂಡ ಈ ಹಿಂದೆ ಮನವಿ ಮಾಡಿದ್ದೆ. ಈ ವಿಷಯ ಕುರಿತಂತೆ ಪ್ರಧಾನಿ ಮನಮೋಹನಸಿಂಗ್, ಅಂದಿನ ಗೃಹ ಸಚಿವ ಪಿ. ಚಿದಂಬರಂ, ಈಗಿನ ಗೃಹ ಸಚಿವ ಶಿಂಧೆ ಅವರಿಗೆ ಮನವರಿಕೆ ಮಾಡಿದ್ದೆ. ಈ ಭಾಗದ ಅನೇಕ ಸಂಘ-ಸಂಸ್ಥೆಗಳ ಹಾಗೂ ಅನೇಕ ಮುಖಂಡರ ಹೋರಾಟದ ಫಲವಾಗಿ ಅಂತಿಮ ಘಟ್ಟ ತಲುಪುವಂತಾಗಿದೆ ಎಂದು ವಿವರಿಸಿದರು.ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಕ್ಷೇತ್ರದಲ್ಲೂ ಸಾಕಷ್ಟು ಉದ್ಯೋಗಾವಕಾಶಗಳನ್ನು ಕಲ್ಪಿಸಬಹುದಾಗಿದೆ. ಆದ್ಯತೆ ಮೇರೆಗೆ ರಾಜ್ಯ ಸರ್ಕಾರ ಈ ಪ್ರದೇಶಕ್ಕೆ ಬಜೆಟ್ ಕಾಯ್ದಿರಿಸಬಹುದು. ಮೀಸಲಾತಿ, ನೇರ ನೇಮಕಾತಿಯನ್ನೂ ಸರ್ಕಾರವೇ ಮಾಡಬಹುದು.ಕಾಂಗ್ರೆಸ್ ಸರ್ಕಾರದ ಜೊತೆಗೆ ಸರ್ವ ಪಕ್ಷಗಳ ಹಾಗೂ ವಿವಿಧ ಸಂಘಟನೆಗಳ ಬೆಂಬಲ ಹಾಗೂ ಹೋರಾಟದ ಫಲವಾಗಿ ಬಹುದಿನದ ಕನಸು ನನಸಾಗಿದೆ. ಶೀಘ್ರವೇ ಅಧಿವೇಶನದಲ್ಲಿ ತಿದ್ದುಪಡಿಗೆ ಅಂತಿಮ ಮುದ್ರೆ ಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಈ ಪ್ರಕ್ರಿಯೆಗೆ ಸಹಕರಿಸಿದ ಎಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು.ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಅಧಿಕೃತ ಆದೇಶ ಬೀಳುವುದಕ್ಕೆ ಎಲ್ಲರ ಸಮರ್ಥನೆ ಸಿಗಲಿದೆ. ಈ ಕಾರ್ಯ ಆಗು ಮಾಡುವುದಕ್ಕೆ ಸಹಕರಿಸಿದ ಕೇಂದ್ರ ಸಚಿವರಾದ ಶರದ್ ಪವಾರ್, ವೀರಪ್ಪ ಮೊಯಿಲಿ, ಕಪಿಲ್ ಸಿಬಾಲ್, ಅಂಟೋನಿ, ಆಸ್ಕರ್ ಫರ್ನಾಂಡಿಸ್, ಕೆ.ಎಚ್. ಮುನಿಯಪ್ಪ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಈ ಭಾಗದ ಮತ್ತು ರಾಜ್ಯದ ಇತರೆ ಭಾಗದ ಸಂಸತ್ ಸದಸ್ಯರು, ಶಾಸಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಕ್ಷಾತೀತವಾಗಿ ಹೋರಾಟ ಮಾಡಿದ್ದಾರೆ. ಇದರ ಶ್ರೇಯಸ್ಸು ಅವರೆಲ್ಲರಿಗೆ ಸೇರತಕ್ಕದ್ದು. ಈ ಕಾರಣದಿಂದ ಅವರೆಲ್ಲರನ್ನು ಅಭಿನಂದಿಸುವುದಾಗಿ ತಿಳಿಸಿದರು.ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತರಲು ಸಮ್ಮತಿ ಸೂಚಿಸಿರುವುದು ನಿಜಕ್ಕೂ ದೊಡ್ಡ ಸಾಧನೆಯಾಗಿದ್ದು, ಇದರಿಂದ ಇಡೀ ಹೈದರಾಬಾದ್ ಕರ್ನಾಟಕ ಪ್ರದೇಶದ ಭವಿಷ್ಯ ರೂಪುಗೊಳ್ಳಲಿದೆ. ಈ ವಿಷಯ ಕುರಿತು ಎಲ್ಲರೂ ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡಿದ್ದರಿಂದ ಈ ಮಹತ್ತರ ಸಾಧನೆಯಾಗಿದೆ. ಇದು ನಮ್ಮ ಪಕ್ಷಕ್ಕೆ ಲಾಭವಾಗಬಹುದು. ಆದರೆ ರಾಜಕೀಯ ದೃಷ್ಟಿಯಿಂದ ಮಾತ್ರ ಇದನ್ನು ಪರಿಗಣಿಸಬಾರದು ಎಂದು ಮನವಿ ಮಾಡಿದರು.ಮರಾಠವಾಡ, ವಿದರ್ಭ ಹಾಗೂ ತೆಲಂಗಾಣ ಮಾದರಿಯ ಅಂಶಗಳನ್ನು ಒಳಗೊಂಡಿರುವ 371 (ಜೆ) ತಿದ್ದುಪಡಿಯ ನಿರ್ಧಾರದಿಂದಾಗಿ ಈ ಭಾಗದ ಶಿಕ್ಷಣ, ಉದ್ಯೋಗ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಕಾಂಗ್ರೆಸ್ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ, ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ, ಶಾಸಕರಾದ ಖಮರುಲ್ ಇಸ್ಲಾಂ, ಶರಣಬಸಪ್ಪ ದರ್ಶನಾಪುರ, ಸಿದ್ರಾಮಪ್ಪ ಐರೆಡ್ಡಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.