ಶುಕ್ರವಾರ, ಜೂನ್ 25, 2021
29 °C

ಪಕ್ಷೇತರರಾಗಿ ಜಸ್ವಂತ್‌ ಕಣಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಧ್‌ಪುರ (ಪಿಟಿಐ): ಟಿಕೆಟ್‌ ನಿರಾಕರಣೆಯಿಂದ ಸಿಟ್ಟಾಗಿರುವ ಬಿಜೆಪಿ ಹಿರಿಯ ನಾಯಕ ಜಸ್ವಂತ್‌ ಸಿಂಗ್‌ ಬಾರ್ಮೇರ್‌ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳಿದ್ದು ಸೋಮವಾರ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.ಆದರೆ ಅವರು ಇನ್ನೂ  ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ರಾಜೀನಾಮೆ ನೀಡುವ ವಿಷಯದ ಬಗ್ಗೆ ತಮ್ಮ ಸಹೋದ್ಯೋಗಿಗಳು ಮತ್ತು ಬಾರ್ಮೇರ್‌ನ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿದ ನಂತರ ನಿರ್ಧಾರ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.ಪ್ರಸ್ತುತ ಡಾರ್ಜಲಿಂಗ್‌ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ಜಸ್ವಂತ್‌ ಅವರು ಈ ಬಾರಿ ತಮ್ಮ ತವರು ಕ್ಷೇತ್ರ ಬಾರ್ಮೇರ್‌ನಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ ಈ ಕ್ಷೇತ್ರದಿಂದ ಬಿಜೆಪಿ ಅವರಿಗೆ ಟಿಕೆಟ್‌ ನಿರಾಕರಿಸಿ, ಕಾಂಗ್ರೆಸ್‌ನಿಂದ ಇತ್ತೀಚೆಗೆ ವಲಸೆ ಬಂದಿರುವ ಸೋನಾರಾಂ ಚೌಧರಿ ಅವರಿಗೆ ಟಿಕೆಟ್‌ ನೀಡಿದೆ.ಪಕ್ಷ ತೊರೆಯಲು 48 ತಾಸುಗಳ ಗಡುವು ನೀಡಿದ್ದರೂ ಈವರೆಗೆ ಯಾರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಅವರು ಹೇಳಿದ್ದಾರೆ.‘ಇಲ್ಲ’ ಎಂಬುದನ್ನು ಸ್ವೀಕರಿಸಿ– ಜೇಟ್ಲಿ (ನವದೆಹಲಿ ವರದಿ): ಸಾಕಷ್ಟು ಸೌಲಭ್ಯಗಳನ್ನು ಪಡೆದು­ಕೊಂಡ ನಂತರ ಕೆಲವೊಮ್ಮೆ ಪಕ್ಷ ‘ಇಲ್ಲ’ ಎಂದು ಹೇಳುವುದನ್ನು ಸ್ವೀಕರಿಸಲು ನಾಯಕರು ಸಿದ್ಧರಾಗಿರಬೇಕು. ಇಂತಹ ಸಂದರ್ಭದಲ್ಲಿ ಅವರ ನಿಷ್ಠೆ ಪರೀಕ್ಷೆಗೊಳಪಡುತ್ತದೆ ಎಂದು ಬಿಜೆಪಿ ನಾಯಕ ಅರುಣ್‌ ಜೇಟ್ಲಿ ಹೇಳಿದ್ದಾರೆ.‘ರಾಜಕೀಯ ಪಕ್ಷದ ಸದಸ್ಯತ್ವವೇ ಒಂದು ಗೌರವ. ಇಲ್ಲಿ ಒಬ್ಬ ವ್ಯಕ್ತಿಯ ನಿಲುವುಗಳು ಮತ್ತು ಮಹತ್ವಾಕಾಂಕ್ಷೆ ಪಕ್ಷದ ಸಾಮೂಹಿಕ ವಿವೇಚನೆಗೆ ಬದ್ಧವಾಗಿರುತ್ತದೆ. ಕೆಲವೊಮ್ಮೆ ಪಕ್ಷವು ನಾಯಕ­ರಿಗೆ ಸವಲತ್ತುಗಳು ಮತ್ತು ಸ್ಥಾನಗಳ ಮಳೆ ಸುರಿಸಬಹುದು. ಇನ್ನು ಕೆಲವೊಮ್ಮೆ ನಾಯಕರ ಆಕಾಂಕ್ಷೆಯನ್ನು ಪಕ್ಷವು ನಿರಾಕರಿಸಬಹುದು’ ಎಂದು ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.ರಾಜಕಾರಣಿ ಅಥವಾ ನಾಯಕ ಟಿಕೆಟ್‌ ನಿರಾಕರಣೆಯನ್ನು ನಗುಮುಖದಿಂದಲೇ ಸ್ವೀಕರಿಸಬೇಕು ಎಂದು ಜೇಟ್ಲಿ ಸಲಹೆ ನೀಡಿದರು.ಸುಂಧರಾ ಸಭೆ: ಬಾರ್ಮೇರ್‌ ಮತ್ತು ಜೈಸಲ್ಮೇರ್ ಕ್ಷೇತ್ರಗಳಲ್ಲಿ ಬಂಡಾಯದ ಲಕ್ಷಣಗಳು ಗೋಚರಿಸುತ್ತಿದ್ದಂತೆಯೇ ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೆ ಈ ಎರಡು ಜಿಲ್ಲೆಗಳ ಶಾಸಕರ ಸಭೆ ಕರೆದು ಪರಿಸ್ಥಿತಿಯ ಅವಲೋಕನ ನಡೆಸಿದರು. ಶಿವ್‌ ಕ್ಷೇತ್ರದ ಶಾಸಕರಾಗಿರುವ ಜಸ್ವಂತ್ ಪುತ್ರ ಮಾನವೇಂದ್ರ ಸಿಂಗ್‌ ಈ ಸಭೆಯಲ್ಲಿ ಭಾಗವಹಿಸಿಲ್ಲ.ಜಸ್ವಂತ್‌ ಪರ ಕಾರ್ಯಕರ್ತರು (ಜೈಸಲ್ಮೇರ್‌ ವರದಿ): ಬಿಜೆಪಿ ಜಿಲ್ಲಾ ಘಟಕದ ಸದಸ್ಯರು ಇಲ್ಲಿನ ಪಕ್ಷದ ಕಚೇರಿಗೆ ಬಲವಂತವಾಗಿ ನುಗ್ಗಿ ಅಲ್ಲಿ ಸಭೆ ನಡೆಸಿ ಬಾರ್ಮೇರ್‌ನಿಂದ ಜಸ್ವಂತ್‌ ಸಿಂಗ್‌ ಅವರಿಗೆ ಟಿಕೆಟ್‌ ನಿರಾಕರಿಸಿರುವುದನ್ನು ಖಂಡಿಸಿದರು.ರಾಜನಾಥ್‌ ವಿರುದ್ಧ ಗರಂ

ಜಸ್ವಂತ್‌ ಅವರನ್ನು ಸೂಕ್ತವಾಗಿ ಬಳಸಿಕೊಳ್ಳಲಾಗುವುದು ಎಂಬ ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌ ಹೇಳಿಕೆಗೂ ಜಸ್ವಂತ್‌ ಅವರು ತಿರುಗೇಟು ನೀಡಿದ್ದಾರೆ. ‘ಹಾಗೆ ಬಳಸಿಕೊಳ್ಳಲು ನಾನೇನು ಪೀಠೋಪಕರಣವಲ್ಲ. ಹೊಂದಾಣಿಕೆ ಎಂಬ ಪದದ ಬಳಕೆಯೇ ಅವರ ಮನಸ್ಥಿತಿಯನ್ನು ತೋರಿಸುತ್ತದೆ. ತತ್ವಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯವಿಲ್ಲ ಮತ್ತು ಅದು ಅವಮಾನಕಾರಿ’ ಎಂದು ಜಸ್ವಂತ್‌ ಹೇಳಿದರು.

ಚುನಾವಣೆ ನಂತರ ಜಸ್ವಂತ್‌ ಅವರಿಗೆ ಆಗಿರುವ ನಷ್ಟ ತುಂಬಿಕೊಡಲಾಗುವುದು ಎಂಬರ್ಥದ ರಾಜನಾಥ್‌ ಸಿಂಗ್‌ ಅವರ ಹೇಳಿಕೆಗೂ ಅವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ‘ಚುನಾವಣೆ ನಂತರ ಸರ್ಕಾರ ರಚಿಸುತ್ತೇವೆ ಮತ್ತು ನನಗೆ ಏನಾದರೂ ಭಿಕ್ಷೆ ನೀಡಬಹುದು ಎಂದು ಅವರು ಭಾವಿಸಿದ್ದಾರೆ. ಅದನ್ನು ಅವರೇ ಇರಿಸಿಕೊಳ್ಳಲಿ. ಇಂತಹ ಮಾತುಗಳ ಹಿಂದೆ ಅಹಂಕಾರ ಮತ್ತು ಅಗೌರವ ಮಾತ್ರ ಇದೆ’ ಎಂದು ಜಸ್ವಂತ್‌ ಅಭಿಪ್ರಾಯಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.