ಪಕ್ಷೇತರರಿಂದ ಪ್ರತಿಭಟನೆ, ಸಭಾತ್ಯಾಗ

7

ಪಕ್ಷೇತರರಿಂದ ಪ್ರತಿಭಟನೆ, ಸಭಾತ್ಯಾಗ

Published:
Updated:

ಬೆಂಗಳೂರು: ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಸುಪ್ರೀಂಕೋರ್ಟ್‌ನ ವಾಗ್ದಂಡನೆಗೆ ಗುರಿಯಾಗಿರುವ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಪಕ್ಷೇತರರು, ಸಭಾತ್ಯಾಗ ನಡೆಸಿದ ಘಟನೆ ಗುರುವಾರ ನಡೆಯಿತು.ಕಲಾಪದ ಆರಂಭದಲ್ಲಿ ಮಾಜಿ ಸಚಿವ ಡಾ.ಆರ್.ಬಿ.ಚೌಧರಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ನಂತರ ಪ್ರಶ್ನೋತ್ತರ ಆರಂಭಿಸಲು ಸ್ಪೀಕರ್ ಮುಂದಾದರು.ಅಷ್ಟರಲ್ಲಿ ಕಪ್ಪು ಶಾಲುಗಳನ್ನು ಧರಿಸಿ ಸಭಾಧ್ಯಕ್ಷರ ಪೀಠದ ಎದುರು ಧಾವಿಸಿದ ಪಕ್ಷೇತರ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಶಿವರಾಜ ತಂಗಡಗಿ, ಗೂಳಿಹಟ್ಟಿ ಶೇಖರ್ ಮತ್ತು ವೆಂಕಟರಮಣಪ್ಪ, ತಮ್ಮನ್ನು ಅನರ್ಹಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಭಟನೆಗಿಳಿದರು.ನೋಟಿಸ್ ನೀಡದ ಹಿನ್ನೆಲೆಯಲ್ಲಿ ಚರ್ಚೆಗೆ ಅವಕಾಶ ಕೊಡಲು ಸಾಧ್ಯವಿಲ್ಲ ಎಂದು ಸ್ಪೀಕರ್ ಪ್ರತಿಕ್ರಿಯಿಸಿದರು. ನಂತರವೂ ಸ್ಪೀಕರ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಪ್ರತಿಭಟನೆ ಮುಂದುವರಿಸಿದಾಗ, `ಹೀಗೆಯೇ ಮಾಡಿದರೆ ನಿಮ್ಮನ್ನು ಹೊರ ಹಾಕುತ್ತೇನೆ. ಮತ್ತೆ ತೊಂದರೆಗೆ ಸಿಲುಕುತ್ತೀರಿ~ ಎಂದು ಬೋಪಯ್ಯ ಎಚ್ಚರಿಸಿದರು. ಆದರೂ ಪಕ್ಷೇತರರು ಪಟ್ಟು ಬಿಡಲಿಲ್ಲ. ತಕ್ಷಣ ಅವರನ್ನು ಹೊರಹಾಕುವ ಸಂಬಂಧ ಪ್ರಸ್ತಾವ ಮಂಡಿಸುವಂತೆ ಸರ್ಕಾರಕ್ಕೆ ಸೂಚಿಸಿದರು.ಆಗ ಪಕ್ಷೇತರರ ಬೆಂಬಲಕ್ಕೆ ನಿಂತ ಸಿದ್ದರಾಮಯ್ಯ, `ಈಗ ಚರ್ಚೆಗೆ ಅವಕಾಶ ನೀಡಲು ನಿಯಮದ ಪ್ರಕಾರ ನೋಟಿಸ್ ನೀಡಿ ಎನ್ನುತ್ತೀರಿ. ಹಿಂದೆ ಯಾವುದೇ ನಿಯಮಗಳನ್ನೂ ಗಮನಿಸದೇ ಅವರನ್ನು ಹೊರ ಹಾಕಿರಲಿಲ್ಲವೇ~ ಎಂದು ಸ್ಪೀಕರ್ ಅವರನ್ನು ಪ್ರಶ್ನಿಸಿದರು. ಪಕ್ಷೇತರರ ಬೇಡಿಕೆಯಂತೆ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.`ಈ ವಿಷಯ ಕುರಿತ ಚರ್ಚೆಗೆ ಬುಧವಾರವೇ ತೆರೆ ಬಿದ್ದಿದೆ. ಮತ್ತೆ ಅದನ್ನು ಪ್ರಸ್ತಾಪಿಸಲು ಅವಕಾಶವಿಲ್ಲ~ ಎಂದು ಸಚಿವರಾದ ಜಗದೀಶ ಶೆಟ್ಟರ್, ಎಸ್.ಸುರೇಶ್‌ಕುಮಾರ್ ಮತ್ತಿತರರು ವಾದಿಸಿದರು. ತಮ್ಮ ಆಸನಗಳಿಗೆ ಹಿಂದಿರುಗಿದ ನರೇಂದ್ರಸ್ವಾಮಿ ಮತ್ತು ತಂಗಡಗಿ ಅವರು ಜೋರಾಗಿ ಮೇಜು ಕುಟ್ಟಿ, `ನಾವು ಈ ಸದನದ ಸದಸ್ಯರಲ್ಲವೇ? ನಮಗೆ ಏಕೆ ಚರ್ಚೆಗೆ ಅವಕಾಶ ನೀಡುತ್ತಿಲ್ಲ~ ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು.ಪ್ರಶ್ನೋತ್ತರ ಕಲಾಪ ಆರಂಭಕ್ಕೆ ಸ್ಪೀಕರ್ ಹಲವು ಬಾರಿ ಪ್ರಯತ್ನಿಸಿದರೂ, ಪಕ್ಷೇತರರ ಗದ್ದಲದಿಂದ ಸಾಧ್ಯವಾಗಲಿಲ್ಲ. ಎಷ್ಟೇ ಮನವಿ ಮಾಡಿದರೂ ಚರ್ಚೆಗೆ ಅವಕಾಶ ನಿರಾಕರಿಸಿದ್ದರಿಂದ ಅಸಮಾಧಾನ ಪ್ರದರ್ಶಿಸಿದ ಪಕ್ಷೇತರ ಶಾಸಕರು, ಬೋಪಯ್ಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಭಾತ್ಯಾಗ ಮಾಡಿದರು. ನಂತರ ಪ್ರಶ್ನೋತ್ತರ ಆರಂಭವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry