ಪಕ್ಷಿಗಳ ಸಂಖ್ಯೆ ಕುಸಿತ: ಮಧ್ಯಸ್ಥ ವಿಷಾದ

7

ಪಕ್ಷಿಗಳ ಸಂಖ್ಯೆ ಕುಸಿತ: ಮಧ್ಯಸ್ಥ ವಿಷಾದ

Published:
Updated:

ಕಾರ್ಕಳ: ನಮ್ಮ ಪರಿಸರದಲ್ಲಿ ವರ್ಷದಿಂದ ವರ್ಷಕ್ಕೆ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ ಎಂದು ಪರಿಸರ ತಜ್ಞ ಡಾ.ಎನ್.ಎ.ಮಧ್ಯಸ್ಥ ಇಲ್ಲಿ ತಿಳಿಸಿದರು.ಇಲ್ಲಿನ ಭುವನೇಂದ್ರ ಕಾಲೇಜಿನ ರಾಮಕೃಷ್ಣ ಸಭಾ ಭವನದಲ್ಲಿ ಭಾನುವಾರ ಎಸ್.ಎ.ಹುಸೇನ್ ಸ್ಮಾರಕ  ಟ್ರಸ್ಟ್ ಹಾಗೂ ಭುವನೇಂದ್ರ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಪಕ್ಷಿ ವೀಕ್ಷಕರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಆಧುನಿಕ ಸಂವಹನ ತಂತ್ರಜ್ಞಾನದ ಕಾರಣ ನಿತ್ಯ ಮನೆ ಹತ್ತಿರ ಕಾಣಬಹುದಾಗಿದ್ದ ಗುಬ್ಬಚ್ಚಿಗಳು ಕಣ್ಮರೆಯಾಗುತ್ತಿರುವುದು ಒಂದೆಡೆಯಾದರೆ ಮನೆಗಳ ಸುತ್ತ ಸುಳಿದಾಡುವ ಕಾಗೆಗಳ ಸಂಖ್ಯೆಯೂ ಇಂದು ವಿಪರೀತ ಕಡಿಮೆಯಾಗುತ್ತಿರುವುದನ್ನು ನಾವು ಗಮನಿಸಬಹುದು ಎಂದರು.ನೀರಾವರಿ ಭೂಪ್ರದೇಶಗಳಲ್ಲಿ ಪಕ್ಷಿಗಳ ಕೊರತೆ ಎದ್ದು ಕಾಣುತ್ತಿದ್ದು, ಕಾಲಕ್ಕೆ ಅನುಗುಣವಾಗಿ ಆಗಮಿಸುವ ಪ್ರವಾಸಿ ಪಕ್ಷಿಗಳೂ ಕಡಿಮೆಯಾಗುತ್ತಿವೆ. ಈ ಬಗೆಯ ಪಕ್ಷಿಗಳ ಕೊರತೆ ಪಕೃತಿಯ ಅಸಮತೋಲನವನ್ನು ಬಿಂಬಿಸುತ್ತಿದ್ದು. ನೀರಾವರಿ ಪ್ರದೇಶ ಹಾಗೂ ಪಕ್ಷಿಗಳ ಬದುಕಿನ ಕುರಿತು ವಿಪುಲ ಅಧ್ಯಯನ ಅವಕಾಶಗಳು ಇದ್ದು, ಮುಂದಿನ ಜನಾಂಗ ಈ ಕುರಿತು ಆಸಕ್ತಿ ವಹಿಸಬೇಕಾಗಿದೆ ಎಂದರು.   ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಡಾ.ಟಿ.ವಿ.ರಾಮಚಂದ್ರ  ಪ್ರಧಾನ ಭಾಷಣ ಮಾಡಿದರು. ಮಡಿಕೇರಿಯ ಡಾ.ಎಸ್.ವಿ.ನರಸಿಂಹನ್, ಮಣಿಪಾಲ ಎಂ.ಐ.ಟಿಯ ಅಂತಿಮ ವರ್ಷದ ವಿದ್ಯಾರ್ಥಿ ರಮಿತ್ ಸಿಂಘಾಲ್, ಮಂಗಳೂರಿನ ಉದ್ಯಮಿ ರೋಹಿತ್ ರಾವ್, ಎನ್.ಎಂ.ಪಿ.ಟಿಯ ಟಿ.ಎಸ್.ಎನ್.ಮೂರ್ತಿ ಪಕ್ಷಿ ವೀಕ್ಷಕರಾಗಿ ತಮ್ಮ ಅನುಭವ ಮಂಡಿಸಿದರು.ಅಧ್ಯಕ್ಷತೆ ವಹಿಸಿದ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ವೈ.ಪಾಂಡುರಂಗ ನಾಯಕ್ ಮಾತನಾಡಿ ಎಸ್.ಎ.ಹುಸೇನ್ ವಿದ್ಯಾರ್ಥಿಗಳಿಗೆ ಸದಾಕಾಲ ಬೆಳಿಗ್ಗೆ ಬೇಗ ಏಳಲು ತಿಳಿಸುತ್ತಿದ್ದರು. ಯಾಕೆಂದರೆ ನಸುಕಾಗುತ್ತದ್ದಂತೆ ಆಹಾರವನ್ನು ಹುಡುಕುವುದಕ್ಕಾಗಿ ಪಕ್ಷಿಗಳು ಬೇಗ ಎದ್ದು ಚಿಲಿಪಿಲಿಗುಟ್ಟುತ್ತವೆ. ನೀವೂ ಅಧ್ಯಯನಕ್ಕಾಗಿ ಬೇಗ ಏಳಬೇಕು ಎಂದು ಎಂದರು.ಕಾರ್ಯದರ್ಶಿ ಡಾ.ಪಿ.ಈಶ್ವರ ಭಟ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಎಸ್.ಸಿ.ವೇದಿಕೆಯಲ್ಲಿದ್ದರು. ಟ್ರಸ್ಟ್‌ನ  ಅಧ್ಯಕ್ಷ ಡಾ.ಭರತೇಶ್ ಎ ಸ್ವಾಗತಿಸಿದರು. ಗೌರವಾಧ್ಯಕ್ಷ ಡಾ.ಕೆ.ಪ್ರಭಾಕರ ಆಚಾರ್ ಪ್ರಸ್ತಾವನೆಗೈದರು. ಭರತ್ ಪ್ರಭು, ಸೌಮ್ಯಾ ಕುಮಾರಿ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕ ಪ್ರೊ.ಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಶಿವಶಂಕರ್ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry